More

    ಜಿಟಿಜಿಟಿ ಮಳೆಗೆ ಹೊರಬಾರದ ಜನರು

    ಕೊರಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
    ಆರಂಭದಲ್ಲಿ ಮುನಿಸಿಕೊಂಡಿದ್ದ ಮಳೆ ಕಳೆದ ಐದಾರು ದಿನಗಳಿಂದ ಜಿಟಿಜಿಟಿಯಾಗಿ ಸುರಿಯುತ್ತಿದ್ದು, ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.

    ರೈತರು, ವ್ಯಾಪಾರಸ್ಥರು ಸೇರಿ ಶಾಲಾ-ಕಾಲೇಜಿಗೆ ಓಡಾಡುವ ಮಕ್ಕಳು ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

    ನಗರ ವ್ಯಾಪ್ತಿ ಸೇರಿ ಗ್ರಾಮೀಣ ಭಾಗದ ಕೆಲ ಮಣ್ಣು ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಮಳೆ ನೀರಿಗೆ ಕೆಸರು ಗದ್ದೆಗಳಂತಾಗಿವೆ. ಇಂತಹ ಮಾರ್ಗ ಮಧ್ಯದಲ್ಲಿ ಶಾಲಾ ಮಕ್ಕಳು ಮನೆಯಿಂದ ಶಾಲೆಗೆ ಓಡಾಡುವುದೇ ದುಸ್ತರವಾಗಿದೆ.

    ಅಪಾಯ ಸ್ಥಿತಿಯಲ್ಲಿರುವ ಕೆಲ ಸರ್ಕಾರಿ ಶಾಲಾ ಕೊಠಡಿಗಳ ಪರಿಸ್ಥಿತಿಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕ್ಕೆ ಹಿಂದೇಟು ಹಾಕುತ್ತಿದ್ದಾರೆ.

    2023-24ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ನಿರೀಕ್ಷಿತ ಮಕ್ಕಳ ದಾಖಲಾತಿ ಆಗಿದೆ. ಆದರೆ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಾಲಾ ಕೊಠಡಿಗಳ ಕೊರತೆ ಕಂಡು ಬಂದಿದೆ.

    285 ಕೊಠಡಿಗಳ ದುರಸ್ತಿಗೆ ಸರ್ಕಾರಕ್ಕೆ ಕಳೆದ ವರ್ಷವೇ ಶಿಕ್ಷಣ ಇಲಾಖೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ.

    ಒಂದು ವೇಳೆ ದುರಸ್ತಿ ಕಾರ್ಯಕ್ಕೆ ಅವಕಾಶ ಆಗದಿದ್ದಲ್ಲಿ 265 ಕೊಠಡಿಗಳ ನಿರ್ಮಾಣ ಅಗತ್ಯವಿದೆ ಎನ್ನುವ ಇಲಾಖೆ, ಈಗಾಗಲೇ ಲ್ಯಾಂಡ್‌ಆರ್ಮಿ ಮತ್ತು ನಿರ್ಮಿತಿ ಕೇಂದ್ರಕ್ಕೆ ವಾಸ್ತವ ಸ್ಥಿತಿ ಆಧರಿಸಿ ಮಾಹಿತಿ ನೀಡಲಾಗಿದೆ.

    ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರದಿಂದ ಶಾಲೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡುವ ನಿರೀಕ್ಷೆಯಲ್ಲಿ ಎದುರು ನೋಡುತ್ತಿದ್ದಾರೆ.

    ಶಾಲೆಗಳಿಗೆ ರಜೆ ಘೋಷಿಸುವ ಮಟ್ಟಕ್ಕೆ ಯಾವುದೇ ತೊಂದರೆಗಳು ಕಂಡು ಬಂದಿಲ್ಲ. ಮಳೆ ನಿರಂತರವಾಗಿ ಸುರಿಯುತ್ತಿದ್ದು, ಡಿಡಿಪಿಐ ಅವರಿಗೆ ವರದಿ ಸಲ್ಲಿಸಲಾಗುವುದು. ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸದಂತೆ ಈಗಾಗಲೇ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ.
    ಕೆ.ಎಸ್.ಸುರೇಶ್, ಬಿಇಒ, ಚಳ್ಳಕೆರೆ

    ಕಳೆದ ಐದಾರು ದಿನದಿಂದ ಬೀಳುತ್ತಿರುವ ಮಳೆಯಿಂದ ಶಾಲಾ ಮಕ್ಕಳಿಗೆ ತೀವ್ರ ತೊಂದರೆ ಆಗಿದೆ. ಸರಿಯಾದ ರಸ್ತೆ ಮತ್ತು ಬಸ್‌ಗಳ ಅನುಕೂಲ ಇಲ್ಲದ ಮಾರ್ಗಗಳಲ್ಲಿ ಮಕ್ಕಳು ಶಾಲೆಯಿಂದ ಮನೆ ತಲುಪುವುದು ಕಷ್ಟವಾಗುತ್ತಿದೆ.
    ಎಸ್.ರವಿ, ಅಧ್ಯಕ್ಷ, ರಾಜ್ಯ ಶಿಕ್ಷಣ ಪರಿಷತ್

    ಕಲಿಕಾ ಕೊಠಡಿಗಳು ಮಳೆಯಿಂದ ಸೋರುತ್ತಿವೆ. ಶಾಲೆಗೆ ಮಕ್ಕಳನ್ನು ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಶಾಲೆಯ ಪರಿಸ್ಥಿತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಿಳಿದಿನ್ನೆಯಲ್ಲಿ ಹೊಸ ಶಾಲೆ ಕಟ್ಟಲು ಸರ್ಕಾರ ಕ್ರಮ ಕೈಗೊಳ್ಳಬೇಕು.
    ಬಿ.ವಿ.ಪ್ರಕಾಶ್, ಗ್ರಾಮಸ್ಥ, ಬೆಳಗೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts