More

    ಮೀಟರ್ ಬಡ್ಡಿ ದಂಧೆಗೆ ಮೂಗುದಾರ: ಬಲವಂತದ ಸಾಲ ವಸೂಲಿಗೆ ಬ್ರೇಕ್; ಕಾಯ್ದೆ ತಿದ್ದುಪಡಿಗೆ ಸಂಪುಟ ಸಮ್ಮತಿ

    ಬೆಂಗಳೂರು: ಮೀಟರ್ ಬಡ್ಡಿ ವಿಧಿಸಿ ಬಲವಂತದಿಂದ ಸಾಲ ವಸೂಲಿ ಮಾಡುವ ಲೇವಾದೇವಿದಾರರಿಗೆ ಬಿಸಿ ಮುಟ್ಟಿಸಲು ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಸಾಲ ಕೊಟ್ಟು ಹೆಚ್ಚಿನ ಬಡ್ಡಿಗಾಗಿ ಕಿರುಕುಳ ನೀಡಿ ಬಲವಂತದಿಂದ ವಸೂಲಿ ಮಾಡುವುದನ್ನು ನಿಯಂತ್ರಿಸುವ ಸಂಬಂಧ ಕರ್ನಾಟಕ ಲೇವಾದೇವಿದಾರರ ಕಾಯ್ದೆಗೆ ತಿದ್ದುಪಡಿ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಸಹಕಾರ ಇಲಾಖೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಮನಿ ಲಾಂಡರಿಂಗ್ ಕಾಯ್ದೆಗೆ ಕೆಲವು ತಿದ್ದುಪಡಿ ತರುವುದು ಸರ್ಕಾರದ ಉದ್ದೇಶವಾಗಿದೆ. ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ಕರ್ನಾಟಕ ಮನಿ ಲಾಂಡರಿಂಗ್ ಆಕ್ಟ್​ನ ಕಲಂ 38 ಮತ್ತು 39ಕ್ಕೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ. ಈ ಕಾಯ್ದೆಯಲ್ಲಿ ಒತ್ತಾಯಪೂರ್ವಕ ಸಾಲ ಮತ್ತು ಬಡ್ಡಿ ವಸೂಲಿಗೆ 6 ತಿಂಗಳು ಶಿಕ್ಷೆ ವಿಧಿಸಲಾಗುತ್ತಿತ್ತು. ಅದನ್ನೀಗ ಮೊದಲ ಅಪರಾಧಕ್ಕೆ 1 ವರ್ಷಕ್ಕೆ ಹೆಚ್ಚಿಸಲಾಗಿದೆ. 2ನೇ ಅಪರಾಧಕ್ಕೆ 2 ವರ್ಷ ನಿಗದಿಪಡಿಸಲಾಗಿದೆ. 5 ಸಾವಿರ ರೂ. ಇದ್ದ ದಂಡವನ್ನು 50 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

    ಕೋವಿಡ್ ನಿಯಂತ್ರಣಕ್ಕೆ 700 ಕೋಟಿ ರೂ. ವೆಚ್ಚ: ಕೋವಿಡ್ ಸಂದರ್ಭದಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಗೆ ಜನವರಿವರೆಗೆ ನೀಡಿರುವ ಚಿಕಿತ್ಸಾ ವೆಚ್ಚದ ಬಾಬ್ತು 620 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮಾರ್ಚ್ ಅಂತ್ಯದವರೆಗೆ 80 ಕೋಟಿ ರೂ. ಸೇರಿದಂತೆ ಒಟ್ಟು 700 ಕೋಟಿ ರೂ. ಗಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್​ಗೆ ಪಾವತಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ ಈವರೆಗೆ 311 ಕೋಟಿ ರೂ.ಖರ್ಚಾಗಿದೆ. ಉಳಿದ ಅಂದಾಜು ಮೊತ್ತಕ್ಕೆ ಅನುಮೋದನೆ ಪಡೆಯಲಾಗಿದೆ ಎಂದು ಹೇಳಿದರು.

    ಇತರ ತೀರ್ಮಾನಗಳು

    • ಚಾಮರಾಜನಗರದಲ್ಲಿ ಕೃಷಿ ವಿಜ್ಞಾನ ಕಾಲೇಜು ಸ್ಥಾಪನೆಗೆ ಘಟನೋತ್ತರ ಅನುಮೋದನೆ ನೀಡಲು ನಿರ್ಣಯ. ಈಗಾಗಲೇ ಜಾಗ ಕೂಡ ಗುರುತಿಸಲಾಗಿದ್ದು, 3 ವರ್ಷದಲ್ಲಿ ಪೂರ್ಣಗೊಳಿಸುವ ತೀರ್ವನವಾಗಿದೆ. ಇದಕ್ಕಾಗಿ ಈ ವರ್ಷ 35.92 ಕೋಟಿ ರೂ.ಗೆ ಅನುಮೋದನೆ
    • ಕೈಗಾರಿಕೆಗಳಿಗೆ ಕೆಐಡಿಬಿಯಿಂದ ಖಾಸಗಿಯವರಿಂದ ಜಮೀನು ಪಡೆದು ಅಭಿವೃದ್ಧಿಪಡಿಸಿ ನೀಡುವ ಯೋಜನೆಯಡಿ ಜಮೀನು ಮಾಲೀಕರಿಗೆ ಈವರೆಗೆ ಎಕರೆಗೆ 9,583 ಚ.ಅಡಿ ಅಭಿವೃದ್ಧಿಪಡಿಸಿದ ನಿವೇಶನ ನೀಡಲಾಗುತ್ತಿತ್ತು. ಈಗ ಜಮೀನು ಬೆಲೆ ಜಾಸ್ತಿಯಾಗಿರುವುದರಿಂದ ಎಕರೆಗೆ 10,781 ಚ. ಅಡಿ ನೀಡಲು ನಿರ್ಣಯ
    • ಆರೋಗ್ಯ ಇಲಾಖೆಯಲ್ಲಿ ಮೆಡಿಕಲ್ ಆಫಿಸರ್ ಆಗಿದ್ದ ಜಿ.ಎಲ್.ಹರೀಶ್ ಲೈಂಗಿಕ ಕಿರುಕುಳ ಆರೋಪದಡಿ ಶಿಕ್ಷೆಗೆ ಗುರಿಯಾಗಿರುವುದರಿಂದ ಸೇವೆಯಿಂದ ವಜಾ ಮಾಡಲು ತೀರ್ಮಾನ
    • ತಾಯಿ ಮತ್ತು ಮಕ್ಕಳ ಆಸ್ಪತ್ರೆ, ವಿಜಯಪುರ ಸೇರಿದಂತೆ 2 ಜನರಲ್ ಆಸ್ಪತ್ರೆಗಳ ಉನ್ನತೀ ಕರಣಕ್ಕೆ -ಠಿ;199 ಕೋಟಿ ಅನುಮೋದನೆ
    • ರಾಷ್ಟ್ರೀಯ ಹೆಲ್ತ್ ಮಿಷನ್ ಯೋಜನೆಡಿಯಲ್ಲಿ 22 ತಾಯಿ ಮಕ್ಕಳ ಆಸ್ಪತ್ರೆಗೆ ಉಪಕರಣ ಖರೀದಿಗಾಗಿ 14.64 ಕೋಟಿ ರೂ. ರಾಜ್ಯದ ಪಾಲಿನ ಮೊತ್ತದ ಬಿಡುಗಡೆಗೆ ಒಪ್ಪಿಗೆ
    • ಕರ್ನಾಟಕ ಗೃಹ ಮಂಡಳಿಯ ಹೌಸಿಂಗ್ ಯೋಜನೆಯಡಿ 2010-11 ರ ನಾಲ್ಕು ಹಾಗೂ 2011-12 ರ ನಾಲ್ಕು ಹೌಸಿಂಗ್ ಸ್ಕೀಂಗಳಿಗೆ ಯೋಜನೆ ಪರಿಷ್ಕರಿಸಿದ್ದು, ಪರಿಷ್ಕೃತ ಯೋಜನಾ ವೆಚ್ಚ 561 ಕೋಟಿ ರೂ. ಹಾಗೂ 797 ಕೋಟಿ ರೂ.ಗೆ ಅನುಮೋದನೆ ನೀಡಲಾಗಿದೆ. ಶೇ.30.62 ಪರಿಷ್ಕರಿಸಲಾಗಿದೆ
    • ಮಂಡ್ಯ ಜಿಲ್ಲೆ ಅಯ್ಯನ ಕೆರೆ ಅಭಿವೃದ್ಧಿಗೆ 9 ಕೋಟಿ ರೂ. ಇದ್ದುದನ್ನು ಪರಿಷ್ಕರಿಸಿ, 19.03 ಕೋಟಿ ರೂ. ಗೆ ಹೆಚ್ಚಿಸಿ ಅನುಮೋದನೆ
    • ಬೆಂಗಳೂರಿನ ವಸಂತ ನಗರದಲ್ಲಿ ಬಹುಮಹಡಿ ವಸತಿ ಕಟ್ಟಡ ನಿರ್ವಣಕ್ಕೆ 117 ಕೋಟಿ ರೂ. ಯೋಜನೆಗೆ ಸಮ್ಮತಿ
    • ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ 350 ಕೋಟಿ ರೂ. ನಿಧಿ ಸಂಗ್ರಹಕ್ಕೆ ರಾಜ್ಯ ಸರ್ಕಾರದ ಖಾತ್ರಿ ನೀಡಲು ಅನುಮೋದನೆ. ಇದರಲ್ಲಿ 4 ಮುಖ್ಯ ರಸ್ತೆ ಅಭಿವೃದ್ಧಿ ತೆಗೆದುಕೊಳ್ಳಲಾಗುತ್ತದೆ
    • ಶಿವಮೊಗ್ಗ ಜಿಲ್ಲೆಯ ಮಾಚೇನಹಳ್ಳಿ ಗ್ರಾಮದ ಬಸವನೆಲೆ ಟ್ರಸ್ಟ್ ಗೆ 3-04 ಎಕರೆ ಜಮೀನು ನೀಡಲು ನಿರ್ಧಾರ
    • ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆ -3 ಅಡಿಯಲ್ಲಿ 1848 ಕೋಟಿ ರೂ. ವೆಚ್ಚದಲ್ಲಿ 2202 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು ಒಪ್ಪಿಗೆ
    • ಕೆ.ಆರ್.ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆವರೆಗೆ ಕೋರಮಂಗಲ ವ್ಯಾಲಿ ಪುನರುಜ್ಜೀವನ ಕೈಗೊಳ್ಳಲು 169 ಕೋಟಿ ರೂ.ಗಳಿಗೆ ಘಟನೋತ್ತರ ಅನುಮೋದನೆ.

    ವಿವಾದ ನಿರ್ಣಯ ನೀತಿಗೆ ಸಂಪುಟ ಅಸ್ತು

    ಬೆಂಗಳೂರು: ಕರ್ನಾಟಕ ರಾಜ್ಯ ವಿವಾದ ನಿರ್ಣಯ ನೀತಿ 2021ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ರಾಜ್ಯ ಸರ್ಕಾರದ ಪರವಾಗಿ ದಾವೆಗಳನ್ನು ಪರಿಣಾಮಕಾರಿಯಾಗಿ ಹಾಗೂ ಜವಾಬ್ದಾರಿಯುತವಾಗಿ ನಿರ್ವಹಿಸಲು ಅನುಕೂಲವಾಗುವುದರಿಂದ ಈ ನೀತಿ ಜಾರಿಗೆ ತರಲು ನಿರ್ಣಯಿಸಲಾಗಿದೆ.

    ಈ ಕುರಿತು ಮಾಹಿತಿ ನೀಡಿದ ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ಪ್ರಸ್ತುತ ಜಾರಿಯಲ್ಲಿರುವ 2011ರ ರಾಜ್ಯ ವ್ಯಾಜ್ಯಗಳ ನೀತಿ ಕೇಂದ್ರ ಸರ್ಕಾರದ ನೀತಿಗನುಗುಣವಾಗಿದೆ. ಅಡ್ವೋಕೇಟ್ ಜನರಲ್ ಪ್ರಸ್ತಾಪಿಸಿರುವ ರಾಜ್ಯ ವ್ಯಾಜ್ಯಗಳ ನೀತಿಯಲ್ಲಿ ಪ್ರಸಕ್ತ ಸನ್ನಿವೇಶಕ್ಕೆ ತಕ್ಕಂತೆ ಕೆಲವು ಹೊಸ ಅಂಶಗಳು ಒಳಗೊಂಡಿರುವುದರಿಂದ ರಾಜ್ಯ ಪರವಾಗಿ ವ್ಯಾಜ್ಯಗಳನ್ನು ಪರಿಣಾಮಕಾರಿಯಾಗಿ ಹಾಗೂ ಜವಾಬ್ದಾರಿಯುತವಾಗಿ ನಿರ್ವಹಿಸಲು ಈ ನೀತಿ ಅನುಕೂಲವಾಗಲಿದೆ ಎಂದು ಹೇಳಿದರು. ಈ ನೀತಿಯಲ್ಲಿ ಸಮಿತಿಯ ಕಾರ್ಯ ಚಟುವಟಿಕೆ, ನೋಡಲ್ ಅಧಿಕಾರಿ ನೇಮಕ, ಅವರ ಪಾತ್ರ ಹಾಗೂ ಜವಾಬ್ದಾರಿ, ಸರ್ಕಾರಿ ಇಲಾಖೆಗಳ ನಡುವೆ ಹಾಗೂ ಇತರ ಯಾವುದೇ ಇಲಾಖೆಗಳ ಪ್ರಮುಖ ವ್ಯಾಜ್ಯದ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ/ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಅಂತರ್ ವಿಭಾಗೀಯ ವಿವಾದ ಪರಿಹಾರ ಸಮಿತಿಗಳನ್ನು ರಚನೆ ಮಾಡಲು ಶಿಫಾರಸು ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts