More

    ಕರೊನಾ ಕಟ್ಟೆಚ್ಚರ ಹೇಳಿಕೆಗೆ ಸೀಮಿತ

    ಹಾವೇರಿ: ರಾಜ್ಯದಲ್ಲಿ ಕರೊನಾ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ವೈರಸ್ ಹರಡದಂತೆ ತಡೆಯಲು ರಾಜ್ಯಾದ್ಯಂತ ಹೈಅಲರ್ಟ್ ಘೊಷಿಸಿದೆ. ಒಂದು ವಾರದ ಕಾಲ ಸಾರ್ವಜನಿಕ ಸಭೆ, ಸಮಾರಂಭದ ಮೇಲೆ ನಿರ್ಬಂಧಗಳನ್ನು ಹಾಕಿದ್ದಾರೆ. ಆದರೆ, ಜಿಲ್ಲಾಡಳಿತ ಮಾತ್ರ ಅದ್ಯಾವುದಕ್ಕೂ ಮನ್ನಣೆ ನೀಡದೇ ಕೇವಲ ಸಭೆ, ಪತ್ರಿಕಾ ಹೇಳಿಕೆಗಳಲ್ಲಿ ಮಾತ್ರ ಕಟ್ಟೆಚ್ಚರ ವಹಿಸಿರುವುದು ಕಂಡುಬಂದಿದೆ.

    ಕರೊನಾ ವೈರಸ್ ಹರಡದಂತೆ ತಡೆಯಲು ಜಿಲ್ಲೆಯಲ್ಲಿ ಆರು ವೈದ್ಯರ ತಂಡಗಳನ್ನು ರಚಿಸಲಾಗಿದೆ. ಜಾತ್ರೆ, ಸಂತೆ, ಬಸ್, ರೈಲ್ವೆ ನಿಲ್ದಾಣಗಳಲ್ಲಿ ತಾತ್ಕಾಲಿಕ ವೈದ್ಯಕೀಯ ಟೆಂಟ್​ಗಳನ್ನು ಹಾಕಲಾಗಿದೆ ಎಂದು ಜಿಪಂ ಸಿಇಒ ಮಾ. 12ರಂದು ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿದ್ದರು.

    ಕಟ್ಟೆಚ್ಚರವೆಲ್ಲ ಹೇಳಿಕೆಗಳಲ್ಲಿ ಎನ್ನುವುದು ಬಹಿರಂಗ: ಜಿಲ್ಲೆಯ ಹಿರಿಯ ಅಧಿಕಾರಿಗಳು ಕರೊನಾ ವೈರಸ್ ತಡೆಯ ಕುರಿತು ಸಭೆಗಳನ್ನು ನಡೆಸಿ ಪತ್ರಿಕಾ ಹೇಳಿಕೆಗಳನ್ನು ಭರ್ಜರಿಯಾಗಿ ನೀಡುತ್ತಿದ್ದಾರೆ. ವಾಸ್ತವದಲ್ಲಿ ಯಾವುದೇ ಕ್ರಮವೂ ಆಗಿಲ್ಲ ಎನ್ನುವುದು ‘ವಿಜಯವಾಣಿ’ ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ಬಹಿರಂಗವಾಗಿದೆ. ಮಾ. 12ರಂದೇ ಸಿಇಒ ರಮೇಶ ದೇಸಾಯಿ ತಾತ್ಕಾಲಿಕ ಟೆಂಟ್ ತೆರೆಯಲು ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದರು. ಆದರೆ, ಮಾ. 14ರಂದು ಹಾವೇರಿ ಜಿಲ್ಲಾ ಕೇಂದ್ರ ಬಸ್​ನಿಲ್ದಾಣದಲ್ಲಿ ಚೆಕ್ ಮಾಡಿದಾಗ ಯಾವುದೇ ವೈದ್ಯಕೀಯ ಟೆಂಟ್​ಗಳು ಕಾಣಿಸಲಿಲ್ಲ. ಈ ಕುರಿತು ಡಿಎಚ್​ಒ ಕೇಳಿದರೆ ಹೌದಾ, ಈ ಕೂಡಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹಾರಿಕೆ ಉತ್ತರ ನೀಡಿದರು.

    ಶಾಸಕರಿಂದ ತರಾಟೆ: ಡಿಎಚ್​ಒ ಸೇರಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಮಾಧ್ಯಮಗಳಿಗೆ ನೀಡಿದ ಮಾಹಿತಿ ವಾಸ್ತವದಲ್ಲಿ ಆಗಿರುವ ಕ್ರಮದಲ್ಲಿ ಸಾಕಷ್ಟು ವ್ಯತ್ಯಾಸವಿರುವ ಕುರಿತು ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕ ನೆಹರು ಓಲೇಕಾರ ಅವರನ್ನು ಗಮನಸೆಳೆದಾಗ, ಡಿಎಚ್​ಒ ಅವರನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮಿಂದ ಏನು ಮಾಡಲು ಸಾಧ್ಯವಿದೆಯೋ ಅಷ್ಟನ್ನೂ ಪ್ರಾಮಾಣಿಕವಾಗಿ ಮಾಧ್ಯಮಗಳಿಗೆ ತಿಳಿಸಿ. ಸುಮ್ಮನೇ ಸುಳ್ಳು ಮಾಹಿತಿ ನೀಡಿ ಜನರ ದಾರಿ ತಪ್ಪಿಸಬೇಡಿ ಎಂದು ತಾಕೀತು ಮಾಡಿದರು.

    ಜಾಲತಾಣದಲ್ಲಿ ಸುಳ್ಳು ಸುದ್ದಿ: ಎಸ್​ಎಸ್​ಎಎಂಸಿ ಕರ್ನಾಟಕ ಎಂಬ ವಾಟ್ಸ್ ಆಪ್ ಗ್ರುಪ್​ವೊಂದರಲ್ಲಿ ಹಾವೇರಿಯ ಆರ್ಯುವೇದಿಕ್ ವೈದ್ಯಕೀಯ ಕಾಲೇಜ್​ನ ಉಪನ್ಯಾಸಕರೊಬ್ಬರು (ಡಾ. ಶರಣು ಅಂಗಡಿ ಎಂಬ ಹೆಸರಿದೆ) ಹಾವೇರಿ ಕೇಸ್ ಕನ್ಪಮ್ರ್ ಟುಡೆ ಡಿಸ್ಟಿಕ್ ಹಾಸ್ಪಿಟಲ್ ಎಂಬ ಸಂದೇಶ ಹಾಕಿದ್ದಾರೆ. ಅದಕ್ಕೆ ಮತ್ತೊಬ್ಬರು ವೇರ್ ಇಸ್ ಹಿ ಫಾಮ್ರ್ ಎಂದು ಪ್ರಶ್ನಿಸಿದ್ದಾರೆ. ಆಗ ಡಾ. ಶರಣು ಅಂಗಡಿ ಎಂಬ ಹೆಸರಿನವರು ದುಬೈನಿಂದ ಹಜ್ ಯಾತ್ರೆ ಮುಗಿಸಿ ಸವಣೂರ ಪಿಎಚ್​ಸಿಯಿಂದ ಇಂದು ಜಿಲ್ಲಾಸ್ಪತ್ರೆಗೆ ರೋಗಿ ಬಂದಿದ್ದು, ಅವರಿಗೆ ಕನ್ಪಮ್ರ್ ಆಗಿದೆ ಎಂಬ ಫಾರ್ವಡ್ ಸಂದೇಶವನ್ನು ರವಾನಿಸಿದ್ದಾರೆ. ಈ ಸಂದೇಶದ ಸ್ಕ್ರೀನ್​ಶಾಟ್ ಜಿಲ್ಲೆ ಸೇರಿ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರದಿಂದ ಹರಿದಾಡತೊಡಗಿತ್ತು. ಇದರಿಂದ ಅನೇಕ ಜನರು ಭಯಭೀತರಾಗಿ ಇದು ನಿಜನಾ ಎಂದು ಮತ್ತಷ್ಟು ಜನರಿಗೆ ಫಾರ್ವಡ್ ಮಾಡುತ್ತಿದ್ದು, ಆತಂಕ ಸೃಷ್ಟಿಸಿದೆ. ಈ ಕುರಿತು ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ಇದು ಸುಳ್ಳು ಸಂದೇಶ, ಜಿಲ್ಲೆಯಲ್ಲಿ ಯಾರಿಗೂ ಕರೊನಾ ಕನ್ಪಮ್ರ್ ಆಗಿಲ್ಲ. ಇದರ ಮಾಹಿತಿ ನನಗೂ ಬಂದಿದೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts