More

    ಅತ್ಯಾಚಾರ ಸಂತ್ರಸ್ತೆಗೆ ಪೇದೆ ದೌರ್ಜನ್ಯ, ಗರ್ಭಪಾತ ಮಾಡಿಸಿದ ಆರೋಪ

    ಕಡಬ: ಅತ್ಯಾಚಾರ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಗರ್ಭಪಾತ ನಡೆಸಿರುವ ಕುರಿತು ಕಡಬ ಪೊಲೀಸ್ ಠಾಣೆಯ ಪೇದೆ ಶಿವರಾಜ್ ಎಂಬಾತನ ವಿರುದ್ಧ ಯುವತಿಯ ತಂದೆ ಅದೇ ಠಾಣೆಗೆ ದೂರು ನೀಡಿದ್ದಾರೆ. ಈ ನಡುವೆ, ಕಡಬದ ‘ನೀತಿ’ ಸಾಮಾಜಿಕ ಸಂಘಟನೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಿಗೂ ದೂರು ನೀಡಿದೆ.

    ಕೂಲಿ ಕಾರ್ಮಿಕ ದಂಪತಿ ಪುತ್ರಿ ಮೇಲೆ ಎರಡು ವರ್ಷ ಹಿಂದೆ ಅತ್ಯಾಚಾರ ನಡೆದಿದ್ದು, ಪ್ರಕರಣ ಆರು ತಿಂಗಳ ಹಿಂದೆ ಮುಕ್ತಾಯ ಕಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪೇದೆ ಶಿವರಾಜ್ ಸಮನ್ಸ್ ನೀಡುವ ವಿಚಾರಕ್ಕೆ ಆಗಾಗ ಮನೆಗೆ ಬರುತ್ತಿದ್ದ. ಪ್ರಕರಣ ಮುಗಿದಿದ್ದರೂ ಬೇರೆ ಬೇರೆ ನೆಪವೊಡ್ಡಿ ಮನೆಗೆ ಬರುತಿದ್ದ. ಇತ್ತೀಚೆಗೆ ಮಗಳು ಗರ್ಭಿಣಿ ಆಗಿರುವುದು ತಿಳಿದು ಬಂದಿದೆ. ವಿಚಾರಿಸಿದಾಗ, ಶಿವರಾಜ್ ಮದುವೆಯಾಗುವ ಭರವಸೆ ನೀಡಿದ್ದ ಎಂದು ತಿಳಿಸಿದ್ದಳು. ಈ ಬಗ್ಗೆ ವಿಚಾರಿಸಿ, ಮದುವೆಯಾಗುವಂತೆ ತಿಳಿಸಿದಾಗ ನಿರಾಕರಿಸಿದ್ದಾನೆ. ಬೇಕಾದರೆ ಅಬಾರ್ಷನ್ ಖರ್ಚು ಕೊಡುತ್ತೇನೆ ಎಂದು ತಿಳಿಸಿದ್ದ ಎಂದು ಸಂತ್ರಸ್ತೆಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸೆ.18ರಂದು ನನ್ನ ಹೆಂಡತಿ ಹಾಗೂ ಮಗಳು ಮಂಗಳೂರು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೋದವರು ಮರಳಿ ಬಂದಿಲ್ಲ. ಪತ್ನಿ ನನಗೆ ಫೋನ್ ಮಾಡಿದ್ದು, ಮಗಳಿಗೆ ಅಬಾರ್ಷನ್ ಮಾಡಲಾಗಿದೆ. ಅದಕ್ಕೆ 35,000 ರೂ.ವನ್ನು ಶಿವರಾಜ್ ಆನ್‌ಲೈನ್‌ನಲ್ಲಿ ಕಳಿಸಿದ್ದಾನೆ ಎಂದು ತಿಳಿಸಿದ್ದಾಳೆ. ಆದರೆ, ಎಲ್ಲಿದ್ದೇನೆ ಎಂದು ಹೇಳುತ್ತಿಲ್ಲ. ಅತ್ಯಾಚಾರ ಎಸಗಿರುವ ಪೇದೆ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಅಜ್ಞಾತ ಸ್ಥಳದಲ್ಲಿರುವ ಪತ್ನಿ-ಮಗಳನ್ನು ಪತ್ತೆ ಹಚ್ಚಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಆರೋಪಿ ವಶಕ್ಕೆ: ದ.ಕ. ಜಿಲ್ಲಾ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಕಡಬ ಠಾಣೆಗೆ ಸೋಮವಾರ ಭೇಟಿ ನೀಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ಗಂಭೀರ ಪ್ರಕರಣವಾಗಿದ್ದು, ಆರೋಪಿ ಪೇದೆಯನ್ನು ವಶಕ್ಕೆ ಪಡೆಯಲಾಗಿದೆ. ಎಫ್‌ಐಆರ್ ದಾಖಲಿಸಿ, ಮುಂದಿನ ತನಿಖೆ ನಡೆಸಲಾಗುವುದು ಎಂದರು. ಡಿವೈಎಸ್‌ಪಿ ಡಾ.ಗಾನ ಪಿ.ಕುಮಾರ್ ಇದ್ದರು.

    ಕ್ರಮಕ್ಕೆ ವಿಹಿಂಪ ಎಚ್ಚರಿಕೆ: ಆರೋಪಿಯನ್ನು ಅಮಾನತುಗೊಳಿಸಿ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದು ಪರಿಷತ್ ಆಗ್ರಹಿಸಿದೆ. ವಿಹಿಂಪ ಜಿಲ್ಲಾ ಕಾರ್ಯದರ್ಶಿ ಭಾಸ್ಕರ್ ಧರ್ಮಸ್ಥಳ, ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ, ಕಾರ್ಯದರ್ಶಿ ಪ್ರಮೋದ್ ರೈ ಕಡಬ ಠಾಣೆಗೆ ತೆರಳಿ ಮನವಿ ನೀಡಿದ್ದಾರೆ. ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts