More

    ಮುಳ್ಳಯ್ಯನಗಿರಿ ಸೊಬಗಿಗೆ ಪ್ರವಾಸಿಗರು ಫಿದಾ

    ಚಿಕ್ಕಮಗಳೂರು: ಪ್ರವಾಸಿ ತಾಣಗಳ ಪ್ರವೇಶಕ್ಕೆ ಸರ್ಕಾರದ ಗ್ರೀನ್​ಸಿಗ್ನಲ್ ನೀಡಿದ ಹಿನ್ನೆಲೆ ಕರೊನಾ ನಡುವೆಯೂ ನೂರಾರು ಪ್ರವಾಸಿಗರು ಗಿರಿಶ್ರೇಣಿಗಳಿಗೆ ಲಗ್ಗೆ ಇಟ್ಟಿದ್ದಾರೆ.

    ಕರೊನಾ ಭೀತಿಯಿಂದ ಮಾ.23ರಂದು ಸರ್ಕಾರ ಲಾಕ್​ಡೌನ್ ಘೊಷಿಸಿತ್ತು. ದಿನ ಕಳೆದಂತೆ ಕೆಲ ನಿಯಮ ಸಡಿಲಿಕೆ ಮಾಡಿದರೂ ಮುನ್ನೆಚ್ಚರಿಕೆ ಕ್ರಮದಿಂದ ಪ್ರವಾಸೋದ್ಯಮಕ್ಕೆ ಮಾತ್ರ ನಿರ್ಬಂಧ ಸಡಿಲಿಸಿರಲಿಲ್ಲ. ಈಗ ಹಲವು ನಿಯಮಗೊಂದಿಗೆ ಪ್ರವಾಸಿತಾಣಕ್ಕೆ ಭೇಟಿ ನೀಡಲು ಗ್ರೀನ್​ಸಿಗ್ನಲ್ ನೀಡಿರುವುದು ಪ್ರವಾಸಿಗರರಲ್ಲಿ ಸಂಭ್ರಮ ಮನೆ ಮಾಡಿದೆ ಎಂಬುದಕ್ಕೆ ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯ ಸಾಲುಗಳು ಸಾಕ್ಷಿಯಾಯಿತು.

    ಮುಳ್ಳಯ್ಯನಗಿರಿ ಸೊಬಗನ್ನು ವೀಕ್ಷಿಸಲು ಹಿಂದಿನ ದಿನವೇ ಲಾಡ್ಜ್, ಹೋಮ್ ಸ್ಟೇ, ರೆಸಾರ್ಟ್​ಗಳಲ್ಲಿ ತಂಗಿದ್ದ ಪ್ರವಾಸಿಗರು ಬೆಳಗ್ಗೆ ಗಿರಿಶ್ರೇಣಿ ಕಡೆಗೆ ಮುಖಮಾಡಿದ್ದರು. ಕೆಲವು ಸ್ನೇಹಿತರು ಹಾಗೂ ನವದಂಪತಿಗಳು ಬೈಕ್​ಗಳಲ್ಲಿ ಆಗಮಿಸಿದ್ದರು. ತೆರೆದ ವಾಹನಗಳಲ್ಲಿ ನಿಂತು ನಿಸರ್ಗದ ಸೊಬಗನ್ನು ವೀಕ್ಷಿಸುತ್ತ ಸಾಗಿದರು. ವ್ಯೂ ಪಾಯಿಂಟ್​ಗಳಲ್ಲಿ ನಿಂತು ಮಹಿಳೆಯರು, ಮಕ್ಕಳು ಕುಟುಂಬ ಸಮೇತ ಸೆಲ್ಪಿ ಕ್ಲಿಕ್ಕಿಸಿಕೊಂಡು ದಾರಿಯುದ್ದಕ್ಕೂ ವಿಡಿಯೋ ಮಾಡುತ್ತ ಸಾಗಿದರು.

    ಬೆಂಗಳೂರು, ಮೈಸೂರು, ಶಿವಮೊಗ್ಗ, ಭದ್ರಾವತಿ, ಚಿತ್ರದುರ್ಗ, ದಾವಣಗೆರೆ, ಹಾಸನ, ಬೇಲೂರು, ತಿಪಟೂರು ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದ ವಿವಿಧ ಭಾಗಗಳು ಸೇರಿ ತಮಿಳುನಾಡು, ಕೇರಳ, ಆಂಧ್ರ ಪ್ರದೇಶದಿಂದ ಆಗಮಿಸಿದ ಪ್ರವಾಸಿಗರು ಕಾಫಿ ತೋಟಗಳು, ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಕವಿಕಲ್​ಗಂಡಿ, ಅತ್ತಿಗುಂಡಿ, ಹೊನ್ನಮ್ಮನಹಳ್ಳ, ದತ್ತಪೀಠ, ಗಾಳಿಕೆರೆ, ಮಾಣಿಕ್ಯಾಧಾರಾ, ದಬ್ಬೆ ಫಾಲ್ಸ್, ಝುರಿ ಫಾಲ್ಸ್ ಸೇರಿ ನಗರ ಹೊರವಲಯದ, ಹಿರೇಕೊಳಲೆ, ಐಯ್ಯನಕೆರೆ, ಮುತ್ತೋಡಿ ಭದ್ರಾ ಅಭಯಾರಣ್ಯಕ್ಕೆ ಭೇಟಿ ನೀಡಿದರು.

    ಮನಸೋತ ಪ್ರವಾಸಿಗರು: ಕಾಫಿ ಕಂಪಿನ ಜತೆಗೆ ಕಾಫಿ ತೋಟದ ಅಂಕುಡೊಂಕಿನ ಹಾದಿಯಲ್ಲಿ ಮುಂಗಾರು ಮಳೆ ಅಬ್ಬರಕ್ಕೆ ಅಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಪರ್ವತ ಶ್ರೇಣಿಗಳ ರುದ್ರರಮಣೀಯ ನೋಟವನ್ನು ಪ್ರವಾಸಿಗರು ಕಣ್ತುಂಬಿಕೊಂಡರು. ಗುಡ್ಡ, ಬೆಟ್ಟಗಳಲ್ಲಿ ಸದ್ದು ಮಾಡುತ್ತಿದ್ದ ಝುರಿ, ತೊರೆಗಳು, ದಟ್ಟಕಾನನದ ನಡುವೆ ಮುಗಿಲೆತ್ತರಿಂದ ಹಾಲ್ನೊರೆಯಂತೆ ಧುಮುಕ್ಕುತ್ತಿದ್ದ ಜಲಪಾತಗಳು, ಗಿರಿಶ್ರೇಣಿಯಲ್ಲಿ ರವಿಕಿರಣಗಳ ಮಧ್ಯೆ ತುಂತುರು ಮಳೆ ಹನಿಯಯಲ್ಲಿ ಬೀಸುತ್ತಿದ್ದ ತಂಗಾಳಿಯ ವಾತಾವರಣಕ್ಕೆ ಪ್ರವಾಸಿಗರು ಮನಸೋತರು.

    ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ: ಮುಳ್ಳಯ್ಯನಗಿರಿಗೆ ಅಗಮಿಸುವ ಪ್ರವಾಸಿಗರನ್ನು ಕೈಮರ ಚೆಕ್​ಪೋಸ್ಟ್​ಗಳಲ್ಲಿ ತಪಾಸಣೆ ನಡೆಸಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಈ ವೇಳೆ ಸ್ಯಾನಿಟೈಸರ್, ಮಾಸ್ಕ್ ಇಲ್ಲದ ಪ್ರವಾಸಿಗರಿಗೆ ಪ್ರವೇಶ ನೀಡದೆ ವಾಪಸ್ ಕಳಿಸಲಾಯಿತು. ಪ್ರವಾಸಿಗರು ನಗರಕ್ಕೆ ಬಂದು ಸ್ಯಾನಿಟೈಸರ್, ಮಾಸ್ಕ್​ಗಳನ್ನು ತಂದ ಮೇಲೆ ಮುಳ್ಳಯ್ಯನಗಿರಿ ಪ್ರವೇಶಕ್ಕೆ ಅವಕಾಶ ನೀಡಿದರು. ಮಧ್ಯಾಹ್ನ 1 ಗಂಟೆ ವೇಳೆಗೆ 200ಕ್ಕೂ ಹೆಚ್ಚು ದ್ವಿಚಕ್ರ, 400ಕ್ಕೂ ಹೆಚ್ಚು ಲಘು ವಾಹನಗಳು ಮುಳ್ಳಯ್ಯನಗಿರಿ ಕಡೆಗೆ ಸಾಗಿದವು. ಟಿಟಿ ವಾಹನಕ್ಕೆ ಪ್ರವೇಶ ನಿಷೇಧಿಸಲಾಗಿತ್ತು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts