More

    ಸತತ ಆರು ಗಂಟೆ ರಸ್ತೆ ತಡೆದು ಪ್ರತಿಭಟನೆ

    ಬೈಲಹೊಂಗಲ: ತೀವ್ರ ಹದಗೆಟ್ಟಿರುವ ಬುಡರಕಟ್ಟಿ-ಬೆಳವಡಿ ರಸ್ತೆ ದುರಸ್ತಿ ಹಾಗೂ ಮರು ನಿರ್ಮಾಣಕ್ಕೆ ಆಗ್ರಹಿಸಿ ಬುಧವಾರ ಬುಡರಕಟ್ಟಿ ಗ್ರಾಮಸ್ಥರು ಸ್ಥಳೀಯ ಬಸವೇಶ್ವರ ಸರ್ಕಲ್‌ನಲ್ಲಿ 6 ಗಂಟೆ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಸಂಚಾರಕ್ಕೆ ಅಯೋಗ್ಯವಾಗಿರುವ ರಸ್ತೆಯಲ್ಲಿ ಅಪಾಯಕಾರಿ ಗುಂಡಿಗಳು ನಿರ್ಮಾಣವಾಗಿವೆ. ರಸ್ತೆ ಹದಗೆಟ್ಟಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಹಾಗಾಗಿ, ಕೂಡಲೇ ರಸ್ತೆ ರಿಪೇರಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಗ್ರಾಮದ ಭಜನಾ ಸಂಘದವರು ಹೋರಾಟದ ವೇದಿಕೆಯಲ್ಲಿ ಸರ್ಕಾರ ಹಾಗೂ ಅಧಿಕಾರಿಗಳ ಕಾರ್ಯವೈಖರಿಯನ್ನು ಹಾಡಿನ ಮೂಲಕ ಪ್ರತಿಭಟಿಸಿದರು. ರಸ್ತೆ ತಡೆದಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಪ್ರತಿಭಟನಾಕಾರರು ಸ್ಥಳದಲ್ಲೇ ಅಡುಗೆ ತಯಾರಿ, ತಗ್ಗು-ಗುಂಡಿಗಳಲ್ಲಿ ಸಸಿ ನೆಟ್ಟು ನೆಟ್ಟು ಪ್ರತಿಭಟಿಸಿದರು.

    ಡಾ.ದೊಡ್ಡಪ್ಪ ಹೂಗಾರ ಸ್ಥಳಕ್ಕಾಗಮಿಸಿ ರಸ್ತೆ ದುರಸ್ತಿಗೆ ಕ್ರಮ ವಹಿಸುವುದಾಗಿ ಮನವೊಲಿಸಿದರೂ ಗ್ರಾಮಸ್ಥರು ಸ್ಪಂದಿಸಲಿಲ್ಲ. ಪ್ರತಿಭಟನೆ ಮಾಡಿದಾಗ ಮಾತ್ರ ರಿಪೇರಿ ಕೈಗೊಳ್ಳುತ್ತೇವೆಂದು ಬರುತ್ತಿರುವ ನಿಮ್ಮ ಧೋರಣೆ ಸರಿಯೇ? ರಸ್ತೆ ಹದಗೆಟ್ಟು ಸಾಕಷ್ಟು ಅಪಘಾತಗಾಳಾಗಿ ಅನೇಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರಕ್ಕೆ ಅಧಿಕಾರಿಗಳಿಗೆ ಕರುಣೆ ಇಲ್ಲವೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿಗಳು ಬರುವವೆರಗೂ ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟುಹಿಡಿದರು.

    ಎಇಇ ವಿ.ಎಸ್.ಆನಿಕಿವಿ ಮಾತನಾಡಿ ಮಂಗಸೂಳಿ-ಲಕ್ಷೇಶ್ವರ ರಾಷ್ಟ್ರೀಯ ಹೆದ್ದಾರಿಗೆ ನಿರ್ಮಾಣಕ್ಕೆ 12 ಕೋಟಿ ರೂ. ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅನುಮೋದನೆ ದೊರೆಯುವ ನಿರೀಕ್ಷೆ ಇದೆ. ಅಲ್ಲಿವರೆಗೆ ರಸ್ತೆ ದುರಸ್ತಿ ಮಾಡಲಾಗುವುದು ಎಂದು ಹೇಳಿದರು. ಬಳಿಕ ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಮುನ್ನೊಳ್ಳಿ ಮನವಿ ಸ್ವೀಕರಿಸಿದರು. ಉದ್ಯಮಿ ವಿಜಯ ಮೆಟಗುಡ್ಡ, ಸಾಮಾಜಿಕ ಕಾರ್ಯಕರ್ತ ರಫೀಕ್ ಬಡೇಘರ್, ಡಿ.ವೈ.ಗರಗದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

    ಮಧ್ಯಾಹ್ನ ಕಿತ್ತೂರು ಸಿಪಿಐ ಮಂಜುನಾಥ ಕುಸುಗಲ್ಲ ಹಾಗೂ ದೊಡವಾಡ ಪಿಎಸ್‌ಐ ಆನಂದ ಕ್ಯಾರಕಟ್ಟಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ರಸ್ತೆ ದುರಸ್ತಿ ಬಗ್ಗೆ ಲಿಖಿತ ಹೇಳಿಕೆ ಕೊಡಿಸಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಸುನೀಲ ಮರಕುಂಬಿ, ಜಗದೀಶ ಬೂದಿಹಾಳ, ಶಶಿಕುಮಾರ ಪಾಟೀಲ್, ಸಿದ್ಧಾರೂಢ ಹೊಂಡಪ್ಪನವರ, ಪ್ರದೀಪ ಅಳಗೋಡಿ, ಪ್ರವೀಣ ಅಡಕಿ, ಶ್ರೀಕಾಂತ ತಡಕೋಡ, ಚಂದ್ರು ಗುದ್ಲೆಪ್ಪನವರ, ಮಹಾನಿಂಗ ಕಿತ್ತೂರು, ಮುತ್ತಯ್ಯ ಪೂಜಾರ, ಪಂಚನಗೌಡ ಪಾಟೀಲ, ತಿಪ್ಪಣ್ಣ ಕಿತ್ತೂರು, ಶ್ರೀಶೈಲ ಪಾಟೀಲ, ಮಹೇಶ ತಡಕೋಡ, ಆದರ್ಶ ಮುತಗಿ, ಬಸಲಿಂಗಯ್ಯ ಪೂಜೇರ, ಮಡಿವಾಳ ಗಾಣಿಗೇರ, ಈರಣ್ಣ ದುಂಡಕೊಪ್ಪ, ಮಂಜುನಾಥ ಚಿಕ್ಕಮಠ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts