More

    ಕನಕರ ಸಮಾಜಮುಖಿ ಚಿಂತನೆ ಪ್ರಸಾರಕ್ಕೆ ಒತ್ತು; ಶ್ರೀ ನಿರಂಜನಾನಂದಪುರಿ ಸ್ವಾಮೀಜಿ

    ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಕನಕದಾಸರ ಚಿಂತನೆಗಳು ಒಂದು ಮೈಲಿಗಲ್ಲು. ಅವರ ವೈಚಾರಿಕ ಚಿಂತನೆ, ಸಾಮಾಜಿಕ ಕಾಳಜಿ, ಭಕ್ತಿ, ಸಮಸಮಾಜ ನಿರ್ವಣದ ಆಶಯ, ಸಮಾಜದ ಅಂಕು-ಡೊಂಕು ತಿದ್ದುವಲ್ಲಿ ತೋರಿದ ಮಾರ್ಗಗಳು ಸದಾ ಪ್ರಸ್ತುತ. ಈ ಹಿನ್ನೆಲೆಯಲ್ಲಿ ಕನಕದಾಸರ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಚಿಂತನೆಗಳನ್ನು ಪ್ರಚುರಪಡಿಸಲು ಕಾಗಿನೆಲೆ ಕನಕ ಗುರುಪೀಠ ಹಾಗೂ ನಾಲ್ಕು ವಿಭಾಗೀಯ ಪೀಠಗಳು ಕಾರ್ಯತತ್ಪರವಾಗಿವೆ ಎಂದು ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ. ಕನಕ ಜಯಂತಿ ಅಂಗವಾಗಿ ‘ವಿಜಯವಾಣಿ’ ಏರ್ಪಡಿಸಿದ್ದ ಸಂವಾದದಲ್ಲಿ ಕನಕದಾಸರ ಚಿಂತನೆ, ಆಶಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

    ಕನಕದಾಸರು ಒಂದು ವ್ಯಕ್ತಿಯಲ್ಲ, ಒಂದು ಶಕ್ತಿ. ಕನಕದಾಸರ ಸಾಹಿತ್ಯ ಸಮಾಜಕ್ಕೆ ದಾರಿದೀಪ. ಸಮ ಸಮಾಜದ ನಿರ್ವಣಕ್ಕೆ ಆದರ್ಶ. ಅವರ ಸಾಹಿತ್ಯವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವರ ವ್ಯಕ್ತಿತ್ವ ಗೊತ್ತಾಗುತ್ತದೆ. ಕನಕದಾಸರು ಮತ್ತು ಪುರಂದರದಾಸರನ್ನು ತುಲನೆ ಮಾಡಿ ನೋಡಿದಾಗ, ಪುರಂದರದಾಸರು ಭಕ್ತಿಪಂಥ ಬಿಟ್ಟು ಹೊರಬರಲಿಲ್ಲ. ಆದರೆ, ಕನಸಕದಾಸರು ಭಕ್ತಿಪಂಥದ ಜತೆಗೆ ಪ್ರಖರ ವೈಚಾರಿಕತೆ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಮಹತ್ವದ ಹೆಜ್ಜೆ ಇಟ್ಟರು. ಅದರ ಜತೆಗೆ ಜಾತಿ ವ್ಯವಸ್ಥೆಯ ಬುಡವನ್ನೇ ಅಲುಗಾಡಿಸಿದರು. ಅವರ ಬೋಧನೆ ಎಲ್ಲೂ ವಾಚಾಳಿತನದಿಂದ ಕೂಡಿದ್ದಲ್ಲ. ಯಾರಿಗೆ ಏನು ಸಂದೇಶ ಕೊಡಬೇಕೋ ಅದನ್ನು ಮೃದು ಮಾತುಗಳ ಮೂಲಕವೇ ಹೇಳುತ್ತಿದ್ದರು. ಇವತ್ತಿನ ಸಂದರ್ಭದಲ್ಲಿ ಈ ರೀತಿಯ ಸಂದೇಶ ಕೊಡುವುದು ಅತ್ಯವಶ್ಯ ಎಂದು ಅಭಿಪ್ರಾಯಪಟ್ಟರು.

    ಐಎಎಸ್/ಕೆಎಎಸ್ ಕೋಚಿಂಗ್

    ಶ್ರೀಮಠದಿಂದ ಬೆಳ್ಳೂಡಿಯಲ್ಲಿ ನಾವು ಐಎಎಸ್/ಕೆಎಎಸ್ ಕೋಚಿಂಗ್ ಕೇಂದ್ರ ಆರಂಭಿಸಿದಾಗ ಕೆಲವರು ಇವರಿಗೆ ಬುದ್ದಿ ಇಲ್ಲ. ಹಳ್ಳಿಗೆ ಬಂದು ಯಾರು ಕೋಚಿಂಗ್ ಪಡೆಯುತ್ತಾರೆ ಎಂದು ಕಿಚಾಯಿಸಿದ್ದೂ ಉಂಟು. ಆದರೆ, ಈಗ ಕರ್ನಾಟಕ ಸೇರಿದಂತೆ ಆರು ರಾಜ್ಯಗಳ 58 ಮಂದಿ ತರಬೇತಿ ಪಡೆಯುತ್ತಿದ್ದಾರೆ. ಅತ್ಯಂತ ಕಡಿಮೆ ಶುಲ್ಕ ವಿಧಿಸಿ ತರಬೇತಿ ನೀಡಲಾಗುತ್ತದೆ. ಇಂತಹ ಕೇಂದ್ರಗಳನ್ನು ರಾಜ್ಯದಲ್ಲಿ ಇನ್ನಷ್ಟು ತೆರೆಯುವ ಉದ್ದೇಶ ಇದೆ ಎಂದು ಸ್ವಾಮೀಜಿ ಹೇಳಿದರು.

    ದಾರ್ಶನಿಕರನ್ನು ಜಾತಿಗೆ ಸೀಮಿತಗೊಳಿಸಬೇಡಿ: ಯಾವುದೇ ದಾರ್ಶನಿಕರನ್ನು ಒಂದು ಜಾತಿಗೆ ಸೀಮಿತಗೊಳಿಸುವುದನ್ನು ನಾನು ಕಠೋರವಾಗಿ ಖಂಡಿಸುತ್ತೇನೆ. ಕನಕದಾಸ ಕುರುಬ, ಅಂಬೇಡ್ಕರ್ ದಲಿತ, ಬಸವಣ್ಣ ಲಿಂಗಾಯತ ಸಮುದಾಯಕ್ಕೆ ಸೀಮಿತ ಮಾಡುವುದು ಎಲ್ಲೋ ಒಂದು ಕಡೆ ಅಪಚಾರ, ಅನಾಹುತಕ್ಕೆ ಕಾರಣವಾಗಲಿದೆ. ಕನಕದಾಸ ಜಯಂತಿಯನ್ನು ಕುರುಬರು ಮಾಡುವುದು, ಅಂಬೇಡ್ಕರ್ ಜಯಂತಿಯನ್ನು ದಲಿತರು ಮಾಡುವುದು ಸರಿಯಲ್ಲ. ಅದು ಬದಲಾಗಬೇಕು ಎಂದು ಸ್ವಾಮೀಜಿ ಹೇಳಿದರು.

    ಅಬ್ಬರದ ಆಚರಣೆ ಸಲ್ಲ

    ಕನಕದಾಸರ ಜಯಂತಿಯನ್ನು ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಸೀಜನ್ ರೀತಿಯಲ್ಲಿ ಹಾಗೂ ಬೇರೆ ಹಬ್ಬ ಹರಿದಿನಗಳಂತೆ ಡಿಜೆ ಹಾಕಿ, ಕುಣಿದು ಕುಪ್ಪಳಿಸಿ ಆಚರಿಸುವುದನ್ನು ನಾನು ಬಲವಾಗಿ ವಿರೋಧಿಸುತ್ತೇನೆ. ಅಂತಹ ಚಟುವಟಿಕೆಗಳಿಗೆ ಹಣ ಪೋಲು ಮಾಡುವ ಬದಲು ಕನಕದಾಸರ ಚಿಂತನೆಗಳನ್ನು ಪ್ರಚುರಪಡಿಸಲು ವಿನಿಯೋಗಿಸಬೇಕು ಎಂದು ಯುವ ಪೀಳಿಗೆಗೆ ಸಲಹೆ ನೀಡಿದರು. ಕನಕದಾಸರ ಸಾಹಿತ್ಯ ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮರಾಠಿ ಮತ್ತಿತರ ಭಾಷೆಗಳಲ್ಲಿ ಪ್ರಕಟವಾಗುತ್ತಿದೆ. ಶ್ರೀಮಠದಿಂದ ಹಿಂದೆ ‘ಕನಕಸ್ಪೂರ್ತಿ’ ಪತ್ರಿಕೆ ಬರುತ್ತಿತ್ತು. ಈಗ ನಾವು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಜತೆ ಕೈಜೋಡಿಸಿ ಕನಕದಾಸರ ಚಿಂತನೆಗಳನ್ನು ಪ್ರಚುರಪಡಿಸುವ ಕೆಲಸ ಮಾಡುತ್ತಿದ್ದೇವೆ.

    ರಜೆ ಬೇಕಿಲ್ಲ

    ಕನಕ ಜಯಂತಿಗೆ ರಜೆ ಘೋಷಣೆ ಮಾಡುವುದು ಬೇಕಿರಲಿಲ್ಲ. ರಜೆ ಕೊಟ್ಟರೆ ಸರ್ಕಾರಿ ಕಚೇರಿಗಳಲ್ಲಿ ಕನಕನ ಫೋಟೋ ಇಟ್ಟು, ಪೂಜೆ ಮಾಡಿ ತೆರಳುತ್ತಾರೆ. ರಜೆ ಕೊಡದಿದ್ದರೆ ಅರ್ಧ ಗಂಟೆ ಪೂಜೆ ಮಾಡಿ ಅವರ ಚಿಂತನೆಗಳನ್ನು ಮೆಲುಕು ಹಾಕಿ ಕಾರ್ಯ ತತ್ಪರರಾಗಬಹುದು. ಇದನ್ನು ಮುಖ್ಯಮಂತ್ರಿಗೆ ಪತ್ರ ಬರೆದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದೇನೆ ಎಂದು ಸ್ವಾಮೀಜಿ ತಿಳಿಸಿದರು.

    ಡೊಳ್ಳಿನ ಪದ ಇಷ್ಟ

    ಕನಕದಾಸರ ಜಯಂತಿ ದಿನ ನಾವು 3-4 ತಂಡಗಳಿಂದ ಹಾಡಿಸುತ್ತೇವೆ. ಕನಕದಾಸರ ಕೀರ್ತನೆಗಳನ್ನು ಹಾಡಿಸಲು ಪ್ರಯತ್ನ ಮಾಡುತ್ತೇವೆ. ನಮ್ಮ ಸಮುದಾಯಕ್ಕೆ ಡೊಳ್ಳಿನ ಪದ ಇಷ್ಟ. ಡೊಳ್ಳಿನ ಮೇಲೆ ಕೈ ಇಟ್ಟರೆ ಹೊತ್ತು ಹುಟ್ಟುವವರೆಗೆ ಹಾಲುಮತ ಪುರಾಣವನ್ನು ನಿರರ್ಗಳವಾಗಿ ಹೇಳುತ್ತಾರೆ. ಆದರೆ, ಕೀರ್ತನೆ ಬಹಳ ಜನರಿಗೆ ಗೊತ್ತಿಲ್ಲ. ನಾವು ಕೀರ್ತನೆ ಹಾಡಲು ಉತ್ತೇಜನ ನೀಡುತ್ತಿದ್ದೇವೆ. ಸವಾಲು ರೂಪದಲ್ಲಿ ಭಜನೆ ನಡೆಯುತ್ತವೆ. ಎರಡು ತಂಡಗಳು ರಾಮಧ್ಯಾನ ಚರಿತೆ, ಮೋಹನ ತರಂಗಿಣಿ, ಸಂಗೊಳ್ಳಿ ರಾಯಣ್ಣ, ರೇವಣಸಿದ್ದ, ಕನಕದಾಸರು ಇತ್ಯಾದಿ ವಿಷಯ ಇಟ್ಟುಕೊಂಡು ಜುಗಲ್​ಬಂದಿ ರೀತಿಯಲ್ಲಿ ಭಜನೆ ಕಟ್ಟಿಕೊಡುತ್ತಾರೆ ಎಂದು ನಿರಂಜನಾನಂದಪುರಿ ಸ್ವಾಮೀಜಿ ವಿಶ್ಲೇಷಿಸಿದರು.

    ಎಸ್​ಟಿಗೆ ಸೇರ್ಪಡೆ ನಿರೀಕ್ಷೆ

    ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಸುದೀರ್ಘ ಅವಧಿಯಿಂದ ನಡೆಯುತ್ತಿರುವ ಹೋರಾಟ, ತಾವು ನಡೆಸಿದ 363 ಕಿ.ಮೀ. ಉದ್ದದ ಪಾದಯಾತ್ರೆಯು ಡಿಸೆಂಬರ್ ಅಂತ್ಯದೊಳಗೆ ಫಲಪ್ರದವಾಗುವ ನಿರೀಕ್ಷೆಯಿದೆ. ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಂಡು ವರದಿ ಸಿದ್ಧವಾಗಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆಗೆ ರ್ಚಚಿಸಲಾಗಿದೆ. ಕೇಂದ್ರ ಸರ್ಕಾರ ಎರಡು ಬಾರಿ ಶಿಫಾರಸು ತಿರಸ್ಕರಿಸಲು ನೀಡಿದ ಕಾರಣಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಕುಲಶಾಸ್ತ್ರೀಯ ಅಧ್ಯಯನ ವರದಿ ಆಧರಿಸಿ ಕೇಂದ್ರಕ್ಕೆ ಶಿಫಾರಸು ಮಾಡುವ ಭರವಸೆ ನೀಡಿದ್ದು, ಡಿಸೆಂಬರ್ ಒಳಗೆ ಈ ಪ್ರಕ್ರಿಯೆ ಮುಗಿಯುವ ಸಾಧ್ಯತೆಗಳಿವೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

    ಮುಂಡಿಗೆಗಳು

    ಎಮ್ಮೆ ಕರು ಹಾಕುವುದಕ್ಕೆ ಗ್ರಾಮ್ಯ ಭಾಷೆಯಲ್ಲಿ ನಾವು ‘ಎಮ್ಮ ಈಯಿತು’ ಎನ್ನುತ್ತೇವೆ. ಕನಕದಾಸರನ್ನು ಅವರ ಶಿಷ್ಯ ಬಳಗ, ‘ಎಮ್ಮೆ ಈಯಿತು ಎನ್ನುವುದನ್ನು ಸಾಹಿತ್ಯದಲ್ಲಿ ಹೇಳು’ ಎಂದು ಕೇಳುತ್ತದೆ. ಆಗ ಕನಕದಾಸರು, ‘ವಿರಾಟ ನಗರದ ಅರಸನ, ಅರಸಿಯ ಅನುಜನ, ಕತ್ತಲೆಯಲ್ಲಿ ಗುದ್ದಿದನ, ಅಗ್ರಜನ ಪಿತನ ವಾಹನನ ಹೆಂಡತಿ ಹೆರಿಗೆ ಆಯಿತು’ ಎಂದು ಮುಂಡಿಗೆ ರೂಪದಲ್ಲಿ ಹೇಳಿದ್ದರು. ಅದಕ್ಕೆಂದೇ ಸ್ವತಃ ವ್ಯಾಸರಾಜರೇ ಕನಕನ ಕೆಣಕಬೇಡಿ. ಕೆಣಕಿ ತಿಣುಕಬೇಡಿ ಎಂದಿದ್ದರು ಎಂದು ಶ್ರೀಗಳು ನೆನಪಿಸಿದರು.

    ಟಿಟಿಡಿಗೆ ಮನವಿ

    ತಿರುಪತಿ-ತಿರುಮಲೇಶ್ವರನ ಉಪಾಸನೆಯೂ ಕನಕದಾಸರ ಕೀರ್ತನೆಗಳಲ್ಲಿವೆ. ಈ ಹಿನ್ನೆಲೆಯಲ್ಲಿ ಶ್ರೀಮಠದ ಶಾಖೆ ಕಟ್ಟಲು ತಿರುಮಲೆಯಲ್ಲಿ ಒಂದು ಎಕರೆ ಜಮೀನು ನೀಡಬೇಕೆಂದು ಸಚಿವ ಎಂಟಿಬಿ ನಾಗರಾಜ್ ಮುಖೇನ ತಿರುಮಲ- ತಿರುಪತಿ ದೇವಸ್ಥಾನ ಮಂಡಳಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದಾಗ ಸಕಾರಾತ್ಮಕವಾಗಿ ಸ್ಪಂದಿಸಿ ಈ ಪ್ರಕ್ರಿಯೆಗೆ ಸಾಕಷ್ಟು ಕಾಲಾವಕಾಶ ಹಿಡಿಯಲಿದೆ ಎಂಬ ಮಾಹಿತಿ ನೀಡಿ ದ್ದಾರೆ ಎಂದು ಕನಕಗುರು ಪೀಠಾಧಿಪತಿ ಹೇಳಿದರು.

    ಸಾಮರಸ್ಯದ ಉದ್ದೇಶ

    ಜಾತಿಗಳ ಮಧ್ಯೆ ಸಂಘರ್ಷದಿಂದ ಗ್ರಾಮಗಳ ಜನ-ಜೀವನ ಹದಗೆಡುತ್ತಿದೆ. ಪರಸ್ಪರ ತಿಳಿವಳಿಕೆ ನೀಡಿ ಸಹಬಾಳ್ವೆಗೆ ಪೂರಕ ವಾತಾವರಣ ಸೃಷ್ಟಿಸಿ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಹಿಂದುಳಿದ ಹಾಗೂ ದಲಿತ ಮಠಾಧೀಶರ ಒಕ್ಕೂಟ ಸ್ಥಾಪನೆಯಾಗಿದೆ ಎಂದು ಒಕ್ಕೂಟದ ಅಧ್ಯಕ್ಷರೂ ಆದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ತಿಳಿಸಿದರು. ಒಕ್ಕೂಟದ ಪ್ರಯತ್ನದ ಫಲವಾಗಿ ಹಿಂದುಳಿದ, ದಲಿತ ಮಠಗಳು ತಲೆ ಮೇಲೊಂದು ಸೂರು ಕಟ್ಟಿಕೊಳ್ಳಲು, ಶಾಲೆ-ಹಾಸ್ಟೆಲ್​ಗಳ ನಿರ್ವಣಕ್ಕೆ ಸರ್ಕಾರದ ಅನುದಾನ ದೊರೆಯಲಾರಂಭಿಸಿತು. ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 96 ಕೋಟಿ ರೂ. ಲಭಿಸಿತು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 119 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದರು.

    ಪ್ರಾಧಿಕಾರದಲ್ಲಿ ಸಂಶೋಧನಾ ಕೇಂದ್ರ ವಿಲೀನ ಸೂಕ್ತ

    ಕಾಗಿನೆಲೆ-ಬಾಡ ಕನಕದಾಸ ಅಭಿವೃದ್ಧಿ ಪ್ರಾಧಿಕಾರದಲ್ಲಿ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನು ವಿಲೀನಗೊಳಿಸುವುದು ಸೂಕ್ತ. ರಾಷ್ಟ್ರಮಟ್ಟದ ಪ್ರವಾಸೋದ್ಯಮ ತಾಣವಾಗಿಸಲು, ಕನಕದಾಸರ ಕುರುಹು ಸಂಗ್ರಹ, ಸಂಶೋಧನೆ ಪ್ರಗತಿಯಲ್ಲಿದ್ದು, ಆಯುರ್ವೆದ ಆಸ್ಪತ್ರೆಯು ಉದ್ಘಾಟನೆಗೆ ಸಜ್ಜಾಗಿದೆ. ಇಷ್ಟಾಗಿಯೂ ಪ್ರಾಧಿಕಾರದ ಚಟುವಟಿಕೆಗಳು ಇನ್ನಷ್ಟು ಚುರುಕುಗೊಳ್ಳಬೇಕಾದ ಅಗತ್ಯವಿದೆ. ಕನಕದಾಸ ಅಭಿವೃದ್ಧಿ ಪ್ರಾಧಿಕಾರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಬ್ಬರೇ ಆಯುಕ್ತರಿದ್ದು, ಕೆಲಸದ ಭಾರ ಹೆಚ್ಚಿರುವಂತಿದೆ. ಈಗಾಗಲೇ ಪ್ರಕಟಿತ ಗ್ರಂಥಗಳ ಆಧರಿತ ಪ್ರಬಂಧಗಳಿಗಿಂತ ಕ್ಷೇತ್ರ ಕಾರ್ಯಕ್ಕೆ ಸಂಶೋಧನಾರ್ಥಿಗಳು ಒತ್ತು ನೀಡಬೇಕಾಗಿದೆ ಎಂದರು.

    ಕುರಿಗಾರರಿಗೆ ಭದ್ರತೆ

    ಕುರಿ ಸಾಕಾಣಿಕೆ ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾಗಿಲ್ಲ. ಈ ಕಸುಬು ವಿವಿಧ ಸಮುದಾಯಗಳಿಗೆ ಜೀವನೋಪಾಯದ ಮಾರ್ಗಗಳಲ್ಲಿ ಒಂದಾಗಿದೆ ಎಂದು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ವಿಶ್ಲೇಷಿಸಿದರು. ‘ವಿಜಯವಾಣಿ’ ಜತೆ ಸಂವಾದದ ಅವರು ಮಾತು ಧಾರ್ವಿುಕ, ಅಧ್ಯಾತ್ಮಿಕ ಹಾಗೂ ಶೈಕ್ಷಣಿಕ ವಿಚಾರಗಳಿಂದ ಲೌಕಿಕ ವ್ಯವಹಾರಗಳತ್ತ ಹೊರಳಿತು. ಸಂಚಾರಿ ಕುರಿಗಾಹಿಗಳಿಗೆ ಭದ್ರತೆ, ಕುರಿಗಳು ಹಾಗೂ ಸ್ವಂತ ಆರೋಗ್ಯ ಸುರಕ್ಷತೆಯೇ ದೊಡ್ಡ ಸವಾಲಾಗಿದೆ. ಈ ವಿಷಯವನ್ನು ಪ್ರಧಾನವಾಗಿ ಪರಿಗಣಿಸಿ ಸರ್ಕಾರದ ಸಹಭಾಗಿತ್ವದಲ್ಲಿ ಶ್ರೀಮಠ ಶ್ರಮಿಸುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts