More

    ಕರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಕಸರತ್ತು ; ಸೋಂಕು ಪತ್ತೆ, ಲಸಿಕೆ ಅಭಿಯಾನ ಚುರುಕು

    ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಕರೊನಾ ಹೊಸ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿರುವುದರಿಂದ ಸೋಂಕಿನ ನಿಯಂತ್ರಣಕ್ಕೆ ಜಿಲ್ಲಾಡಳಿತ ಕಸರತ್ತು ಆರಂಭಿಸಿದೆ. ಜಿಲ್ಲಾ ಕರೊನಾ ಟಾಸ್ಕ್ ಫೋರ್ಸ್ ಸಮಿತಿ ಮತ್ತಷ್ಟು ಅಲಾರ್ಟ್ ಆಗಿದ್ದು ಸೋಂಕು ಪತ್ತೆ ಮತ್ತು ಲಸಿಕಾ ಅಭಿಯಾನ ಚುರುಕುಗೊಳಿಸಲು ಮುಂದಾಗಿದೆ.

    ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆ ಸಿಬ್ಬಂದಿ ಕಣ್ಗಾವಲು ಹಾಗೂ ಗಂಟಲು ದ್ರವ ಸಂಗ್ರಹಣೆ, ಪರೀಕ್ಷೆ, ಲಸಿಕೆ, ಮಾರ್ಗಸೂಚಿ ಅನುಷ್ಠಾನದ ಕುರಿತು ಗುರುವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ನೇತೃತ್ವದಲ್ಲಿನ ಲಸಿಕಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದ್ದು, ಪ್ರಕ್ರಿಯೆಯನ್ನು ಕಟ್ಟುನಿಟ್ಟುಗೊಳಿಸುವ ನಿರ್ದೇಶನ ಹಾಗೂ ಪ್ರತ್ಯೇಕ ತಂಡಗಳ ರಚನೆಗೆ ಸೂಚನೆ ನೀಡಲಾಗಿದೆ.

    ಕರೊನಾ ಎರಡನೇ ಅಲೆ ಕೈ ಮೀರುತ್ತಿದೆ, ಜಿಲ್ಲೆಯಲ್ಲೂ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತಿ ದಿನ ಸುಮಾರು 100 ಪ್ರಕರಣಗಳು ದಾಖಲಾಗುತ್ತಿವೆ, ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗೂ ಗೌರಿಬಿದನೂರಿನಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

    45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಿಸುವಲ್ಲಿ ಬೇಜವಾಬ್ದಾರಿ ತೋರಿದ್ದಲ್ಲಿ ಸಂಬಂಧಪಟ್ಟವರೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದ ಡಿಸಿ, ಸೋಂಕು ಪತ್ತೆಯಾದವರನ್ನು ತಕ್ಷಣವೇ ಕ್ವಾರಂಟೈನ್‌ಗೆ ಒಳಪಡಿಸಬೇಕು ಹಾಗೂ ಸಂಪರ್ಕ ಹೊಂದಿರುವ ಕನಿಷ್ಠ 20 ಮಂದಿಯನ್ನು ಗುರುತಿಸಿ, ಪರೀಕ್ಷೆ ಮಾಡಿಸುವಂತೆ ತಾಕೀತು ಮಾಡಿದರು.

    ಎಲ್ಲ ತಾಲೂಕುಗಳಲ್ಲೂ ಆರ್‌ಟಿಪಿಸಿಆರ್ ಟೆಸ್ಟ್‌ಗಳು ಮತ್ತಷ್ಟು ಹೆಚ್ಚಾಗಬೇಕಿದ್ದು, ನಗರ, ಪಟ್ಟಣ ಪ್ರದೇಶಗಳಲ್ಲಿನ ಆಯುಕ್ತರು, ಗ್ರಾಮೀಣ ಭಾಗದಲ್ಲಿ ಆಯಾ ಪಿಡಿಒಗಳು ಹೆಚ್ಚಿನ ಗಮನ ಕೊಡಬೇಕು ಎಂದರು. ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಚನ್ನಕೇಶವರೆಡ್ಡಿ, ಮತ್ತಿತರರು ಇದ್ದರು.

    ಶಿಕ್ಷಕರ ಸಹಕಾರ ಪಡೆಯಿರಿ: ಕರೊನಾ ನಿಯಂತ್ರಣದಲ್ಲಿ ಪ್ರತಿಯೊಬ್ಬರ ಪಾತ್ರ ಮಹತ್ತದ್ದಾಗಿದೆ, ಜನರಲ್ಲಿ ಸೋಂಕು ಮುನ್ನೆಚ್ಚರಿಕೆ ಕ್ರಮಗಳ ಪಾಲನೆಯ ಬಗ್ಗೆ ಅರಿವು ಮೂಡಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಶಾಲಾ ಶಿಕ್ಷಕರ ಸಹಕಾರ ಪಡೆದುಕೊಳ್ಳುವಂತೆ ಜಿಪಂ ಸಿಇಒ ಪಿ.ಶಿವಶಂಕರ್ ನಿರ್ದೇಶನ ನೀಡಿದರು.

    ಸೋಂಕಿನ ಬಗ್ಗೆ ನಿರ್ಲಕ್ಷ್ಯ : ಜಿಲ್ಲೆಯ ಜನರು ಸೋಂಕಿನ ಬಗ್ಗೆ ನಿರ್ಲಕ್ಷ್ಯ ತಾಳಿರುವುದು ಕಂಡು ಬರುತ್ತಿದೆ, ಮಾಸ್ಕ್ ಧರಿಸದವರಿಗೆ ಮುಲಾಜಿಲ್ಲದೆ ದಂಡ ವಿಧಿಸಬೇಕು, ಜಾತ್ರೆ ಉತ್ಸವಗಳಿಗೆ ಅವಕಾಶ ನೀಡದಂತೆ ಸೂಚಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ತಾಲೂಕುವಾರು ನೇಮಿಸಿರುವ ನೋಡಲ್ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ರಂಜಾನ್ ಹಬ್ಬ ಆಚರಣೆಯಲ್ಲಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದರು.

    ಗುರಿ ತಲುಪದ ಅಸಮಾಧಾನ : ಜಿಲ್ಲೆಯಲ್ಲಿ ನಿರೀಕ್ಷಿತಮಟ್ಟದಲ್ಲಿ ಲಸಿಕೆ ಹಾಕದಿರುವುದರ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ಸರ್ಕಾರ ಪ್ರತಿನಿತ್ಯ 45 ವರ್ಷ ಮೇಲ್ಪಟ್ಟ ಕನಿಷ್ಠ 10,500 ಮಂದಿಗೆ ಲಸಿಕೆ ಹಾಕಿಸುವ ಗುರಿ ನಿಗದಿಪಡಿಸಿದೆ. ಆದರೆ, ಈ ಗುರಿ 3 ಸಾವಿರ ಜನರನ್ನೂ ತಲುಪುತ್ತಿಲ್ಲ, ಜಿಲ್ಲೆಯಲ್ಲಿ 30,000 ಮಂದಿಗೆ ಸಾಕಾಗುವಷ್ಟು ಲಸಿಕೆ ಲಭ್ಯವಿದೆ. ಇನ್ನೂ 20,000 ಮಂದಿಗೆ ಬೇಕಾಗುವಷ್ಟು ಲಸಿಕೆ ಗುರುವಾರ ಬರಲಿದೆ ಎಂದು ಜಿಲ್ಲಾಧಿಕಾರಿ ಲತಾ ತಿಳಿಸಿದರು. ಜಿಲ್ಲಾದ್ಯಂತ ಸುಮಾರು 3 ಲಕ್ಷ ಮಂದಿ 45 ವರ್ಷ ಮೇಲ್ಪಟ್ಟವರಿದ್ದಾರೆ, ಈ ಪೈಕಿ ಈವರೆಗೆ 1.30 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದ್ದು, ಇನ್ನೂ ಶೇ.60 ಮಂದಿ ಲಸಿಕೆ ಹಾಕಿಸಿಕೊಳ್ಳಬೇಕಿದೆ ಎಂದರು.

    ಪ್ರತ್ಯೇಕ ತಂಡ ರಚನೆ : ಆಯಾ ಭಾಗದಲ್ಲಿ ಆರೋಗ್ಯ ಸಿಬ್ಬಂದಿಯನ್ನೊಳಗೊಂಡಂತೆ ಪ್ರತ್ಯೇಕ ತಂಡ ರಚಿಸಿಕೊಂಡು, ಒಂದೊಂದು ವಾಟ್ಸ್ ಆ್ಯಪ್ ಗ್ರೂಪ್‌ಗಳ ಮೂಲಕ ಮಾಹಿತಿ ಹಂಚಿಕೊಳ್ಳಲು, ಪರಸ್ಪರ ಸಮನ್ವಯತೆ ಸಾಧಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸೋಂಕಿತರು ಪತ್ತೆಯಾದ ಕೂಡಲೇ ಕ್ವಾರಂಟೈನ್‌ಗೆ ಒಳಪಡಿಸಲು, ಹೋಂ ಕ್ವಾರಂಟೈನ್‌ನಲ್ಲಿರುವವರ ಮನೆಗೆ ಪ್ರತಿನಿತ್ಯ ತೆರಳಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸುವ ಸಲಹೆ-ಸೂಚನೆಗಳು ಕೇಳಿ ಬಂದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts