More

    ಕೋವಿಡ್ ಸೋಂಕಿತ ವೈದ್ಯರ ಸಂಖ್ಯೆ ಏರಿಕೆ

    ಮಂಗಳೂರು/ಉಡುಪಿ: ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಕೋವಿಡ್ -19 ನಿಯಂತ್ರಣಕ್ಕೆ ದಿನವೂ ಹೋರಾಟ ನಡೆಸುತ್ತಿರುವ ಜತೆಯಲ್ಲೇ ಈ ಹೋರಾಟದಲ್ಲಿ ಮುಂಚೂಣಿ ಸೈನಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಂದ ಹಿಡಿದು ಗ್ರೂಪ್ ‘ಡಿ’ ನೌಕರರ ತನಕ ಎಲ್ಲರೂ ಈ ಮಹಾಮಾರಿಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಸವಾಲನ್ನೂ ಎದುರಿಸುತ್ತಿದ್ದಾರೆ.

    ದ.ಕ. ಜಿಲ್ಲೆಯಲ್ಲಿ 8 ಹಾಗೂ ಉಡುಪಿ ಜಿಲ್ಲೆಯಲ್ಲಿ ಒಂದು ಮೆಡಿಕಲ್ ಕಾಲೇಜು ಇದ್ದು, ಉಭಯ ಜಿಲ್ಲೆಗಳಲ್ಲಿ ಸರ್ಕಾರಿ ಸಹಿತ ಹತ್ತಾರು ಆಸ್ಪತ್ರೆಗಳು ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿವೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಗೆ ಸೋಂಕು ತಗುಲುತ್ತಿರುವ ಸಂಖ್ಯೆ ಹೆಚ್ಚುತ್ತಿದ್ದು, ಆಸ್ಪತ್ರೆಗಳು ಕಡಿಮೆ ಸಿಬ್ಬಂದಿಯನ್ನು ಬಳಸಿಕೊಂಡು ಕಾರ್ಯ ನಿರ್ವಹಿಸಬೇಕಾದ ಒತ್ತಡ- ಅನಿವಾರ್ಯತೆಗೆ ಸಿಲುಕಿವೆ.
    ಆಸ್ಪತ್ರೆ/ಮೆಡಿಕಲ್ ಕಾಲೇಜುಗಳಲ್ಲಿ ಪಿಜಿ ವೈದ್ಯರು, ಯುಜಿ ಇಂಟರ್ನ್‌ಗಳು, ದಾದಿಯರು ದೊಡ್ಡ ಪ್ರಮಾಣದಲ್ಲಿ ಕರೊನಾ ಪಾಸಿಟಿವ್ ಆಗಿದ್ದಾರೆ. ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ 70 ಪಿಜಿ ವೈದ್ಯರು, ಯುಜಿ ಇಂಟರ್ನ್‌ಗಳು, ಯೇನೆಪೊಯ ಕಾಲೇಜಿನಲ್ಲಿ 125 ಮಂದಿ ವೈದ್ಯಕೀಯ ಸಿಬ್ಬಂದಿ ಪಾಸಿಟಿವ್ ಆಗಿದ್ದಾರೆ. ದಕ್ಷಿಣ ಕನ್ನಡದ ಸರ್ಕಾರಿ ಆಸ್ಪತ್ರೆಗಳಲ್ಲಿ ಕಳೆದ 21 ದಿನಗಳ ಹಿಂದಿನ ತನಕ 155 ಮಂದಿ ಸಿಬ್ಬಂದಿ ಸೋಂಕಿಗೆ ಒಳಗಾಗಿದ್ದಾರೆ.

    ಉಡುಪಿಯಲ್ಲಿ 85 ವೈದ್ಯರಿಗೆ ಪಾಸಿಟಿವ್
    ಉಡುಪಿ ಜಿಲ್ಲೆಯಲ್ಲಿ ಮಾರ್ಚ್‌ನಿಂದ ಸೆಪ್ಟೆಂಬರ್‌ವರೆಗೆ 85ಕ್ಕೂ ಅಧಿಕ ವೈದ್ಯರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಮಣಿಪಾಲ ಕೆಎಂಸಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 75 ಸ್ನಾತಕೋತ್ತರ ವೈದ್ಯರಿಗೆ ಕೋವಿಡ್ ಸೋಂಕು ತಗುಲಿದ್ದು, ಇದರಲ್ಲಿ ಶೇ.98ರಷ್ಟು ಮಂದಿ ಲಕ್ಷಣ ರಹಿತ ರೋಗಿಗಳಾಗಿದ್ದರು. ಐಸಿಎಂಆರ್ ಮಾರ್ಗಸೂಚಿ ಪ್ರಕಾರ ಕೋವಿಡ್ ರೋಗಿಗಳ ಪ್ರಾಥಮಿಕ ಸಂಪರ್ಕ ಹೊಂದಿರುವವರನ್ನು ತಪಾಸಣೆಗೆ ಒಳಪಡಿಸುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡುವಾಗ ವೈದ್ಯರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಕಳೆದ 1 ತಿಂಗಳಿಂದ ಇಂಥ ಪ್ರಕರಣ ದಾಖಲಾಗಿಲ್ಲ. ನಗರದ ಆದರ್ಶ ಆಸ್ಪತ್ರೆಯಲ್ಲಿ 8 ವೈದ್ಯರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಎಲ್ಲರೂ ರೋಗ ಲಕ್ಷಣ ಹೊಂದಿದ್ದರು. ಇತ್ತೀಚೆಗೆ ಕಡಿಮೆಯಾಗಿದೆ. ಶೇ.10ರಷ್ಟು ಸಿಬ್ಬಂದಿಗೂ ಕೋವಿಡ್ ತಗುಲಿತ್ತು. ಜಿಲ್ಲಾಸ್ಪತ್ರೆಯ ಮೂವರು ವೈದ್ಯರಿಗೆ ಹೊರ ಜಿಲ್ಲೆಯಿಂದ ಬಂದ ರೋಗಿಯಿಂದ ಸೋಂಕು ಹರಡಿದ್ದು, ಎಲ್ಲರೂ ರೋಗ ಲಕ್ಷಣ ಹೊಂದಿದ್ದರು. ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನೀಶಿಯನ್, ಆಯಾಗಳ ಸಹಿತ 21 ಸಿಬ್ಬಂದಿ ಕೋವಿಡ್ ಬಾಧೆಗೆ ಒಳಗಾಗಿದ್ದರು. ಪ್ರಸ್ತುತ ವೈದ್ಯರಲ್ಲಿ ಸೋಂಕು ಹರಡುವಿಕೆ ಕಡಿಮೆಯಾಗಿದೆ ಎನ್ನುತ್ತಾರೆ ಜಿಲ್ಲಾ ಸರ್ಜನ್ ಡಾ. ಮಧುಸೂದನ ನಾಯಕ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts