More

    ಪೇದೆ ಕೊಲೆಗೆ ಪೇದೆಯಿಂದಲೇ ಸಂಚು?

    ಹುಬ್ಬಳ್ಳಿ: ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಪೇದೆಗಳಿಬ್ಬರ ಮಧ್ಯೆಯೇ ನಡೆದಿರುವ ಕಾದಾಟದ ಪ್ರಕರಣವೊಂದು ತಾರಕಕ್ಕೇರಿದೆ.

    ‘ಪೊಲೀಸ್ ಪೇದೆಯೊಬ್ಬ ತನ್ನ ಕೊಲೆಗೆ ಸಂಚು ರೂಪಿಸಿದ್ದು ರಕ್ಷಣೆ ನೀಡುವಂತೆ ಕೋರಿ’ ಪೀಡಿತ ಪೇದೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಆಯುಕ್ತರು ಪ್ರಕರಣದ ತನಿಖೆ ನಡೆಸಲು ಕಮರಿಪೇಟೆ ಇನ್‌ಸ್ಪೆಕ್ಟರ್ ಅವರಿಗೆ ಆದೇಶಿಸಿದ್ದಾರೆ.

    ಸದ್ಯ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ದಾಖಲಾಗಿರುವ ಪೇದೆ ವೆಂಕಟೇಶ ಸುರ್ವೆ ಎಂಬುವವರೇ ಆಯುಕ್ತರಿಗೆ ರಕ್ಷಣೆ ಕೋರಿ ಪತ್ರ ಬರೆದಿರುವುದು. ವೆಂಕಟೇಶ ಸುರ್ವೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಠಾಣೆಯಲ್ಲಿ ಪೇದೆಯಾಗಿದ್ದವರು ಡಿ.ಎಸ್. ಭಜಂತ್ರಿ. ಇವರಿಬ್ಬರ ಮಧ್ಯೆ ಸಣ್ಣಪುಟ್ಟ ವಿಷಯಕ್ಕೂ ಆಗಾಗ ಕಿತ್ತಾಟ ನಡೆಯುತ್ತಿತ್ತಂತೆ. ‘ಇದನ್ನೇ ದ್ವೇಷವಾಗಿಟ್ಟುಕೊಂಡು ಪೇದೆ ಭಜಂತ್ರಿ ಸ್ಥಳೀಯ ರೌಡಿಗಳಿಗೆ ಸುಪಾರಿ ಕೊಡಿಸಿ ತನ್ನನ್ನು ಕೊಲೆ ಮಾಡಿಸಲು ಮುಂದಾಗಿದ್ದಾನೆ. ನನಗೆ ರಕ್ಷಣೆ ಕೊಡಿ’ ಎಂದು ಮೇಲ್ ಮುಖಾಂತರ ಆಯುಕ್ತರಿಗೆ ಕೋರಿದ್ದ ಸುರ್ವೆ ಅಜ್ಞಾತ ಸ್ಥಳದಲ್ಲಿದ್ದರು. ಇದೀಗ ವೆಂಕಟೇಶ ಸುರ್ವೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಪ್ರಕರಣ ಪೊಲೀಸ್ ವ್ಯವಸ್ಥೆಯನ್ನೇ ಬೊಟ್ಟು ಮಾಡುವಂತಹುದಾಗಿರುವ ಕಾರಣ ಗಂಭೀರವಾಗಿ ಪರಿಗಣಿಸಿ ಆಯುಕ್ತರು ತನಿಖೆಯ ಜವಾಬ್ದಾರಿಯನ್ನು ಕಮರಿಪೇಟೆ ಠಾಣೆಯ ಇನ್‌ಸ್ಪೆಕ್ಟರ್ ರಮೇಶ ಹೂಗಾರ ಅವರಿಗೆ ವಹಿಸಿದ್ದಾರೆ. ಈ ಮಧ್ಯೆ ಆರೋಪ ಎದುರಿಸುತ್ತಿರುವ ಪೇದೆ ಭಜಂತ್ರಿಯನ್ನು ಧಾರವಾಡ ಉಪನಗರ ಠಾಣೆಗೆ ವರ್ಗಾವಣೆ ಮಾಡಿದ್ದಾರೆ.

    ಡಿ.ಎಸ್. ಭಜಂತ್ರಿ ನಿಜವಾಗಿಯೂ ಕೊಲೆಗೆ ಸಂಚು ರೂಪಿಸಿದ್ದರೋ ಅಥವಾ ವೆಂಕಟೇಶ ಸುರ್ವೆ ಮಾಡಿದ್ದು ಸುಳ್ಳು ಆರೋಪವೋ ಎನ್ನುವ ಬಗ್ಗೆ ತನಿಖೆ ನಡೆದಿದೆ. ಸದ್ಯ ಪೀಡಿತನ ಸ್ಥಾನದಲ್ಲಿರುವ ಸುರ್ವೆಯಿಂದ ಇನ್‌ಸ್ಪೆಕ್ಟರ್ ರಮೇಶ ಹೂಗಾರ ಹೇಳಿಕೆ ಪಡೆದಿದ್ದಾರೆ. ಹೇಳಿಕೆಯಲ್ಲಿ ಇನ್ನೊಬ್ಬ ಪೇದೆಯನ್ನೂ ಕೊಲೆ ಮಾಡಿಸಲು ಭಜಂತ್ರಿ ಸಂಚು ರೂಪಿಸಿದ್ದ ಎಂದು ಸುರ್ವೆ ಹೇಳಿರುವುದು ಹುಬ್ಬೇರಿಸುವಂತೆ ಮಾಡಿದೆ. ಆದರೆ, ಇದೆಲ್ಲಾ ಕಟ್ಟುಕಥೆ ಎನ್ನುತ್ತಾರೆ ದೇವು ಭಜಂತ್ರಿ.

    ಇದರ ಮರ್ಮ ತಿಳಿಯುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಯುತ್ತಿದೆ. ಅಸಲಿಗೆ ಈ ಪೇದೆಗಳಿಬ್ಬರ ಮಧ್ಯೆ ದ್ವೇಷ ಶುರುವಾಗಿದ್ದು ಯಾವ ಕಾರಣಕ್ಕಾಗಿ? ಹಣಕಾಸಿನ ವಿಚಾರವೋ? ಅಕ್ರಮ ಚಟುವಟಿಕೆಯ ಹಿನ್ನೆಲೆಯೋ? ಅಥವಾ ಸಂದೀಪನನ್ನು ಬೆತ್ತಲೆ ಮಾಡಿಸಿ ಥಳಿಸಿದ ಪ್ರಕರಣಕ್ಕೂ ನಂಟು ಇದೆಯೋ ಎಂಬಿತ್ಯಾದಿ ಅಂಶಗಳ ಬಗ್ಗೆ ತನಿಖೆ ನಡೆಯುತ್ತಿದೆ.

    ಮೇಲ್ ಮಾಡಿ ದೂರಿದ ಮಾತ್ರಕ್ಕೆ ಕೊಲೆಗೆ ಸಂಚು ರೂಪಿಸಿದ್ದು ನಿಜ ಎನ್ನುವ ನಿರ್ಧಾರಕ್ಕೆ ಬರಲಾಗದು. ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಲು ಕಮರಿಪೇಟೆ ಇನ್‌ಸ್ಪೆಕ್ಟರ್ ಅವರಿಗೆ ಸೂಚಿಸಿದ್ದೇನೆ. ಪೇದೆಗಳಿಬ್ಬರ ಹೇಳಿಕೆಯನ್ನೂ ದಾಖಲಿಸಲಾಗಿದೆ. ತನಿಖೆಯ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
    ಸಂತೋಷಬಾಬು ಹು-ಧಾ ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts