More

    ಕರೊನಾ ನಮ್ಮನ್ನು ಗೆಲ್ಲಿಸಿದೆ, ಶಕ್ತಿ ಅನಾವರಣಗೊಳಿಸಿದೆ; ಚಕ್ರವರ್ತಿ ಸೂಲಿಬೆಲೆ ಅಂಕಣ

    ಚೀನಾದಿಂದ ಆಮದಾದ ವೈರಸ್ಸು ಕೊನೆಗೂ ಭಾರತದಲ್ಲಿ ಸೋತುಹೋಗುವ ಲಕ್ಷಣ ಕಾಣುತ್ತಿದೆ. ಹೆಚ್ಚು-ಕಡಿಮೆ ಒಂದು ವರ್ಷದಿಂದ ಕರೊನಾದ ಜಪವೇ ಆಗಿಬಿಟ್ಟಿದೆ. ಕಳೆದ ವರ್ಷ ಇದೇ ವೇಳೆಗೆ ಚೀನಾದಿಂದ ಬರುತ್ತಿದ್ದ ಭಯಾನಕವಾದ ವಿಡಿಯೋಗಳನ್ನು ಕಂಡು ನಾವು ಆಡಿಕೊಂಡು ನಗುತ್ತಿದ್ದೆವು. ಬಹುಶಃ ಕರೊನಾ ಕುರಿತಂಥ ಆರಂಭಿಕ ಭೀತಿ ಹುಟ್ಟಿಸುವ ಪ್ರಯತ್ನ ಅಲ್ಲಿಂದಲೇ ಆರಂಭವಾಗಿದ್ದಿರಬಹುದು. ಆನಂತರ ವಿಮಾನಗಳಲ್ಲಿ ಕರೊನಾ ರಾಷ್ಟ್ರ-ರಾಷ್ಟ್ರಗಳನ್ನು ಆವರಿಸಿಕೊಂಡಿತು. ಜರ್ಮನಿ, ಫ್ರಾನ್ಸ್, ಇಟಲಿ, ಅಮೆರಿಕದಂಥ ರಾಷ್ಟ್ರಗಳು ಕರೊನಾದೆದುರಿಗೆ ಬಾಗಿ, ಮಂಡಿಯೂರಿದ್ದು ಎಂಥವನಲ್ಲೂ ಗಾಬರಿ ಹುಟ್ಟಿಸುತ್ತಿತ್ತು. ಇಟಲಿಯಂತೂ ‘ವಯಸ್ಸಾದವರನ್ನು ನಾವು ಗಮನಿಸುವುದಿಲ್ಲ. ತರುಣರಿಗೆ ಮಾತ್ರ ಹಾಸಿಗೆ ಒದಗಿಸಿಕೊಡಲಾಗುವುದು’ ಎಂದು ಹೇಳಿ ಅಚ್ಚರಿ ಮೂಡಿಸಿಬಿಟ್ಟಿತು. ಇವೆಲ್ಲವೂ ಹೆದರಿಕೆಯನ್ನು ಹೆಚ್ಚು ಮಾಡುತ್ತಲೇ ಹೋಗಿದ್ದು ಇಂದು ಇತಿಹಾಸವಷ್ಟೇ. ಈಗ ಈ ವೈರಸ್ಸಿಗೆ ವ್ಯಾಕ್ಸಿನ್ ಬಂದಿದೆ. ಇಂಗ್ಲೆಂಡಿನ ಆಕ್ಸ್​ಫರ್ಡ್​ನೊಂದಿಗೆ ಸೇರಿಕೊಂಡು ಅಸ್ಟ್ರಾ ಜೆನೆಕಾ ನಿರ್ವಿುಸಿರುವ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್ ಜಗತ್ತಿನ ಭೂಪಟದಲ್ಲಿ ಭಾರತವನ್ನು ಗುರುತಿಸುವಂತೆ ಮಾಡಿಬಿಟ್ಟಿವೆ. ಕೊವ್ಯಾಕ್ಸಿನ್​ಗೂ ಕೋವಿಶೀಲ್ಡ್​ಗೂ ಸ್ವಲ್ಪ ವ್ಯತ್ಯಾಸವಿದೆ. ಕೋವಿಶೀಲ್ಡ್ ಎಡಿನೊ ವೈರಸ್ ಎನ್ನುವ ಚಿಂಪಾಂಜಿಗಳ ಮೇಲೆ ದಾಳಿಮಾಡುವ, ಆದರೆ ಮನುಷ್ಯರಿಗೆ ಹಾನಿ ಮಾಡದ ಒಂದು ವಿಶಿಷ್ಟ ಬಗೆಯ ಶೀತದ ವೈರಸ್. ಇದನ್ನೇ ಸ್ವಲ್ಪ ನಿಶ್ಚೇಷ್ಟಿತಗೊಳಿಸಿ ದೇಹದೊಳಕ್ಕೆ ಕಳಿಸಲಾಗುತ್ತದೆ. ಇದರ ಡಿಎನ್​ಎ ನಮ್ಮ ಜೀವಕೋಶಗಳನ್ನು ಹೊಕ್ಕು ಕರೊನಾದ ಸಣ್ಣ ಅನುಭವವನ್ನು ಅದಕ್ಕೆ ಕೊಡುತ್ತವೆ. ಸಹಜವಾಗಿಯೇ ನಮ್ಮ ರೋಗ ಪ್ರತಿರೋಧಕ ವ್ಯವಸ್ಥೆ ಜಾಗೃತಗೊಂಡು ಅದರೊಂದಿಗೆ ಕಾದಾಡುವುದಲ್ಲ, ಮುಂದೆ ಇದನ್ನೇ ಹೋಲುವ ಕರೊನಾ ದೇಹ ಹೊಕ್ಕಿದಾಗ ವ್ಯವಸ್ಥೆ ಯುದ್ಧಕ್ಕೆ ಸಿದ್ಧವಾಗಿ ನಿಂತುಬಿಟ್ಟಿರುತ್ತದೆ. ಸಹಜವಾಗಿಯೇ ವೈರಸ್ ಸೋಲುತ್ತದೆ ಮತ್ತು ನಾವು ಗೆಲ್ಲುತ್ತೇವೆ. ಇನ್ನು ಕೊವ್ಯಾಕ್ಸಿನ್ ನಾವು ಚಿಕ್ಕಂದಿನಲ್ಲಿ ಕಲಿತ ವ್ಯಾಕ್ಸಿನ್ ನಿರ್ವಣದ ತಂತ್ರವನ್ನೇ ಅನುಸರಿಸುತ್ತದೆ. ಕರೊನಾ ವೈರಸ್ಸನ್ನೇ ಬಡಿದು ಮೆತ್ತಗಾಗಿಸಿ ದೇಹದೊಳಕ್ಕೆ ತುರುಕಲಾಗುತ್ತದೆ. ಈ ಅರೆಸತ್ತ ವೈರಸ್ಸುಗಳು ನಮ್ಮ ದೇಹದ ರೋಗಪ್ರತಿರೋಧ ವ್ಯವಸ್ಥೆಯನ್ನು ಜಾಗೃತಗೊಳಿಸಿಬಿಡುತ್ತವೆ. ಆನಂತರ ಜೀವಂತ ವೈರಸ್ ಹೊಕ್ಕಾಗಲೂ ಈ ವ್ಯವಸ್ಥೆ ಸಮರ್ಥವಾಗಿ ಕಾದಾಡುವಷ್ಟು ಬಲಗೊಂಡಿರುತ್ತದೆ. ಈ ಎರಡೂ ವ್ಯಾಕ್ಸಿನ್​ಗಳ ವೈಶಿಷ್ಟ್ಯವೆಂದರೆ ಸಹಜವಾಗಿ ಇದನ್ನು ರೆಫ್ರಿಜರೇಟರ್​ಗಳಲ್ಲಿ ಇಟ್ಟುಕೊಳ್ಳಬಹುದು. ಉತ್ಪಾದಿಸಿದ ಆರು ತಿಂಗಳವರೆಗೂ ಇದನ್ನು ಬಳಸಬಹುದು. ಇದಕ್ಕೆ ವಿರುದ್ಧವಾಗಿ ಅಮೆರಿಕದ ಫೈಜರ್ ಮೆಸೆಂಜರ್ ಆರ್​ಎನ್​ಎ ತಂತ್ರಜ್ಞಾನವನ್ನು ಬಳಸಿಕೊಂಡು ಆರ್​ಎನ್​ಎ ಕೋಡಿಂಗ್​ಗಳನ್ನೇ ಬದಲಾಯಿಸಿ ದೇಹದೊಳಗೆ ಪ್ರತಿರೋಧಕ ಶಕ್ತಿಯನ್ನು ಉತ್ಪಾದಿಸುವ ಪ್ರಯತ್ನ ಮಾಡುತ್ತದೆ. ಇದು ಅತ್ಯುಚ್ಚ ತಂತ್ರಜ್ಞಾನವಾದ್ದರಿಂದ ಈ ವ್ಯಾಕ್ಸಿನ್​ಗಳನ್ನು ಸೊನ್ನೆಗಿಂತ 70 ಡಿಗ್ರಿ ಕೆಳಗೆ ಕಾಪಾಡಿಕೊಳ್ಳಬೇಕಾಗುತ್ತದೆ. ಹೀಗಾಗಿಯೇ ಸಹಜವಾಗಿ ವ್ಯಾಕ್ಸಿನ್ ಬಲು ದುಬಾರಿ. ಭಾರತ ತಯಾರಿಸಿರುವ ವ್ಯಾಕ್ಸಿನ್ 300 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ದೊರೆತರೆ ಇದು ಮೂರು ಸಾವಿರವಾದರೂ ಆಗಬಹುದು. ಇದನ್ನು ಅಷ್ಟು ಉಚ್ಚ ವ್ಯವಸ್ಥೆಯಲ್ಲಿ ಕಾಪಾಡಿಕೊಳ್ಳುವುದು ಭಾರತದಂಥ ರಾಷ್ಟ್ರಗಳಿಗೆ ಹೆಚ್ಚು-ಕಡಿಮೆ ಅಸಾಧ್ಯ. ಆದರೆ ಭಾರತ ಉತ್ಪಾದಿಸಿರುವ ವ್ಯಾಕ್ಸಿನ್ ಅನ್ನು ಜಗತ್ತಿನ ಯಾವ ರಾಷ್ಟ್ರ ಬೇಕಿದ್ದರೂ ಸಹಜವಾಗಿ ಹೆದರಿಕೆ ಇಲ್ಲದೇ ಬಳಸಬಹುದು. ಹಾಗೆಂದೇ ಈ ವ್ಯಾಕ್ಸಿನ್​ಗಳಿಗೆ ಎಲ್ಲಿಲ್ಲದ ಬೇಡಿಕೆ. ಇನ್ನು ಕೆಲವೇ ದಿನಗಳಲ್ಲಿ ಬ್ರೆಜಿಲ್​ಗೆ ಸಾಗಲಿರುವ ಈ ವ್ಯಾಕ್ಸಿನ್​ಗಳು ಜಗತ್ತಿನ ಕನಿಷ್ಠ ಅರ್ಧದಷ್ಟಾದರೂ ಜನರ ಜೀವ ಉಳಿಸುವುದು ಖಾತ್ರಿ.

    ಚೀನಾಕ್ಕೆ ಹತ್ತಿರದ ಆಫ್ರಿಕಾ ಕೂಡ ಚೀನಾದ ವ್ಯಾಕ್ಸಿನ್​ಗೆ ಬೇಡಿಕೆ ಮಂಡಿಸದೇ ಭಾರತವನ್ನೇ ಕೇಳಿಕೊಂಡಿರುವುದು ‘ಸರ್ವೆ ಸಂತು ನಿರಾಮಯಾಃ’ ಎಂಬ ನಮ್ಮ ಪ್ರಾರ್ಥನೆಗೆ ನಿಸ್ಸಂಶಯವಾಗಿ ಮಹತ್ವ ತಂದುಕೊಟ್ಟಿದೆ. ಈ ವ್ಯಾಕ್ಸಿನ್​ಗಳನ್ನು ಸಮಾಜಕ್ಕೆ ಸಮರ್ಪಿಸುವಾಗ ಸಹಜವಾಗಿಯೇ ನರೇಂದ್ರ ಮೋದಿ ಭಾವುಕರಾಗಿದ್ದರು. ನಮ್ಮ ರಕ್ಷಣೆಗಾಗಿ ಹಗಲು-ರಾತ್ರಿ ಶ್ರಮ ವಹಿಸಿದ ವಿಜ್ಞಾನಿಗಳಿಗೆ ಹೃತ್ಪೂರ್ವಕವಾದ ಕೃತಜ್ಞತೆ ಸಮರ್ಪಿಸಿದರು. ಬಹುಶಃ ಪ್ರಧಾನಿಯಾಗಿ ಮೋದಿಯವರು ಕರೋನಾ ನಿರ್ವಹಿಸಿದ ರೀತಿ ಭಾರತದ ಇತಿಹಾಸದಲ್ಲಿ ನಿಸ್ಸಂಶಯವಾಗಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದೇ!

    ನೀವು ಒಪ್ಪಿ, ಬಿಡಿ. ಜಗತ್ತಿಗೆ ಈ ವಿಚಾರವಾಗಿ ಹೆಮ್ಮೆ ಇದ್ದಷ್ಟೇ ಅಸೂಯೆಯೂ ಇರಲು ಸಾಕು. ಕಳೆದ ಅಕ್ಟೋಬರ್​ನಲ್ಲಿ ವರ್ಲ್ಡ್ ಎಕನಾಮಿಕ್ ಫೋರಂನ ಅಧ್ಯಕ್ಷರಾಗಿದ್ದ ಕ್ಲಾಸ್ ಶ್ವಾಬ್ ಭಾರತ ಕರೊನಾ ನಿರ್ವಹಿಸಿದ ಪರಿಯನ್ನು ಮುಕ್ತವಾಗಿ ಕೊಂಡಾಡಿದರು. ಪಿಟಿಐಗೆ ಕೊಟ್ಟ ಸಂದರ್ಶನವೊಂದರಲ್ಲಿ ಮಾತನಾಡುತ್ತ, ‘ವಿಭಿನ್ನ ಬಗೆಯ ಜನರನ್ನು ಹೊಂದಿರುವ ಭಾರತಕ್ಕೆ ಜಾಗತಿಕ ಸಂವಾದವನ್ನೇರ್ಪಡಿಸಬಲ್ಲ ತಾಕತ್ತಿದೆ. ಪ್ರಪಂಚದ ಭವಿಷ್ಯಕ್ಕೆ ದಿಕ್ಕನ್ನು ಸೂಚಿಸುವ ತಾಕತ್ತೂ ಅದಕ್ಕಿದೆ’ ಎಂದಿದ್ದರು. ಹಾಗಂತ ಇದು ಶಶಿ ತರೂರು ಹಾರ್ವರ್ಡ್ ಯುನಿವರ್ಸಿಟಿಗೆ ಆಯ್ಕೆಯಾದ ನಿಧಿ ರಾಜ್​ದಾನ್​ಳನ್ನು ಹೊಗಳಿದಂತಲ್ಲ. ಇಡಿಯ ಕರೊನಾ ಕಾಲಘಟ್ಟವನ್ನು ನೋಡಿದರೆ ಮೋದಿ ಪ್ರಧಾನಿಯಾಗಿದ್ದುದು ಎಷ್ಟು ಉಪಯುಕ್ತವಾಯಿತೆಂದು ಸಾಮಾನ್ಯನಾದವನಿಗೂ ಅರ್ಥವಾಗಬಹುದು.

    2021ರಲ್ಲಿ ಕೂತು ಒಮ್ಮೆ ಹಿಂದಿರುಗಿ ನೋಡಿದಾಗ ಮೋದಿಗೆ ಕೊಟ್ಟ ಮತ ವ್ಯರ್ಥವಾಗಲಿಲ್ಲ ಎನಿಸೋದು ಅದಕ್ಕೇ. ಹಾಗೆ ಸುಮ್ಮನೆ ಒಮ್ಮೆ ಹಿಂದೆ ತಿರುಗಿ ನೋಡಿ. ಮಾರ್ಚ್ ತಿಂಗಳ ಕೊನೆಯ ಹಂತದಲ್ಲಿ ಲಾಕ್​ಡೌನ್ ಘೊಷಿಸುವಾಗ ಭಾರತದಲ್ಲಿ ಐದ್ನೂರು ಕೇಸುಗಳಷ್ಟೇ ದಾಖಲಾಗಿದ್ದವು. ನರೇಂದ್ರ ಮೋದಿ ಅಮೆರಿಕ ಮತ್ತು ಯುರೋಪಿನಲ್ಲಾದಂತೆ ಪರಿಸ್ಥಿತಿ ಕೈಮೀರುವುದನ್ನು ಕಾದು ಆನಂತರ ಲಾಕ್​ಡೌನಿಗೆ ಹೋಗಬಹುದಿತ್ತು. ಅವರು ಹಾಗೆ ಮಾಡಲಿಲ್ಲ. ಅದಕ್ಕಿಂತಲೂ ಬಲುಮುನ್ನವೇ, ಅಂದರೆ ಜನವರಿ 7ಕ್ಕೆ ಚೀನಾ ವೈರಸ್ ಗುರುತಿಸಿ ಘೊಷಿಸಿದ ಕೆಲವೇ ದಿನಗಳಲ್ಲಿ ವಿದೇಶದಿಂದ ಬರುವ ಯಾತ್ರಿಕರನ್ನು ಪರೀಕ್ಷಿಸಿ ಒಳಬಿಡುವ ಕೆಲಸ ಆರಂಭಿಸಿದರು. ಜನವರಿ 30ಕ್ಕೆ ಮೊದಲ ರೋಗಿ ಸಿಕ್ಕ. ಆತನನ್ನು ತಕ್ಷಣವೇ ಕಠಿಣವಾದ ಗೃಹಬಂಧನಕ್ಕೆ ಒಳಪಡಿಸಿ ದೇಶಕ್ಕೊಂದು ಸಂದೇಶವನ್ನು ಕೊಡಲಾಯ್ತು. ಕರೊನಾ ಟೆಸ್ಟ್ ನಡೆಸಲು ಆರಂಭಿಸಲಾಯ್ತಲ್ಲದೆ 50 ಜನ ರೋಗಿಗಳು ಸಿಗುವ ವೇಳೆಗಾಗಲೇ ತಾನು ಸಾರ್ವಜನಿಕವಾಗಿ ಯಾವ ಕಾರ್ಯಕ್ರಮದಲ್ಲೂ ಭಾಗವಹಿಸಲಾರೆ ಎಂದು ಪ್ರಧಾನಮಂತ್ರಿ ಘೊಷಿಸಿ ಅದರಂತೆಯೇ ನಡೆದುಕೊಂಡರು. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತಂತೆ ಸಾಕಷ್ಟು ಸಂದೇಶ ಹರಡಲಾರಂಭಿಸಿತು. ಲಾಕ್​ಡೌನ್ ಜೊತೆಗೆ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಯ್ತಲ್ಲದೇ ಹಾಗೇ ರಸ್ತೆಯಲ್ಲಿ ತಿರುಗಾಡುವವರನ್ನು ದಂಡಿಸುವ ಹೆದರಿಕೆ ಹುಟ್ಟಿಸಲಾಯ್ತು.

    ಜನರಿಗೆ ಅನುಕೂಲವಾಗಲೆಂಬ ದೃಷ್ಟಿಯಿಂದ ರಾಮಾಯಣ ಮತ್ತು ಮಹಾಭಾರತಗಳಂತಹ ಧಾರವಾಹಿಗಳನ್ನು ಮತ್ತೆ-ಮತ್ತೆ ದೂರದರ್ಶನದಲ್ಲಿ ಪ್ರದರ್ಶಿಸುವ ಮೂಲಕ ಎಲ್ಲರನ್ನೂ ಒಟ್ಟಿಗೇ ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಲಾಯ್ತು. ಆರಂಭದಲ್ಲಿ ಇನ್ನೂ ಲಾಕ್​ಡೌನ್ ಏಕೆ ಮಾಡಲಿಲ್ಲವೆಂದು ಅರಚಾಡುತ್ತಿದ್ದ ವಿರೋಧ ಪಕ್ಷಗಳು ಆನಂತರ ಲಾಕ್​ಡೌನ್ ಒಂದು ಅನವಶ್ಯಕ ಕ್ರಮವೆಂದು ಕಣ್ಣೀರಿಟ್ಟವು. ಮೋದಿ ಈ ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳಲಿಲ್ಲ. ಅವರ ಉದ್ದೇಶ ನಿಖರವಾಗಿತ್ತು. ದೇಶದ ಆರೋಗ್ಯ ವ್ಯವಸ್ಥೆ ಕೋವಿಡ್ ಅನ್ನು ಎದುರಿಸುವಷ್ಟು ಸಮರ್ಥವಾಗಿರಲಿಲ್ಲ. ಜನ ಬೀದಿಗೆ ಬಂದು ಕೋವಿಡ್​ನಿಂದ ತೊಂದರೆಗೊಳಗಾಗಿ ಆಸ್ಪತ್ರೆ ಸಿಗದೇ ನರಳಾಡುವುದಕ್ಕಿಂತಲೂ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದು ಒಳಿತೆಂದು ಅವರು ನಿರ್ಧರಿಸಿದ್ದರು. ಅದಕ್ಕೆ ಕಾರಣವೂ ಇತ್ತು. ಆಗ ನಮ್ಮ ಬಳಿ ಸಾಕಷ್ಟು ಪ್ರತ್ಯೇಕಿಸಬಹುದಾದ ಹಾಸಿಗೆಗಳಿರಲಿಲ್ಲ, ಐಸಿಯು ವ್ಯವಸ್ಥೆಯಾಗಲೀ ವೆಂಟಿಲೇಟರ್​ಗಳಾಗಲೀ ಇರಲಿಲ್ಲ. ಎಲ್ಲ ಬಿಡಿ, ವೈದ್ಯರುಗಳಿಗೆ ಅಗತ್ಯವಿದ್ದ ಪಿಪಿಇ ಕಿಟ್​ಗಳ ದಾಸ್ತಾನೂ ನಮ್ಮ ಬಳಿ ಇರಲಿಲ್ಲ. ಮಾರ್ಚ್ ಕೊನೆಯ ವೇಳೆಗೆ ದಿನಕ್ಕೆ 3000 ಪಿಪಿಇ ಕಿಟ್​ಗಳನ್ನು ಉತ್ಪಾದಿಸುತ್ತಿದ್ದ ನಾವು ನೂರು ಕೋಟಿ ಜನರ ಸಮಸ್ಯೆಯನ್ನು ಏಕಕಾಲಕ್ಕೆ ಎದುರಿಸುವುದು ಸಾಧ್ಯವೇ ಇರಲಿಲ್ಲ. ಲಾಕ್​ಡೌನ್ ಸಂದರ್ಭದಲ್ಲಿ ಕೋವಿಡ್ ಕೇಸ್​ಗಳನ್ನು ನಿಯಂತ್ರಣಕ್ಕೆ ತಂದ ಸರ್ಕಾರ ಆ ವೇಳೆ ಮಾಸ್ಕ್, ಪಿಪಿಇ ಕಿಟ್, ಸ್ಯಾನಿಟೈಜರ್​ಗಳ ಮೇಲೆ ಹೆಚ್ಚು ಗಮನಹರಿಸಿ ಅದನ್ನು ಉತ್ಪಾದಿಸಲಾರಂಭಿಸಿತು. ಈ ರೋಗವನ್ನೆದುರಿಸಲು ಆಸ್ಪತ್ರೆಗಳನ್ನು ಸಜ್ಜುಮಾಡಲಾಯ್ತು. ರೋಗ ಕೆಟ್ಟ ಪ್ರಮಾಣದಲ್ಲಿ ಉಲ್ಬಣಿಸುವ ಮುನ್ನವೇ ವೈದ್ಯರುಗಳಿಗೆ, ನರ್ಸ್​ಗಳಿಗೆ ಸಾರ್ವಜನಿಕವಾಗಿ ಅಭಿನಂದನೆ ಸಲ್ಲಿಸುವ ಮೂಲಕ ಅವರೆಲ್ಲರೂ ತಮ್ಮ ತಮ್ಮ ವೃತ್ತಿಯನ್ನು ಇನ್ನೂ ಹೆಚ್ಚು ಶ್ರದ್ಧೆಯಿಂದ ಮಾಡುವಂತೆ ಮೋದಿ ಭಾವನಾತ್ಮಕವಾಗಿ ಕಟ್ಟಿಹಾಕಿಬಿಟ್ಟರು. ಅಲ್ಲಿಗೆ ಜಗತ್ತಿನ ಮುಂದುವರಿದ ರಾಷ್ಟ್ರಗಳಿಗಿಂತಲೂ ಬಲವಾದ ಆರೋಗ್ಯ ವ್ಯವಸ್ಥೆಯನ್ನು ನಾವು ರೂಪಿಸಿಕೊಂಡಾಗಿತ್ತು. ಸತತ ಮೂರು ಬಾರಿ ಲಾಕ್​ಡೌನ್ ಅನ್ನು ಮುಂದೂಡುತ್ತಲೇ ಬಂದ ಪ್ರಧಾನಿ ಒಂದು ಹಂತದಲ್ಲಿ ಲಾಕ್​ಡೌನನ್ನು ಮರಳಿ ಪಡೆದು ಜನರಿಗೆ ಮುಕ್ತವಾಗಿ ತಿರುಗಾಡಲು ಬೇಕಾದ ವ್ಯವಸ್ಥೆ ಮಾಡಿಕೊಟ್ಟು ಆರ್ಥಿಕ ಪರಿಸ್ಥಿತಿ ಸುಧಾರಿಸುವ ಯತ್ನ ಆರಂಭಿಸಿದರು. ಜಗತ್ತಿನಲ್ಲೇ ಮೊದಲಿಗೆ ಲಾಕ್​ಡೌನ್ ಹೇರಿ ಮೊದಲಿಗೆ ಲಾಕ್​ಡೌನ್​ನಿಂದ ಹೊರಬಂದ ರಾಷ್ಟ್ರವೆಂಬ ಅಭಿದಾನ ನಮ್ಮದಾಯ್ತು. ವಿಶ್ವ ಆರೋಗ್ಯ ಸಂಸ್ಥೆ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ ಎಂದು ಹೇಳುವ ಮುನ್ನವೇ ಭಾರತ ಅದನ್ನು ಕಡ್ಡಾಯ ಮಾಡಿತ್ತು.

    ಅಷ್ಟೇ ಅಲ್ಲ, ಈ ವೇಳೆಗೆ ನಮ್ಮ ಕಷ್ಟವನ್ನು ಹೆಚ್ಚಿಸಲೆಂದೇ ಗಲ್ವಾನ್ ಕಣಿವೆಯಲ್ಲಿ ಚೀನಾ ದಾಳಿ ಮಾಡಿ ಮಲಗಿದ್ದ ಸಿಂಹವನ್ನು ಬಡಿದೆಬ್ಬಿಸಿಯೇಬಿಟ್ಟಿತು. ಚೀನಾದಲ್ಲಿ ಹುಟ್ಟಿದ ಈ ವೈರಸ್ ಜಗತ್ತಿನ ದಾರಿದ್ರ್ಯಕ್ಕೆ ಕಾರಣವಾಗುವ ಹೊತ್ತಲ್ಲಿ ಚೀನಾಕ್ಕೆ ಸರಿಯಾದ ಪಾಠ ಕಲಿಸುವ ಅಗತ್ಯವಿತ್ತು. ಅದಕ್ಕೆ ಚೀನಾ ಸೂಕ್ತ ವ್ಯವಸ್ಥೆ ಮಾಡಿಕೊಟ್ಟಿತು. ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರತೆಯ ಕನಸನ್ನು ಕಟ್ಟಿಕೊಟ್ಟರಲ್ಲದೇ ಚೀನಾದ ಆಕ್ರಮಣದ ಹೊತ್ತಲ್ಲಿ ಭಾವನಾತ್ಮಕವಾಗಿ ಬಲವಾಗಿದ್ದ ರಾಷ್ಟ್ರವನ್ನು ಸ್ವದೇಶಿಯತ್ತ ತಿರುಗಿಸಿ ತಾವೊಬ್ಬ ಶ್ರೇಷ್ಠ ರಾಜನೀತಿಜ್ಞನೆಂದು ಸಾಬೀತುಪಡಿಸಿದರು. ರಾಖಿ ಹಬ್ಬದಲ್ಲಿ, ದೀಪಾವಳಿ ಸಂದರ್ಭದಲ್ಲಿ ಚೀನಾದ ವಸ್ತುಗಳಿಗಾದ ನಷ್ಟ ಇದಕ್ಕೆ ಪುಷ್ಟಿಕೊಡುವಂತಿದ್ದವು. ಚೀನಾದ ಆಪ್​ಗಳು ಸದ್ದಿಲ್ಲದೇ ಭಾರತದ ಮೊಬೈಲುಗಳಿಂದ ನಾಪತ್ತೆಯಾದವು. ಈ ಕಠಿಣ ಕ್ರಮವನ್ನು ತೆಗೆದುಕೊಂಡ ಮೇಲೆ ಜಗತ್ತಿನ ಅನೇಕ ರಾಷ್ಟ್ರಗಳು ಚೀನಿಯರ ವಿರುದ್ಧ ತಿರುಗಿಬಿದ್ದರು. ಚೀನಾದ ಅನೇಕ ಕಂಪನಿಗಳು ವ್ಯಾಪಾರ ಕಳೆದುಕೊಂಡು ನೀರಿನಿಂದ ಹೊರತೆಗೆದ ಮೀನಿನಂತಾಗಿಬಿಟ್ಟವು. ಈ ಹೊತ್ತಲ್ಲೇ ಜ್ಯಾಕ್ ಮಾ ಚೀನಾ ಸರ್ಕಾರದ ವಿರುದ್ಧ ಮಾತನಾಡಿದ್ದು, ಆನಂತರ ಕಣ್ಮರೆಯಾದದ್ದು. ಚೀನಾ ಸುಮ್ಮನಾಗುವ ರಾಷ್ಟ್ರವಲ್ಲವಲ್ಲ. ಭಾರತದ ವಿರುದ್ಧ ದೀರ್ಘಕಾಲದ ಕದನಕ್ಕೆ ಸಿದ್ಧವಾಗುವಂತೆ ಸೈನಿಕರನ್ನು ಜಮಾವಣೆ ಮಾಡಲು ಆರಂಭಿಸಿದಾಗ ಭಾರತ ಕೂಡ ಅದಕ್ಕೆ ಪೂರಕವಾಗಿಯೇ ನಡೆದುಕೊಂಡಿತು. ಆ ಹೊತ್ತಲ್ಲೇ ನರೇಂದ್ರ ಮೋದಿ ‘ಇನ್ನು ಆರು ತಿಂಗಳವರೆಗೂ ಬಡಜನರನ್ನು ಕಾಪಾಡಿಕೊಳ್ಳಲು ಉಚಿತ ಧಾನ್ಯ ಪೂರೈಕೆ ಮಾಡುವಷ್ಟು ತಾಕತ್ತು ಭಾರತಕ್ಕಿದೆ. ದೇಶದ ಜನ ಹೆದರುವ ಅವಶ್ಯಕತೆ ಇಲ್ಲ’ ಎಂಬ ಸಂದೇಶವನ್ನು ಕೊಟ್ಟರು. ಮೇಲ್ನೋಟಕ್ಕೆ ಇದು ಭಾರತೀಯರಿಗೆ ನೀಡಿದ ಸಂದೇಶವೆನಿಸಿದರೂ ಗುರಿ ಚೀನಾದೆಡೆಗೇ ಇತ್ತು. ಸೈನ್ಯ ಜಮಾವಣೆ ಮಾಡಿ ಯುದ್ಧಕ್ಕೆ ನಿಂತರೆ ಯುದ್ಧವನ್ನು ಮಾಡುವುದಷ್ಟೇ ಅಲ್ಲ, ಭಾರತದ ಜನರನ್ನು ನೋಡಿಕೊಳ್ಳುವ ತಾಕತ್ತೂ ತಮಗಿದೆ ಎಂಬ ಸ್ಪಷ್ಟ ಸಂದೇಶ ಅದು.

    ಭಾರತ ಚೀನಾದ ಎದುರು ಗುಟುರು ಹಾಕಿದೊಡನೆ ಜಗತ್ತಿನ ಅನೇಕ ರಾಷ್ಟ್ರಗಳು ತಾವೂ ಗುರ್ ಎಂದವಲ್ಲದೆ ನಮ್ಮ ಪಾಳಯಕ್ಕೆ ಜಿಗಿದುಬಿಟ್ಟವು. ಅವಕಾಶವನ್ನು ಬಳಸಿಕೊಂಡ ಮೋದಿ ಭಾರತವನ್ನು ಶಸ್ತ್ರಾಸ್ತ್ರಗಳ ವಿಚಾರದಲ್ಲಿ ಸಕ್ಷಮಗೊಳಿಸುವ ಪ್ರಯತ್ನವನ್ನೂ ಆರಂಭಿಸಿದರು. ಹಾಗೆ ನೋಡಿದರೆ, ನರೇಂದ್ರ ಮೋದಿ ಬಂದನಂತರ ಭಾರತದ ಶಸ್ತ್ರಾಸ್ತ್ರ ರಫ್ತು 700 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ವರದಿಗಳು ಹೇಳುತ್ತವೆ. ಈಗಂತೂ ಅನೇಕ ಯುದ್ಧವಿಮಾನಗಳಿಗೂ ಬೇಡಿಕೆ ಬರಲಾರಂಭಿಸಿದೆ. ಜೆಎಫ್ 17 ವಿಮಾನಗಳಿಗಿಂತಲೂ ಶಕ್ತಿಯುತವಾಗಿರುವ ತೇಜಸ್ ವಿಮಾನಗಳನ್ನು ಸೈನ್ಯಕ್ಕೆ ಸೇರಿಸಿಕೊಂಡು ಚೀನಾ ಮತ್ತು ಪಾಕಿಸ್ತಾನಕ್ಕೆ ಮೋದಿ ಸ್ಪಷ್ಟ ಎಚ್ಚರಿಕೆ ಕೊಟ್ಟಿದ್ದಾರೆ.

    ಕಾಕತಾಳಿಯವೋ ಎಂಬಂತೆ ಈ ಹೊತ್ತಲ್ಲೇ ದೊಡ್ಡ ಸಂಖ್ಯೆಯ ಮತಗಳನ್ನು ಪಡೆದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ತಾತ್ಕಾಲಿಕ ಸದಸ್ಯನಾಗಿ ಭಾರತ ಆಯ್ಕೆಯಾಗಿದೆ. ಜೊತೆಗೆ ಫ್ರಾನ್ಸ್ ರಫೇಲ್​ನ ಬಹುಪಾಲು ಬಿಡಿಭಾಗಗಳನ್ನು ಇಲ್ಲಿಯೇ ಉತ್ಪಾದಿಸುವುದಾಗಿ ಹೇಳಿದೆಯಲ್ಲದೆ ಪ್ಯಾಂಥರ್ ಎಂಬ ಹೆಲಿಕಾಪ್ಟರ್ ಅನ್ನು ಪೂರ್ಣಪ್ರಮಾಣದಲ್ಲಿ ಇಲ್ಲಿಯೇ ಉತ್ಪಾದಿಸಿ ರಫ್ತು ಮಾಡುವುದಾಗಿ ಹೇಳಿಕೊಂಡಿದೆ. ಈ ವೇಳೆಯಲ್ಲಿಯೇ ಎಫ್​ಎಟಿಎಫ್ ಮೇಲೆ ಪ್ರಭಾವ ಬೀರಿರುವ ಭಾರತ ಪಾಕಿಸ್ತಾನಕ್ಕೆ ಮೌಲಾನಾ ಮಸೂದ್​ನನ್ನು ಭಯೋತ್ಪಾದಕನೆಂದು ಘೊಷಿಸುವ ಅನಿವಾರ್ಯತೆ ತಂದೊಡ್ಡಿದೆ!

    ಇಷ್ಟೆಲ್ಲ ನಡೆಯುತ್ತಿದ್ದಾಗ್ಯೂ ಗಡ್ಡ ಬಿಟ್ಟ ಸಾಧುವಿನಂತಿರುವ ನರೇಂದ್ರ ಮೋದಿ ಶಾಂತವಾಗಿ ಒಂದೇ ದಿನ ಸುಮಾರು ಎರಡು ಲಕ್ಷದಷ್ಟು ಜನರಿಗೆ ವ್ಯಾಕ್ಸಿನ್ ಕೊಡಿಸುವ ಸಾಧನೆ ಮಾಡುತ್ತಾರಲ್ಲ, ಅಪರೂಪವಲ್ಲವೇನು? ಅದಕ್ಕೇ ಹೇಳಿದ್ದು ಕರೊನಾ ನಮ್ಮನ್ನು ಗೆಲ್ಲಿಸಿದೆ ಅಂತ. ನಮ್ಮ ಶಕ್ತಿಯನ್ನು ಅದು ಜಗತ್ತಿಗೇ ಅನಾವರಣಗೊಳಿಸಿದೆ.

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts