More

    ಭಾರತ್‌ ಜೋಡೋಗೆ ಸಕಲ ಸಿದ್ಧತೆ ಕೈಗೊಳ್ಳಿ

    ಚಿತ್ರದುರ್ಗ: ರಾಷ್ಟ್ರದ ಏಕತೆಗಾಗಿ ಎಐಸಿಸಿ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಪಾದಯಾತ್ರೆ ಜಿಲ್ಲೆ ಪ್ರವೇಶದಿಂದ ಗಡಿ ಮುಕ್ತಾಯ ಆಗುವವರೆಗೂ ನಿತ್ಯ ಕನಿಷ್ಠ 40 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಎಐಸಿಸಿ ಕಾರ್ಯದರ್ಶಿ ಮಯೂರ್‌ ಜಯಕುಮಾರ್‌ ಸೂಚನೆ ನೀಡಿದರು.

    ಕಾಂಗ್ರೆಸ್‌ ಕಚೇರಿಯಲ್ಲಿ ನಗರ ಮತ್ತು ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಜೋಡೋ ಅಂಗವಾಗಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜನರನ್ನು ಕರೆತರುವ ವಾಹನಗಳು ನಿತ್ಯ ಪಾದಯಾತ್ರೆ ಆರಂಭವಾಗುವ ಸ್ಥಳಕ್ಕೆ ಬಂದು ಮುಕ್ತಾಯದ ಸ್ಥಳದಲ್ಲಿ ನಿಲ್ಲುವಂತೆ ನೋಡಿಕೊಳ್ಳುವ ಜವಾಬ್ದಾರಿ ಸ್ಥಳೀಯ ಮುಖಂಡರದ್ದಾಗಿದೆ ಎಂದರು.

    ಬೇರೆ ಜಿಲ್ಲೆಯಲ್ಲಿ ಮೊನ್ನೆ ನಡೆದ ಪಾದಯಾತ್ರೆ ವೇಳೆ ಸುಮಾರು 4ಸಾವಿರ ಜನ ಬಸ್ಸಿನೊಳಗೆ ನಿದ್ರೆಗೆ ಜಾರಿದ್ದರು. ಅವರೆಲ್ಲ ಬಹುತೇಕ ಯುವಕರೇ ಆಗಿದ್ದರು. ಇಲ್ಲಿ ಆ ರೀತಿ ಆಗದಂತೆ ಎಚ್ಚರವಹಿಸಬೇಕು. ರಾಹುಲ್‌ ಅವರ ಜತೆಯಲ್ಲೇ ಹೆಜ್ಜೆ ಹಾಕಬೇಕು. ಯುವಸಮೂಹ ಉತ್ಸಾಹದಿಂದ ಇದಕ್ಕೆ ಕೈಜೋಡಿಸಬೇಕು ಎಂದ ಅವರು, ಕಾಂಗ್ರೆಸ್‌ನತ್ತ ಜನ ವಾಲುತ್ತಿದ್ದು, ಮತ ನೀಡಲು ಸಿದ್ಧರಿದ್ದಾರೆ. ಅದನ್ನು ಪಡೆಯುವ ಹೊಣೆಗಾರಿಕೆ ಮುಖಂಡರದ್ದಾಗಿದೆ ಎಂದು ಸಲಹೆ ನೀಡಿದರು.

    ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಮಾತನಾಡಿ, ಜನರ ಹಿತಕಾಯುವುದಾಗಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಭ್ರಷ್ಟಾಚಾರದಲ್ಲಿ ತಲ್ಲೀನರಾಗಿದ್ದಾರೆ. ದೇಶ ಮತ್ತು ಸಮಾಜ ಒಡೆಯಲು ಯತ್ನಿಸುತ್ತಿದ್ದು, ಜಾತಿ, ಧರ್ಮದ ಹೆಸರಿನಲ್ಲಿ ಅಣ್ಣ ತಮ್ಮಂದಿರಂತೆ ಬದುಕುತ್ತಿರುವವರ ಮಧ್ಯೆ ಕಂದಕ ಸೃಷ್ಟಿಸುತ್ತಿದ್ದಾರೆ. ಬೆಲೆ ಏರಿಕೆ ಬಿಸಿ ಮುಟ್ಟಿಸುತ್ತಲೇ ಜನರನ್ನು ತತ್ತರಿಸುವಂತೆ ಮಾಡಿದ್ದಾರೆ. ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದ್ದು, ಸಮಗ್ರತೆಗಾಗಿ ಭಾರತ್‌ ಜೋಡೋದಲ್ಲಿ ಪಾಲ್ಗೊಳ್ಳಿ ಎಂದು ಕೋರಿದರು.

    ರಾಷ್ಟ್ರದ ಇತಿಹಾಸದಲ್ಲೇ ಈ ರೀತಿಯ ಪಾದಯಾತ್ರೆ ಕಾರ್ಯಕ್ರಮ ಯಾರೂ ಮಾಡಿಲ್ಲ. ಬ್ರಿಟಿಷರನ್ನು ದೇಶದಿಂದ ತೊಲಗಿಸಲು ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್‌ ಹೋರಾಟ ಮಾಡಿತ್ತು. ಪ್ರಸ್ತುತ ದಿನಗಳಲ್ಲಿ ಬಿಜೆಪಿ ನಾಯಕರು ಭಾರತ ತೋಡೋಗೆ ಮುಂದಾಗಿದ್ದಾರೆ. ಅದಕ್ಕಾಗಿ ಈಗ ಕಾಂಗ್ರೆಸ್‌ನಿಂದ ಭಾರತ್‌ ಜೋಡೋ ಕೈಗೊಳ್ಳಲಾಗಿದೆ. ಇದು ಖಂಡಿತ ಚುನಾವಣಾ ಪ್ರಚಾರದ ಯಾತ್ರೆಯಲ್ಲ. ಭಾರತದ ಐಕ್ಯತೆ ದೃಷ್ಟಿಯಿಂದ ಆಯೋಜಿಸಲಾಗಿದೆ. ಪಕ್ಷದ ಕಾರ್ಯಕ್ರಮಕ್ಕೆ ಸೀಮಿತವಲ್ಲ ಎಂದರು.

    ಮಾಜಿ ಸಚಿವ ಎಚ್‌.ಆಂಜನೇಯ ಮಾತನಾಡಿ, ಕಾಂಗ್ರೆಸ್‌ ತೀರಾ ಸಂಕಷ್ಟದ ಸ್ಥಿತಿ ಎದುರಿಸುತ್ತಿದೆ. ಆದ್ದರಿಂದ ಜೋಡೋಗೆ ಬೆಂಬಲ ಸೂಚಿಸಬೇಕು.  ಜಿಲ್ಲೆಯ ಮೊಳಕಾಲ್ಮುರು ಭಾಗಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಇಲ್ಲಿ ನಿರ್ಲಕ್ಷ್ಯೆ ತೋರಿದರೆ ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಬಿಜೆಪಿ ಆಡಳಿತದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ದುರಾಡಳಿತಕ್ಕೆ ಕೊನೆಯಾಡಬೇಕಿದೆ ಎಂದು ಹೇಳಿದರು.

    ವಿಧಾನಪರಿಷತ್‌ ಮಾಜಿ ಮುಖ್ಯಸಚೇತಕ ನಾರಾಯಣಸ್ವಾಮಿ, ಮಾಜಿ ಶಾಸಕರಾದ ನೇರ್ಲಗುಂಟೆ ತಿಪ್ಪೇಸ್ವಾಮಿ, ಎ.ವಿ.ಉಮಾಪತಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಮುಖಂಡರಾದ ಹಾಲೇಶ್‌, ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ಕುಮಾರ್‌ ಗೌಡ, ಲಕ್ಷ್ಮಿಕಾಂತ್‌ ಇತರರಿದ್ದರು.

    ಜೋಡೋ ಹೊರಟಲೆಲ್ಲಾ ವ್ಯಾಪಕ ಬೆಂಬಲ ದೊರೆಯುತ್ತಿದೆ. ಇದರಿಂದಾಗಿ ಆಡಳಿತ ಪಕ್ಷಕ್ಕೆ ಭಯ ಶುರುವಾಗಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 4ಸಾವಿರ ಕಾರ್ಯಕರ್ತರನ್ನು ಕರೆತರುವ ಜವಾಬ್ದಾರಿ ನನ್ನದು.
    ಹನುಮಲಿ ಷಣ್ಮುಖಪ್ಪ, ಕಾಂಗ್ರೆಸ್‌ ಮುಖಂಡ

    ಎಲ್ಲೆಲ್ಲಿ ಸಂಚರಿಸಲಿದೆ ?
    ಅ. 10ರಂದು ಹಿರಿಯೂರಿನ ವಿಜ್ಞಾನ ಕಾಲೇಜು ಸಮೀಪದ ತಾಹಾ ಪ್ಯಾಲೇಸ್‌ಗೆ ಮಧ್ಯಾಹ್ನ 3ಗಂಟೆ ಸುಮಾರಿಗೆ ಜೋಡೋ ಜಿಲ್ಲೆ ಪ್ರವೇಶಿಸಲಿದೆ. ಸಂಜೆ 4ರಿಂದ 7ರವರೆಗೂ ಬಾಲೇನಹಳ್ಳಿವರೆಗೂ 12 ಕಿ.ಮೀ ಪಾದಯಾತ್ರೆ ನಡೆಯಲಿದೆ. ಹರ್ತಿಕೋಟೆಯಲ್ಲಿ ರಾಹುಲ್‌ ಗಾಂಧಿ ತಂಗಲಿದ್ದಾರೆ. 11ರಂದು ಹರ್ತಿಕೋಟೆಯಿಂದ ಸಾಣೀಕೆರೆ, ನಂತರ ಅಲ್ಲಿಂದ ಚಳ್ಳಕೆರೆಗೆ 1 ಕಿ.ಮೀ ದೂರವಿರುವ ಸಿದ್ಧಾಪುರವನ್ನು ತಲುಪಲಿದೆ.

    12ರಂದು ಚಳ್ಳಕೆರೆ, ಗಿರಿಯಮ್ಮನಹಳ್ಳಿಯಿಂದ ಹಿರೇಹಳ್ಳಿ ಟೋಲ್‌ವರೆಗೂ ಸಂಚರಿಸಿ ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಶಾಲೆಯಲ್ಲಿ ವಾಸ್ತವ್ಯ. 13ರಂದು ಬಿ.ಜಿ.ಕೆರೆ, ಕೋನಸಾಗರ ಮಾರ್ಗವಾಗಿ ಸಂಚರಿಸಿ ಮೊಳಕಾಲ್ಮುರು ಪ್ರವೇಶಿಸಲಿದ್ದು, ರಾಂಪುರದಲ್ಲಿ ವಾಸ್ತವ್ಯ. 14ರಂದು ರಾಂಪುರದಿಂದ ಆರಂಭವಾಗಿ ಬಳ್ಳಾರಿ ಪ್ರವೇಶಕ್ಕೂ ಮುನ್ನ ಜಿಲ್ಲೆಯ ಗಡಿವರೆಗೂ ಸಂಚರಿಸಲಿದೆ.

    ಬೆಳಗ್ಗೆ 6.30ಕ್ಕೆ ಆರಂಭವಾಗಿ 10.30ರವರೆಗೂ 8ರಿಂದ 10 ಕಿ.ಮೀ ಪಾದಯಾತ್ರೆ, ಮಧ್ಯಾಹ್ನ 11ರಿಂದ 12ರವರೆಗೂ ಚರ್ಚೆ, ಮಧ್ಯಾಹ್ನ 2ಕ್ಕೆ ಭೋಜನ, 3ರಿಂದ 4 ಸಂವಾದ, ಸಂಜೆ 4ರಿಂದ 7ರವರೆಗೂ ಪಾದಯಾತ್ರೆ ನಡೆಯಲಿದ್ದು, ನಿತ್ಯ ಅಂದಾಜು 25ರಿಂದ 30 ಕಿ.ಮೀ ಸಂಚರಿಸಲಿದೆ ಎಂದು ಸಲೀಂ ಅಹ್ಮದ್‌ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts