More

    ಕರೊನಾ, ಹಕ್ಕಿಜ್ವರ ಭಯ, ನೆಲಕಚ್ಚಿದ ಕುಕ್ಕುಟೋದ್ಯಮ

    ಪುತ್ತೂರು/ಸುಳ್ಯ: ಕರೊನಾ ವೈರಸ್ ಜಗತ್ತನ್ನೇ ಹೆದರಿಸಿದೆ, ಈ ನಡುವೆ ಹಕ್ಕಿಜ್ವರ ಆತಂಕವೂ ಕಾಣಿಸಿಕೊಂಡಿದೆ. ಇವೆರಡರಿಂದಾಗಿ ಜನ ಭಯಗೊಂಡಿದ್ದು, ನೇರ ಪರಿಣಾಮ ಕುಕ್ಕುಟೋದ್ಯಮದ ಮೇಲಾಗಿದೆ. ಎರಡು ವಾರ ಹಿಂದೆ 140 ರೂಪಾಯಿ ಇದ್ದ ಕೋಳಿ ಮಾಂಸ ದರ ಕೆಲವೆಡೆ ಏಕಾಏಕಿ 20 ರೂ.ಗೆ ಕುಸಿದಿದೆ.
    ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದುವರೆಗೆ ಕರೊನಾ ವೈರಸ್ ಅಥವಾ ಹಕ್ಕಿಜ್ವರ ಎಲ್ಲೂ ಪತ್ತೆಯಾಗಿಲ್ಲ. ಆದರೂ ಜನತೆ ಆತಂಕಕ್ಕೀಡಾಗಿದ್ದು, ಕೋಳಿ ಸಾಕಣಿಕೆಯನ್ನೇ ನಂಬಿಕೊಂಡಿರುವ ನೂರಾರು ಮಂದಿ ಅತಂತ್ರರಾಗಿದ್ದಾರೆ.

    ದಿಢೀರ್ ಕುಸಿತ: ಮಂಗಳೂರಿನಲ್ಲಿ ಬ್ರಾಯ್ಲರ್ ಕೋಳಿ ದರ ಕೆ.ಜಿ. ವಿತ್ ಸ್ಕಿನ್ 160 ರೂ.ನಿಂದ 100 ರೂ., ವಿದೌಟ್ ಸ್ಕಿನ್ 180 ರೂ.ನಿಂದ 120 ರೂ.ಗೆ ಇಳಿಕೆಯಾಗಿದೆ. ಟೈಸನ್ 160 ರೂ.ನಿಂದ 100ಕ್ಕೆ ಕುಸಿದಿದೆ. ಜನ ಕೋಳಿ ಮಾಂಸ ಸೇವನೆಗೆ ಹಿಂಜರಿಯುತ್ತಿದ್ದಾರೆ ಎಂದು ವ್ಯಾಪಾರಿ ಯಶೋಧರ ಕರ್ಕೇರ ಹೇಳುತ್ತಾರೆ.
    ಕೇರಳ ಕರ್ನಾಟಕ ಗಡಿಪ್ರದೇಶವಾದ ಪುತ್ತೂರು ತಾಲೂಕಿನ ಈಶ್ವರಮಂಗಲ ಭಾಗದಲ್ಲಿ 20-30 ರೂ, ಸುಳ್ಯದಲ್ಲಿ 30ರಿಂದ 40 ರೂ.ಗೆ ಬ್ರಾಯ್ಲರ್ ಕೋಳಿ ಮಾಂಸ ಸಿಗುತ್ತಿದೆ. ಪುತ್ತೂರು 40ರಿಂದ 55 ರೂ, ಬೆಳ್ತಂಗಡಿ 45ರಿಂದ 80, ಉಡುಪಿಯಲ್ಲಿ 40ರಿಂದ 60, ಕುಂದಾಪುರ 40, ಮೂಲ್ಕಿ 60, ಕಡಬ, ಪಡುಬಿದ್ರಿ 50, ಮೂಡುಬಿದಿರೆ 35ರಿಂದ 70, ಉಳ್ಳಾಲ 35ರಿಂದ 40, ಸುರತ್ಕಲ್ 60.. ಹೀಗೆ ಸಾಗುತ್ತದೆ ಪ್ರತಿ ಕಿಲೋ ಬ್ರಾಯ್ಲರ್ ಕೋಳಿ ಮಾಂಸದ ಧಾರಣೆ.

    ಯಾರಿಗೆ ನಷ್ಟ?: ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡು ಕೋಳಿ ಸಾಕಾಣಿಕಾ ವೃತ್ತಿ ಮಾಡುತ್ತಿದ್ದು, ಇದು ಕೃಷಿ ಪೂರಕ ಚಟುವಟಿಕೆಯಾಗಿದೆ. ಈಗ ಕಂಪನಿಗಳು ರೈತರಿಗೆ ಕೋಳಿ ಮರಿಗಳನ್ನು ನೀಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಳಿ ಮಾಂಸಕ್ಕೆ ಮಾರುಕಟ್ಟೆಯೇ ಇಲ್ಲದಂತಹ ಸ್ಥಿತಿಯಿಂದ ಕಂಪನಿ ಮಾಲೀಕರು ಹತಾಶರಾಗಿದ್ದಾರೆ. ದಿನವೊಂದಕ್ಕೆ ಟನ್‌ಗಟ್ಟಲೆ ಕೋಳಿ ವ್ಯಾಪಾರ ನಡೆಸುವ ಇಂತಹ ಕಂಪನಿಗಳ ಸ್ಥಿತಿ ಹದೆಗೆಟ್ಟ ಪರಿಣಾಮ ಕೋಳಿ ಸಾಕಾಣಿಕೆದಾರರ ಮೇಲೂ ಬಿದ್ದಿದೆ. ಕೋಳಿ ಸಾಕಾಣಿಕೆಯೇ ಬಂದ್ ಆಗುವ ಪರಿಸ್ಥಿತಿ ಕಂಡುಬರುತ್ತಿದೆ. ಉಪಕಸುಬಾಗಿ ಇದನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡ ನೂರಾರು ಕುಟುಂಬಗಳು ಬೀದಿಗೆ ಬೀಳುವ ಆತಂಕವೂ ಇದೆ.
    ‘ಬಹುತೇಕ ಬ್ರಾಯ್ಲರ್ ಕೋಳಿಗಳ ಜೀವಿತಾವಧಿ 48ರಿಂದ 55 ದಿನ. 5-6ನೇ ವಾರದಲ್ಲಿ ಕೋಳಿ ಮಾರುಕಟ್ಟೆಗೆ ಸಾಗಿಸಲಾಗುತ್ತದೆ. 7 ವಾರಗಳ ನಂತರ ಈ ಕೋಳಿಗಳ ಬೆಳವಣಿಗೆ ಆಗುವುದಿಲ್ಲ. ಸೂಕ್ತ ಆಹಾರ, ವಾತಾವರಣ ಇದ್ದರೆ ಮಾತ್ರ ಬದುಕುತ್ತವೆ. ಬಹುತೇಕ ಹೃದಯಾಘಾತದಿಂದ ಸಾಯುತ್ತವೆ’ ಎಂದು ಕೋಳಿ ಫಾರ್ಮ್ ನಿರ್ವಾಹಕ ಮನೋಜ್ ಶೆಟ್ಟಿ ಪುತ್ತೂರು ಹೇಳುತ್ತಾರೆ.
    ಈಗ ದರ ಕಡಿತ ಮತ್ತು ಮಾರುಕಟ್ಟೆಯ ಹೊಡೆತದಿಂದ ಕೆಲವೆಡೆ ಕೋಳಿ ಸಾಕಣೆ ಕೇಂದ್ರಗಳಲ್ಲಿ ಉತ್ಪಾದನೆ ನಿಲ್ಲಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಕೋಳಿಯ ಲಭ್ಯತೆ ಕಡಿಮೆಯಾಗಿ ದರ ಮತ್ತೆ ಏರಬಹುದು ಎಂದು ಹೇಳಲಾಗುತ್ತಿದೆ.

    ಮಟನ್, ಮೀನು ದುಬಾರಿ: ಕೋಳಿ ಮಾಂಸ ಸೇವನೆಯಿಂದ ಕರೊನಾ ಬರುವುದಿಲ್ಲ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದ್ದರೂ, ಸಾರ್ವಜನಿಕರು ಕೋಳಿ ಮಾಂಸ ಸೇವನೆಯಿಂದ ದೂರ ಉಳಿದಿದ್ದಾರೆ. ಇದರ ಬದಲಾಗಿ ಮೀನು, ಮಟನ್ ದರದಲ್ಲಿ ಏರಿಕೆಯಾಗಿದೆ. ಮಟನ್ ದರ 400 ರೂ.ನಿಂದ 500ಕ್ಕೆ ಏರಿದೆ. ಬಂಗುಡೆ, ಅಂಜಲ್, ಮಾಂಜಿ ದರವೂ ದುಪ್ಪಟ್ಟಾಗಿದೆ. ಮೀನು ಲಭ್ಯತೆಯ ಕೊರತೆಯೂ ಇದಕ್ಕೆ ಕಾರಣ.

    ಕರೊನಾ ವೈರಸ್ ಭೀತಿ ಮತ್ತು ಕೇರಳದಲ್ಲಿ ಹರಡಿರುವ ಹಕ್ಕಿಜ್ವರದ ಹಿನ್ನಲೆಯಲ್ಲಿ ಕೋಳಿ ಉದ್ಯಮ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಕೇರಳ ಗಡಿಭಾಗದ ಪ್ರದೇಶದಲ್ಲಿ ವಿಶೇಷ ನಿಗಾ ವಹಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಮಾಹಿತಿ ಪಡೆದುಕೊಂಡು ಮುಂದಿನ ಕ್ರಮಕೈಗೊಳ್ಳಲಾಗುವುದು.
    – ಡಾ.ಯತೀಶ್ ಉಳ್ಳಾಲ್, ಪುತ್ತೂರು ಉಪವಿಭಾಗಾಧಿಕಾರಿ

    ಕ್ಯಾಲಿಕಟ್‌ನಲ್ಲಿ ಹಕ್ಕಿಜ್ವರ ಪತ್ತೆಯಾಗಿರುವುದನ್ನು ಕೇರಳ ಸರ್ಕಾರ ದೃಢಪಡಿಸಿತ್ತು. ಇದರಿಂದ ಕೇರಳದ ಕುಕ್ಕುಟೋದ್ಯಮದಲ್ಲಿ ಒಂದು ರೀತಿಯ ಭಯ ಆವರಿಸಿತ್ತು. ಆದರೆ ದ.ಕ. ಜಿಲ್ಲೆಯಲ್ಲಿ ಹಕ್ಕಿಜ್ವರ ಪತ್ತೆಯಾಗಿಲ್ಲ. ಕರೊನಾ ಕೂಡ ಪತ್ತೆಯಾಗಿಲ್ಲ. ಆದರೆ ಜನರು ಭಯದಿಂದ ಕೋಳಿ ಮಾಂಸ ಖರೀದಿ ಮಾಡುತ್ತಿಲ್ಲ.
    – ಜಯರಾಜ್, ಉಪನಿರ್ದೇಶಕ, ಪಶುಸಂಗೋಪನಾ ಇಲಾಖೆ, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts