More

    ದ.ಕ. ಜಿಲ್ಲೆ ಕರೊನಾ ಟೆಸ್ಟ್‌ನಲ್ಲಿ ಮುಂದು

    ವೇಣುವಿನೋದ್ ಕೆ.ಎಸ್. ಮಂಗಳೂರು

    ಉಡುಪಿ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಹಾರಾಷ್ಟ್ರ ಸಂಪರ್ಕದಿಂದಾಗಿ ಮೊನ್ನೆ ಮೊನ್ನೆಯವರೆಗೆ ಕೋವಿಡ್ ಟೆಸ್ಟ್ ಸ್ಯಾಂಪಲ್ ರಾಶಿ ಬಿದ್ದು ಲ್ಯಾಬ್‌ಗಳ ಕೊರತೆಯಿಂದ ಬಾಕಿಯಾಗುತ್ತಿತ್ತು. ಆದರೆ ಐದು ಲ್ಯಾಬ್‌ಗಳನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆ ಇತರ ಜಿಲ್ಲೆಗಳ ಟೆಸ್ಟ್‌ಗಳನ್ನೂ ನಡೆಸಿ ಮುನ್ನಡೆ ಸಾಧಿಸಿದೆ.
    ಜಿಲ್ಲೆಯಲ್ಲಿ ಅತ್ಯಾಧುನಿಕ ಜಿಲ್ಲಾ ವೈರಾಲಜಿ ಲ್ಯಾಬ್ ಹಾಗೂ ನಾಲ್ಕು ವೈದ್ಯಕೀಯ ಕಾಲೇಜುಗಳಲ್ಲಿ ಆರಂಭಗೊಂಡಿರುವ ಕೋವಿಡ್ ಲ್ಯಾಬ್‌ಗಳಿಂದಾಗಿ ಸ್ಯಾಂಪಲ್‌ಗಳನ್ನೆಲ್ಲ ಚುರುಕಾಗಿ ಪರೀಕ್ಷಿಸಿ ವರದಿ ನೀಡಲಾಗುತ್ತಿದೆ. ನೆರೆಯ ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸ್ಯಾಂಪಲ್‌ಗಳನ್ನೂ ಇಲ್ಲಿ ಪರೀಕ್ಷಿಸಲಾಗುತ್ತಿರುವುದು ಗಮನಾರ್ಹ.
    ಕ್ಷಿಪ್ರವಾಗಿ ವರದಿ ಬರುತ್ತಿರುವುದರಿಂದ ಕೋವಿಡ್ ಇದ್ದಲ್ಲಿ ಅವರನ್ನು ಕೂಡಲೇ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸುವುದು, ಉಳಿದವರನ್ನು ಮನೆಗೆ ಕ್ವಾರಂಟೈನ್‌ಗೆ ಕಳುಹಿಸಲು ಸಾಧ್ಯವಾಗುತ್ತಿದೆ.

    15 ಸಾವಿರ ಟೆಸ್ಟ್: ವೆನ್ಲಾಕ್ ಆಸ್ಪತ್ರೆಯಲ್ಲಿ 65 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಜಿಲ್ಲಾ ವೈರಾಲಜಿ ಲ್ಯಾಬೊರೇಟರಿ ಜೂನ್ 7ಕ್ಕೆ 60 ದಿನ ಪೂರ್ಣಗೊಳಿಸಿದೆ. ಪ್ರಾರಂಭದಲ್ಲಿ ಕಡಿಮೆ ಸ್ಯಾಂಪಲ್‌ಗಳಿದ್ದರೆ ಕೆಲವೇ ದಿನಗಳಲ್ಲಿ ಸ್ಯಾಂಪಲ್ ಪ್ರಮಾಣ ಏರತೊಡಗಿದೆ. ದಿನಕ್ಕೆ 100ರಿಂದ 500ರವರೆಗೂ ಸ್ಯಾಂಪಲ್ ಪರೀಕ್ಷೆಯ ಒತ್ತಡವಿರುತ್ತದೆ. ಒತ್ತಡವಿದ್ದಾಗ ತಡರಾತ್ರಿವರೆಗೂ ಸಿಬ್ಬಂದಿ ಪರೀಕ್ಷೆ ನಡೆಸುತ್ತಾರೆ, ಸದ್ಯ ನಮ್ಮಲ್ಲಿ ಹೆಚ್ಚು ಬಾಕಿ ಉಳಿಯುತ್ತಿಲ್ಲ. 60ನೇ ದಿನವೇ ನಾವು 15 ಸಾವಿರ ಸ್ಯಾಂಪಲ್ ಪರೀಕ್ಷೆಯ ಮೈಲಿಗಲ್ಲು ದಾಟಿದ್ದೇವೆ ಎನ್ನುತ್ತಾರೆ ಕೋವಿಡ್ ಲ್ಯಾಬ್ ನೋಡಲ್ ಅಧಿಕಾರಿ ಡಾ.ಶರತ್ ಕುಮಾರ್.

    ಒಟ್ಟು ಐದು ಲ್ಯಾಬ್: ಯೇನೆಪೊಯ, ಕೆಎಂಸಿ, ಫಾದರ್ ಮುಲ್ಲರ್ಸ್‌ ಹಾಗೂ ಕೆ.ಎಸ್.ಹೆಗ್ಡೆ ಆಸ್ಪತ್ರೆಗಳಲ್ಲಿ ಪ್ರಸ್ತುತ ಖಾಸಗಿಯಾಗಿ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಇನ್ನೂ ನಾಲ್ಕು ವೈದ್ಯಕೀಯ ಕಾಲೇಜುಗಳಲ್ಲಿ ಲ್ಯಾಬ್ ಸ್ಥಾಪನೆಯ ಕೆಲಸ ನಡೆದಿದ್ದು, ಶೀಘ್ರ ಕಾರ್ಯಾರಂಭಿಸುವ ನಿರೀಕ್ಷೆ ಇದೆ. ಇದುವರೆಗೆ ಯೆನೆಪೋಯ ಲ್ಯಾಬ್‌ಗೆ ಬಂದ 4353 ಸ್ಯಾಂಪಲ್‌ಗಳಲ್ಲಿ 513, ಫಾ.ಮುಲ್ಲರ್ಸ್‌ ಲ್ಯಾಬ್‌ಗೆ ಬಂದ 442 ಸ್ಯಾಂಪಲ್‌ಗಳಲ್ಲಿ 122, ಕೆಎಂಸಿ ಲ್ಯಾಬ್‌ಗೆ ಬಂದ 711 ಸ್ಯಾಂಪಲ್‌ಗಳಲ್ಲಿ 74 ಹಾಗೂ ಕೆ.ಎಸ್.ಹೆಗ್ಡೆ ಲ್ಯಾಬ್‌ಗೆ ಬಂದ 334 ಸ್ಯಾಂಪಲ್‌ಗಳಲ್ಲಿ 5 ಪಾಸಿಟಿವ್ ಬಂದಿದೆ. ಇವುಗಳಲ್ಲಿ ಬಹುತೇಕ ಪಾಸಿಟಿವ್ ಉಡುಪಿ, ಉತ್ತರ ಕನ್ನಡ ಜಿಲ್ಲೆಯದ್ದು.

    ಜಿಲ್ಲಾ ಲ್ಯಾಬ್ ಕೊಡುಗೆ: ಪ್ರಸ್ತುತ ದ.ಕ. ಜಿಲ್ಲೆಯ ಮೊದಲ ವೈರಾಲಜಿ ಲ್ಯಾಬ್ ಆಗಿ ಅತ್ಯಾಧುನಿಕ ಯಂತ್ರೋಪಕರಣಗಳೊಂದಿಗೆ ಕಾರ್ಯವೆಸಗುತ್ತಿರುವ ವೆನ್ಲಾಕ್ ಲ್ಯಾಬನ್ನು ಮುಂದೆಯೂ ಹಲವು ರೀತಿಯ ವೈರಸ್ ಪರೀಕ್ಷೆಗೆ ಬಳಸಬಹುದು. ಮುಖ್ಯವಾಗಿ ಎಚ್1ಎನ್1, ಡೆಂೆ, ಇನ್‌ಫ್ಲುಯೆನ್ಜಾ ಎ ಮತ್ತು ಬಿ, ಆರ್‌ಎಸ್‌ವಿ, ರೈನೊ ವೈರಸ್, ಹೆಪಟೈಟಿಸ್ ಇತ್ಯಾದಿ ಸಾಮಾನ್ಯ ಸಮಸ್ಯೆಗಳ ಪರೀಕ್ಷೆಗೆ ಅನುಕೂಲ. ವಂಶವಾಹಿ ಮೂಲಕ ಹರಡಬಲ್ಲ ರೋಗಗಳಾದ ಹಿಮೊಫೀಲಿಯಾ, ತಲಸೇಮಿಯಾದಂತಹ ಪರೀಕ್ಷೆಗಳನ್ನೂ ಮಾಡಬಹುದು. ಇದು ಜಿಲ್ಲೆಗೊಂದು ಕೊಡುಗೆಯಾಗಿದೆ ಎನ್ನುತ್ತಾರೆ ಡಾ.ಶರತ್ ಕುಮಾರ್. ಇದುವರೆಗೆ ಈ ಪರೀಕ್ಷೆಗಳಿಗೆ ಮಣಿಪಾಲ ಅಥವಾ ಬೆಂಗಳೂರಿನ ಲ್ಯಾಬ್‌ಗಳ ಮೊರೆ ಹೋಗಬೇಕಾಗಿತ್ತು.

    ಉಡುಪಿಯಲ್ಲಿ ಒಂದೇ ಲ್ಯಾಬ್
    ಉಡುಪಿ: ಜಿಲ್ಲೆಯಲ್ಲಿ ಸದ್ಯ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮಾತ್ರ ಖಾಸಗಿ ವೈರಾಲಜಿ ಪ್ರಯೋಗಾಲಯ ಇದೆ. ಇಲ್ಲಿ ಪ್ರತಿದಿನ 250ರಷ್ಟು ಟೆಸ್ಟ್ ನಡೆಯುತ್ತಿದೆ. ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದಾಗ ಮಂಗಳೂರು, ಶಿವಮೊಗ್ಗ, ಹಾಸನ, ಬೆಂಗಳೂರಿನ ಲ್ಯಾಬ್‌ಗಳಿಗೆ ಗಂಟಲು ಸ್ರಾವ ಮಾದರಿ ಕಳುಹಿಸಲಾಗುತ್ತಿತ್ತು. ಈಗ ಮಣಿಪಾಲ ಲ್ಯಾಬ್‌ನಲ್ಲೇ ಟೆಸ್ಟ್ ನಡೆಯುತ್ತಿದೆ. ಇದುವರೆಗೆ ಒಟ್ಟು 12,512 ಮಂದಿಯ ಗಂಟಲು ಸ್ರಾವ ಮಾದರಿಯನ್ನು ವಿವಿಧ ಲ್ಯಾಬ್‌ಗಳಲ್ಲಿ ಜಿಲ್ಲೆಯಿಂದ ಟೆಸ್ಟ್‌ಗೆ ಒಳಪಡಿಸಲಾಗಿದೆ. ಉಡುಪಿ ಜಿಲ್ಲಾಸ್ಪತ್ರೆಗೆ ಲ್ಯಾಬ್ ಮಂಜೂರಾಗಿ ತಿಂಗಳಾಗುತ್ತ ಬಂದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಶೀಘ್ರ ಆರಂಭಗೊಳ್ಳಲಿದೆ, ತಾಂತ್ರಿಕ ಸಿಬ್ಬಂದಿಗೆ ತರಬೇತಿ ಪೂರ್ಣಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts