More

    ಜಲಮಂಡಳಿಯಿಂದ ಕಾನೂನುಬಾಹಿರ ಶುಲ್ಕ ಸಂಗ್ರಹ : ಹೈಕೋರ್ಟ್ ಮಹತ್ವದ ಆದೇಶ

    ಬೆಂಗಳೂರು: ಬೆಂಗಳೂರು ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿ ಕಳೆದ ಕೆಲ ವರ್ಷಗಳಿಂದ ವಸತಿ ಕಟ್ಟಡಗಳಿಂದ ಅವುಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಸಂಗ್ರಹ ಮಾಡುತ್ತಿರುವ ಗ್ರೇಟರ್ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಯೋಜನಾ ಶುಲ್ಕ (ಜಿಬಿಡಬ್ಲ್ಯುಎಸ್‌ಎಸ್‌ಪಿ) ಮತ್ತು ಬೆನಿಫಿಶಿಯರಿ ಕ್ಯಾಪಿಟಲ್ ಕಾಂಟ್ರಿಬ್ಯೂಷನ್ (ಬಿಸಿಸಿ) ಶುಲ್ಕ ಕಾನೂನುಬಾಹಿರ ಎಂದು ಹೈಕೋರ್ಟ್ ಹೇಳಿದೆ.

    ಆದರೆ, ಜಲಮಂಡಳಿ ಹಾಲಿ ಬಹುಮಹಡಿಗಳಿಂದ ಸಂಗ್ರಹ ಮಾಡುತ್ತಿರುವ ಮುಂಗಡ ಪ್ರೊರೇಟಾ ಶುಲ್ಕ ಮತ್ತು ಕಟ್ಟಡಗಳ ನಿರ್ಮಾಣಕ್ಕಾಗಿ ಸಂಸ್ಕರಿತ ನೀರು ಶುಲ್ಕ ಸಂಗ್ರಹವನ್ನು ಎತ್ತಿಹಿಡಿದಿದೆ. ಅರ್ಜಿದಾರರಿಂದ ಸಂಗ್ರಹಿಸಿರುವ ಗ್ರೇಟರ್ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಯೋಜನಾ ಶುಲ್ಕವನ್ನು ವಾಪಸ್ ನೀಡುವಂತೆ ನಿರ್ದೇಶಿಸಿದೆ.

    ರಿಯಲ್ ಎಸ್ಟೇಟ್ ಸಂಸ್ಥೆಗಳಾದ ಶೋಭಾ ಮತ್ತು ಬ್ರಿಗೇಡ್ ಎಂಟರ್‌ಪ್ರೈಸಸ್ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತು. ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಜಲಮಂಡಳಿ ಎಲ್ಲ ವಸತಿ ಸಮುಚ್ಛಯಗಳ ಮಾಲೀಕರಿಂದ ಜಿಬಿಡಬ್ಲುೃಎಸ್‌ಎಸ್‌ಪಿ ಮತ್ತು ಬಿಸಿಸಿ ಶುಲ್ಕಗಳನ್ನು ಸಂಗ್ರಹಿಸುತ್ತಿದೆ. ಹೀಗಾಗಿ ಅವುಗಳನ್ನು ರದ್ದುಗೊಳಿಸಬೇಕು ಅರ್ಜಿದಾರರು ವಾದಿಸಿದರು.

    ಈ ಬಗ್ಗೆ ತನಗೆ ಅಧಿಕಾರವಿದ್ದು, ಆ ಶುಲ್ಕಗಳನ್ನು ಪಾವತಿಸಿದ ನಂತರವಷ್ಟೇ ಎನ್‌ಒಸಿ ನೀಡಲಾಗುತ್ತಿದೆ ಎಂದು ಜಲಮಂಡಳಿ ವಾದ ಮಂಡಿಸಿತ್ತು.
    ಶುಲ್ಕಗಳನ್ನು ಸಂಗ್ರಹಿಸಿ ಬಂದ ಹಣವನ್ನು ಜಲಮಂಡಳಿಯು ಹೊಸ ಪ್ರದೇಶಗಳಿಗೆ ನೀರು ಪೂರೈಕೆ ಹಾಗೂ ಒಳಚರಂಡಿ ವ್ಯವಸ್ಥೆ ಒದಗಿಸಲು ಬಳಕೆ ಮಾಡುತ್ತಿದೆ. ಆದರೆ, ಇದಕ್ಕೆ ಯಾವುದೇ ಶಾಸನಾತ್ಮಕ ಬೆಂಬಲ ಇಲ್ಲದೆ ಆ ರೀತಿ ಶುಲ್ಕಗಳನ್ನು ವಿಧಿಸುವ ಅಧಿಕಾರ ಮಂಡಳಿಗಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

    12 ವಾರಗಳಲ್ಲಿ ಮರುಪಾವತಿಸಿ
    ಅರ್ಜಿದಾರರು ಈಗಾಗಲೇ ಜಲಮಂಡಳಿಗೆ ಪಾವತಿ ಮಾಡಿರುವ ಜಿಬಿಡಬ್ಲ್ಯುಎಸ್‌ಎಸ್‌ಪಿ ಮತ್ತು ಬಿಸಿಸಿ ಶುಲ್ಕವನ್ನು ವಾಪಸ್ ಪಡೆಯಲು ಅರ್ಹರಾಗಿದ್ದಾರೆ. ಜಲಮಂಡಳಿ ಅವರಿಗೆ 12 ವಾರದಲ್ಲಿ ಹಣ ಮರುಪಾವತಿ ಮಾಡಬೇಕು ಎಂದು ಸೂಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts