More

    3 ತಿಂಗಳಿಂದ ಸಿಗದ ಡೀಸೆಲ್ ಸಬ್ಸಿಡಿ, ಸಂಕಷ್ಟದಲ್ಲಿ ಕರಾವಳಿಯ ಮೀನುಗಾರರು

    ಗಂಗೊಳ್ಳಿ: ಮೀನಿನ ಬರ, ಹವಾಮಾನ ವೈಪರೀತ್ಯ, ಆಗಾಗ ಉಂಟಾಗುತ್ತಿರುವ ಚಂಡಮಾರುತ, ಈಗ ಕರೊನಾ ಲಾಕ್‌ಡೌನ್‌ನಿಂದಾಗಿ ಮೀನುಗಾರಿಕೆಗೆ ಭಾರೀ ಹೊಡೆತ ಬಿದ್ದಿದೆ. ಮೀನುಗಾರಿಕೆ ಆರಂಭವಾದರೂ ಕಾರ್ಮಿಕರ ಕೊರತೆಯಿಂದ ಬಹುತೇಕ ಬೋಟುಗಳು ಕಡಲಿಗಿಳಿದಿಲ್ಲ. ಇನ್ನು ಡೀಸೆಲ್ ಸಬ್ಸಿಡಿ ಕೂಡ ಕಳೆದ ಜನವರಿಯಿಂದ ಸಿಗದೆ ಮೀನುಗಾರರು ಸಂಕಷ್ಟದಲ್ಲಿದ್ದಾರೆ.

    ಡಿಸೆಂಬರ್‌ವರೆಗೆ ಮಾತ್ರ ಸರ್ಕಾರ ಡೀಸೆಲ್ ಸಬ್ಸಿಡಿ ಹಣವನ್ನು ಮೀನುಗಾರರ ಖಾತೆಗೆ ಪಾವತಿಸಿದ್ದು, ಅಲ್ಲಿಂದ ಈವರೆಗಿನದ್ದು ಡೀಸೆಲ್ ಸಬ್ಸಿಡಿ ಬಾಕಿಯಿದೆ. ಜನವರಿ, ಫೆಬ್ರವರಿ, ಮಾರ್ಚ್ ತಿಂಗಳದ್ದು ಡೀಸೆಲ್ ಸಬ್ಸಿಡಿ ಸಿಗಬೇಕಿದ್ದು, ಏಪ್ರಿಲ್‌ನಲ್ಲಿ ಅಲ್ಪ ಮೀನುಗಾರಿಕೆ ನಡೆದಿದೆಯಷ್ಟೇ.
    ಉಡುಪಿ ಜಿಲ್ಲೆಯಲ್ಲಿ ಪ್ರತಿ ವರ್ಷ 1,600 ಮೀನುಗಾರರಿಗೆ 7 ಕೋಟಿ ರೂ.ಹಾಗೂ ದ.ಕ.ಜಿಲ್ಲೆಯಲ್ಲಿ 953 ಮೀನುಗಾರರಿಗೆ 6.32 ಕೋಟಿ ರೂ.ಡೀಸೆಲ್ ಸಬ್ಸಿಡಿ ನೀಡಲಾಗುತ್ತಿದೆ. ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 5 ಸಾವಿರಕ್ಕೂ ಅಧಿಕ ಯಾಂತ್ರೀಕೃತ ಮೀನುಗಾರಿಕೆ ಬೋಟ್‌ಗಳು ಇದರ ಫಲಾನುಭವಿಗಳಾಗಿದ್ದಾರೆ.

    ಲೀಟರ್‌ಗೆ 11.28 ರೂ.: ಸರ್ಕಾರವು ಯಾಂತ್ರೀಕೃತ ಬೋಟ್‌ಗಳಿಗೆ ಪ್ರತಿ ಲೀಟರ್‌ಗೆ 11.28 ಪೈಸೆ ಸಬ್ಸಿಡಿ ಹಣವನ್ನು ಆ ಬೋಟ್‌ನ ಮಾಲೀಕರ ಖಾತೆಗೆ ಜಮೆ ಮಾಡುತ್ತದೆ. ಆಯಾ ಬೋಟ್‌ಗಳ ಡೀಸೆಲ್ ಬಳಕೆ ಆಧಾರದಲ್ಲಿ 1ಬೋಟ್‌ಗೆ ತಿಂಗಳಿಗೆ ಗರಿಷ್ಠ 9 ಸಾವಿರ ಲೀ.ವರೆಗೆ ಸಬ್ಸಿಡಿ ಹಣ ದೊರೆಯುತ್ತದೆ.

    ಶೇ.10 ರಷ್ಟು ಬೋಟ್: ಲಾಕ್‌ಡೌನ್‌ನಿಂದಾಗಿ ಈಗಾಗಲೇ ಅವಧಿಗೆ ಮುನ್ನವೇ ಬಹುತೇಕ ಕಾರ್ಮಿಕರು ತಮ್ಮ-ತಮ್ಮ ಊರಿಗೆ ತೆರಳಿರುವುದರಿಂದ ಗಂಗೊಳ್ಳಿ, ಮಲ್ಪೆ, ಹೆಜಮಾಡಿ, ಹಂಗಾರಕಟ್ಟೆ ಸಹಿತ ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಶೇ.10 ರಷ್ಟು ಮಾತ್ರ ಬೋಟ್‌ಗಳು ಮೀನುಗಾರಿಕೆಗೆ ತೆರಳುತ್ತಿವೆ.

    ಶೀಘ್ರ ಬಿಡುಗಡೆಗೆ ಆಗ್ರಹ: ಈ ವರ್ಷವಿಡೀ ಸರಿಯಾದ ಮೀನುಗಾರಿಕೆಯಿಲ್ಲದೆ ಮೀನುಗಾರರು, ಬೋಟ್‌ಗಳ ಮಾಲೀಕರು, ಕಾರ್ಮಿಕರು, ಐಸ್ ಪ್ಲಾಂಟ್‌ನವರು ಸಹಿತ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಡಿಸೆಂಬರ್‌ವರೆಗೆ ಮಾತ್ರ ಬೋಟ್‌ಗಳಿಗೆ ನೀಡುವ ಡೀಸೆಲ್ ಸಬ್ಸಿಡಿ ಹಣವನ್ನು ಜಮೆ ಮಾಡಿದ್ದು, ಜನವರಿಯಿಂದ ಈವರೆಗಿನದ್ದು ಸಬ್ಸಿಡಿ ಹಣ ಬಾಕಿಯಿದೆ. ಈಗ ಆ ಹಣವನ್ನು ನೀಡಿದರೆ ಮಾಲೀಕರಿಗೆ ಸಾಕಷ್ಟು ಪ್ರಯೋಜನವಾಗಲಿದೆ.

    ಇಲಾಖೆಯಿಂದ ಫಲಾನುಭವಿಗಳ ಪಟ್ಟಿಯನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ. ಆದರೆ ಹೊಸ ಬಜೆಟ್ ಆಗಿರುವುದರಿಂದ ಡೀಸೆಲ್ ಸಬ್ಸಿಡಿ ಹಣ ಬಿಡುಗಡೆ ಸ್ವಲ್ಪ ವಿಳಂಬವಾಗಬಹುದು.
    -ಗಣೇಶ್ ಕೆ., ಉಪ ನಿರ್ದೇಶಕರು, ಮೀನುಗಾರಿಕಾ ಇಲಾಖೆ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts