More

    ಆಗ ದುಬೈ… ಈಗ ಮುಂಬೈ..

    ವಿಜಯವಾಣಿ ಸುದ್ದಿಜಾಲ ಕಾರವಾರ

    ಮೊದಲು ದುಬೈನಿಂದ ಬಂದವರಿಂದ ಜಿಲ್ಲೆಯಲ್ಲಿ ಕರೊನಾ ಸೋಂಕು ಹರಡಿತ್ತು. ಆದರೆ, ಈಗ ಈ ಮಹಾಮಾರಿ ಹರಡಲು ಕಾರಣ ಮುಂಬೈ.

    ಸೋಮವಾರ ಒಂದೇ ದಿನ ಜಿಲ್ಲೆಯಲ್ಲಿ 9 ಪ್ರಕರಣಗಳು ಖಚಿತವಾಗಿದ್ದು, ಇದರಲ್ಲಿ 8 ಜನ ಮಹಾರಾಷ್ಟ್ರ ರಾಜ್ಯದಿಂದ ಮರಳಿದವರಾಗಿದ್ದಾರೆ. ಭಟ್ಕಳ ಪಟ್ಟಣಕ್ಕೆ ಮಾತ್ರ ಸೀಮಿತವಾಗಿದ್ದ ಸೋಂಕು ಈಗ ಜಿಲ್ಲೆಯ ಹೊನ್ನಾವರ, ಮುಂಡಗೋಡ, ಕಾರವಾರ ತಾಲೂಕುಗಳಿಗೂ ವಿಸ್ತರಿಸಿದೆ.

    ಅರ್ಧ ಶತಕ: ಸೋಮವಾರ ಖಚಿತವಾದ 9 ಕರೊನಾ ಸೋಂಕಿತರ ಪೈಕಿ 8 ಜನ ಮಹಾರಾಷ್ಟ್ರ ನಂಟಿನವರಾಗಿದ್ದರೆ, ಒಂದು 2 ವರ್ಷದ ಮಗುವಿಗೆ ತನ್ನ ತಾಯಿಯಿಂದ ಹರಡಿದೆ. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಈ ಮಹಿಳೆಗೆ (ಪಿ.-659) ರೋಗ ಬಂದಿತ್ತು ಎನ್ನಲಾಗಿದೆ.

    ಜಿಲ್ಲೆಯ ಒಟ್ಟಾರೆ ಕರೊನಾ ಸೋಂಕಿತರ ಸಂಖ್ಯೆ 51 ಕ್ಕೆ ಏರಿಕೆಯಾಗಿದೆ. ಇದರಲ್ಲಿ 40 ಸಕ್ರಿಯ ಪ್ರಕರಣಳು ಇದ್ದು,, 11 ಜನ ಈಗಾಗಲೇ ಗುಣಮುಖರಾಗಿದ್ದಾರೆ. ಎಲ್ಲ ರೋಗಿಗಳನ್ನೂ ಕಾರವಾರದ ಕ್ರಿಮ್್ಸ ವಿಶೇಷ ಕರೊನಾ ವಾರ್ಡ್​ಗೆ ಸ್ಥಳಾಂತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ.

    ಹಳ್ಳಿಗಳಿಗೆ ಆತಂಕ: ಮಹಾರಾಷ್ಟ್ರ ರಾಜ್ಯದಿಂದ ಬಂದವರು ಜಿಲ್ಲೆಯ ಹಳ್ಳಿಗಳಲ್ಲಿ ಓಡಾಡಿದ್ದರಿಂದ ಗ್ರಾಮೀಣ ಭಾಗದಲ್ಲೂ ಆತಂಕ ಶುರುವಾಗಿದೆ. ಜಿಲ್ಲೆಯ ಮೂರು ಹಳ್ಳಿಗಳನ್ನು ಕಂಟೈನ್ಮೆಂಟ್ ವಲಯ ಎಂದು ಘೊಷಿಸಲಾಗಿದೆ. ಕಾರವಾರದ ಮಾಜಾಳಿ, ಮುಂಡಗೋಡಿನ ಬಡ್ಡಿಗೇರಿ ಹಾಗೂ ಶಿಡ್ಲಗುಂಡಿ ಗ್ರಾಮದಲ್ಲಿ ಸೋಂಕಿತರು ಓಡಾಟ ನಡೆಸಿದ್ದರಿಂದ ಈ ಗ್ರಾಮಗಳನ್ನು ಕಂಟೈನ್ಮೆಂಟ್ ಜೋನ್ ಎಂದು ಘೊಷಿಸಲಾಗಿದೆ. ಜಿಲ್ಲೆಗೆ ಮಹಾರಾಷ್ಟ್ರ ರಾಜ್ಯದಿಂದ 2,500ರಷ್ಟು ಜನರು ವಾಪಸಾಗಿದ್ದಾರೆ ಎಂಬುದು ಜಿಲ್ಲಾಡಳಿತದ ಮಾಹಿತಿ. ಇವರ ಹೊರತಾಗಿ ಬೇರೆ ಯಾರಾದರೂ ಇದ್ದಲ್ಲಿ ಮಾಹಿತಿ ನೀಡಬೇಕು. ಇಲ್ಲದಿದ್ದಲ್ಲಿ ರೋಗ ಗ್ರಾಮೀಣ ಭಾಗಕ್ಕೆ ಹರಡುವ ಆತಂಕವಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಮನವಿ ಮಾಡಿದ್ದಾರೆ.

    ನಡೆದುಕೊಂಡು ಬಂದ: ಮಹಾರಾಷ್ಟ್ರದಿಂದ ಸ್ನೇಹಿತನ ಬೋಟ್​ನಲ್ಲಿ ಮೇ 12ರಂದು ಗೋವಾಕ್ಕೆ ಬಂದಿಳಿದ ಕಾರವಾರ ಮಾಜಾಳಿ ಮೂಲದ ವ್ಯಕ್ತಿ ಅಲ್ಲಿಂದ ಇತರ 12 ಜನರ ಜತೆ ನಡೆದುಕೊಂಡು ಮೇ 14 ಮಾಜಾಳಿ ಚೆಕ್ ಪೋಸ್ಟ್ ತಲುಪಿದ್ದ. ತಾನು ಗೋವಾದಿಂದ ಬಂದವನು ಎಂದು ಸುಳ್ಳು ಹೇಳಿಕೊಂಡು ಒಂದು ದಿನ ಊರಿನಲ್ಲಿ ಓಡಾಡಿದ್ದ. ಆದರೆ, ಈತನ ಸುಳ್ಳಿನ ಸುಳಿವು ಪಡೆದ ಅಧಿಕಾರಿಗಳು ಕರೆತಂದು ಸಾಂಸ್ಥಿಕ ಕ್ವಾರಂಟೈನ್ ಸೆಂಟರ್​ಗೆ ಸೇರಿಸಿದ್ದರು. ಈತನಿಗೆ (ಪಿ-1232) ಸೋಂಕು ಇರುವುದು ಸೋಮವಾರ ಖಚಿತವಾಗಿದೆ.

    ಬೈಕ್​ನಲ್ಲಿ ಬಂದರು: ಮುಂಡಗೋಡಿನ ಸರ್ಕಾರಿ ಕಾಲೇಜ್​ನ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದ ಇಬ್ಬರಲ್ಲಿ ಕರೊನಾ ಖಚಿತವಾಗಿದೆ. ಮಹಾರಾಷ್ಟ್ರದಿಂದ ಶಿಡ್ಲಗುಂಡಿ ಗ್ರಾಮಕ್ಕೆ ಇಬ್ಬರು ಬೈಕ್ ಮೂಲಕ ಯಾವುದೇ ಪಾಸ್ ಪಡೆಯದೇ ಬಂದಿದ್ದರು. ಚೆಕ್ ಪೋಸ್ಟ್ ತಪ್ಪಿಸಿ ಕಳ್ಳ ಹಾದಿಯ ಮೂಲಕ ಊರು ಸೇರಿದ್ದರು. ಊರಿನವರು ನೀಡಿದ ಮಾಹಿತಿಯ ಮೇರೆಗೆ ಇಬ್ಬರನ್ನೂ ಪ್ರತ್ಯೇಕವಾಗಿರಿಸಿ ಸ್ವ್ಯಾಬ್ ಕಳಿಸಲಾಗಿತ್ತು. ಒಬ್ಬನಲ್ಲಿ ರೋಗ ಇರುವುದು ಖಚಿತವಾಗಿದೆ. ಈತನ ಮನೆಯ ಎಲ್ಲರನ್ನೂ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

    ಕಾರಿನಲ್ಲಿ ಬಂದವರ ಪೈಕಿ ಒಬ್ಬನಿಗೆ: ಪಾಸ್ ಪಡೆದು ಮಹಾರಾಷ್ಟ್ರದಿಂದ ಬಡ್ಡಿಗೇರಿ ಗ್ರಾಮಕ್ಕೆ ಕಾರಿನಲ್ಲಿ ಬಂದ ನಾಲ್ವರ ಪೈಕಿ ಒಬ್ಬನಲ್ಲಿ ರೋಗ ಖಚಿತವಾಗಿದೆ. ಮುಂಬೈನಿಂದ ಬಂದು ಮುರ್ಡೆಶ್ವರದ ಹೋಟೆಲ್​ನಲ್ಲಿ ಕ್ವಾರಂಟೈನ್ ಆಗಿದ್ದ ಮೂವರಲ್ಲಿ ಒಬ್ಬನಿಗೆ ಸೋಂಕು ಖಚಿತವಾಗಿದ್ದು, ಹೆಂಡತಿ ಹಾಗೂ ಮಗುವಿನ ಗಂಟಲ ದ್ರವದ ಪ್ರಯೋಗಾಲಯ ಪರೀಕ್ಷೆ ನೆಗೆಟಿವ್ ಬಂದಿದೆ.

    ಒಂದೇ ಕುಟುಂಬದ ನಾಲ್ವರಲ್ಲಿ ಸೋಂಕು: ಹೊನ್ನಾವರ ಮಾಗೋಡಿನ ತನ್ನ ಮಾವನ ಮನೆಗೆ ಮಹಾರಾಷ್ಟ್ರದಿಂದ ಬಂದಿಳಿದಿದ್ದ ವ್ಯಕ್ತಿ, ಆತನ ಹೆಂಡತಿ, ಮಗಳು ಹಾಗೂ ನಾದಿನಿಯಲ್ಲೂ ರೋಗ ಖಚಿತವಾಗಿದೆ. ಮಹಾರಾಷ್ಟ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂಲತಃ ಕುಂದಾಪುರದ ವ್ಯಕ್ತಿ ಕುಟುಂಬದ ಜತೆ ಐದಾರು ದಿನದ ಹಿಂದೆ ಬಸ್​ನಲ್ಲಿ ಬಂದಿಳಿದ್ದ. ಎಲ್ಲರನ್ನೂ ಪ್ರಭಾತ ನಗರದ ಹಾಸ್ಟೆಲ್ ಒಂದರಲ್ಲಿ ಪ್ರತ್ಯೇಕವಾಗಿರಿಸಲಾಗಿತ್ತು.

    ‘ಕ್ವಾರಂಟೈನ್ ಕೇಂದ್ರದಲ್ಲಿ ಇನ್ನೂ 40 ಕ್ಕೂ ಹೆಚ್ಚು ಜನರಿದ್ದು, ಎಲ್ಲರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ’ ಎಂದು ಭಟ್ಕಳ ಉಪವಿಭಾಗಾಧಿಕಾರಿ ಭರತ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಡಿಎಚ್​ಒ ಡಾ. ಅಶೋಕ ಕುಮಾರ, ತಹಸೀಲ್ದಾರ್ ವಿವೇಕ ಶೇಣ್ವಿ, ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ ಇದ್ದರು.

    ಗೋವಾ ಉದ್ಯೋಗಿ ನಂಟು 45 ಜನ: ಜೊಯಿಡಾ ಅಣಶಿಯಿಂದ ಗೋವಾಕ್ಕೆ ತೆರಳಿದ್ದ 23 ವರ್ಷದ ಔಷಧ ಕಂಪನಿ ಉದ್ಯೋಗಿಯಲ್ಲಿ ರೋಗ ಇರುವುದು ಭಾನುವಾರ ಖಚಿತವಾಗಿದೆ. ಈತನ ಕುಟುಂಬದ ಐವರು ಸೇರಿ ಸಂಪರ್ಕಕ್ಕೆ ಬಂದ 45 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ. ಇದರಲ್ಲಿ ಶೋ ರೂಂ ಒಂದರ ಮೆಕ್ಯಾನಿಕ್ ಕೂಡ ಸೇರಿದ್ದಾರೆ.

    ಏಳು ಜನರು ಗುಣಮುಖ: ಕಾರವಾರ ಕ್ರಿಮ್್ಸ ಕರೊನಾ ವಾರ್ಡ್​ನಲ್ಲಿ ದಾಖಲಾಗಿದ್ದವರಲ್ಲಿ ಏಳು ಜನರ ಗಂಟಲ ದ್ರವದ ಮಾದರಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ. ಕಾರವಾರದಲ್ಲಿ ನೂತನವಾಗಿ ಪ್ರಾರಂಭವಾದ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗಿದೆ. ಆದರೆ, ಇನ್ನೊಮ್ಮ ಖಚಿತಪಡಿಸಿಕೊಳ್ಳುವ ಸಲುವಾಗಿ ಮಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಅಲ್ಲಿಯೂ ನೆಗೆಟಿವ್ ಬಂದಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

    ಸುಳ್ಳು ಮಾಹಿತಿ ನೀಡಿದಲ್ಲಿ ಕ್ರಿಮಿನಲ್ ಪ್ರಕರಣ: ಸುಳ್ಳು ಮಾಹಿತಿ ನೀಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಸೂಚಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಎಲ್ಲ ಉಪವಿಭಾಗಾಧಿಕಾರಿಗಳು, ಎಲ್ಲ, ತಹಸೀಲ್ದಾರರು ಹಾಗೂ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

    ವಿವಿಧ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ. ಹೋಂ ಕ್ವಾರಂಟೈನ್​ನಲ್ಲಿರುವವರ ಸಮೀಕ್ಷೆ ನಡೆಸಿ, ಸುಳ್ಳು ಮಾಹಿತಿ ನೀಡಿದ್ದು, ಕಂಡುಬಂದಲ್ಲಿ ಪ್ರಕರಣ ದಾಖಲಿಸಿ ಎಂದು ಸೂಚಿಸಿದರು.

    ಸೋಂಕಿತರ ನೇರ ಸಂಪರ್ಕಕ್ಕೆ ಬಂದವರನ್ನು ತಕ್ಷಣ ಗುರುತಿಸಿ ಸ್ವ್ಯಾಬ್ ಸಂಗ್ರಹಿಸಬೇಕು. ನಂತರ ಎರಡನೇ, ಮೂರನೇ ಹಂತದ ಸಂಪರ್ಕಕ್ಕೆ ಬಂದವರನ್ನು ಆರೋಗ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ಗುರುತಿಸಿ, ಪ್ರತ್ಯೇಕಿಸಬೇಕು ಎಂದು ತಿಳಿಸಿದರು.

    ಜಿಪಂ ಸಿಇಒ ಎಂ.ರೋಶನ್, ಡಿವೈಎಸ್​ಪಿ ಅರವಿಂದ ಕಲಗುಜ್ಜಿ, ಉಪವಿಭಾಗಾಧಿಕಾರಿ ಪ್ರಿಯಾಂಗಾ ಎಂ. ತಹಸೀಲ್ದಾರ್ ರಾಮಚಂದ್ರ ಕಟ್ಟಿ, ತಾಪಂ ಇಒ ಆನಂದಕುಮಾರ ಇದ್ದರು.

    ಸಾವಿರ ರೂ ದಂಡ: ಕಂಟೈನ್ಮೆಂಟ್ ವಲಯದಲ್ಲಿ ಬ್ಯಾರಿಕೇಡ್ ಹಾಕಿ ಯಾರೂ ಬರದಂತೆ, ಹೋಗದಂತೆ ರಸ್ತೆ ಭದ್ರ ಮಾಡಲಾಗುವುದು. ಅನಗತ್ಯವಾಗಿ ಮಾಸ್ಕ್ ಹಾಕದೇ ಬೈಕ್​ನಲ್ಲಿ ಓಡಾಡುವವರಿಗೆ ಒಂದು ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಶಿರಸಿ ಡಿವೈಎಸ್​ಪಿ ಜಿ.ಟಿ.ನಾಯ್ಕ ಅವರು ಮುಂಡಗೋಡಿನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶಿರಸಿ ಎಸಿ ಈಶ್ವರ ಉಳ್ಳಾಗಡ್ಡಿ ತಹಸೀಲ್ದಾರ್ ಶ್ರೀಧರ ಮುಂದಲಮನಿ ಇದ್ದರು.

    ಜಿಲ್ಲೆಗೆ ಹೊರ ರಾಜ್ಯಗಳಿಂದ ಬಂದವರಿಂದ ರೋಗ ಹರಡಿದೆ. ಅವರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಗುರುತಿಸಲಾಗಿದ್ದು, ಜನ ಆತಂಕಪಡುವ ಅವಶ್ಯಕತೆ ಇಲ್ಲ. ಎಲ್ಲವನ್ನೂ ಜಿಲ್ಲಾಡಳಿತ, ಅಧಿಕಾರಿಗಳು ಮಾಡಬೇಕು ಎಂಬ ಭಾವನೆ ತಪ್ಪು, ಸಮಸ್ಯೆ ಇದ್ದರೆ ಜನ ದೂರು ನೀಡಬೇಕು. ಹೊರಗಿನಿಂದ ಬಂದವರು ಓಡಾಡುತ್ತಿದ್ದರೆ ಮಾಹಿತಿ ನೀಡಬೇಕು.

    | ಡಾ.ಹರೀಶ ಕುಮಾರ ಕೆ., ಜಿಲ್ಲಾಧಿಕಾರಿ, ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts