More

    ಕಂಟೈನ್ಮೆಂಟ್ ಜೋನ್ ಗುರುತು

    ಮಂಗಳೂರು: ರಾಜ್ಯ ಸರ್ಕಾರದ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪತ್ತೆಯಾದ ಪ್ರದೇಶಗಳನ್ನು ಕಂಟೈನ್ಮೆಂಟ್ ಜೋನ್ ಎಂದು ಜಿಲ್ಲಾಡಳಿತ ಗುರುತಿಸಿದೆ.
    ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮ, ತುಂಬೆ ಗ್ರಾಮ, ಬೆಳ್ತಂಗಡಿ ತಾಲೂಕಿನ ಕರಯ ಗ್ರಾಮದ ಜನತಾ ಕಾಲನಿ, ಮಂಗಳೂರು ತಾಲೂಕಿನ ತೊಕ್ಕೊಟ್ಟು ಸ್ಮಾರ್ಟ್ ಪ್ಲಾನೆಟ್ ಅಪಾರ್ಟ್‌ಮೆಂಟ್, ಪುತ್ತೂರು ತಾಲೂಕಿನ ಸಂಪ್ಯ, ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮ, ಉಪ್ಪಿನಂಗಡಿಯನ್ನು ಕಂಟೈನ್ಮೆಂಟ್ ಜೋನ್ ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳು ವರದಿಯಾಗಿತ್ತು.
    ಮುಂದಿನ ದಿನಗಳಲ್ಲಿ ಕರೊನಾ ಸೊಂಕು ಹರಡದಂತೆ, ಸರ್ಕಾರದ ನಿರ್ದೇಶನದನ್ವಯ ಈ ಪ್ರದೇಶಗಳಲ್ಲಿ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಈ ಪ್ರದೇಶದ ಜನರ ಆರೋಗ್ಯ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸಲು ನಿರ್ಬಂಧದ ನಿಯಮಗಳನ್ನು ಅನುಷ್ಠಾನಗೊಳಿಸಲು, ಸಾರ್ವಜನಿಕರಿಗೆ ಮಾಹಿತಿ ನೀಡಲು ಇನ್ಸಿಂಡೆಂಟ್ ಕಮಾಂಡರ್‌ಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

    ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ
    ಶುಕ್ರವಾರ ಕರೊನಾ ಪಾಸಿಟಿವ್ ಆಗಿ ಚಿಕಿತ್ಸೆಯಲ್ಲಿರುವ ಉಪಿನಂಗಡಿಯ ಯುವಕ ಮಾ.20ರಂದು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮಂಗಳೂರಿಗೆ ಭಾರತಿ ಟ್ರಾವೆಲ್ಸ್ ಬಸ್(ನೋಂದಣಿ ಸಂಖ್ಯೆ-ಕೆಎ51 ಎಡಿ 5832)ಆಗಮಿಸಿದ್ದಾರೆ. ಬಸ್‌ನಲ್ಲಿ ಒಟ್ಟು 32 ಮಂದಿ ಪ್ರಯಾಣಿಸಿದ್ದು, ಅವರು ಕೂಡಲೇ ತಮ್ಮ ಹತ್ತಿರ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲೂಕಿ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

    ಎಲ್ಲ ವರದಿಗಳು ನೆಗೆಟಿವ್
    ಶುಕ್ರವಾರ 7 ಸ್ಯಾಂಪಲ್‌ಗಳ ವರದಿ ಲಭ್ಯವಾಗಿದ್ದು, ಎಲ್ಲವೂ ನೆಗೆಟಿವ್. ಜಿಲ್ಲೆಯಲ್ಲಿ ಪ್ರಸ್ತುತ ಒಂದು ಪಾಸಿಟಿವ್ ಪ್ರಕರಣಕ್ಕೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಪಾಸಿಟಿವ್ ಆಗಿದ್ದ 12 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಯಲ್ಲಿ ನಿಗಾದಲ್ಲಿದ್ದಾರೆ. ಪ್ರಸ್ತುತ 151 ಮಂದಿಯ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ. ಈ ನಡುವೆ ಹೋಮ್ ಕ್ವಾರಂಟೈನ್‌ನಲ್ಲಿರುವ ಸಂಖ್ಯೆ ಇಳಿಮುಖವಾಗುತ್ತಿದ್ದು, ಪ್ರಸ್ತುತ 260 ಕ್ವಾರಂಟೈನ್‌ನಲ್ಲಿದ್ದು, 5813 ಮಂದಿ ಬಿಡುಗಡೆಯಾಗಿದ್ದಾರೆ. ಶುಕ್ರವಾರ 46 ಮಂದಿಯ ಸ್ಕ್ರೀನಿಂಗ್ ನಡೆಸಲಾಗಿದೆ. ಇಎಸ್‌ಐ ಆಸ್ಪತ್ರೆಯಲ್ಲಿ 15 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಫೀವರ್ ಕ್ಲಿನಿಕ್‌ನಲ್ಲಿ 67 ಮಂದಿಯನ್ನು ತಪಾಸಣೆ ನಡೆಸಲಾಗಿದೆ.

    ಜಿಲ್ಲೆಯಲ್ಲಿ ಸರ್ವೇ
    ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಎಂಪಿ ಕಾರ್ಯಕರ್ತರು ಸರ್ವೇಯಲ್ಲಿ ನಿರತರಾಗಿದ್ದು, ಈವರೆಗೆ ಬಂಟ್ವಾಳ ತಾಲೂಕಿನಲ್ಲಿ 13,128, ಬೆಳ್ತಂಗಡಿಯಲ್ಲಿ 7,357, ಮಂಗಳೂರು ತಾಲೂಕಿನಲ್ಲಿ 42,647, ಪುತ್ತೂರಿನಲ್ಲಿ 22,123, ಸುಳ್ಯದಲ್ಲಿ 5,708 ಸೇರಿ ಒಟ್ಟು 90,963 ಮನೆಗಳ ಸರ್ವೇ ಕಾರ್ಯ ಪೂರ್ಣಗೊಳಿಸಲಾಗಿದೆ.

    ಲಕ್ಷ್ಮೀನಗರ ಸೀಲ್‌ಡೌನ್
    ಉಪ್ಪಿನಂಗಡಿ: ದ.ಕ. ಜಿಲ್ಲೆಯ ಹದಿಮೂರನೇ ಕರೊನಾ ಪ್ರಕರಣವಾಗಿ ದಾಖಲಾಗಿರುವ ಉಪ್ಪಿನಂಗಡಿಯ ವಕೀಲರೋರ್ವರ ಮನೆ ಇರುವ ಲಕ್ಷ್ಮೀನಗರವನ್ನು ಸೀಲ್‌ಡೌನ್ ಮಾಡಲು ಪುತ್ತೂರು ಸಹಾಯಕ ಕಮಿಷನರ್ ನಿರ್ದೇಶನ ನೀಡಿದ್ದಾರೆ.
    ದೆಹಲಿಯಿಂದ ಮಾರ್ಚ್ 21ರಂದು ಬೆಂಗಳೂರಿಗೆ ವಿಮಾನದ ಮೂಲಕ ಬಂದು ಅಲ್ಲಿಂದ ಬಸ್‌ನಲ್ಲಿ ಉಪ್ಪಿನಂಗಡಿಗೆ ಆಗಮಿಸಿದ್ದ ವಕೀಲರನ್ನು ಏಪ್ರಿಲ್ 1ರಂದು ಜಿಲ್ಲಾ ಆರೋಗ್ಯ ಇಲಾಖೆ ಕ್ವಾರಂಟೈನ್‌ನಲ್ಲಿ ಇರಿಸಿತ್ತು. ಮೊದಲ ಎರಡು ತಪಾಸಣೆಯಲ್ಲಿ ನೆಗೆಟಿವ್ ರಿಪೋರ್ಟ್ ಬಂದಿತ್ತಾದರೂ ಅಂತಿಮ ಹಂತದ ಗಂಟಲ ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕಾರಣ ಜಿಲ್ಲೆಯ ಹದಿಮೂರನೇ ಪ್ರಕರಣವಾಗಿ ದಾಖಲಾಗಿತ್ತು.
    ಈ ಹಿನ್ನೆಲೆಯಲ್ಲಿ ವಕೀಲರ ನಿಕಟ ಸಂಪರ್ಕದಲ್ಲಿದ್ದ ಮನೆಯವರನ್ನು ಹಾಗೂ ಸಹೋದರರನ್ನು ಇತರರೊಂದಿಗೆ ಬೆರೆಯದಂತೆ ಮಾಡಲು ಅವರ ಮನೆಗೆ ದಿಗ್ಬಂಧನ ವಿಧಿಸಲಾಗಿದೆ. ಪರಿಸರವನ್ನು ಸೀಲ್‌ಡೌನ್ ಮಾಡಲು ಸಹಾಯಕ ಕಮಿಷನರ್ ನಿರ್ದೇಶನ ನೀಡಿದ ಕಾರಣ ಸೀಲ್‌ಡೌನ್ ಮಾಡಲಾಗುವುದೆಂದು ಉಪ್ಪಿನಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ತಿಳಿಸಿದ್ದಾರೆ.

    ದ.ಕ.ಜಿಲ್ಲೆಯಲ್ಲಿ ಒಟ್ಟು 13 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 12 ಮಂದಿ ಈಗಾಗಲೇ ಬಿಡುಗಡೆಯಾಗಿದ್ದಾರೆ. 13ನೇ ಪ್ರಕರಣದ ರೋಗಿ 14 ದಿನಗಳ ಚಿಕಿತ್ಸೆಗಾಗಿ ವೆನ್ಲಾಕ್‌ಗೆ ದಾಖಲಾಗಿದ್ದಾರೆ. 21ದಿನಗಳ ಬಳಿಕವೂ ವೈರಸ್ ಪತ್ತೆಯಾಗಿರುವುದರಿಂದ ಆರೋಗ್ಯ ಇಲಾಖೆಯಿಂದ ಎಲ್ಲ ಸೋಂಕಿತರು ಪ್ರಾಥಮಿಕ ಮತ್ತು ದ್ವಿತೀಯ ಹಂತದಲ್ಲಿ ಸಂಪರ್ಕದಲ್ಲಿದ್ದವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಎಲ್ಲ ಪ್ರಕರಣಗಳನ್ನು ಜಿಲ್ಲಾಡಳಿತ ಎಚ್ಚರಿಕೆಯಿಂದ ನಿರ್ವಹಿಸುತ್ತಿದೆ.
    ಡಾ.ರಾಮಚಂದ್ರ ಬಾಯರಿ
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

    ಕಾಸರಗೋಡಿನ ಇಬ್ಬರು ಮನೆಗೆ
    ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ ಯಾವುದೇ ಕರೊನಾ ಪಾಸಿಟಿವ್ ಪ್ರಕರಣ ಖಚಿತವಾಗಿಲ್ಲ. ಇದೇ ವೇಳೆ ಜಿಲ್ಲೆಯಲ್ಲಿ ಇಬ್ಬರು ಕೊವಿಡ್-19 ಸೋಂಕು ಖಚಿತಗೊಂಡಿದ್ದವರು ಗುಣಮುಖರಾಗಿ ಶನಿವಾರ ಜನರಲ್ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ. ಜಿಲ್ಲೆಯಲ್ಲಿ ಶನಿವಾರ 5,857 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 5740 ಮಂದಿ ಮನೆಗಳಲ್ಲಿ, 117 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿರುವರು. ಒಟ್ಟು 3,026 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಿದ್ದು, 2,267 ಮಂದಿಯ ಫಲಿತಾಂಶ ನೆಗೆಟಿವ್ ಲಭಿಸಿದೆ. 483 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ. ಕೊವಿಡ್-19 ಖಚಿತಗೊಂಡವರಲ್ಲಿ ಇದುವರೆಗೆ 115 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಪ್ರಸಕ್ತ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 53 ಮಂದಿ ಚಿಕಿತ್ಸೆಯಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts