More

    ಅಂಬಾರಗೊಪ್ಪದಲ್ಲಿ ಮತಾಂತರ

    ಶಿಕಾರಿಪುರ: ತಾಲೂಕಿನ ಅಂಬಾರಗೊಪ್ಪದ ತಾಂಡಾದಲ್ಲಿ ಗುರುವಾರ ಸಂಜೆ ನಡೆದ ಮತಾಂತರ ಪ್ರಕರಣ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಮತಾಂತರವಾಗಲು ಒಪ್ಪದ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಒಂದು ಗುಂಪು ಹೇಳಿದರೆ, ನಾವು ಮತಾಂತರಕ್ಕೆ ಹೋಗಿಲ್ಲ, ಊಟಕ್ಕೆ ಹೋಗಿದ್ದೆವು ಎಂದು ಇನ್ನೊಂದು ಗುಂಪು ತಿಳಿಸಿದೆ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಮತಾಂತರ ಮಾಡುತ್ತಿದ್ದೇವೆ ಎಂದು ಅನಗತ್ಯವಾಗಿ ನಮ್ಮ ಮೇಲೆ ಆರೋಪ ಮಾಡಲಾಗುತ್ತಿದೆ. ಆದರೆ ನಾವು ಮತಾಂತರ ಮಾಡುವವರಲ್ಲ ಎಂದು ಶಿಕಾರಿಪುರದ ಬ್ರದರನ್ ಚರ್ಚ್ ಅಧ್ಯಕ್ಷ ಸುರೇಶ್ ಹೇಳಿದರು.
    ನಾವು ನಮ್ಮ ಆತ್ಮೀಯರಾದ ಅಂಬಾರಗೊಪ್ಪ ದ ಶಾರದಿ ಬಾಯಿ ಅವರ ಮನೆಗೆ ಗುರುವಾರ ಸಂಜೆ, ಅವರ ಆಹ್ವಾನದ ಮೇರೆಗೆ ಊಟಕ್ಕೆ ಹೋಗಿದ್ದ್ದೆವು. ನಾವು ಶಾರದಿ ಬಾಯಿ ಅವರ ಮನೆಯಲ್ಲಿ ಊಟ ಮುಗಿಸಿ ಚರ್ಚೆ ಮಾಡುತ್ತಿರುವಾಗ ಕೆಲವರು ಅವರ ಮನೆಗೆ ನುಗ್ಗಿ ನೀವು ಇಲ್ಲಿ ಬಂದು ಮತಾಂತರ ಮಾಡುತ್ತೀರಿ ಎಂದು ಆರೋಪಿಸಿ ನಮ್ಮ ಮೇಲೆ ಹಲ್ಲೆ ಮಾಡಿದರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಜತೆಗೆ ನೀವೆಲ್ಲರೂ ತಾಂಡಾಕ್ಕೆ ಬಂದು ನಮ್ಮ ಜನರ ಮನಸ್ಥಿತಿಯನ್ನು ಹಾಳು ಮಾಡುತ್ತಿದ್ದೀರಿ. ಇನ್ನೊಂದು ಸಲ ಈ ಗ್ರಾಮಕ್ಕೆ ಕಾಲಿಟ್ಟರೆ ನಿಮ್ಮ ಕಾಲು ಕಡಿಯುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ. ನಾವು ಮತಾಂತರಕ್ಕೆ ಹೋಗಿರಲಿಲ್ಲ. ನಮ್ಮ ಯೇಸು ಭಕ್ತರ ಮನೆಗೆ ಭೋಜನಕ್ಕೆ ಹೋಗಿದ್ದೆವು ಎಂದು ಹೇಳಿದರು. ಜತೆಗೆ ತಾಲೂಕು ದಂಡಾಧಿಕಾರಿಗಳು ಮಧ್ಯಪ್ರವೇಶಿಸಿ ಕಾನೂನಾತ್ಮಕವಾಗಿ ಶಾಂತಿ ಸಭೆ ಮಾಡಬೇಕೆಂದು ಶಿಕಾರಿಪುರ ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ಅವರಿಗೆ ಮನವಿ ಸಲ್ಲಿಸಿದರು.
    ಶಾರದಿಬಾಯಿ, ನಾಗಿಬಾಯಿ, ಸಂತೋಷ್ ನಾಯ್ಕ, ಶ್ರೀನಿವಾಸ್, ವಿಜಯಲಕ್ಷ್ಮೀ, ಗಿರೀಶ್, ಮೃತ್ಯುಂಜಯ ಇತರರಿದ್ದರು.
    ಮತಾಂತರಗೊಂಡ ಕೆಲವರು ಅಂಬಾರಗೊಪ್ಪ ಲಂಬಾಣಿ ತಾಂಡಾಕ್ಕೆ ಬಂದು ಜನರನ್ನು ಹಿಂದು ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅಂಬಾರಗೊಪ್ಪ ದ ವಿಜಯಾ ನಾಯ್ಕ ಆರೋಪಿಸಿದರು ಗುರುವಾರ ಸಂಜೆ ಅಂಬಾರಗೊಪ್ಪಕ್ಕೆ ಬಂದ ಕೆಲವರು ಸೇವಾಲಾಲ್ ದೇವಾಲಯ ಪಕ್ಕದ ಹಿಂದುಗಳ ಮನೆಯಲ್ಲಿ ಜೋರಾಗಿ ಕ್ರಿಸ್ತನ ಪ್ರಾರ್ಥನೆ ಮಾಡುತ್ತಿದ್ದರು. ನಿಧಾನವಾಗಿ ಪ್ರಾರ್ಥನೆ ಮಾಡಿ ಎಂದು ತಿಳಿ ಹೇಳಲು ಹೋದ ಯುವಕನನ್ನೇ ಒಳಗೆ ಕೂರಿಸಿಕೊಂಡು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿದ್ದಾರೆ. ಅವನು ಆಗುವುದಿಲ್ಲ ಎಂದಿದ್ದಕ್ಕೆ ಮತಾಂತರಗೊಂಡ ಕ್ರಿಶ್ಚಿಯನ್ನರು ಅವನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು. ಬಡತನವನ್ನು ಉಪಯೋಗಿಸಿಕೊಂಡು ಮತಾಂತರ ಮಾಡಲು ಮುಂದಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಇದೇ ರೀತಿ ಲಂಬಾಣಿ ತಾಂಡಾದಲ್ಲಿ ಮತಾಂತರ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇವರು ಆಮಿಷಗಳನ್ನು ತೋರಿಸಿ ಬಡತನ, ನಿರುದ್ಯೋಗ ದುರುಪಯೋಗ ಮಾಡಿಕೊಂಡು ಮತಾಂತರ ಮಾಡುತ್ತಾರೆ ಎಂದು ದೂರಿದರು.
    ಹಿಂದೆ ಮತಾಂತರಗೊಂಡಿರುವ ಹಲವು ಕುಟುಂಬಗಳನ್ನು ಸ್ವಧರ್ಮಕ್ಕೆ ಕರೆತರಲಾಗಿದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಮಿಷನರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts