More

    ದ.ಕ. 3ನೇ ಬಲಿ ಪಡೆದ ಕರೊನಾ

    ಮಂಗಳೂರು: ಕರೊನಾ ಮಹಾಮಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರನೇ ಬಲಿ ಪಡೆದಿದೆ. ಈ ಸಾವು ಸಂಭವಿಸಿದ ದಿನವೇ ಇನ್ನೊಂದು ಪಾಸಿಟಿವ್ ಪ್ರಕರಣವೂ ಪತ್ತೆಯಾಗಿದೆ.

    ಬಂಟ್ವಾಳ ಕಸಬಾದ 67 ವರ್ಷದ ವೃದ್ಧೆ (ರೋಗಿ 409) ಗುರುವಾರ ಸಾಯಂಕಾಲ 5.40ರ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಶ್ವಾಸಕೋಶ ಸಂಬಂಧಿ ಕಾಯಿಲೆ ಹಾಗೂ ಮಧುಮೇಹ ರೋಗಿಯಾಗಿದ್ದ ಅವರು ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಬಂಟ್ವಾಳ ತಾಲೂಕು ಆಸ್ಪತ್ರೆಗೆ ದಾಖಲಾಗಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಏ.18ರಂದು ವೆನ್ಲಾಕ್ ಆಸ್ಪತ್ರೆ ಐಸಿಯು ವಿಭಾಗದಲ್ಲಿ ದಾಖಲಾಗಿದ್ದರು. ಜ್ವರವನ್ನು ವೈರಲ್ ನ್ಯುಮೋನಿಯಾ ಎಂದು ಪರಿಗಣಿಸಿ ಚಿಕಿತ್ಸೆ ನೀಡಲಾಗುತಿತ್ತು.
    ಏ.20ರಂದು ಅವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿತ್ತು. ನಿರಂತರವಾಗಿ ತುರ್ತು ನಿಗಾ ಘಟದಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಿದರೂ, ಸ್ಪಂದಿಸದೆ ಮೃತಪಟ್ಟಿದ್ದಾರೆ.
    ಏ.19ರಂದು ಮೃತರಾಗಿದ್ದ ಬಂಟ್ವಾಳ ಕಸಬಾದ ನಿವಾಸಿ 45 ವರ್ಷದ ಮಹಿಳೆಯ ನೆರೆಮನೆಯವರಾಗಿದ್ದು, ದೂರದ ಸಂಬಂಧಿಯೂ ಆಗಿದ್ದಾರೆ. ಅವರಿಂದಲೇ ವೃದ್ಧೆಗೂ ಸೋಂಕು ಹರಡಿತ್ತು.

    ಒಂದೇ ಪ್ರದೇಶದಲ್ಲಿ 3 ಸಾವು: ಕರೊನಾ ಸೋಂಕಿನಿಂದ ಸಂಭವಿಸಿದ ಮೂರು ಸಾವು ಬಂಟ್ವಾಳ ತಾಲೂಕಿನ ಕಸಬಾ ಪ್ರದೇಶಕ್ಕೆ ಸಂಬಂಧಿಸಿದ್ದಾಗಿವೆ. ಏ.19ರಂದು 45 ವರ್ಷದ ಮಹಿಳೆ ಮೃತರಾಗಿದ್ದು, ಇದು ಜಿಲ್ಲೆಯಲ್ಲಿ ಸಂಭವಿಸಿದ ಮೊದಲ ಕರೊನಾ ಸಾವು. ನಾಲ್ಕು ದಿನಗಳ ಬಳಿಕ ಏ.23ರಂದು ಮಹಿಳೆಯ ಅತ್ತೆ (ಪತಿಯ ತಾಯಿ) 75 ವರ್ಷದ ವೃದ್ಧೆ ಕೊನೆಯುಸಿರೆಳೆದಿದ್ದರು. ಈಗ ನೆರೆ ಮನೆಯ ವೃದ್ಧೆಯೂ ಬಲಿಯಾಗಿದ್ದಾರೆ.

    ಪುತ್ರಿಯೂ ಸೋಂಕಿತೆ: ಗುರುವಾರ ಮೃತರಾದ ವೃದ್ಧೆಯ ಜತೆ ನಿಕಟ ಸಂಪರ್ಕದಲ್ಲಿದ್ದ ಅವರ 33 ವರ್ಷದ ಮಗಳ (ರೋಗಿ 489) ಲ್ಲಿಯೂ ಏ.25ರಂದು ಸೋಂಕು ದೃಢಪಟ್ಟಿದೆ. ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಬೋಳೂರಿನಲ್ಲಿ ಅಂತ್ಯಸಂಸ್ಕಾರ: ಮೃತ ವೃದ್ಧೆಯ ಅಂತ್ಯ ಸಂಸ್ಕಾರ ಜಿಲ್ಲಾಡಳಿತ ಈ ಹಿಂದೆಯೇ ತೀರ್ಮಾನಿಸಿದಂತೆ ಬೋಳೂರಿನ ವಿದ್ಯುತ್ ಚಿತಾಗಾರದಲ್ಲಿ ಗುರುವಾರ ರಾತ್ರಿ ನೆರವೇರಿತು. ಕರೊನಾ ಎರಡನೇ ಸಾವು ಸಂಭವಿಸಿದ ವೇಳೆ ಅಂತ್ಯಸಂಸ್ಕಾರ ಸಂದರ್ಭ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಕರೊನಾ ಸಾವು ಪ್ರಕರಣಗಳ ಅಂತ್ಯಕ್ರಿಯೆ ಬೋಳೂರಿನ ರುದ್ರಭೂಮಿಯಲ್ಲೇ ನಡೆಸುವ ಕುರಿತು ಜಿಲ್ಲಾಡಳಿತ ನಿರ್ಧಾರ ಕೈಗೊಂಡಿತ್ತು.

    125 ವರದಿ ನೆಗೆಟಿವ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಗುರುವಾರ 142 ಮಂದಿಯನ್ನು ತಪಾಸಣೆ ಮಾಡಲಾಗಿದೆ. ಎನ್‌ಐಟಿಕೆಯಲ್ಲಿ 59 ಮಂದಿ ಹಾಗೂ ಇಎಸ್‌ಐ ಆಸ್ಪತ್ರೆಯಲ್ಲಿ 40 ಮಂದಿ ನಿಗಾವಣೆಯಲ್ಲಿದ್ದಾರೆ. 6073 ಮಂದಿ 28 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 279 ಮಾದರಿ ಪರೀಕ್ಷೆಗೆ ಕಳುಹಿಸಿದೆ, 126 ವರದಿಗಳು ಬಂದಿದ್ದು, 1 ಪಾಸಿಟಿವ್, 125 ನೆಗೆಟಿವ್, 1 ಸಾವು ಆಗಿರುತ್ತದೆ. 9 ಮಂದಿಯನ್ನು ನಿಗಾ ಇರಿಸುವುದಕ್ಕಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರದ ತನಕ ಒಟ್ಟು 2573 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. 1990 ಮಂದಿಗೆ ಫೀವರ್ ಕ್ಲಿನಿಕ್‌ನಲ್ಲಿ ಚಿಕಿತ್ಸೆ ನೀಡಲಾಗಿದೆ. ತಪಾಸಣೆ ನಡೆಸಿದ 548 ಮಾದರಿಗಳ ವರದಿ ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಮಂಗಳೂರಲ್ಲಿ ಮತ್ತೊಂದು ಪಾಸಿಟಿವ್
    ಎರಡು ದಿನ ಯಾವುದೇ ಪಾಸಿಟಿವ್ ಪ್ರಕರಣಗಳಿಲ್ಲದೆ ಸ್ವಲ್ಪ ನಿರಾಳವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಕರೊನಾ ಪ್ರಕರಣ ಗುರುವಾರ ದೃಢಪಟ್ಟಿದೆ. ಮಂಗಳೂರು ನಗರ ವ್ಯಾಪ್ತಿಯ ಬೋಳೂರು ಪ್ರದೇಶದ ಸೋಂಕಿತ 58 ವರ್ಷದ ಮಹಿಳೆಯನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
    ಮಹಿಳೆ ನಗರದ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಏ.10ರಿಂದ 20ರ ವರೆಗೆ ಟಿ.ಬಿ ಮೆನೆಜೈಟಿಸ್- ಡಿಸಿಮಿನೇಟೆಡ್ ಟಿ.ಬಿ(ಶ್ವಾಸಕೋಶದ ಕ್ಷಯ ಮುಂದುವರಿದು ಮಿದುಳಿಗೆ ಹಬ್ಬವುದು) ಕಾಯಿಲೆಗೆ ಸಂಬಂಧಿಸಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದರು. ಈ ನಡುವೆ ಆಸ್ಪತ್ರೆಯಲ್ಲಿ ಆಯಾ ಆಗಿದ್ದ ಪಾಣೆ ಮಂಗಳೂರಿನ ಮಹಿಳೆ (ರೋಗಿ 501)ಯಿಂದ ಸೋಂಕು ಹರಡಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಮಹಿಳೆಯ ಮನೆಯವರನ್ನು ಕ್ವಾರಂಟೈನ್ ಮಾಡಲಾಗಿದೆ.

    ಬೋಳೂರು ಸೀಲ್‌ಡೌನ್: ಸೋಂಕಿತ ಮಹಿಳೆ ವಾಸವಾಗಿದ್ದ ಬೋಳೂರಿನ ಮನೆ ಸುತ್ತಮುತ್ತ ಕಂಟೈನ್‌ಮೆಂಟ್ ಜೋನ್ ಎಂದು ಗುರುತಿಸಲಾಗಿದ್ದು, ಸೀಲ್‌ಡೌನ್ ಮಾಡಲಾಗಿದೆ. ಉತ್ತರಕ್ಕೆ ಜೇಮ್ಸ್ ಡಿಸೋಜ ಮನೆ, ಪಶ್ಚಿಮಕ್ಕೆ ಬೋಳೂರು ಹಿಂದು ರುದ್ರಭೂಮಿ, ಉತ್ತರಕ್ಕೆ ಸುಲ್ತಾನ್ ಬತ್ತೇರಿ ರಸ್ತೆಯ ಹೋಟೆಲ್ ಬಿ.ಜೆ ಮತ್ತು ಹೋಟೆಲ್ ಶ್ರೀ ವಿನಾಯಕ, ದಕ್ಷಿಣಕ್ಕೆ ಹಿಂದು ರುದ್ರಭೂಮಿ ಪ್ರವೇಶಿಸುವ ರಸ್ತೆಯನ್ನು ಗಡಿಯಾಗಿ ಗುರುತಿಸಲಾಗಿದೆ. ಸ್ಥಳದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತರು ಹಾಗೂ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
    ಪ್ರದೇಶದಲ್ಲಿ 135 ಮನೆಗಳು, 12 ಅಂಗಡಿ/ ಕಚೇರಿ ಮತ್ತು 640 ಮಂದಿ ವಾಸವಾಗಿದ್ದಾರೆ. ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನಿಯೋಜಿಸಲಾಗಿದ್ದು, ಕಂಟೈನ್‌ಮೆಂಟ್ ಜೋನ್‌ನ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಔಷಧ, ದಿನಸಿ ಸಾಮಗ್ರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಅಧಿಕಾರಿಗಳೇ ಮನೆಗೆ ತಲುಪಿಸಲು ವ್ಯವಸ್ಥೆ ಮಾಡಲಿದ್ದಾರೆ.

    ಬಫರ್ ಜೋನ್: ಸುತ್ತಲಿನ 5 ಕಿ.ಮೀ. ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಗುರುತಿಸಲಾಗಿದ್ದು, ಪೂರ್ವಕ್ಕೆ ಬೋಂದೆಲ್, ಪಶ್ಚಿಮಕ್ಕೆ ಅರಬ್ಬಿ ಸಮುದ್ರ, ಉತ್ತರಕ್ಕೆ ಎಂಸಿಎಫ್ ರಾಷ್ಟ್ರೀಯ ಹೆದ್ದಾರಿ ಮತ್ತು ದಕ್ಷಿಣಕ್ಕೆ ಬೋಳಾರ ನೇತ್ರಾವತಿ ನದಿಯನ್ನು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ 79,800 ಮಂದಿ ವಾಸವಾಗಿದ್ದು, 16,350 ಮನೆಗಳು, 1275 ಅಂಗಡಿ/ಕಚೇರಿಗಳಿವೆ.

    ಮಂಗಳೂರಿನಲ್ಲಿ 3ನೇ ಪ್ರಕರಣ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪತ್ತೆಯಾದ ಮೂರನೇ ಪ್ರಕರಣ ಇದಾಗಿದ್ದು, ಮೂರು ಪ್ರಕರಣಗಳೂ ಫಸ್ಟ್ ನ್ಯೂರೋ ಆಸ್ಪತ್ರೆಗೆ ಸಂಬಂಧಿಸಿದ್ದಾಗಿವೆ. ಈ ಮೊದಲು ಏ.27ರಂದು ಶಕ್ತಿನಗರ ಪ್ರದೇಶದ ತಾಯಿ (ರೋಗಿ 507) ಮತ್ತು ಮಗ (ರೋಗಿ 506)ನಲ್ಲಿ ಕರೊನಾ ಪತ್ತೆಯಾಗಿದ್ದು, ಅವರು ಈಗ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಟ್ವಾಳ ಪೇಟೆ ಮತ್ತು ಫಸ್ಟ್ ನ್ಯೂರೋ ಆಸ್ಪತ್ರೆ ಸಂಪರ್ಕದಿಂದ ಸೋಂಕು ಹರಡಿರುವ ದ.ಕ. ಜಿಲ್ಲೆಯ 8ನೇ ಪ್ರಕರಣ ಬೋಳೂರಿನ ಮಹಿಳೆಯದ್ದಾಗಿದೆ.

    ಕಾಸರಗೋಡಲ್ಲಿ ಒಬ್ಬರಿಗೆ ಪಾಸಿಟಿವ್
    ಕಾಸರಗೋಡು: ಕೇರಳದಲ್ಲಿ ಗುರುವಾರ ಇಬ್ಬರಲ್ಲಿ ಕೋವಿಡ್-19 ವೈರಸ್ ಕಾಣಿಸಿಕೊಂಡಿದ್ದು, ಕಾಸರಗೋಡು ಮತ್ತು ಮಲಪ್ಪುರಂ ಜಿಲ್ಲೆಯ ತಲಾ ಒಬ್ಬರಲ್ಲಿ ವೈರಸ್ ಪತ್ತೆಯಾಗಿದೆ.
    ಕಾಸರಗೋಡಿನ ಇಬ್ಬರ ಸಹಿತ ರಾಜ್ಯದಲ್ಲಿ ಒಟ್ಟು 14 ಮಂದಿ ಗುಣಮುಖರಾಗಿ ಗುರುವಾರ ಬಿಡುಗಡೆಯಾಗಿದ್ದಾರೆ. ಕಾಸರಗೋಡಲ್ಲಿ ಈವರೆಗೆ ಸೋಂಕು ಖಚಿತಗೊಂಡಿದ್ದ 167 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 11 ಮಂದಿ ಪಾಸಿಟಿವ್ ರೋಗಿಗಳಿದ್ದಾರೆ. ಜಿಲ್ಲೆಯಲ್ಲಿ ರಿಕವರಿ ರೇಟ್ ಶೇ.93.8 ಆಗಿದೆ. ಜಿಲ್ಲೆಯಲ್ಲಿ ಒಟ್ಟು 1,795 ಮಂದಿ ನಿಗಾದಲ್ಲಿದ್ದು, ಮನೆಗಳಲ್ಲಿ 1764 ಮಂದಿ ಹಾಗೂ ಆಸ್ಪತ್ರೆಗಳಲ್ಲಿ 31 ಮಂದಿ ನಿಗಾದಲ್ಲಿದ್ದಾರೆ. ಗುರುವಾರ ಹೊಸದಾಗಿ 6 ಮಂದಿಯನ್ನು ಐಸೊಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ.

    ಜಿಲ್ಲಾಧಿಕಾರಿಗೆ ನೆಗೆಟಿವ್: ಕೋವಿಡ್ ಸೋಂಕಿತ ದೃಶ್ಯ ಮಾಧ್ಯಮ ಪ್ರತಿನಿಧಿಯೊಂದಿಗೆ ಸಂಪರ್ಕ ಹೊಂದಿದ್ದ ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ಬಾಬು, ಐಜಿಗಳಾದ ವಿಜಯ್ ಸಖಾರೆ, ಅಶೋಕ್ ಯಾದವ್ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಇವರಲ್ಲಿ ಜಿಲ್ಲಾಧಿಕಾರಿ ಸಜಿತ್ ಬಾಬು ಅವರ ಮಾದರಿ ತಪಾಸಣೆ ಫಲಿತಾಂಶ ನೆಗೆಟಿವ್ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts