More

    ಕರೊನಾ ಸೋಂಕಿನಿಂದ ಮುಕ್ತರಾಗೋಣ

    ಮೂಡಲಗಿ: ಇಡೀ ವಿಶ್ವಾದ್ಯಂತ ಮರಣಮೃದಂಗ ಭಾರಿಸುತ್ತಿರುವ ಕರೊನಾ ಸೋಂಕು ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

    ಪಟ್ಟಣದ ಈರಣ್ಣ ದೇವಸ್ಥಾನದಲ್ಲಿ ಸೋಮವಾರ ನಡೆದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿ, ಕರೊನಾ ಸೋಂಕು ದೇಶಾದ್ಯಂತ ದಿನದಿಂದ ದಿನಕ್ಕೆ ಹೆಚ್ಚಾಗಿ ಹರಡುತ್ತಿದೆ. ಪ್ರತಿ ದಿನವೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಡೀ ದೇಶವೇ ಗಂಡಾಂತರ ಪರಿಸ್ಥಿತಿಯಲ್ಲಿದೆ. ಹಾಗಾಗಿ ಸಾರ್ವಜನಿಕರು ಕೇಂದ್ರ ಹಾಗೂ ರಾಜ್ಯ ಸರ್ಕಾರ, ವೈದ್ಯರ ಸಲಹೆ ಮತ್ತು ಸೌಲಭ್ಯಗಳನ್ನು ಸೂಕ್ತವಾಗಿ ಬಳಸಿಕೊಂಡು ಮಹಾಮಾರಿ ಕರೊನಾ ಸೋಂಕು ತೊಲಗಿಸಬೇಕು. ದೆಹಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಮರಳಿದಂತಹ ವ್ಯಕ್ತಿಗಳು ಸ್ವಯಂ ಪ್ರೇರಿತವಾಗಿ ತಾವೇ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಹಿಂದು, ಮುಸ್ಲಿಂ ಭೇದಭಾವ ಮರೆತು ಎಲ್ಲರೂ ಒಗ್ಗಟ್ಟಿನಿಂದ ಕರೊನಾ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.

    ಮೂಡಲಗಿ ದಂಡಾಧಿಕಾರಿ ಡಿ.ಜೆ.ಮಹಾತ್ ಮಾತನಾಡಿ, ಮೂಡಲಗಿ ತಾಲೂಕಾದ್ಯಂತ ಹೊರದೇಶದಿಂದ 7 ಜನ, ಬೇರೆ ಬೇರೆ ರಾಜ್ಯಗಳಿಂದ 446 ವ್ಯಕ್ತಿಗಳು ಹಾಗೂ ವಿವಿಧ ಜಿಲ್ಲೆಗಳಿಂದ ಸುಮಾರು 772 ವ್ಯಕ್ತಿ ಆಗಮಿಸಿದ್ದಾರೆ. ಅವರನ್ನೆಲ್ಲ ಗುರುತಿಸಿ ಗೃಹ ಬಂಧನದಲ್ಲಿ ಇಡಲಾಗಿದೆ. ಆದರೆ, ಯಾರಿಗೂ ಕರೊನಾ ಸೋಂಕು ತಗಲಿರುವುದು ದೃಢಪಟ್ಟಿಲ್ಲ. ಪೋಲಿಸ್ ಇಲಾಖೆ, ಅಂಗವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಪುರಸಭೆ ಸಿಬ್ಬಂದಿ, ಗ್ರಾಪಂ ಸಿಬ್ಬಂದಿ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದರು. ತಾಲೂಕು ವೈದ್ಯಾಧಿಕಾರಿ ಡಾ.ಅಂಟಿನ್ ಮಾತನಾಡಿ, ಕರೊನಾ ಸಾಂಕ್ರಾಮಿ ರೋಗ 3 ತಿಂಗಳಲ್ಲಿ ಜಗತ್ತಿನಾದ್ಯಂತ ಹಬ್ಬಿದೆ. ಈ ರೋಗಕ್ಕೆ ನಿಖರವಾದ ಔಷಧ ಇನ್ನೂ ದೊರೆತಿಲ್ಲ. ಹಾಗಾಗಿ ಎಲ್ಲರೂ ಮಹಾಮಾರಿ ಕರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು. ಬಿಇಒ ಅಜಿತ್ ಮನ್ನಿಕೇರಿ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ತಾಪಂ ಇಒ ಬಸವರಾಜ ಹೆಗ್ಗನಾಯಕ, ಡಾ. ರಾಜೇಂದ್ರ ಸಣ್ಣಕ್ಕಿ, ಸಿಪಿಐ ವೆಂಕಟೇಶ ಮುರನಾಳ, ಡಿ.ಎಸ್. ಹರ್ದಿ, ಪಿಎಸ್‌ಐ ಮಲ್ಲಿಕಾರ್ಜುನ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts