More

    ಕರೊನಾ ಲಸಿಕೆ ಪಡೆಯುವುದು ಕಡ್ಡಾಯವಲ್ಲ, ಐಚ್ಛಿಕ: ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ

    ನವದೆಹಲಿ: ಕೋವಿಡ್-19 ಲಸಿಕೆ ತೆಗೆದುಕೊಳ್ಳುವುದು ಸ್ವಯಂಪ್ರೇರಿತವೇ ಹೊರತು ಕಡ್ಡಾಯವಲ್ಲ. ಆದರೆ, ಫಲಾನುಭವಿಯ ನೋಂದಣಿ ಕಡ್ಡಾಯ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಸ್ಪಷ್ಟಪಡಿಸಿದೆ. ಭಾರತದಲ್ಲಿ ನೀಡಲಾಗುವ ಲಸಿಕೆ, ಇತರ ದೇಶಗಳು ಅಭಿವೃದ್ಧಿಪಡಿಸಿದ ಲಸಿಕೆಯಷ್ಟೇ ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದೆ. ಕೋವಿಡ್-19 ರೋಗ, ಚಿಕಿತ್ಸೆ, ಲಸಿಕೆ ಮೊದಲಾದವುಗಳಿಗೆ ಸಂಬಂಧಿಸಿ ಸಾರ್ವಜನಿಕರ ಪ್ರಶ್ನೆಗಳನ್ನು ಪಟ್ಟಿ ಮಾಡಿ, ಅದಕ್ಕೆ ಉತ್ತರವನ್ನೂ ನೀಡಿದೆ.

    ಲಸಿಕೆಯ ಸಂಪೂರ್ಣ ಶೆಡ್ಯೂಲ್ ಅನುಸರಿಸಬೇಕು. ಆಗ ಮಾತ್ರ ರೋಗನಿರೋಧಕ ಶಕ್ತಿ ಬೆಳೆಯಲು ಸಾಧ್ಯ. ಕರೊನಾ ಸೋಂಕಿನ ಹಿಂದಿನ ಪ್ರಕರಣ ಇಲ್ಲದಿರುವವರೂ ಲಸಿಕೆ ಪಡೆಯುವುದು ಉತ್ತಮ. ಎರಡನೇ ಡೋಸ್ ಪಡೆದ ಎರಡು ವಾರದ ನಂತರವಷ್ಟೆ ಪ್ರತಿಕಾಯಗಳ (ಆಂಟಿಬಾಡೀಸ್) ರಕ್ಷಣಾತ್ಮಕ ಮಟ್ಟ ಬೆಳೆಯುತ್ತದೆ. ಕುಟುಂಬ ಸದಸ್ಯರು, ಮಿತ್ರರು, ಬಂಧುಗಳು ಮತ್ತು ಸಹೋದ್ಯೋಗಿಗಳಲ್ಲಿ ರೋಗ ಹರಡುವುದನ್ನು ತಡೆಯಲು ಲಸಿಕೆ ಹಾಕಿಸಿಕೊಳ್ಳುವುದು ಅಗತ್ಯ ಎಂದು ಸಚಿವಾಲಯ ತಿಳಿಸಿದೆ.

    ಇದನ್ನೂ ಓದಿ: ಕರೊನಾ ಹಾವಳಿಯಿಂದಾಗಿ ಮತ್ತೊಂದು ಕ್ರೀಡಾ ಲೀಗ್ ಮುಂದೂಡಿಕೆ

    ಭಾರತದಲ್ಲಿ ಲಸಿಕೆ ಪ್ರಯೋಗಗಳು ವಿವಿಧ ಹಂತಗಳಲ್ಲಿವೆ. ಶೀಘ್ರವೇ ಲಸಿಕೆ ಬಿಡುಗಡೆಗೆ ಸರ್ಕಾರ ಸಜ್ಜಾಗಿದೆ. ಲಸಿಕೆಯ ಸುರಕ್ಷತೆ ಬಗ್ಗೆ ಅಗತ್ಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಸುರಕ್ಷತೆ ಹಾಗೂ ಪರಿಣಾಮದ ಬಗ್ಗೆ ಸಂಬಂಧಪಟ್ಟ ನಿಯಂತ್ರಣ ಸಂಸ್ಥೆಗಳು ಅನುಮೋದಿಸಿದ ನಂತರ ಲಸಿಕೆಗಳನ್ನು ಬಿಡುಗಡೆ ಮಾಡಲಾಗುತ್ತದೆ.

    ಬೇರೆಲ್ಲ ಲಸಿಕೆಗಳನ್ನು ಪಡೆದಾಗ ಸಾಮಾನ್ಯವಾಗಿ ಕೆಲವು ವ್ಯಕ್ತಿಗಳಲ್ಲಿ ಕಂಡು ಬರುವ ಲಘು ಜ್ವರ, ನೋವು ಮುಂತಾದ ಲಕ್ಷಣಗಳು ಕರೊನಾ ಲಸಿಕೆಯಲ್ಲಿಯೂ ಕಂಡುಬರಬಹುದು ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಭಾರತ್ ಬಯೋಟೆಕ್-ಐಸಿಎಂಆರ್, ಜೈಡುಸ್ ಕ್ಯಾಡಿಲಾ, ಜಿನ್ನೋವಾ, ಆಕ್ಸ್​ಫರ್ಡ್, ಸ್ಪುಟ್ನಿಕ್ ವಿ ಮತ್ತು ಬಯಾಲಾಜಿಕಲ್ ಇ ಸಂಸ್ಥೆಯ ಲಸಿಕೆಗಳು ಭಾರತದಲ್ಲಿ ಪ್ರಾಯೋಗಿಕ ಹಂತದಲ್ಲಿವೆ.

    ಲಸಿಕೆ ಪಡೆಯಲು ನಿರಾಸಕ್ತಿ: ಕೋವಿಡ್- 19 ಲಸಿಕೆ ಪಡೆಯಲು ಶೇಕಡ 69 ಭಾರತೀಯರಿಗೆ ಆಸಕ್ತಿಯಿಲ್ಲ ಎಂದು ಲೋಕಲ್ ಸರ್ಕಲ್ಸ್ ನಡೆಸಿದ ಅಧ್ಯಯನ ತಿಳಿಸಿದೆ. ಅಕ್ಟೋಬರ್​ನಲ್ಲಿ ಈ ಪ್ರಮಾಣ ಶೇ. 61 ಆಗಿದ್ದು, ಡಿಸೆಂಬರ್​ನಲ್ಲಿ ಶೇ. 69ಕ್ಕೆ ಏರಿದೆ. ಲೋಕಲ್ ಸರ್ಕಲ್ಸ್ ಒಂದು ಸಾಮುದಾಯಿಕ ಮಾಧ್ಯಮ ವೇದಿಕೆ ಯಾಗಿದೆ. ದೇಶದಾದ್ಯಂತ 242 ಜಿಲ್ಲೆಗಳಲ್ಲಿ 18,000ಕ್ಕೂ ಹೆಚ್ಚು ಜನರ ಸಮೀಕ್ಷೆ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ. ಲಸಿಕೆಯ ಅಡ್ಡ-ಪರಿಣಾಮ, ಪರಿಣಾಮದ ಮಟ್ಟ ಮೊದಲಾದವುಗಳ ಬಗ್ಗೆ ಮಾಹಿತಿಯ ಕೊರತೆ ಮತ್ತು ಅಧಿಕ ರೋಗನಿರೋಧಕತೆ ಹೊಂದಿರುವವರಿಗೆ ಕರೊನಾ ಸೋಂಕು ತಗಲುವುದಿಲ್ಲ ಎಂಬ ನಂಬಿಕೆ ಈ ನಿರಾಸಕ್ತಿಗೆ ಪ್ರಮುಖ ಕಾರಣಗಳಾಗಿವೆ ಎಂದು ವೇದಿಕೆಯ ಸಂಸ್ಥಾಪಕ ಸಚಿನ್ ತಪಾರಿಯಾ ಹೇಳಿದ್ದಾರೆ. ಲಸಿಕೆ ಕುರಿತ ಸುಳ್ಳು ಸುದ್ದಿಗಳನ್ನು ತಡೆಯಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದೆ.

    13,238 ಕೋಟಿ ರೂ. ಬೇಕು: ಭಾರತದಲ್ಲಿ ಕರೊನಾ ಲಸಿಕೆ ನೀಡಿಕೆಯ ಮೊದಲ ಹಂತದ ಕಾರ್ಯಕ್ರಮಕ್ಕೆ ಸುಮಾರು 13,238 ಕೋಟಿ ರೂಪಾಯಿ ಬೇಕಾಗಬಹುದೆಂದು ಅಂದಾಜು ಮಾಡಲಾಗಿದೆ. ಜಾಗತಿಕ ಕೊವ್ಯಾಕ್ಸ್ ಯೋಜನೆಯಡಿ ಸಿಕ್ಕ ನೆರವಿನ ಹೊರತಾಗಿಯೂ ಇಷ್ಟೊಂದು ಹಣ ಬೇಕಾಗಬಹುದೆಂದು ಜಿಎವಿಐ ಲಸಿಕೆ ಕೂಟ ಹೇಳಿದೆ. ಮುಂದಿನ ಆರರಿಂದ ಎಂಟು ತಿಂಗಳಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡುವ ಗುರಿಯನ್ನು ಭಾರತ ಹೊಂದಿದೆ.

    30 ಕೋಟಿ ಡೋಸ್: ಭಾರತ 2021ರಲ್ಲಿ ಸ್ಪುಟ್ನಿಕ್-5 ಲಸಿಕೆಯ 30 ಕೋಟಿ ಡೋಸ್​ಗಳನ್ನು ತಯಾರಿಸಲಿದೆ ಎಂದು ರಷ್ಯಾದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಪುಟ್ನಿಕ್ ಲಸಿಕೆ ಶೇಕಡ 91.4ರಷ್ಟು ಪರಿಣಾಮಕಾರಿಯಾಗಿದೆ ಎಂದು ಪರೀಕ್ಷೆಗಳಿಂದ ದೃಢಪಟ್ಟಿದೆ. ಸ್ಪುಟ್ನಿಕ್​ನ ಸ್ಯಾಂಪಲ್​ಗಳನ್ನು ರಷ್ಯಾ ಈಗಾಗಲೇ ಪರೀಕ್ಷಿಸುತ್ತಿದೆ ಎಂದು ರಷ್ಯಾ ರಾಯಭಾರ ಕಚೇರಿಯ ಟ್ವಿಟರ್ ತಿಳಿಸಿದೆ.

    ಸಶಸ್ತ್ರ ಪಡೆಗಳ ದೇಣಿಗೆ: ಭಾರತದ ಮೂರೂ ಸೇನಾ ಪಡೆಗಳು ಕೋವಿಡ್ ನಿಯಂತ್ರಣಕ್ಕಾಗಿನ ಪಿಎಂ ಕೇರ್ಸ್ ನಿಧಿಗೆ 203.67 ಕೋಟಿ ರೂ. ವಂತಿಗೆ ನೀಡಿವೆ. ಒಂದು ದಿನದ ವೇತನದಿಂದ ಈ ಮೊತ್ತವನ್ನು ಸಂಗ್ರಹಿಸಲಾಗಿದೆ.

    ಇದನ್ನೂ ಓದಿ: ಕರೊನಾ ಬುಲೆಟಿನ್​: ಸೋಂಕಿಗಿಂತಲೂ ಚೇತರಿಸಿಕೊಂಡು ಬಿಡುಗಡೆಗೊಂಡವರೇ ಅಧಿಕ

    ಲಾಕ್​ಡೌನ್ ಮಾಹಿತಿ ಕೊಡಿ

    ಕೋವಿಡ್-19 ವಿರುದ್ಧದ ಹೋರಾಟ ವಿಶ್ವ ಯುದ್ಧವಿದ್ದಂತೆ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಬಣ್ಣಿಸಿದೆ. ರೋಗ ನಿಯಂತ್ರಣಕ್ಕಾಗಿನ ನಿಯಮ ಹಾಗೂ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದಿರುವುದರಿಂದ ಅದು ಕಾಳ್ಗಿಚ್ಚಿನಂತೆ ದೇಶದಾದ್ಯಂತ ಹರಡಿದೆ ಎಂದು ನ್ಯಾ.ಅಶೋಕ್ ಭೂಷಣ್ ನೇತೃತ್ವದ ಪೀಠ ಹೇಳಿದೆ. ಕರ್ಫ್ಯೂ ಅಥವಾ ಲಾಕ್​ಡೌನ್​ಗಳನ್ನು ಮುಂಚಿತವಾಗಿಯೇ ಪ್ರಕಟಿಸಬೇಕು. ಜನರಿಗೆ ಅದರ ಬಗ್ಗೆ ಪೂರ್ವ ಮಾಹಿತಿ ಹಾಗೂ ಜೀವನೋಪಾಯಕ್ಕೆ ಸಿದ್ಧತೆ ಮಾಡಿಕೊಳ್ಳಲು ಕಾಲಾವಕಾಶ ನೀಡಬೇಕು ಎಂದಿದೆ.

    ಒಂದೇ ದಿನ 2.5 ಲಕ್ಷ ಸೋಂಕಿತರು

    ಅಮೆರಿಕ ಕೊರೊನಾ ಮಹಾಮಾರಿಯ ಎರಡನೇ ಅಲೆಯಿಂದ ತತ್ತರಿಸುತ್ತಿದೆ. ಬುಧವಾರ ಒಂದೇ ದಿನ ಕರೊನಾದಿಂದ 3500ಕ್ಕೂ ಹೆಚ್ಚು ಜನರು ಮೃತರಾಗಿ ದ್ದಾರೆ. ಒಂದೇ ದಿನ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ಪತ್ತೆಯಾಗಿದೆ. ಅಮೆರಿಕದಲ್ಲಿ ಇಲ್ಲಿ ಯವರೆಗಿನ ಒಟ್ಟು ಸೋಂಕಿತರ ಸಂಖ್ಯೆ 1.75 ಕೋಟಿ ದಾಟಿದೆ. ಒಟ್ಟು ಸಾವಿನ ಸಂಖ್ಯೆ 3.17 ಲಕ್ಷ ದಾಟಿದೆ.

    • ಭಾರತದಲ್ಲಿ ಈಗಿರುವ ಸಕ್ರಿಯ ಪ್ರಕರಣ: 3,13,831. 
    • ಚೇತರಿಕೆ ಕಂಡ ಸೋಂಕಿತರು: 92,06,996. 
    • ಚೇತರಿಕೆ ಪ್ರಮಾಣ: ಶೇಕಡ 95.40.
    • 24 ಗಂಟೆಗಳಲ್ಲಿ ಹೊಸ ಪ್ರಕರಣ: 22,890. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts