More

    ಉದ್ಯಮದ ಮೇಲೆ ಕರೊನಾ ಕರಿನೆರಳು

    ರಾಣೆಬೆನ್ನೂರ: ಕರೊನಾ ಎರಡನೇ ಅಲೆಯ ಕರಿನೆರಳು ಎಲ್ಲ ಕ್ಷೇತ್ರಗಳ ಮೇಲೆ ಬಿದ್ದಿದೆ. ಇದರಿಂದ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ರಿಯಲ್ ಎಸ್ಟೇಟ್, ಬಟ್ಟೆ, ಚಿನ್ನಾಭರಣ, ಟ್ಯಾಕ್ಸಿ ಸೇರಿದಂತೆ ಎಲ್ಲ ಉದ್ಯಮ ಸಂಪೂರ್ಣ ನೆಲೆ ಕಚ್ಚಿದೆ.

    ಜಿಲ್ಲೆಯಲ್ಲಿಯೇ ರಾಣೆಬೆನ್ನೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ನಡೆಯುತ್ತದೆ. ನಗರವು ಉದ್ಯಮದಲ್ಲಿ ಸರ್ಕಾರಕ್ಕೆ ದೊಡ್ಡ ಆದಾಯವನ್ನೇ ತಂದು ಕೊಡುತ್ತಿತ್ತು. ಆದರೆ, ಮಹಾಮಾರಿ ಕರೊನಾ ಎಲ್ಲದಕ್ಕೂ ಕುತ್ತು ತಂದಿಟ್ಟಿದೆ. ಯಾವ ವಹಿವಾಟು ಸರಿಯಾಗಿ ನಡೆಯುತ್ತಿಲ್ಲ.

    ನಡುಗಿದ ರಿಯಲ್ ಎಸ್ಟೇಟ್: ಮೊದಲೆಲ್ಲ ರಿಯಲ್ ಎಸ್ಟೇಟ್ ಉದ್ಯಮಿಗಳು ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದರು. ಬ್ಯಾಂಕ್​ಗಳಿಂದ ಸಾಲ ಪಡೆದು ಹತ್ತಾರು ಎಕರೆ ಜಮೀನು ಖರೀದಿಸಿ ಎನ್​ಎ ನಿವೇಶನಗಳನ್ನು ಸಿದ್ಧಪಡಿಸಿ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದರು. ಆದರೆ, ಈ ಹಿಂದೆ ಸಿದ್ಧಪಡಿಸಿದ ಎನ್​ಎ ಪ್ಲಾಟ್​ಗಳನ್ನೇ ಇಂದು ಕೇಳುವವರು ಇಲ್ಲದಂತಾಗಿದೆ. ಕೆಳ ಮತ್ತು ಮಧ್ಯಮ ವರ್ಗದ ಜನರೇ ಹೆಚ್ಚು ನಿವೇಶನ ಖರೀದಿಸುತ್ತಿದ್ದರು. ಆದರೆ, ಎಲ್ಲ ಉದ್ಯಮವೂ ಸ್ತಬ್ಧವಾಗಿದ್ದರಿಂದ ದುಡಿಯುವ ವರ್ಗಕ್ಕೂ ಕೆಲಸ ಇಲ್ಲದಂತಾಗಿದೆ. ಜೀವನ ನಡೆಸುವುದೆ ಕಷ್ಟವಾಗಿದೆ. ಇದರಿಂದ ಸಬ್ ರಿಜಿಸ್ಟ್ರಾರ್ ಕಚೇರಿಯ ಕೋಟ್ಯಂತರ ರೂಪಾಯಿ ಆದಾಯಕ್ಕೆ ಕೊಕ್ಕೆ ಬಿದ್ದಂತಾಗಿದೆ.

    ನೆಲಕಚ್ಚಿದ ಸ್ವಣೋದ್ಯಮ: ಈ ಸಮಯದಲ್ಲಿ ಮದುವೆ ಸಮಾರಂಭಗಳು ಹೆಚ್ಚಾಗಿರುತ್ತವೆ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರವು ಕೇವಲ 20 ಜನರಿಗೆ ಮಾತ್ರ ಮಿತಿ ಹೇರಿದ್ದು, ಮದುವೆಗಳು ಸರಳವಾಗಿ ನಡೆಯುವಂತಹ ಪರಿಸ್ಥಿತಿ ನಿರ್ವಣವಾಯಿತು. ವಧು-ವರರ ಆಭರಣ ಖರೀದಿಗೂ ಕುಟುಂಬಸ್ಥರು ಹಿಂದೇಟು ಹಾಕುವಂತಾಗಿದೆ. ಮದುವೆ ಸೀಜನ್​ನಲ್ಲಿ ಜಿಲ್ಲಾದ್ಯಂತ ಆಭರಣಗಳ ಖರೀದಿ ಜೋರಾಗಿರುತ್ತಿತ್ತು. ಸರ್ಕಾರ ಆಭರಣ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಿಸಿದೆ. ಹೀಗಾಗಿ ಸ್ವಣೋದ್ಯಮ ಸಂಪೂರ್ಣ ನೆಲ ಕಚ್ಚಿದೆ. ಟ್ಯಾಕ್ಸಿ ಚಾಲಕರು, ಆಟೋ ಚಾಲಕರು ಸೇರಿ ಅನೇಕರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ.

    500 ಹಾಗೂ 1000 ರೂಪಾಯಿ ನೋಟು ರದ್ದುಗೊಂಡ ಬಳಿಕ ರಿಯಲ್ ಎಸ್ಟೇಟ್ ಸಂಪೂರ್ಣ ಕುಸಿತ ಕಂಡಿತ್ತು. 2019ರಲ್ಲಿ ಕೊಂಚ ಚೇತರಿಕೆ ಕಾಣಿಸಿಕೊಳ್ಳುತ್ತಿತ್ತು. ಆದರೆ, 2020ರಲ್ಲಿ ಕರೊನಾ ಮೊದಲ ಅಲೆಯ ಲಾಕ್​ಡೌನ್​ನಿಂದ ಮತ್ತೆ ಸಂಪೂರ್ಣ ಕುಸಿತ ಕಂಡಿತು. ಈಗ ಸ್ವಲ್ಪ ಉದ್ಯಮ ಚೇತರಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲಿ ಮತ್ತೇ 2ನೇ ಅಲೆಯಿಂದ ಉದ್ಯಮ ನಿಂತು ಹೋಗಿದೆ. ಕೋಟ್ಯಂತರ ರೂ. ಸಾಲ ತಂದು ಎನ್​ಎ ನಿವೇಶನಗಳನ್ನು ಸಿದ್ಧಪಡಿಸಲಾಗಿದೆ. ಕರೊನಾ ಎಫೆಕ್ಟ್​ನಿಂದಾಗಿ ಫ್ಲಾಟ್ ಸೇಲ್ ಆಗುತ್ತಿಲ್ಲ. ಇದರಿಂದ ಉದ್ಯಮ ಹಾಗೂ ಸರ್ಕಾರದ ಕೋಟ್ಯಂತರ ರೂಪಾಯಿ ಆದಾಯಕ್ಕೆ ಪೆಟ್ಟು ಬಿದ್ದಿದೆ.

    | ಪ್ರಕಾಶ ಬುರಡಿಕಟ್ಟಿ, ರಿಯಲ್ ಎಸ್ಟೇಟ್ ಉದ್ಯಮಿ

    ಇದೀಗ ಮದುವೆ ಸೀಜನ್. ಆದರೆ, ಕರೊನಾ ಎರಡನೇ ಅಲೆ ಬಟ್ಟೆ ವ್ಯಾಪಾರಕ್ಕೆ ಕುತ್ತು ತಂದಿದೆ. ಈ ವೇಳೆ ವಹಿವಾಟು ನಡೆಸಿದರೆ ತಿಂಗಳಿಗೆ 50-60 ಕೋಟಿ ರೂಪಾಯಿ ವ್ಯಾಪಾರ ನಡೆದಿರುತ್ತಿತ್ತು. ಆದರೆ, ಎಲ್ಲ ವರ್ಗಕ್ಕೂ ಹೊಡೆತ ಬಿದ್ದಿದೆ.

    | ಪೃಥ್ವಿರಾಜ್, ಬಟ್ಟೆ ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts