More

    ಮೃತಪಟ್ಟ ಮಧ್ಯವಯಸ್ಕನಿಗೆ ಸೋಂಕು

    ಉಡುಪಿ/ಕುಂದಾಪುರ: ಮಹಾರಾಷ್ಟ್ರದಿಂದ ಬೈಂದೂರು ತಾಲೂಕಿನ ಗ್ರಾಮವೊಂದಕ್ಕೆ ಜೂನ್ 26ರಂದು ಬಂದಿದ್ದ 48 ವರ್ಷದ ವ್ಯಕ್ತಿ ಜೂನ್ 28ರಂದು ಆನಾರೋಗ್ಯದಿಂದ ಮೃತಪಟ್ಟಿದ್ದು, ಗಂಟಲು ದ್ರವ ಪರೀಕ್ಷೆಯಲ್ಲಿ ಕರೊನಾ ಪತ್ತೆಯಾಗಿದೆ.

    ಪತ್ನಿ, ಪುತ್ರಿ ಜತೆಗೆ ಇವರು ಊರಿಗೆ ಆಗಮಿಸಿದ್ದರು. ಈ ವ್ಯಕ್ತಿ ಲಿವರ್, ಡಯಾಬಿಟಿಸ್ ಸಮಸ್ಯೆಯಿಂದ ನರಳುತ್ತಿದ್ದು, ಮುಂಬೈ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯರು ಕೈಚೆಲ್ಲಿದ್ದರು. ಬಳಿಕ ಊರಿಗೆ ಬಂದಿದ್ದ ಇವರು ಆರೋಗ್ಯ ಸಮಸ್ಯೆ ಬಗ್ಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆಗೆ ಮಾಹಿತಿ ನೀಡಿರಲಿಲ್ಲ. ವ್ಯಕ್ತಿ ಮೃತಪಟ್ಟ ಬಳಿಕ ಆರೋಗ್ಯ ಇಲಾಖೆಗೆ ಮಾಹಿತಿ ತಿಳಿಸಲಾಗಿತ್ತು. ಮೃತ ವ್ಯಕ್ತಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದು, ಮಂಗಳವಾರ ಬಂದ ವರದಿಯಲ್ಲಿ ಪಾಸಿಟಿವ್ ದೃಢವಾಗಿದೆ. ಕೋವಿಡ್ ಮಾರ್ಗಸೂಚಿ ಪ್ರಕಾರ ಜಿಲ್ಲಾಡಳಿತ ಅಂತ್ಯಸಂಸ್ಕಾರ ನಡೆಸಿದೆ. ಮೃತರ ಸಂಪರ್ಕದಲ್ಲಿದ್ದ ಪತ್ನಿ ಹಾಗೂ ಪುತ್ರಿಗೂ ಕರೊನಾ ಪಾಸಿಟಿವ್ ದೃಢಪಟ್ಟಿದೆ.

    ಬಟ್ಟೆ ಅಂಗಡಿ ಸೀಲ್‌ಡೌನ್: ಹೆಜಮಾಡಿ ಬಟ್ಟೆ ಅಂಗಡಿ ಮಾಲೀಕರೊಬ್ಬರಿಗೆ ಸೋಂಕು ಪತ್ತೆಯಾಗಿರುವುದರಿಂದ ಬಟ್ಟೆ ಅಂಗಡಿ ಸೀಲ್‌ಡೌನ್ ಮಾಡಲಾಗಿದೆ. ಇವರ ಮಗ ಬೆಂಗಳೂರಿನಿಂದ ಬಂದಿರುವ ಮಾಹಿತಿ ಇದ್ದು, ಪುತ್ರನ ಕೋವಿಡ್-19 ವರದಿ ಬುಧವಾರ ಬರಬೇಕಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿದೆ.

    ವಿದ್ಯಾರ್ಥಿನಿ ಮನೆಯಲ್ಲಿ ನಾಲ್ವರಿಗೆ: ಹೆಜಮಾಡಿ ಕೋಡಿಯ ಕರೊನಾ ಸೋಂಕಿತ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ತಾಯಿ ಮತ್ತು ಸಹೋದರಿಗೂ ಮಂಗಳವಾರ ರೋಗ ಬಾಧಿಸಿರುವ ವರದಿ ಬಂದಿದ್ದು, ಇಬ್ಬರನ್ನೂ ಕಾರ್ಕಳ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊದಲು ವಿದ್ಯಾರ್ಥಿನಿಯ ತಂದೆ, ಪಡುಬಿದ್ರಿ-ನಡ್ಸಾಲು ಎನ್‌ಎಸ್ ರಸ್ತೆ ಬಳಿಯ ನಿವಾಸಿಗೆ ಸೋಂಕು ಖಚಿತವಾಗಿತ್ತು.

    ಈಗ ಬೆಂಗಳೂರಿನ ಆತಂಕ: ಇಷ್ಟು ದಿನ ಮಹಾರಾಷ್ಟ್ರದಿಂದ ಬರುವವರಿಂದ ಕರೊನಾ ಸೋಂಕು ಹೆಚ್ಚುತ್ತಿದೆ ಎಂಬ ಆತಂಕ ಹೆಚ್ಚಿತ್ತು, ಈಗ ಬೆಂಗಳೂರಿನಿಂದ ಬರುವವರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಮಂಗಳವಾರ 9 ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಇದರಲ್ಲಿ ಲಿವರ್ ಸಮಸ್ಯೆಯಿಂದ ಮೃತಪಟ್ಟ ವ್ಯಕ್ತಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಸೇರಿದ್ದಾರೆ. ಕುಂದಾಪುರ- ಬೆಂಗಳೂರು ಸಂಚರಿಸುವ ಖಾಸಗಿ ಬಸ್‌ನ ಇಬ್ಬರು ಚಾಲಕರು, ಬೆಂಗಳೂರಿಗೆ ಹೋಗಿ ಬಂದಿದ್ದ ಯುವಕನೊಬ್ಬನ ತಂದೆಗೆ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಮೂವರು, ಹೈದರಾಬಾದ್‌ನಿಂದ ಒಬ್ಬರಿಗೆ, ಸ್ಥಳೀಯವಾಗಿ 2 ಪ್ರಕರಣಗಳು ವರದಿಯಾಗಿದ್ದು, ಈಗಾಗಲೇ ಸೋಂಕು ದೃಢಪಟ್ಟ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ.

    114 ನೆಗೆಟಿವ್: ಮಂಗಳವಾರ 114 ಮಂದಿಯ ವರದಿ ನೆಗೆಟಿವ್ ಬಂದಿದೆ. 288 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 1206ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 1067 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 136 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಕುಂದಾಪುರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ
    ಕುಂದಾಪುರದ ಪರೀಕ್ಷಾ ಕೇಂದ್ರವೊಂದರಲ್ಲಿ ಸೋಮವಾರ 10ನೇ ತರಗತಿ ವಿಜ್ಞಾನ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗೆ ಕರೊನಾ ಪಾಸಿಟಿವ್ ಬಂದಿದೆ.

    ಮೊದಲಿಗೆ ಇಂಗ್ಲಿಷ್, ಶನಿವಾರ ಗಣಿತ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಸೋಮವಾರ ವಿಜ್ಞಾನ ಪರೀಕ್ಷೆಗೆ ಹಾಜರಾಗಿದ್ದಳು. ಥರ್ಮಲ್ ಸ್ಕ್ರೀನಿಂಗ್‌ನಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿರದ ಹಿನ್ನೆಲೆ ಪರೀಕ್ಷೆ ಬರೆಯಲು ಅನುವು ಮಾಡಲಾಗಿತ್ತು. ಆದರೆ ವಿದ್ಯಾರ್ಥಿನಿಗೆ ತಲೆನೋವು ಸೇರಿದಂತೆ ಅನಾರೋಗ್ಯವಿರುವ ಬಗ್ಗೆ ಕೆಲಹೊತ್ತಿನ ಬಳಿಕ ಆಕೆ ಹೇಳಿದ್ದು, ನಂತರ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗಿತ್ತು. ಅನಾರೋಗ್ಯ ಉಲ್ಬಣಗೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿ ಕೋವಿಡ್-19 ಪರೀಕ್ಷೆ ನಡೆಸಲಾಗಿತ್ತು. ಮಂಗಳವಾರ ಗಂಟಲು ದ್ರವ ಪರೀಕ್ಷಾ ವರದಿ ಕೈಸೇರಿದ್ದು ಕರೊನಾ ಪಾಸಿಟಿವ್ ದೃಢಪಟ್ಟಿದೆ.

    ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್ ಮುಗಿಸಿದವರು ವಿದ್ಯಾರ್ಥಿನಿ ಮನೆಗೆ ಬಂದಿದ್ದರು ಎಂಬ ಮಾಹಿತಿ ಇದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ವಿದ್ಯಾರ್ಥಿನಿ ಪರೀಕ್ಷೆ ಬರೆದ ಕೊಠಡಿ ಸೀಲ್ಡೌನ್ ಮಾಡಲಾಗುತ್ತದೆ. ವಿದ್ಯಾರ್ಥಿಗಳು, ಪಾಲಕರು ಆತಂಕ ಪಡಬೇಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts