More

    ಕರೊನಾ ಸೇನಾನಿಗಳ ಸೇವೆಗೆ ಬೆಲೆಕಟ್ಟಲಾಗದು: ಕೆಎಚ್‌ಪಿ ಫೌಂಡೇಷನ್ ಅಧ್ಯಕ್ಷ ಕೆ.ಎಚ್.ಪುಟ್ಟಸ್ವಾಮಿಗೌಡ

    ಗೌರಿಬಿದನೂರು : ಕರೊನಾ ಸಂಕಷ್ಟದ ಸಮಯದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ
    ಕರೊನಾ ಸೇನಾನಿಗಳ ಸೇವೆಗೆ ಬೆಲೆಕಟ್ಟಲಾಗದು ಎಂದು ಕೆಎಚ್‌ಪಿ ಫೌಂಡೇಷನ್ ಅಧ್ಯಕ್ಷ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು.
    ಕರೊನಾ ಸೋಂಕಿಗೆ ಬಲಿಯಾದವರ ಅಂತ್ಯ ಸಂಸ್ಕಾರ ನೆರವೇರಿಸಿದ ಕರೊನಾ ಸೇನಾನಿಗಳಿಗೆ ತಾಲೂಕಿನ ಅಲಕಾಪುರ ಸೋಲಾರ್ ಘಟಕದ ಬಳಿ ಫೌಂಡೇಷನ್‌ನಿಂದ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸೋಂಕು ಜಗತ್ತನ್ನೇ ಅಲುಗಾಡಿಸುತ್ತಿದೆ. ಮೊದಲ ಅಲೆಗಿಂತ ಎರಡನೇ ಅಲೆ ಎಲ್ಲರನ್ನೂ ಕಂಗೆಡಿಸಿತ್ತು. ಅನೇಕ ಮಂದಿ ಸೋಂಕಿನಿಂದ ಮೃತಪಟ್ಟಾಗ ಅವರ ರಕ್ತ ಸಂಬಂಧಿಗಳೇ ಅಂತ್ಯ ಸಂಸ್ಕಾರ ನೆರವೇರಿಸಲು ಹಿಂದೇಟು ಹಾಕಿದರು. ಆದರೆ ನಮ್ಮ ಸಂಸ್ಥೆಯಿಂದ ನೇಮಿಸಿದ್ದ ಸೇನಾನಿಗಳು ಯಾವುದಕ್ಕೂ ಅಂಜದೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಅವರ ಮಾನವೀಯ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದರು.

    ಎಲ್ಲ ಧರ್ಮಗಳು ಶಾಂತಿ ಸಹಬಾಳ್ವೆಯನ್ನೇ ಬಯಸುತ್ತವೆ. ಕ್ಷೇತ್ರದಲ್ಲಿ ಮುಸ್ಲೀಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಿಂದುಗಳೊಂದಿಗೆ ಅನ್ಯೋನ್ಯ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಸೂಪಿ ಸಂತರು ಹಾಕಿಕೊಟ್ಟಿರುವ ಅಡಿಪಾಯವೇ ಇದಕ್ಕೆ ಕಾರಣ. ಮನುಷ್ಯ ಮಾನವೀಯ ಸಂಬಂಧಗಳಿಗೆ ಬೆಲೆ ಕೊಡಬೇಕು. ಆಗ ಮಾತ್ರ ಸಮಾಜದಲ್ಲಿ ಎಲ್ಲರೂ ಸಹಬಾಳ್ವೆ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

    ಜಿಪಂ ಮಾಜಿ ಅಧ್ಯಕ್ಷ ಎಚ್.ವಿ. ಮಂಜುನಾಥ ಸ್ವಾಮಿ ಮಾತನಾಡಿ, ಪುಟ್ಟಸ್ವಾಮಿ ಗೌಡರು ಕರೊನಾ ಸಂಕಷ್ಟದ ಸಂದರ್ಭದಲ್ಲಿ ತಾಲೂಕಿನಲ್ಲಿ ಜನತೆಗೆ ಆಕ್ಸಿಜನ್ ಸಿಲಿಂಡರ್, ರೋಗನಿರೋಧಕ ಔಷಧಿ ಕಿಟ್ ಸೇರಿ ವಿವಿಧ ರೀತಿಯ ನೆರವು ಒದಗಿಸಿದ್ದು ಅವರ ಸೇವೆ ಶ್ಲಾಘನೀಯ ಎಂದು ಹೇಳಿದರು.

    ನಗರಸಭೆ ಮಾಜಿ ಅಧ್ಯಕ್ಷ ಎಂ. ನರಸಿಂಹಮೂರ್ತಿ ಮಾತನಾಡಿ, ಸೋಂಕು ಇನ್ನೂ ಸಂಪೂರ್ಣ ನಿರ್ಮೂಲನೆಗೊಂಡಿಲ್ಲ. ಆದ್ದರಿಂದ ಜನ ಎಚ್ಚರಿಕೆ ವಹಿಸಬೇಕು. ಪುಟ್ಟಸ್ವಾಮಿ ಗೌಡರ ಫೌಂಡೇಷನ್‌ನಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪೌಡರ್ ಹಾಗೂ ಸೋಂಕು ನಿಯಂತ್ರಿಸುವ ಔಷಧಿಯ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ತಾಲೂಕಿನ ಜನತೆ ಇದರ ಪ್ರಯೋಜನ ಪಡೆದುಕೊಂಡು ಸೋಂಕು ಮುಕ್ತರಾಗಬೇಕು ಎಂದರು.

    19 ಮಂದಿ ಕರೊನಾ ಸೇನಾನಿಗಳಿಗೆ ಬಟ್ಟೆ, ನೆನಪಿನ ಕಾಣಿಕೆ ಜತೆಗೆ ನಗದು ನೀಡಿ ಪುರಸ್ಕರಿಸಲಾಯಿತು. ಜಿಪಂ ಮಾಜಿ ಉಪಾಧ್ಯಕ್ಷ ಪಿ.ವಿ. ರಾಘವೇಂದ್ರ ಹನುಮಾನ್,ಮುಖಂಡ ಅಬ್ದುಲ್ಲಾ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts