More

    8ಕ್ಕೆ ಚಿತ್ರದುರ್ಗದಲ್ಲಿ ಕಾಂಗ್ರೆಸ್​ ಐಕ್ಯತಾ ಸಮಾವೇಶ; ಕೇಂದ್ರ ಮಾಜಿ ಸಚಿವ ಕೆ.ಎಚ್​.ಮುನಿಯಪ್ಪ ಹೇಳಿಕೆ

    ಕೋಲಾರ: ಕಾಂಗ್ರೆಸ್​ ಪರಿಶಿಷ್ಟ ಜಾತಿ ಮತ್ತು ಪಂಗಡದ ರಾಜ್ಯಮಟ್ಟದ ಐಕ್ಯತಾ ಸಮಾವೇಶವನ್ನು ಜ.8ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿದೆ ಎಂದು ಕೇಂದ್ರ ಮಾಜಿ ಸಚಿವ ಕೆ.ಎಚ್​.ಮುನಿಯಪ್ಪ ತಿಳಿಸಿದರು.

    ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶದಲ್ಲಿ 5 ಲಕ್ಷ ಮಂದಿ ಭಾಗಿಯಾಗುವ ನಿರೀಕ್ಷೆ ಇದ್ದು, ಕಾಂಗ್ರೆಸ್​ ಮತ್ತು ಸಮಾಜಕ್ಕೆ ಶಕ್ತಿ ತುಂಬುವ ಕಾರ್ಯಕ್ರಮ ಇದಾಗಲಿದೆ. ನಮ್ಮ ನಾಯಕರಾದ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಉಸ್ತುವಾರಿ ರಣದೀಪ್​ ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​ ಮಾರ್ಗದರ್ಶನದಲ್ಲಿ ಸಮಾವೇಶ ನಡೆಯುತ್ತಿದ್ದು, ಸಿಎಲ್ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್​ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ, ರಾಜ್ಯ ನಾಯಕರಾದ ಡಾ.ಜಿ.ಪರಮೇಶ್ವರ್​, ಸತೀಶ್​ ಜಾರಕಿಹೊಳಿ ಮತ್ತು ನಾನು ನೇತೃತ್ವ ವಹಿಸಿದ್ದೇವೆ ಎಂದರು.

    ಸಂವಿಧಾನದ ಆಶಯದಂತೆ ಕಾಂಗ್ರೆಸ್​ ಆಡಳಿತ ನಡೆಸುತ್ತ ಬಂದಿದ್ದು, ಗಾಂಧಿ ತೋರಿದ ಮಾರ್ಗದಲ್ಲಿ ದೇಶ ಕಟ್ಟುವ ಕೆಲಸ ಮಾಡಿದೆ. ಭಯೋತ್ಪಾದನೆ ಬೆಂಬಲಿಸಿ ದೇಶ ಒಡೆಯುವ ಕೆಲಸ ಎಂದೂ ಮಾಡಿಲ್ಲ. ಆದರೆ ಬಿಜೆಪಿ ದೇಶ, ಧರ್ಮ, ಜಾತಿಗಳನ್ನು ಒಡೆದು, ಶಾಂತಿ ಕದಡುವ ಕೆಲಸ ಮಾಡುತ್ತಿದೆ. ಈ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದರು.

    ಮೀಸಲಾತಿ ಆಶಯ ಬುಡಮೇಲು: ಬುದ್ಧ, ಬಸವ, ಗಾಂಧಿ, ನೆಹರು, ಬಾಬು ಜಗಜೀವನರಾಂ, ಡಾ. ಬಿ.ಆರ್​.ಅಂಬೇಡ್ಕರ್​ ಆಶಯಗಳಿಗೆ ಧಕ್ಕೆ ತರುವ ಕೆಲಸವನ್ನು ಇತ್ತೀಚಿನ ದಿನಗಳಲ್ಲಿ ಮಾಡಲಾಗುತ್ತಿದೆ. ಕೋಮುವಾದ ಪ್ರಚೋದಿಸಲಾಗುತ್ತಿದೆ. ಶೋಷಿತರನ್ನು ಮನು ನೀತಿಯಡಿ ತರಲು ಸರ್ಕಾರ ಮುಂದಾಗಿದೆ. ಮೀಸಲಾತಿ ಆಶಯಗಳನ್ನು ಬುಡಮೇಲು ಮಾಡಲಾಗುತ್ತಿದೆ. ಪರಿಶಿಷ್ಟರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಮೇಲೆ ದೌರ್ಜನ್ಯಗಳು ನಿರಂತವಾಗುತ್ತಿವೆ. ಸಂವಿಧಾನ ಉಳಿಸಿ ಪ್ರಜಾಪ್ರಭುತ್ವ ರಕ್ಷಣೆಗೆ ಸಮುದಾಯಗಳಲ್ಲಿ ಜಾಗೃತಿ ಮೂಡಿಸಬೇಕಿದೆ. ಇದರ ಭಾಗವಾಗಿ ಈ ಐತಿಹಾಸಿಕ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮುನಿಯಪ್ಪ ತಿಳಿಸಿದರು.

    ಮುಂಬರುವ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ನೇತೃತ್ವದ ಜಾತ್ಯತಿತ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ. ಸಮಾವೇಶವು ಇದಕ್ಕೆ ಪೂರಕವಾಗಲಿದೆ. ಎಸ್ಸಿ, ಎಸ್ಟಿ ಸಮಾವೇಶ ಇದಾಗಿದ್ದರೂ ಎಲ್ಲರೂ ಭಾಗವಹಿಸಬಹುದಾಗಿದೆ ಎಂದು ಮುನಿಯಪ್ಪ ತಿಳಿಸಿದರು.

    ಕಾಂಗ್ರೆಸ್​ ನಗರ ಘಟಕ ಅಧ್ಯಕ್ಷ ಪ್ರಸಾದ್​ಬಾಬು, ಗ್ರಾಮೀಣ ಅಧ್ಯಕ್ಷ ಉದಯ್​ಶಂಕರ್​, ಎಸ್ಸಿ ಘಟಕ ಜಿಲ್ಲಾಧ್ಯಕ್ಷ ಜಯದೇವ್​, ಕಿಸಾನ್​ ಕೇತ್​ ಜಿಲ್ಲಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್​, ಕಾಂಗ್ರೆಸ್​ ಜಿಲ್ಲಾ ಉಪಾಧ್ಯಕ್ಷ ಸೀತಿಹೊಸೂರು ಮುರಳಿ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಇಕ್ಬಾಲ್​ ಅಹ್ಮದ್​, ಹಿಂದುಳಿದ ಘಟಕ ಅಧ್ಯಕ್ಷ ನಾಗರಾಜ್​, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ರತ್ನಮ್ಮ, ಕಾರ್ಮಿಕ ಘಟಕ ಅಧ್ಯಕ್ಷ ಯಲ್ಲಪ್ಪ, ಮುಖಂಡರಾದ ಜೆ.ಕೆ. ಜಯಕೃಷ್ಣ, ರಾಮಯ್ಯ, ನಾಗರಾಜ್​, ಕೋಡಿಯಪ್ಪ, ರಮೇಶ್​ ಮುಂತಾದವರು ಉಪಸ್ಥಿತರಿದ್ದರು.

    ದೇವನಹಳ್ಳಿ ಕ್ಷೇತ್ರಕ್ಕೆ ಅರ್ಜಿ
    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ಸ್ವಾಗತಿಸುತ್ತೇವೆ. ಎಲ್ಲಿ ಬೇಕಾದರೂ ಸ್ಪರ್ಧಿಸುವ ಅರ್ಹತೆ ಅವರಿಗಿದೆ. ಅವರು ಪಕ್ಷದ ಪ್ರೋಟೋ ಕಾಲ್​ನಲ್ಲಿ ಇರುವವರು. ಜ. 9ಕ್ಕೆ ಅವರು ಕೋಲಾರಕ್ಕೆ ಬರುವ ಬಗ್ಗೆ ನನ್ನೊಂದಿಗೆ ಚರ್ಚಿಸಿದ್ದಾರೆ. ಸಮಾವೇಶದಲ್ಲಿ ಸಾಧ್ಯವಾದರೆ ಭಾಗವಹಿಸುತ್ತೇನೆ. ಕೋಲಾರ ಕ್ಷೇತ್ರದ ಟಿಕೆಟ್​ ಆಕಾಂಕ್ಷಿ ನಾನಲ್ಲ. ದೇವನಹಳ್ಳಿ ಕ್ಷೇತ್ರಕ್ಕೆ ಅರ್ಜಿ ಹಾಕಿದ್ದು, ಹೈಕಮಾಂಡ್​ ಸೂಚಿಸಿದರೆ ಸ್ಪರ್ಧಿಸುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟಪಡಿಸಿದರು. ಜಿಲ್ಲಾ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಶೀಘ್ರ ಭರ್ತಿ ಮಾಡಲಾಗುವುದು. ಪಕ್ಷ ಎಲ್ಲೆಡೆ ಗೆಲ್ಲಬೇಕೆಂಬುದು ನಮ್ಮೆಲ್ಲರ ಆಸೆಯಾಗಿದೆ. ಪತ್ರಿಕಾಗೋಷ್ಠಿಗೆ ಶಾಸಕರನ್ನು ಆಹ್ವಾನಿಸಿಲ್ಲ, ಹಾಗಾಗಿ ಯಾರೂ ಬಂದಿಲ್ಲ. ಅಂಬೇಡ್ಕರ್​ರನ್ನು ಕಾಂಗ್ರೆಸ್​ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಯಾರು(ಮಾಜಿ ಸ್ಪೀಕರ್​ ರಮೇಶ್​ ಕುಮಾರ್​) ಹೇಳಿದ್ದಾರೋ ಅವರನ್ನೇ ಕೇಳಿ. ಪಕ್ಷವೆಂದ ಮೇಲೆ ಭಿನ್ನಮತ ಇದ್ದೇ ಇರುತ್ತದೆ. ಮಾಲೂರಿನಲ್ಲಿ ಪಕ್ಷ ಸಂಘಟನೆಗೆ ಪ್ರಯತ್ನಿಸಿದೆ. ಶಾಸಕ ನಂಜೇಗೌಡ ಮತ್ತು ಮಾಜಿ ಶಾಸಕ ಎ.ನಾಗರಾಜ್​ ಅವರದು ಗುರು-ಶಿಷ್ಯರ ಸಂಬಂಧ. ವಿಧಾನಸಭಾ ಚುನಾವಣೆಗೆ ಪರ್ಯಾಯ ಅಭ್ಯರ್ಥಿಗಳು ಇರುವುದಿಲ್ಲ ಎಂದು ಮುನಿಯಪ್ಪ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts