More

    ಜಿಲ್ಲೆ ಅಭಿವೃದ್ಧಿ ಕಡೆಗಣಿಸಿದ ಪ್ರಜ್ವಲ್ ರೇವಣ್ಣ


    ಹೊಳೆನರಸೀಪುರ: ಸಂಸದ ಸ್ಥಾನದ ಘನತೆ ಅರಿತು ನಡೆಯದ ಪ್ರಜ್ವಲ್ ರೇವಣ್ಣ ಅವರು ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿದರು ಎಂದು ಹಾಸನ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಟೀಕಿಸಿದರು.

    ಪಟ್ಟಣದ ಜಯಲಕ್ಷ್ಮೀ ರೈಸ್ ಮಿಲ್ ಆವರಣದಲ್ಲಿ ಶನಿವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಮತ್ತು ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕ್ಷೇತ್ರದ ಜನತೆ ತೋರಿದ ಅಪಾರ ಬೆಂಬಲ ಕಂಡು ಕಾಂಗ್ರೆಸ್ ಪಕ್ಷ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನಗೆ ಅವಕಾಶ ನೀಡಿದೆ. ಈ ಅವಕಾಶಕ್ಕೆ ನಮ್ಮ ಕ್ಷೇತ್ರದ ಮತದಾರರೇ ಕಾರಣ. ನಮ್ಮ ವಿರೋಧಿಗಳ ಟೀಕೆಗೆ ಕಿವಿಗೊಡಬಾರದು. ಕೆಲಸ ಮಾಡಿ ತೋರಿಸಬೇಕು. ನಮ್ಮ ಫಲಿತಾಂಶದಿಂದಲೇ ಅವರಿಗೆ ಉತ್ತರ ನೀಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

    ಪಕ್ಷ ಮತ್ತು ಕಾರ್ಯಕರ್ತರು ಉಳಿಯಬೇಕೆಂದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕು. ಇದು ಸಾಧ್ಯವಾಗಬೇಕಾದರೆ ಕಾರ್ಯಕರ್ತರ ಸಹಕಾರ, ಹುಮ್ಮಸ್ಸು ಹಾಗೂ ಧೈರ್ಯ ಹೆಚ್ಚಬೇಕು. ಪ್ರತಿಯೊಬ್ಬ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಮತ ಕೇಳಬೇಕು ಎಂದು ಹೇಳಿದರು.

    ಕಾಂಗ್ರೆಸ್ ಮುಖಂಡ ಬಾಗಿವಾಳು ಮಂಜೇಗೌಡ ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ಜೆಡಿಎಸ್ ಪಕ್ಷದ ಸ್ವಾರ್ಥ ಮೈತ್ರಿಗೆ ಮತದಾರರು ಕಿಮ್ಮತ್ತು ಬೆಲೆ ನೀಡುವುದಿಲ್ಲ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಸಮ್ಮಿಶ್ರ ಮಾಡಿಕೊಂಡು ಸಂಸದರಾಗಿ ಆಯ್ಕೆಯಾದರು. ಇದೀಗ ಬಿಜೆಪಿ ಜತೆ ಸಮ್ಮಿಶ್ರ ಮಾಡಿಕೊಂಡು ಚುನಾವಣೆ ಎದುರಿಸಲು ಹೊರಟಿದ್ದಾರೆ. ಇವರು ಸ್ವಾರ್ಥಕ್ಕೆ ಏನು ಬೇಕಾದರೂ ಮಾಡುತ್ತಾರೆ. ಜಾತ್ಯತೀತ ಪಕ್ಷ ಎಂದು ಹೇಳಿಕೊಂಡು ಕೋಮುವಾದಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇವರ ಜಾತ್ಯತೀತವಾದವನ್ನು ನಾವು ನಂಬಬೇಕೆ ಎಂದು ಪ್ರಶ್ನಿಸಿದ ಅವರು, ಸಿದ್ಧಾಂತವಿಲ್ಲದ ರಾಜಕೀಯ ಮಾಡುವ ಇಂತಹವರಿಗೆ ಜಿಲ್ಲೆಯ ಮತದಾರರು ತಕ್ಕ ಉತ್ತರ ನೀಡಬೇಕು ಎಂದು ಕರೆ ನೀಡಿದರು.

    ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್.ಲಕ್ಷ್ಮಣ್ ಮಾತನಾಡಿದರು. ದಸಂಸ ರಾಜ್ಯ ಸಂಚಾಲಕ ಎಂ. ಸೋಮಶೇಖರ್, ಅರಕಲಗೂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ಮಾದಿಗ ದಂಡೋರ ಸಮಿತಿ ಸಂಚಾಲಕ ವಿಜಯ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಶ್ರುತಿ, ಪುರಸಭೆ ಮಾಜಿ ಅಧ್ಯಕ್ಷ ಪುಟ್ಟರಾಜು , ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ್, ಸುದರ್ಶನ್ ಬಾಬು, ತಾಯಮ್ಮ, ರಾಮಚಂದ್ರ, ರಾಘವೇಂದ್ರ ಹಾಗೂ ಕಾರ್ಯಕರ್ತರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts