More

    ಸಂಕ್ರಾಂತಿಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಭೂಮಿಪೂಜೆ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭರವಸೆ

    ಗೌರಿಬಿದನೂರು: ಬರುವ ಸಂಕ್ರಾಂತಿ ಹಬ್ಬದ ವೇಳೆಗೆ ಗೌರಿಬಿದನೂರಿನಲ್ಲಿ 25 ಕೋಟಿ ರೂ.ವೆಚ್ಚದ ಸಾರ್ವಜನಿಕ ಆಸ್ಪತ್ರೆ ನಿರ್ಮಿಸಲು ಭೂಮಿಪೂಜೆ ನೆರವೇರಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

    ಕರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಹಾಗೂ ಅತಿವೃಷ್ಟಿಯಿಂದ ನಷ್ಟಕ್ಕೊಳಗಾದ ರೈತರಿಗೆ ಶನಿವಾರ ನಗರದ ಡಾ.ಎಚ್.ಎನ್.ಕಲಾಭವನದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚೆಕ್ ವಿತರಿಸಿ ಮಾತನಾಡಿದರು.

    ಗೌರಿಬಿದನೂರು ಹಾಗೂ ಮಂಚೇನಹಳ್ಳಿ ಎರಡೂ ಕಡೆ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸಚಿವ ಸಂಪುಟದ ಸಹೋದ್ಯೋಗಿಗಳು ಆಕ್ಷೇಪ ವ್ಯಕ್ತಪಡಿಸಿ ಇರುವ ಎಲ್ಲ ಅನುದಾನವನ್ನು ನೀವೇ ತೆಗೆದುಕೊಂಡು ಹೋದರೆ ಹೇಗೆ? ಎಂದು ಪ್ರಶ್ನಿಸಿದ್ದರು. ನಾವು ದೀಪದ ಕೆಳಗಿನ ಕತ್ತಲೆಯಲ್ಲಿ ಬದುಕುತ್ತಿದ್ದೇವೆ ಎಂಬ ವಾಸ್ತವ ತಿಳಿಸಿ ಒತ್ತಡ ಹೇರಿದ್ದರಿಂದ ಮೊದಲ ಹಂತದಲ್ಲಿ ಗೌರಿಬಿದನೂರು ಆಸ್ಪತ್ರೆ ನಿರ್ಮಾಣಕ್ಕೆ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ. ಮುಂದಿನ ಬಜೆಟ್‌ನಲ್ಲಿ ಮಂಚೇನಹಳ್ಳಿ ಆಸ್ಪತ್ರೆ ನಿರ್ಮಾಣಕ್ಕೆ ಒತ್ತು ನೀಡುವುದಾಗಿ ಭರವಸೆಯಿತ್ತರು.

    15 ದಿನದಲ್ಲಿ ಪರಿಹಾರ: ಜಿಲ್ಲೆ 15 ವರ್ಷಗಳಿಂದ ಬರಗಾಲ ಅನುಭವಿಸಿತ್ತು. ಒಂದು ಕೆರೆಗೂ ನೀರು ಬಂದಿರಲಿಲ್ಲ. ಆದರೆ ಈ ವರ್ಷ ಬಹುತೇಕ ಎಲ್ಲ ಕೆರೆಗಳು ಕೋಡಿ ಹರಿದಿದೆ ಎಂದು ಸಂತಸ ವ್ಯಕ್ತಪಡಿಸಿದ ಸಚಿವರು, ಈ ಹಿಂದೆ ಅತಿವೃಷ್ಠಿ ಅಥವಾರ ಅನಾವೃಷ್ಠಿಯಾದರೆ ಪರಿಹಾರ ವಿತರಣೆಗೆ ತಿಂಗಳುಗಳೇ ಕಳೆಯುತ್ತಿದ್ದವು, ಆದರೆ ನಮ್ಮ ಸರ್ಕಾರ ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಪರಿಹಾರ ವಿತರಿಸುವ ವ್ಯವಸ್ಥೆ ಮಾಡಿದೆ ಎಂದರು.

    1.50 ಲಕ್ಷ ರೂ. ಪರಿಹಾರ: ತಾಲೂಕಿನಲ್ಲಿ 439 ಮನೆಗಳು ಹಾನಿಗೊಳಗಾಗಿವೆ. 13,230 ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಬೆಳೆಗಳು, 865 ಹೆಕ್ಟೇರ್ ತೋಟಗಾರಿಕೆ ಬೆಳೆಗಳು, 9.3 ಹೆ. ರೇಷ್ಮೆ ಬೆಳೆ ಸೇರಿದಂತೆ ಒಟ್ಟು 19,068 ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರದ ಹಣವನ್ನು ಜಮಾ ಮಾಡಲಾಗುತ್ತಿದೆ, ಹಾಗೆಯೇ ಜಿಲ್ಲೆಯಲ್ಲಿ ಕರೊನಾದಿಂದ 341 ಹಾಗೂ ತಾಲೂಕಿನಲ್ಲಿ 48 ಮಂದಿ ಮೃತಪಟ್ಟಿದ್ದು, ಬಡತನ ರೇಖೆಗಿಂತ ಕೆಳಗಿರುವವರಿಗೆ ಕೇಂದ್ರ ಹಾಗೂ ರಾಜ್ಯ ಸೇರಿ 1.50 ಲಕ್ಷ ರೂ. ಪರಿಹಾರ ವಿತರಿಸಲಾಗುತ್ತಿದೆ ಎಂದು ಸುಧಾಕರ್ ತಿಳಿಸಿದರು.

    ತಾಲೂಕಿಗೆ ಸರ್ಕಾರಿ ಆಸ್ಪತ್ರೆ ಮಂಜೂರು ಮಾಡಿದ ಸರ್ಕಾರ ಹಾಗೂ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ಅತಿವೃಷ್ಠಿಯಿಂದ ನಷ್ಟ ಅನುಭವಿಸಿರುವ ರೈತರಿಗೆ ಪಾರದರ್ಶಕವಾಗಿ ಹಾಗೂ ಕರೊನಾ ಸಂತ್ರಸ್ತ ಕುಟುಂಬಗಳಿಗೆ ಶೀಘ್ರವೇ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.

    ನಗರಸಭೆ ಪ್ರಭಾರ ಅಧ್ಯಕ್ಷೆ ಭಾಗ್ಯಮ್ಮ, ತಹಸೀಲ್ದಾರ್ ಎಚ್.ಶ್ರೀನಿವಾಸ್, ತಾಪಂ ಇಒ ಎನ್.ಮುನಿರಾಜು, ನಗರಸಭೆ ಆಯುಕ್ತ ಸತ್ಯನಾರಾಯಣ್ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts