More

    ಕರೊನಾ ನಿಯಂತ್ರಣಕ್ಕೆ ಕಾರ್ಯಪಡೆ

    ಬೆಳಗಾವಿ: ಕರೊನಾ ಹಾಟ್‌ಸ್ಪಾಟ್ ಆಗಿರುವ ಮಹಾರಾಷ್ಟ್ರದಿಂದ ಅಧಿಕಾರಿಗಳ ಕಣ್ತಪ್ಪಿಸಿ ರಾಜ್ಯದ ಗಡಿ ಪ್ರವೇಶಿಸುತ್ತಿದ್ದವರಿಗೆ ಇನ್ಮುಂದೆ ಬ್ರೇಕ್ ಬೀಳಲಿದೆ. ವ್ಯಾಪಕವಾಗಿ ಹರಡುತ್ತಿರುವ ಕರೊನಾ ಸೋಂಕು ನಿಯಂತ್ರಣ ದೃಷ್ಟಿಯಿಂದ ಅಂತಾರಾಜ್ಯ, ಜಿಲ್ಲಾ ಪ್ರವಾಸ ಕೈಗೊಳ್ಳುವವರ, ಹೋಂ ಕ್ವಾರಂಟೈನ್‌ಗಳ ಮೇಲೆ ನಿಗಾ ಇರಿಸಲು ಪೊಲೀಸರು ‘ಹಳ್ಳಿ ಕಾರ್ಯಪಡೆ ರಚನೆ’ ಮಾಡಿ ವಿಶೇಷ ತಂತ್ರ ರೂಪಿಸಿದ್ದಾರೆ.

    ಪೊಲೀಸರ ಹದ್ದಿನ ಕಣ್ಣು: ಗಡಿಜಿಲ್ಲೆ ಬೆಳಗಾವಿಯಲ್ಲಿ ಕರೊನಾ ವೈರಸ್ ರಣಕೇಕೆ ಹಾಕುತ್ತಿದ್ದು, ಈಗಾಗಲೇ 14 ಜನರನ್ನು ಬಲಿ ಪಡೆದಿದೆ. ಕರೊನಾ ಪಾಸಿಟಿವ್ ಪ್ರಕರಣಗಳಂತೂ ವೇಗವಾಗಿ ಹೆಚ್ಚುತ್ತಿವೆ. ಅದರಲ್ಲೂ, ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಅಥಣಿ, ಚಿಕ್ಕೋಡಿ, ಕಾಗವಾಡ, ನಿಪ್ಪಾಣಿ ಮತ್ತು ಹುಕ್ಕೇರಿ ತಾಲೂಕುಗಳಲ್ಲೇ ಪ್ರಮಾಣ ಹೆಚ್ಚಿದೆ. ಹಾಗಾಗಿ, ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡ ತಾಲೂಕುಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು, ಚಿಕ್ಕೋಡಿ ಮತ್ತು ಅಥಣಿ ವಿಭಾಗದಲ್ಲಿ 40 ಚೆಕ್‌ಪೋಸ್ಟ್ ತೆರೆದಿದ್ದಾರೆ. ಅಲ್ಲದೆ, ಜಿಲ್ಲಾದ್ಯಂತ ‘ಹಳ್ಳಿ ಕಾರ್ಯಪಡೆ ರಚನೆ’ ಕೆಲಸವೂ ಸಾಗುತ್ತಿದೆ.

    40 ಚೆಕ್‌ಪೋಸ್ಟ್: ಮಹಾರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ 190 ಕಿ.ಮೀ. ಪ್ರದೇಶ ವ್ಯಾಪ್ತಿಯಲ್ಲಿ 40 ಹಳ್ಳಿಗಳಲ್ಲಿನ ಅಡ್ಡ ದಾರಿಗಳ ಮೂಲಕ ಜನರು ಅಕ್ರಮ ಪ್ರವೇಶ ಮಾಡುತ್ತಿದ್ದಾರೆ. ನಿಪ್ಪಾಣಿ ಭಾಗದಲ್ಲಿ ನದಿಯೇ ಗಡಿಯಾಗಿದ್ದರಿಂದ ಮಾರ್ಗಗಳು ಬಂದ್ ಆಗಿವೆ. ಆದರೆ, ಚಿಕ್ಕೋಡಿ, ಅಥಣಿ ಭಾಗದಲ್ಲಿ ಭೂ ಪ್ರದೇಶ ಹೊಂದಿಕೊಂಡಿದ್ದರಿಂದ ಜನರು ಅಕ್ರಮ ಪ್ರವೇಶ ಮಾಡುತ್ತಿದ್ದಾರೆ. ಅದನ್ನು ತಡೆಗಟ್ಟಲು ಮತ್ತು ಅಕ್ರಮ ಪ್ರವೇಶ ಮಾಡಿದವರನ್ನು ಪತ್ತೆ ಹೆಚ್ಚುವ ಸಲುವಾಗಿ 26 ಅಂತಾರಾಜ್ಯ ಸೇರಿ ಒಟ್ಟು 40 ಚೆಕ್‌ಪೋಸ್ಟ್ ರಚನೆ ಮಾಡಿದ್ದಾರೆ. ಪ್ರತಿ ಚೆಕ್‌ಪೋಸ್ಟ್‌ನಲ್ಲಿ ಕಂದಾಯ, ಗ್ರಾಪಂ ಹಾಗೂ ಪೊಲೀಸರು ಸೇರಿ 4 ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ದಿನದ 24 ಗಂಟೆ ಚೆಕ್‌ಪೋಸ್ಟ್‌ನಲ್ಲಿ ಸರದಿ ಆಧಾರದ ಮೇಲೆ 300ಕ್ಕೂ ಅಧಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

    ಹಳ್ಳಿ ಕಾರ್ಯಪಡೆ ಕಾರ್ಯಾಚರಣೆ, ಉದ್ದೇಶ ಏನು?

    ಮಹಾರಾಷ್ಟ್ರ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಗ್ರಾಮಗಳು ಸೇರಿ ಜಿಲ್ಲೆಯ ಇತರ ಹಳ್ಳಿಗಳಿಗೆ ಬೇರೆ ರಾಜ್ಯಗಳಿಂದ, ಮಹಾನಗರಗಳಿಂದ ಆಗಮಿಸುವವರ ಮಾಹಿತಿ ನೀಡುವುದು. ಹಳ್ಳಿಯಲ್ಲಿ ಕ್ವಾರಂಟೈನ್ ಉಲ್ಲಂಘಿಸಿ ಓಡಾಡುವವರು, ಅಕ್ರಮವಾಗಿ ವಾಸಿಸುವವರ ಮಾಹಿತಿಯನ್ನು ಸ್ಥಳೀಯ ಠಾಣೆಗೆ ನೀಡುವುದು. ಯಾರಿಗಾದರೂ ಜ್ವರ, ಕೆಮ್ಮು, ನೆಗಡಿ ಇನ್ನಿತರ ಲಕ್ಷಣಗಳು ಕಂಡು ಬಂದರೆ ತಕ್ಷಣ ಮಾಹಿತಿ ಒದಗಿಸುವುದು. ಕಾರ್ಯಪಡೆಯು ಗ್ರಾಮದ ಯುವಕರು, ಆಶಾ ಕಾರ್ಯಕರ್ತೆಯರು, ಪಿಡಿಒ, ಪೊಲೀಸರು, ಗ್ರಾಮ ಪಂಚಾಯಿತಿ ಸದಸ್ಯರು ಸೇರಿ 8 ರಿಂದ 10 ಜನರನ್ನು ಒಳಗೊಂಡಿರುತ್ತದೆ.

    ಅಕ್ರಮ ಪ್ರವೇಶ ತಡೆಗೆ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಲಾಪುರ ಜಿಲ್ಲೆಗಳ ಎಸ್‌ಪಿಗಳೊಂದಿಗೆ ಚರ್ಚಿಸಲಾಗಿದೆ. ಹಳ್ಳಿಗಳಿಗೆ ಬಂದು ಹೋಗುವ ಪ್ರತಿಯೊಬ್ಬರ ಮಾಹಿತಿ ಸಂಗ್ರಹಿಸಲು ಹಳ್ಳಿ ಕಾರ್ಯಪಡೆ ರಚನೆ ಮಾಡಲಾಗಿದೆ.
    | ಲಕ್ಷ್ಮಣ ನಿಂಬರಗಿ ಎಸ್‌ಪಿ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts