More

    ವಿಟ್ಲ ಆರೋಗ್ಯ ಕೇಂದ್ರ ದುಸ್ಥಿತಿ, ಕಾನೂನು ಪ್ರಾಧಿಕಾರಕ್ಕೆ ದೂರು

    ವಿಟ್ಲ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ದುಸ್ಥಿತಿ ವಿಚಾರವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ದೂರು ದಾಖಲಾಗಿದ್ದು, ಪ್ರಕರಣವನ್ನು ಪರಿಶೀಲಿಸುವಂತೆ ಬಂಟ್ವಾಳ ತಾಲೂಕು ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ.

    ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರು ಸೇರಿ ವಿವಿಧ ವಿಭಾಗಕ್ಕೆ ತಜ್ಞರ ಅಗತ್ಯವಿದೆ. ಜತೆಗೆ ವಿದ್ಯುತ್ ಕೈಕೊಟ್ಟರೆ ಜನರೇಟರ್ ವ್ಯವಸ್ಥೆಯಿಲ್ಲದೆ ಉಪಕರಣಗಳೆಲ್ಲವೂ ಸ್ತಬ್ಧವಾಗುತ್ತದೆ. ‘ವಿಜಯವಾಣಿ’ ವಿಟ್ಲ ಆರೋಗ್ಯ ಕೇಂದ್ರ ಕೋಮಾದಲ್ಲಿದೆ’ ಎಂಬ ವರದಿ ಮಾಡಿ, ಪ್ರತಿ ಹಂತದಲ್ಲಿ ಅಧಿಕಾರಿ ವರ್ಗವನ್ನು ಎಚ್ಚರಿಸಿತ್ತು.

    ಪುಣಚ ನಾಗರಿಕ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ವೆಂಕಟ್ರಮಣ ಪುಣಚ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದರು. ಸ್ಥಳೀಯ ಶಾಸಕ ಸಂಜೀವ ಮಠಂದೂರು ಅವರಿಗೆ ಪತ್ರ ಮೂಲಕ ಬೇಡಿಕೆ ಸಲ್ಲಿಸಿದ್ದರು. ಹಲವು ಭಾರಿ ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಭರವಸೆಯ ಹೊರತಾಗಿ ಯಾವುದೇ ಕೆಲಸ ಕಾರ್ಯವೂ ನಡೆದಿಲ್ಲ.

    ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಪ್ರಕರಣ ಬಂಟ್ವಾಳದ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಲ್ಲಿಗೆ ವರ್ಗಾಯಿಸಿದೆ. ಅರ್ಜಿಯನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಂಡು ಅನುಪಾಲನಾ ವರದಿಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನೀಡುವಂತೆ ಸೂಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts