More

    ಕರೊನಾ ಸೋಂಕಿತರ ಸ್ಥಳಾಂತರಕ್ಕೆ ಸಿದ್ಧತೆ

    ಬೈಲಹೊಂಗಲ: ಬೆಳಗಾವಿ ಸಿವಿಲ್ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತ ಹೆಚ್ಚಿನ ರೋಗಿಗಳನ್ನು ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಲು ಮುಂದಾಗಿರುವ ವಿಷಯ ಮಂಗಳವಾರ ಸಂಜೆ ಪಟ್ಟಣದಲ್ಲಿ ಹರಡಿ ಆತಂಕಕ್ಕೆ ಕಾರಣವಾಗಿದೆ.

    ಬೈಲಹೊಂಗಲ, ಚಿಕ್ಕೋಡಿ ತಾಲೂಕು ಕೇಂದ್ರಗಳಲ್ಲಿ ಕೋವಿಡ್-19 ವಾರ್ಡ್ ಸಿದ್ಧತೆ ಭರದಿಂದ ನಡೆದಿದೆ. ದಿನ ನಿತ್ಯ ಸಾವಿರ ಸಂಖ್ಯೆಯಲ್ಲಿ ಪಟ್ಟಣ, ಗ್ರಾಮೀಣ ಭಾಗದವರು ಇಲ್ಲಿಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಾರೆ. ಇದೇ ಆಸ್ಪತ್ರೆಯಲ್ಲಿ ಕರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಕೊಡುವುದರಿಂದ ಅನ್ಯ ರೋಗಿಗಳ ಗತಿ ಏನು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಮೇಲಧಿಕಾರಿಗಳ ಆದೇಶದಂತೆ ಬೆಳಗಾವಿ ಸಿವಿಲ್ ಆಸ್ಪತ್ರೆಯಲ್ಲಿ ಹೆಚ್ಚಾದ ಸೋಂಕಿತರನ್ನು ಶಿಫ್ಟ್ ಮಾಡಲು ವ್ಯವ್ಯಸ್ಥೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಜಿಲ್ಲಾಡಳಿತ ಇಂತಹ ಕ್ರಮಕ್ಕೆ ಮುಂದಾಗದೆ ಜಿಲ್ಲಾ ಪ್ರದೇಶದಲ್ಲಿಯೇ ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಬೇಕು. ತಾಲೂಕು ಕೇಂದ್ರಗಳಿಗೆ ಸೋಂಕಿತರನ್ನು ಸ್ಥಳಾಂತರಿಸುವ ಕಾರ್ಯ ಸೂಕ್ತವಲ್ಲ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

    ವರದಿ ಬಾಕಿ: ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ ಕರೊನಾ ಪ್ರಕರಣಗಳು ದೃಢಪಟ್ಟಿಲ್ಲ. 180 ಶಂಕಿತರ ಗಂಟಲು ದ್ರವದ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಇಲ್ಲಿಯವರೆಗೆ 14,794 ಜನರ ಮೇಲೆ ನಿಗಾ ವಹಿಸಲಾಗಿದೆ. 3,519 ಜನರು 14 ದಿನ ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 132 ಜನರನ್ನು ಐಸೋಲೇಟೆಡ್ ವಾರ್ಡ್‌ನಲ್ಲಿರಿಸಲಾಗಿದೆ.

    3,462 ಜನ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 7,681 ಜನ 28 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 13,498 ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿದೆ. 12,734 ಮಾದರಿ ನೆಗೆಟಿವ್ ಬಂದಿವೆ. 295 ಮಾದರಿ ದೃಢಪಟ್ಟಿವೆ. 4 ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts