More

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ದಿನಗಳ ಸತತ ಬಿಗಿ ಬಂದ್​- ಇಂದು ದಿನಸಿಗಾಗಿ ಜನದಟ್ಟಣೆ

    ಮಂಗಳೂರು: ಜಿಲ್ಲೆಯಲ್ಲಿ ಮೂರು ದಿನಗಳ ಸತತ ಪೂರ್ಣ ಬಂದ್ ನಂತರ ಇಂದು(ಮಾ.31) ಜನರಿಗೆ ಅವಶ್ಯಕ ವಸ್ತು ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ದಿನಸಿ, ತರಕಾರಿ, ಮೀನು ಮಾಂಸವಿಲ್ಲದೆ ಕೆಲದಿನಗಳಿಂದ ಕಂಗೆಟ್ಟಿರುವ ಜನ ಇಂದು ಅಂಗಡಿಗಳಿಗೆ ದಾಂಗುಡಿ ಇಟ್ಟು ಭಾರೀ ಜನದಟ್ಟಣೆಗೆ ಕಾರಣವಾಗುವ ಎಲ್ಲಾ ಸಾಧ್ಯತೆಗಳೂ ಗೋಚರಿಸಿವೆ.

    31ರಂದು ಬೆಳಗ್ಗೆ 6ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಅಂಗಡಿಗಳಲ್ಲಿ ದಿನಸಿ, ತರಕಾರಿ ಇತ್ಯಾದಿ ಮಾರಬಹುದು. ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಖರೀದಿ ಮಾಡಬಹುದು, ಒಂದು ಕುಟುಂಬದಿಂದ ಒಬ್ಬರೇ ಖರೀದಿಗೆ ಹೋಗಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಎನ್ನುವ ಸೂಚನೆಯನ್ನು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೀಡಿದ್ದಾರೆ.
    ಚಿಲ್ಲರೆ ದಿನಸಿ ಅಂಗಡಿಯವರಿಗೆ ಸೋಮವಾರವೇ ಬೇಕಾದ ವಸ್ತುಗಳನ್ನು ರಖಂ ವ್ಯಾಪಾರಸ್ಥರಿಂದ ಪಡೆಯುವಂತೆ ಪಾಸ್ ಕೂಡಾ ಒದಗಿಸಲಾಗಿತ್ತು. ಆದರೆ ಅದನ್ನು ಹೆಚ್ಚು ಮಂದಿ ಬಳಸಿಕೊಂಡಂತೆ ಕಾಣುತ್ತಿಲ್ಲ. ಕೆಲವರು 31ರಂದು ವಸ್ತುಗಳನ್ನು ತರುವುದಾಗಿ ಹೇಳುತ್ತಿದ್ದಾರೆ.

    ಕಳೆದ ಮೂರು ದಿನಗಳಿಂದ ವಸ್ತುಗಳಿಲ್ಲದ ಒತ್ತಡದಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಒಟ್ಟಿಗೆ ಆಗಮಿಸಿದರೆ ಅದನ್ನು ನಿರ್ವಹಣೆ ಮಾಡುವುದು ಹೇಗೆ ಎನ್ನುವ ಭಯವೂ ಕೆಲವು ವ್ಯಾಪಾರಿಗಳನ್ನು ಕಾಡುತ್ತಿದೆ.

    ಗ್ರಾಮೀಣ ಭಾಗದಲ್ಲೂ ಕೊರತೆ
    ನಗರದಲ್ಲಿ ಒಂದೆಡೆ ಜನರಿಗೆ ದಿನಸಿ ವಸ್ತು ಕೊರತೆಯಾಗಿದ್ದರೆ, ಮಂಗಳೂರು ಹೊರವಲಯದ ಅನೇಕ ಗ್ರಾಮೀಣ ಭಾಗದಲ್ಲೂ ಅಲ್ಲಿನ ಅಂಗಡಿಗಳಲ್ಲಿ ಸಾಮಾಗ್ರಿ ಖಾಲಿಯಾಗಿದೆ. ಮಂಗಳೂರಿಗೆ ಬಂದು ಹೋಲ್‌ಸೇಲ್ ಡೀಲರ್‌ಗಳಿಂದ ಸರಿಯಾಗಿ ವಸ್ತು ಪಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಅಲ್ಲೂ ಜನತೆ ಕಂಗೆಟ್ಟಿರುವ ಬಗ್ಗೆ ದೂರುಗಳು ಬಂದಿವೆ.

    ಡೋರ್ ಡೆಲಿವರಿ ಕಷ್ಟ
    ಜನರಿಗೆ ಸಮಸ್ಯೆಯಾಗದಂತೆ ಮನೆ ಬಾಗಿಲಿಗೇ ದಿನಸಿ ತಲಪಿಸುವ ಬಗ್ಗೆ ಜಿಲ್ಲಾಡಳಿತ ರೂಪಿಸಿರುವ ಡೋರ್ ಡೆಲಿವರಿ ವ್ಯವಸ್ಥೆಯೂ ಇನ್ನೂ ಸರಿಯಾಗಿ ಕಾರ್ಯಗತವಾದಂತಿಲ್ಲ. ಜಿಲ್ಲಾಡಳಿತದ ವತಿಯಿಂದ ಅನೇಕ ಆನ್‌ಲೈನ್ ಮೂಲಕ ಜನರಿಂದ ಆರ್ಡರ್ ಪಡೆದು ವಸ್ತು ಪೂರೈಕೆ ಮಾಡುವವರ ವಿವರ, ಫೋನ್ ನಂಬ್ರ ಹಾಕಲಾಗಿತ್ತು. ಆದರೆ ಅದರಲ್ಲಿ ಬಹುತೇಕ ಮಂದಿ ಫೋನ್ ಕರೆ ಸ್ವೀಕರಿಸುತ್ತಿಲ್ಲ, ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಅನೇಕರು ತಮ್ಮಲ್ಲಿ ಡೋರ್‌ಡೆಲಿವರಿ ನೀಡಲು ಜನರ ಕೊರತೆ ಇದೆ ಎಂಬುದಾಗಿ ಅಲವತ್ತುಕೊಂಡಿದ್ದಾರೆ. ಕೆಲವು ಅಂಗಡಿಯವರು ಮನೆ ಬಾಗಿಲಿಗೆ ತಲಪಿಸುವುದು ಕಷ್ಟ, ನಮಗೆ ಜಿಲ್ಲಾಡಳಿತ ಜನ ಒದಗಿಸಿದರೆ ಪೂರೈಕೆ ಮಾಡಬಹುದು ಎಂದಿದ್ದಾರೆ. ಆದರೆ ಬಹುತೇಕ ಕೆಲಸದವರು ಮನೆಯಿಂದ ಹೊರಬರಲು ನಿರಾಕರಿಸುವುದರಿಂದ ಇದು ಕಷ್ಟಸಾಧ್ಯ ಎಂದು ತಿಳಿದುಬಂದಿದೆ.

    ಜಿಲ್ಲಾಡಳಿತ ನೀಡಿರುವ ಪಟ್ಟಿಯ ಹೊರತಾಗಿ ನಾವು ನಮ್ಮ ವ್ಯಾಪ್ತಿಯ ಹಲವು ವಾರ್ಡ್‌ಗಳಲ್ಲಿ ವಾರ್ಡ್‌ವಾರು ಅಂಗಡಿಗಳ ಪಟ್ಟಿ ಮಾಡಿದ್ದೇವೆ. ಅದರಿಂದ ಡೋರ್ ಡೆಲಿವರಿ ನೀಡುವಂತೆ ಸೂಚನೆ ನೀಡಿದ್ದೇವೆ. ಮಾ.31ರಿಂದಲೇ ಪ್ರಾರಂಭಗೊಳ್ಳಲಿದೆ.
    – ಡಾ.ವೈ.ಭರತ್ ಶೆಟ್ಟಿ ,ಶಾಸಕ

    ವಾರಕ್ಕೊಮ್ಮೆ ಅಗತ್ಯವಸ್ತು ಖರೀದಿಸಿ
    ಉಡುಪಿ: ಜಿಲ್ಲೆಯಲ್ಲಿ ಕರೊನಾ ಲಾಕ್‌ಡೌನ್ ಕಾರಣದಿಂದ ಜಿಲ್ಲೆಯಲ್ಲಿ ಅಗತ್ಯ ವಸ್ತು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಜನ ಆತಂಕ ಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದರು.
    ದಿನಸಿ ವಸ್ತುಗಳ ಖರೀದಿಗಾಗಿ ಬೆಳಗ್ಗೆ 7ರಿಂದ 11ಗಂಟೆವರೆಗೆ ಸಮಯ ನಿಗದಿಪಡಿಸಲಾಗಿದೆ. ಸಾರ್ವಜನಿಕರು ಪ್ರತೀದಿನ ಮನೆಯಿಂದ ಅನಗತ್ಯ ಹೊರಬಂದು ವಸ್ತುಗಳನ್ನು ಖರೀದಿಸದೇ ಅಗತ್ಯವಿದ್ದಾಗ ಮಾತ್ರ, ಸಾಧ್ಯವಾದಲ್ಲಿ ವಾರದಲ್ಲಿ ಒಮ್ಮೆ ವಸ್ತುಗಳನ್ನು ಖರೀದಿಸುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು.
    ಅಕ್ಕಿ, ತೆಂಗಿನ ಎಣ್ಣೆ ಪೂರೈಕೆ ಮಾಡುವ ರೈಸ್ ಮತ್ತು ಎಣ್ಣೆ ಮಿಲ್‌ಗಳ ಮಾಲೀಕರು ತಕ್ಷಣದಿಂದಲೇ ರೈಸ್ ಮಿಲ್‌ಗಳನ್ನು ತೆಗೆದು ಎಂದಿನಂತೆ ಕಾರ್ಯಾಚರಣೆ ನಡೆಸುವಂತೆ ಸೂಚಿಸಲಾಗಿದೆ.
    ಜಿಲ್ಲೆಗೆ ಹೊರ ಜಿಲ್ಲೆಯಿಂದ ಪೂರೈಕೆಯಾಗುವ ಸಾಮಗ್ರಿಗಳ ಸಾಗಾಟ ವಾಹನಗಳಿಗೆ ನಿರ್ಬಂಧ ವಿಧಿಸಿಲ್ಲ. ದಿನಸಿ ವಸ್ತುಗಳ ಕೊರತೆ ಕುರಿತಂತೆ ಜಿಲ್ಲೆಯ ಜನ ಆತಂಕ ಪಡುವ ಅಗತ್ಯ ಇಲ್ಲ. ಜಿಲ್ಲೆಯಲ್ಲಿ ದಿನಸಿ ವಸ್ತು ಪೂರೈಕೆ ಮಾಡುವ ಸಗಟು ವಾಹನಗಳನ್ನು ಎಲ್ಲೂ ತಡೆಡಿದಿಲ್ಲ. ರಖಂ ಮಾರಾಟಗಾರರು ತಮ್ಮ ಅಂಗಡಿಗಳನ್ನು ತೆರೆದು ಚಿಲ್ಲರೆ ಮಾರಾಟಗಾರರಿಗೆ ವಿತರಿಸಬೇಕು. ರೈತರಿಂದ ಅಕ್ಕಿ, ಎಣ್ಣೆ ತಯಾರಿ ಕಚ್ಚಾವಸ್ತುಗಳಾದ ಭತ್ತ ಮತ್ತು ತೆಂಗಿನಕಾಯಿ ಖರೀದಿಸಲು ಮಿಲ್ ಮಾಲೀಕರಿಗೆ ಅನುಮತಿ ನೀಡಲಾಗಿದೆ. ಜಿಲ್ಲೆಯಲ್ಲಿ ರೈತರು ಬೆಳೆದಿರುವ ಕಲ್ಲಂಗಡಿ ಹಣ್ಣು ಹಾಳಾಗದಂತೆ ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿಗೆ ವ್ಯವಸ್ಥೆ ಮಾಡುವಂತೆ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

    ಕರೊನಾ ಸೋಂಕು ಇದ್ದರೂ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡ, 11 ಜನರಿಗೆ ಸೋಂಕು ಹರಡಿ ಜೈಲು ಸೇರಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts