More

    ಕೈ ವಿರೋಧಿ ಬಣದ ತೆಕ್ಕೆಗೆ ನಗರಸಭೆ, ಅಧಿಕಾರ ಕಳೆದುಕೊಂಡ ಕಾಂಗ್ರೆಸ್

    ಗೌರಿಬಿದನೂರು:  ತೀವ್ರ ಕುತೂಹಲ ಮೂಡಿಸಿದ್ದ ನಗರಸಭೆ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪುಟ್ಟಸ್ವಾಮಿಗೌಡ ಬಣದ ಅಭ್ಯರ್ಥಿ ರೂಪಾ ಅನಂತರಾಜು ಅಧ್ಯಕ್ಷೆಯಾಗಿದ್ದು, ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ.

    ಈ ಹಿಂದಿನ ಅಧ್ಯಕ್ಷೆ ಗಾಯತ್ರಿ ಬಸವರಾಜ್ ಕಾಂಗ್ರೆಸ್‌ನ ಆಂತರಿಕ ಒಪ್ಪಂದದಂತೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ರಾಜೇಶ್ವರಿ ಮೈಲಾರಿ ಹಾಗೂ ಜೆಡಿಎಸ್, ಬಿಜೆಪಿ ಬೆಂಬಲದೊಂದಿಗೆ ಪುಟ್ಟಸ್ವಾಮಿಗೌಡ ಬಣದ ಅಭ್ಯರ್ಥಿಯಾಗಿ ರೂಪಾ ಅನಂತರಾಜು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.

    ಬಳಿಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೇಶ್ವರಿ ಮೈಲಾರಿ ಪರವಾಗಿ 16 ಮಂದಿ, ಕೆಎಚ್‌ಪಿ ಬಣದ ಬೆಂಬಲಿತ ಅಭ್ಯರ್ಥಿ ರೂಪಾ ಅನಂತರಾಜು ಪರವಾಗಿ 17 ಮಂದಿ ಕೈಯೆತ್ತುವ ಮೂಲಕ ಬೆಂಬಲ ಸೂಚಿಸಿದರು. ಶಾಸಕ ಶಿವಶಂಕರ್‌ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತದಾನ ಮಾಡಿದರೆ. ಸಂಸದ ಬಿ.ಎನ್.ಬಚ್ಚೇಗೌಡ ಪುಟ್ಟಸ್ವಾಮಿಗೌಡ ಬಣದ ಬೆಂಬಲಿತ ಅಭ್ಯರ್ಥಿ ಪರವಾಗಿ ಮತದಾನ ಮಾಡಿದರು. ಅತಿ ಹೆಚ್ಚು ಸದಸ್ಯರ ಬೆಂಬಲ ಪಡೆದ ರೂಪಾ ಅನಂತರಾಜು ಅವರನ್ನು ಅಧ್ಯಕ್ಷರನ್ನಾಗಿ ಚುನಾವಣಾಧಿಕಾರಿ ಗಣಪತಿ ಶಾಸ್ತ್ರಿ ಘೋಷಣೆ ಮಾಡಿದರು.

    ಕೈ ವಿರೋಧಿ ಬಣಕ್ಕೆ ವರದಾನ: 31 ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ಎರಡೂ ಕಡೆ 15 ಸಮಬಲದ ಮತ ಹೊಂದಲಾಗಿತ್ತು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 10ನೇ ವಾರ್ಡ್‌ನಿಂದ ಆಯ್ಕೆಯಾಗಿದ್ದ ಸರ್ದಾರ್ ಅಖ್ತರ್‌ಗೆ ಮತದಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದು, ಕೈ ವಿರೋಧಿ ಬಣಕ್ಕೆ ವರವಾಯಿತು.

    ನೂತನ ಅಧ್ಯಕ್ಷರ ಆಯ್ಕೆ ಬಳಿಕ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಜೆಡಿಎಸ್ ಮುಖಂಡರಾದ ಸಿ.ಆರ್.ನರಸಿಂಹಮೂರ್ತಿ, ಆರ್. ಅಶೋಕ್ ಕುಮಾರ್, ಮುಖಂಡರಾದ ಬಿ.ಜಿ.ವೇಣುಗೋಪಾಲರೆಡ್ಡಿ, ಗೋಪಾಲಗೌಡ, ಎಂ.ನರಸಿಂಹಮೂರ್ತಿ, ಜಿ.ಕೆ.ಸತೀಶ್ ಕುಮಾರ್, ಅಬ್ದುಲ್ಲಾ, ಅಲ್ತ್ಾ, ಲಕ್ಷ್ಮಣರಾವ್, ಎಲ್.ಸತೀಶ್,ವೇಣುಗೋಪಾಲ್ ಸೇರಿ ನೂರಾರು ಕಾರ್ಯಕರ್ತರು ಇದ್ದರು.

     

    ಇತಿಹಾಸ ಸೃಷ್ಠಿ: ಪುರಸಭೆ ನಗರಸಭೆಯಾದ ಬಳಿಕ ಕಾಂಗ್ರೆಸ್ ಪಾರುಪತ್ಯ ಸಾಧಿಸಿಕೊಂಡು ಬಂದಿತ್ತು. ನಗರಸಭೆಯಲ್ಲಿ ಯಾವುದೇ ಕಾರಣಕ್ಕೂ ಹಿಡಿತ ಬಿಟ್ಟುಕೊಡಬಾರದು ಎಂದು ಕಾಂಗ್ರೆಸ್ ಕೊನೇ ಗಳಿಗೆ ಹೊರಗೆ ಪ್ರಯತ್ನ ನಡೆಸಿತು. ಆದರೆ ಯಾವುದೇ ತಂತ್ರಗಾರಿಕೆ ಫಲ ನೀಡದೆ ದಶಕಗಳಿಂದ ಹಿಡಿತ ಸಾಧಿಸಿಕೊಂಡು ಬಂದಿದ್ದ ಅಧಿಕಾರವನ್ನು ಕಳೆದುಕೊಳ್ಳುವಂತಾಯಿತು. ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ಕೈ ವಿರೋಧಿ ಬಣ ನಗರಸಭೆಯಲ್ಲಿ ಇತಿಹಾಸ ಬರೆಯಿತು.

     

    ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಉತ್ತಮ ಆಡಳಿತ ನಡೆಸುತ್ತೇವೆ. ನಗರದ ಜನರಿಗೆ ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡುತ್ತೇವೆ. ಆಡಳಿತಾತ್ಮಕ ಕೆಲಸಗಳು ತ್ವರಿತಗತಿಯಲ್ಲಿ ನಡೆಯಲು ಕ್ರಮ ಜರುಗಿಸುತ್ತೇವೆ. ಅಧಿಕಾರಿಗಳು ಸಹಕರಿಸಬೇಕು.
    ರೂಪಾ ಅನಂತರಾಜು, ನೂತನ ಅಧ್ಯಕ್ಷೆ

     

    ಮೈಲಾರಿಗೆ ಕೈಕೊಟ್ಟ ಅದೃಷ್ಟ: ಎಂಬಿಎ ಪದವೀಧರರಾದ ಕಾಂಗ್ರೆಸ್ ಸದಸ್ಯೆ ರಾಜೇಶ್ವರಿ ಮೈಲಾರಿಗೆ ಈ ಬಾರಿ ನಗರಸಭೆಯ ಅಧ್ಯಕ್ಷ ಸ್ಥಾನ ಕಲ್ಪಿಸಿಕೊಡುವ ಭರವಸೆ ನೀಡಿತ್ತು. ನಗರಸಭೆಯಲ್ಲಿ ಕಾಂಗ್ರೆಸ್ ಬಹುಮತವಿದ್ದ ಕಾರಣ ಅವರಿಗೆ ಅಧ್ಯಕ್ಷ ಸ್ಥಾನ ದೊರೆಯುವುದು ಖಚಿತವಾಗಿತ್ತು. ಆದರೆ 10ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ನಿಧನರಾಗಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲುಂಡು ಪುಟ್ಟಸ್ವಾಮಿ ಗೌಡರ ಬಣದ ಅಭ್ಯರ್ಥಿ ಗೆಲುವು ಸಾಧಿಸಿದರು. ಕಾಂಗ್ರೆಸ್ ಮತ ಕುಸಿತಗೊಂಡ ಕಾರಣ ರಾಜೇಶ್ವರಿ ಮೈಲಾರಿಗೆ ಅದೃಷ್ಟ ಕೈಕೊಟ್ಟಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts