More

    ರಸ್ತೆಗುಂಡಿ ನಿರ್ವಹಣಾ ಕಾರ್ಯಪಡೆ ರಚನೆಗೆ ಚಿಂತನೆ: ಸಿಟಿ ರೌಂಡ್ಸ್ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿಕೆ

    ಬೆಂಗಳೂರು: ಮಹಾನಗರದಲ್ಲಿ ರಸ್ತೆಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ವಿಶೇಷ ಕಾರ್ಯಪಡೆ ಒಂದನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

    ರಾಜಧಾನಿಯಲ್ಲಿ ಇತ್ತೀಚಿನ ಮಳೆಯಿಂದ ಉಂಟಾದ ಹಾನಿ ಪ್ರದೇಶಗಳಿಗೆ ಡಿಸಿಎಂ ಸಹಿತ ಸಂಪುಟ ಸಹದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು.

    ಬೆಂಗಳೂರಿನಲ್ಲಿ ಪದೇ ಪದೆ ರಸ್ತೆಗುಂಡಿಗಳ ಸಮಸ್ಯೆ ಕೇಳಿಬರುತ್ತಿದೆ. ಬಿಬಿಎಂಪಿ ಗುಂಡಿ ಮುಚ್ಚಿದರೂ ಮತ್ತೆ ಗುಂಡಿಗಳು ಉಂಟಾಗುತ್ತಿವೆ. ಈ ಹಿನ್ನೆಲೆಯಲ್ಲಿ ರಸ್ತೆಗುಂಡಿಗಳನ್ನು ನಿರಂತರವಾಗಿ ನಿರ್ವಹಿಸಲು ಶಾಶ್ವತವಾದ ನಿರ್ವಹಣಾ ವ್ಯವಸ್ಥೆಯನ್ನು ರೂಪಿಸಲು ಪಾಲಿಕೆ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಕಾರ್ಯಪಡೆಯಲ್ಲಿ ಸಂಚಾರ ಪೊಲೀಸರು ನೀಡುವ ಸಲಹೆಗಳನ್ನು ಪರಿಗಣಿಸಿ ಕಾರ್ಯನಿರ್ವಹಿಸುವಂತಹ ವ್ಯವಸ್ಥೆಯನ್ನು ಶೀಘ್ರ ಜಾರಿಗೆ ತರಲಾಗುವುದು ಎಂದು ಸ್ಪಷ್ಟಪಡಿಸಿದರು.

    ಪ್ರಸ್ತುತ ವಾರ್ಡ್‌ಮಟ್ಟದ ರಸ್ತೆಗಳಲ್ಲಿ 5,500 ಗುಂಡಿಗಳು ಉಂಟಾಗಿವೆ. ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ 557 ಗುಂಡಿಗಳನ್ನು ಗುರುತಿಸಲಾಗಿದೆ. ಜತೆಗೆ 67 ಕಡೆಗಳಲ್ಲಿ ರಸ್ತೆಗಳು ಕಿತ್ತುಹೋಗಿವೆ. ಇವೆಲ್ಲವುಗಳನ್ನು ಈ ತಿಂಗಳೊಳಗೆ ಮುಚ್ಚಿ ಸುಗಮ ರಸ್ತೆಯನ್ನಾಗಿ ಮಾಡುವಂತೆ ಪಾಲಿಕೆ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದರು.

    ಕಾಮಗಾರಿ ತ್ವರಿತಗೊಳಿಸಲು ಸೂಚನೆ:

    ನಗರದಲ್ಲಿ ಒಟ್ಟು 860 ಕಿ.ಮೀ. ಉದ್ದದ ರಾಜಕಾಲುವೆ ಇದೆ. ಈ ಪೈಕಿ ಹಿಂದೆಯೇ 491 ಕಿ.ಮೀ. ಉದ್ದದಷ್ಟು ಪುನರ್ ನಿರ್ಮಿಸಿ ಒತ್ತುವರಿ ತರವು ಮಾಡಲಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಕಳೆದ ವರ್ಷದ ಜನವರಿಯಲ್ಲಿ 193 ಕಿ.ಮೀ. ಪುನರ್ ನಿರ್ಮಾಣದ ಟೆಂಡರ್ ಅನ್ನು (1,800 ಕೋಟಿ ರೂ.) ತಡವಾಗಿ ಕರೆಯಿತಾದರೂ, 2025ರ ವೇಳೆಗೆ ಪೂರ್ಣಗೊಳ್ಳಲಿದೆ. ಮೊದಲೇ ಈ ಕೆಲಸವನ್ನು ಕೈಗೆತ್ತಿಕೊಂಡಿದ್ದರೆ ಈಗ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಬಾಕಿ ಉಳಿದಿರುವ 174 ಕಿ.ಮೀ. ಉದ್ದದ ರಾಜಕಾಲುವೆಯನ್ನು ವಿಶ್ವಬ್ಯಾಂಕ್‌ನಿಂದ 2,000 ಕೋಟಿ ರೂ. ನೆರವು ಪಡೆದು ಪೂರ್ಣಗೊಳ್ಳುವ ಯೋಜನೆ ಪ್ರಗತಿಯಲ್ಲಿದೆ. 12.15 ಕಿ.ಮೀ. ಉದ್ದದಷ್ಟು ರಾಜಕಾಲುವೆ ಬದಿ ಸ್ವತ್ತುಗಳ ತಗಾದೆಯಿಂದ ಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇದೆ. ಅಗತ್ಯ ಬಿದ್ದರೆ ವಿಶೇಷ ವಕೀಲರನ್ನು ನೇಮಿಸಿ ಪ್ರಕರಣ ಇತ್ಯರ್ಥಗೊಳಿಸುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.

    ಕಾಮಗಾರಿ ತ್ವರಿತಗೊಳಿಸಲು ಸೂಚನೆ:

    ಪೂರ್ವ ಮುಂಗಾರು ವೇಳೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇದರಿಂದ ಸ್ವಲ್ಪಮಟ್ಟಿಗೆ ಹಾನಿ ಉಂಟಾಗಿದೆ. ಜೂನ್ ಮೊದಲ ವಾರದಿಂದ ಮುಂಗಾರು ಆರಂಭವಾಗಲಿದ್ದು, ಆ ಅವಧಿಯೊಳಗೆ ಅಪಾಯಕಾರಿಯಾಗಿರುವ ರಾಜಕಾಲುವೆಗಳ ಬಳಿ ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಕೈಗೆತ್ತಿಕೊಂಡು ಪೂರ್ಣಗೊಳಿಸಲು ತಾಕೀತು ಮಾಡಲಾಗಿದೆ. ಕಾಲುವೆ, ಚರಂಡಿಗಳಲ್ಲಿ ಹೂಳೆತುವುದು ಹಾಗೂ ರಸ್ತೆಬದಿ ಒಣಗಿರುವ ಕೊಂಬೆಗಳನ್ನು ಕತ್ತರಿಸಬೇಕು. ಪಾದಚಾರಿ ಮಾರ್ಗಗಳ ಸುಧಾರಣೆ ಮತ್ತು ರಾಜಕಾಲುವೆಗೆ ಕಸ ಹಾಕುವುದನ್ನು ತಡೆಗಟ್ಟಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜಕಾಲುವೆಗಳಿಂದ ಅಪಾಯ ಎದುರಾದಲ್ಲಿ ಆಯಾ ಇಂಜಿನಿಯರ್‌ಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದರು.

    ಹೆಚ್ಚುವರಿ ಕಾಲುವೆ ನಿರ್ಮಾಣಕ್ಕೆ ಸೂಚನೆ:

    ಗಾಳಿ ಆಂಜನೇಯ ದೇವಸ್ಥಾನದ ಬಳಿ ಪ್ರವಾಹ ಉಂಟಾದಲ್ಲಿ ನೀರು ಉಕ್ಕಿ ಸಮಸ್ಯೆಯಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಹೆಚ್ಚುವರಿಯಾಗಿ ಹೊಸ ಕಾಲುವೆ ನಿರ್ಮಿಸಲಾಗುವುದು. ಮಡಿವಾಳ ಕೆರೆ ಬಳಿಯ ಅನುಗ್ರಹ ಲೇಔಟ್ ನಿವಾಸಿಗಳ ಸಲಹೆಯಂತೆ ಹೊಸದಾಗಿ ಚರಂಡಿ ನಿರ್ಮಿಸಲಾಗುವುದು. ರೇಷ್ಮೆ ಮಂಡಳಿಯ ಮೆಟ್ರೋ ನಿಲ್ದಾಣದ ಬಳಿ ಬಿಎಂಆರ್‌ಸಿಎಲ್ ನಿರ್ಮಿಸಿರುವ ರಾಜಕಾಲುವೆ ಚಿಕ್ಕದಿದ್ದು, ಇನ್ನಷ್ಟು ವಿಸ್ತಾರವಾಗಿ ನಿರ್ಮಿಸಲು ಸೂಚನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.

    ರಾಜಕಾಲುವೆ ತೆರವಿಗೆ ಬದ್ಧ:

    ನಗರದಲ್ಲಿ ಇನ್ನೂ ಹಲವೆಡೆ ರಾಜಕಾಲುವೆ ಒತ್ತುವರಿ ತೆರವು ಮಾಡಬೇಕಿದೆ. ಎಷ್ಟೇ ಪ್ರಭಾವಿಗಳಾಗಿದ್ದರೂ ಒತ್ತಡಕ್ಕೆ ಮಣಿಯದೆ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತೆರವು ಮಾಡುವ ವಿಚಾರದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು.

    ಕೆರೆಗಳಲ್ಲಿ ಹೂಳೆತ್ತಲು ಕ್ರಮ:

    ಬೆಂಗಳೂರಿನಲ್ಲಿ ಹಿಂದೊಮ್ಮೆ 400 ಕೆರೆಗಳಿದ್ದವು. ಈಗ ಹಲವು ಕಣ್ಮರೆಯಾಗಿದ್ದು, ಇಲ್ಲವೇ ಒತ್ತುವರಿಯಿಂದ ಕೆರೆಗಳ ಸಂಖ್ಯೆ ಕಡಿಮೆಯಾಗಿದೆ. ಹಾಲಿ ಕೆರೆಗಳಲ್ಲಿ ಹೂಳೆತ್ತುವ ಜತೆಗೆ ಒತ್ತುವರಿ ಭಾಗಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ.

    ಫಲಿತಾಂಶ ಬಳಿಕ ಬಿಬಿಎಂಪಿ ಚುನಾವಣೆಗೆ ಗಮನ:

    ಬಿಬಿಎಂಪಿಯಲ್ಲಿ ಚುನಾಯಿತ ಸದಸ್ಯರಿಲ್ಲದೆ 4 ವರ್ಷ ಕಳೆಯುತ್ತಾ ಬಂದಿದೆ. ಸದ್ಯ ಲೋಕಸಭಾ ಚುನಾವಣೆಯ ಸಂಹಿತೆ ಇರುವುದರಿಂದ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಫಲಿತಾಂಶ ಹೊರಬಿದ್ದ ಬಳಿಕ ಪಾಲಿಕೆಗೆ ಚುನಾವಣೆ ನಡೆಸುವ ಕುರಿತು ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಪ್ರತಿಕ್ರಿಯಿಸಿದರು. ಇದಕ್ಕೆ ದನಿಗೂಡಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಬಿಎಂಪಿ ಚುನಾವಣೆ ನಡೆಸುವ ಬಗ್ಗೆ ಜೂನ್‌ನಲ್ಲಿ ಚಿಂತನೆ ನಡೆಸಲಾಗುವುದು ಎಂದಷ್ಟೇ ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts