More

    ಅನಿವಾರ್ಯತೆ ಬಂದರೆ ಕಠಿಣ ಹೆಜ್ಜೆ

    ಮಂಗಳೂರು: ಕರೊನಾ ವೈರಸ್ ಸೋಂಕು ತಡೆಯುವ ನಿಟ್ಟಿನಲ್ಲಿ ಕೆಲವು ಕಠಿಣ ನಿರ್ಧಾರ ಕೈಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು.
    ಅಂತಹ ಸಂದರ್ಭ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕೆಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿನಂತಿ ಮಾಡಿದ್ದಾರೆ.

    ಶನಿವಾರ ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ.ಕ.ಜಿಲ್ಲೆಯಲ್ಲಿ ಇದುವರೆಗೆ 89 ಜನರ ಸ್ಯಾಂಪಲ್ಗಳನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಎಲ್ಲ ಪ್ರಕರಣಗಳಲ್ಲಿ ನೆಗೆಟಿವ್ ವರದಿ ಬಂದಿದೆ. ಅಧಿಕೃತವಾಗಿ ಜಿಲ್ಲೆಯಲ್ಲಿ ಸೋಂಕಿತರಿಲ್ಲ. ಆದರೂ, ಮುಂದಿನ ದಿನಗಳಲ್ಲಿ ಸೋಂಕಿತರು ಕಂಡುಬಂದರೆ ಅತ್ಯಂತ ಕಠಿಣ ನಿರ್ಧಾರಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕಾಗುತ್ತದೆ ಎಂದರು.
    ಸಂಸದ ನಳಿನ್‌ಕುಮಾರ್ ಕಟೀಲ್, ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಮೇಯರ್ ದಿವಾಕರ ಪಾಂಡೇಶ್ವರ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ರಾಜೇಶ್ ನಾಕ್, ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಲ್ಲಾಧಿಕಾರಿ ಸಿಂಧೂ.ಬಿ.ರೂಪೇಶ್ ಉಪಸ್ಥಿತರಿದ್ದರು.

    ಸಂಪರ್ಕ ರಸ್ತೆ ಬಂದ್‌ಗೆ ಚಿಂತನೆ
    ದ.ಕ.ಜಿಲ್ಲೆಗೆ ಇತರ ಕಡೆಗಳಿಂದ ಸಂಪರ್ಕಿಸುವ ರಸ್ತೆಗಳನ್ನು ಕೂಡ ಬಂದ್ ಮಾಡುವ ಚಿಂತನೆ ಇದೆ. ಆದರೆ ಅದನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸುವುದು ಕಷ್ಟ. ಇಂತಹ ಸಂಪರ್ಕ ರಸ್ತೆಗಳಲ್ಲಿ ವಾಹನಗಳ ಸಂಚಾರ ಕಡಿಮೆ ಮಾಡುವ ಸಲಹೆ ಬಂದಿದೆ. ಅಗತ್ಯವಿದ್ದರೆ ಈ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಕೋಟ ತಿಳಿಸಿದರು. ಕೇರಳ ಮತ್ತು ದಕ್ಷಿಣ ಕನ್ನಡ ಸಂಪರ್ಕಿಸುವ ಒಟ್ಟು 17 ರಸ್ತೆಗಳ ಪೈಕಿ 16 ರಸ್ತೆಗಳನ್ನು ಶನಿವಾರದಿಂದ ಬಂದ್ ಮಾಡಲಾಗಿದೆ. ತುರ್ತು ಪ್ರಕರಣಗಳಲ್ಲಿ ಮಾತ್ರ ತಲಪಾಡಿ ರಸ್ತೆಯಲ್ಲಿ ಸಂಚರಿಸಲು ಅವಕಾಶ. ತಲಪಾಡಿಯಲ್ಲಿ ಸಂಪೂರ್ಣ ತಪಾಸಣೆ ನಡೆಸಿದ ಬಳಿಕವೇ ಜನರನ್ನು ಬಿಡಲಾಗುವುದು. ಅವಶ್ಯ ಸಾಮಗ್ರಿಗಳ ವಾಹನಗಳಿಗೆ ತಲಪಾಡಿ ರಸ್ತೆಯಿಂದ ಸಂಚರಿಸಲು ಅವಕಾಶ ನೀಡಲಾಗಿದೆ ಎಂದರು. ಮಂಗಳೂರಿನಲ್ಲಿ ಪ್ರಯೋಗಾಲಯ ಸ್ಥಾಪಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದ ಕೋಟ, ಶೀಘ್ರ ಮಂಜೂರಾತಿ ಸಿಗುವ ನಿರೀಕ್ಷೆಯಿದೆ. ಎಲ್ಲ ಪ್ರಾರ್ಥನಾ ಕೇಂದ್ರಗಳಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

    ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ
    ಜಿಲ್ಲೆಯಲ್ಲಿ ಯಾರೇ ಅಪರಿಚಿತ ವ್ಯಕ್ತಿಗಳು ಅಥವಾ ಸೋಂಕಿತ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಸಾರ್ವಜನಿಕರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ವಿಮಾನ ನಿಲ್ದಾಣದಿಂದ ಬರುವವರಿಗೆ ಅಳಿಸಲಾಗದ ಶಾಯಿ ಮುದ್ರೆ ಹಾಕಲಾಗಿದೆ. ಅಂತಹವರು ಹೊರಗಡೆ ತಿರುಗಾಡುತ್ತಿದ್ದರೆ ಬಂಧಿಸಲಾಗುವುದು. ಸಾರ್ವಜನಿಕರು 104, 1077ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಸಚಿವರು ಹೇಳಿದರು.

    ಕರೊನಾ ಸೋಂಕಿತರು ಕಂಡುಬಂದರೆ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲು ಸೂಚನೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳ ವೆಂಟಿಲೇಟರ್ ಬಳಕೆಗೆ ನಿರ್ಧರಿಸಲಾಗಿದೆ. ಜಿಲ್ಲಾಡಳಿತ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಿದ್ದರೂ, ಕೆಲವು ಪ್ರಕರಣಗಳಲ್ಲಿ ಸೋಂಕು ಸಂಪೂರ್ಣವಾಗಿ ತಡೆ ಕಷ್ಟಕರವಾಗಬಹುದು. ಹಾಗಾಗಿ ಜನರು ಸ್ವಯಂಪ್ರೇರಣೆಯಿಂದ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು.
    – ಕೋಟ ಶ್ರೀನಿವಾಸ ಪೂಜಾರಿ
    ದ.ಕ.ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts