More

    ಕಾಂಗ್ರೆಸ್ ಟಿಕೆಟ್ ಕ್ಲೈಮ್ಯಾಕ್ಸ್‌ಗೆ ತೆರೆ-ಯುವ ನಾಯಕನಿಗೆ ಮಣೆ

    ಹೀರಾನಾಯ್ಕ ಟಿ. ಬಳ್ಳಾರಿ

    ಕುತೂಹಲಕಾರಿ ಘಟ್ಟಕ್ಕೆ ತಲುಪಿದ್ದ ಬಳ್ಳಾರಿ ನಗರ ಹಾಗೂ ಸಿರಗುಪ್ಪ ಕಾಂಗ್ರೆಸ್ ಟಿಕೆಟ್ ಘೋಷಣೆಗೆ ಅಂತಿಮ ಮುದ್ರೆ ಬಿದ್ದಿದೆ. ಬಳ್ಳಾರಿ ನಗರದಿಂದ ನಾರಾ ಭರತ್ ರೆಡ್ಡಿ ಹಾಗೂ ಸಿರಗುಪ್ಪ ವಿಧಾನಸಭೆ ಕ್ಷೇತ್ರದಿಂದ ಬಿ.ಎಂ.ನಾಗರಾಜ್‌ಗೆ ಟಿಕೆಟ್ ನೀಡಿದ್ದು, ಕೈ ಪಾಳಯಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.

    ಮೊದಲ ಪಟ್ಟಿಯಲ್ಲಿ ಬಳ್ಳಾರಿ ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಹಾಲಿ ಶಾಸಕರಿಗೆ ಟಿಕೆಟ್ ಘೋಷಣೆ ಮಾಡಿದ್ದು, 2ನೇ ಪಟ್ಟಿಯಲ್ಲಿ ಮತ್ತೆರಡು ಕ್ಷೇತ್ರದ ಅಭ್ಯರ್ಥಿಗಳ ಹೆಸರು ಪ್ರಕಟಿಸುವ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿತ್ತು. ಇದೀಗ ಮೂರನೇ ಪಟ್ಟಿಯಲ್ಲಿ ಎರಡು ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದ್ದು, ಗೆಲುವಿನ ಲೆಕ್ಕಾಚಾರ ಶುರುವಾಗಿದೆ.

    ಇದನ್ನೂ ಓದಿ: ಕಾಂಗ್ರೆಸ್ಸಿನಿಂದ ಸರಣಿ ಸುದ್ದಿಗೋಷ್ಠಿ, ಬಿಜೆಪಿ ಮೇಲೆ ಪ್ರಹಾರ

    ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ನಾಲ್ಕು ಮೀಸಲು ಕ್ಷೇತ್ರಗಳಾಗಿದ್ದು, ಬಳ್ಳಾರಿ ನಗರ ಕ್ಷೇತ್ರ ಮಾತ್ರ ಸಾಮಾನ್ಯ ಕ್ಷೇತ್ರವಾಗಿರುವುದರಿಂದ ಈ ಬಾರಿ ಹೈವೋಲ್ಟೇಜ್ ರಣಕಣವಾಗುವುದರಲ್ಲಿ ಸಂಶಯವಿಲ್ಲ.

    ಬಳ್ಳಾರಿ ನಗರ ಕಾಂಗ್ರೆಸ್ ಟಿಕೆಟ್ ಫೈನಲ್ ಆಗುತ್ತಿದ್ದಂತೆ ಕ್ಷೇತ್ರದ ಮತದಾರರು ಸಂಭ್ರಮದಲ್ಲಿದ್ದಾರೆ. ಈ ಕ್ಷೇತ್ರದ ಟಿಕೆಟ್‌ಗೆ ಭಾರಿ ಪೈಪೋಟಿ ಎದುರಾಗಿತ್ತು. 15ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಬಣಕ್ಕೆ ಜಯ ಸಿಕ್ಕಿದಂತಾಗಿದೆ.

    ಸುದೀರ್ಘ ಹಗ್ಗ ಜಗ್ಗಾಟದ ಬಳಿಕ ನಾರಾ ಭರತ್ ರೆಡ್ಡಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದೆ. ರೇಸ್‌ನಲ್ಲಿದ್ದ ಪ್ರಬಲ ಆಕಾಂಕ್ಷಿ ಜೆ.ಎಸ್.ಆಂಜನೇಯಲು ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲಾಬಿ ನಡೆಸಿದ್ದರು. ಇನ್ನು ಅಲ್ಲಂ ಪ್ರಶಾಂತ್ ಪರ ಮಲ್ಲಿಕಾರ್ಜುನ ಖರ್ಗೆ ಲಾಬಿ ನಡೆಸಿದ್ದರು. ಆದರೆ ಕೊನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಬಳಗದ ಭರತ್‌ರೆಡ್ಡಿಗೆ ಟಿಕೆಟ್ ಸಿಕ್ಕಿದೆ. ಇದರಿಂದಾಗಿ ಆಕಾಂಕ್ಷಿಗಳಿಗಿಂತ ನಾಯಕರಿಗೆ ಪ್ರತಿಷ್ಠೆಯಾಗಿದ್ದ ಬಳ್ಳಾರಿ ನಗರ ಕ್ಷೇತ್ರದ ಟಿಕೆಟ್ ಕ್ಲೈಮ್ಯಾಕ್ಸ್‌ಗೆ ತೆರೆ ಬಿದ್ದಂತಾಗಿದೆ.

    ಕೈ ಚೆಲ್ಲಿದ ಅಲ್ಲಂ ಪ್ರಶಾಂತ್?

    ಲಿಂಗಾಯತ ಸಮುದಾಯದ ಪ್ರಮುಖ ನಾಯಕ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಹಾಗೂ ಅವರ ಮಗ ಅಲ್ಲಂ ಪ್ರಶಾಂತ್ ಅವರು ಬಳ್ಳಾರಿ ನಗರ ಕ್ಷೇತ್ರದಿಂದ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಟಿಕೆಟ್ ಸಿಗುವ ಮುನ್ನವೇ ಅಲ್ಲಂ ಪ್ರಶಾಂತ್ ಕೈ ಚೆಲ್ಲಿದರು ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

    ಬಳ್ಳಾರಿ ನಗರದಲ್ಲಿ 2018ರ ಪ್ರಕಾರ ಲಿಂಗಾಯತರು 38 ಸಾವಿರ, ಕುರುಬರು 20 ಸಾವಿರ, ಮುಸ್ಲಿಂ 30 ಸಾವಿರ, ಬಲಿಜ, ರೆಡ್ಡಿ ಸಮುದಾಯ 25 ಸಾವಿರ, ಎಸ್‌ಟಿ 20 ಸಾವಿರ, ಎಸ್‌ಸಿ 20 ಸಾವಿರ, ಬ್ರಾಹ್ಮಣ, ಶೆಟ್ಟಿ ಮತ್ತು ಕಮ್ಮಾರ ಇತರೆ 20 ಸಾವಿರ ಮತಗಳಿವೆ. ಲಿಂಗಾಯತರು ಹೆಚ್ಚಿರುವ ಕ್ಷೇತ್ರದಲ್ಲಿ ಈ ಬಾರಿ ಲಿಂಗಾಯತ ನಾಯಕ ಅಲ್ಲಂ ಪ್ರಶಾಂತ್‌ಗೆ ಟಿಕೆಟ್ ಸಿಗುವ ನಿರೀಕ್ಷೆ ಇತ್ತು. ಆದರೆ ಕಣದಿಂದ ಹಿಂದೆ ಸರಿದಿದ್ದರಿಂದ ದೊಡ್ಡ ಸಮುದಾಯದ ಮತದಾರರು ಯಾರಿಗೆ ಒಲಿಯಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

    ತ್ರಿಕೋನ ಸ್ಪರ್ಧೆ

    ಬಳ್ಳಾರಿ ನಗರ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಒಂದೆಡೆ ಯುವ ನಾಯಕ, ರಾಜಕೀಯದಲ್ಲಿ ಅಷ್ಟೊಂದು ಅನುಭವ ಇಲ್ಲದಿದ್ದರೂ ಉತ್ತಮ ವರ್ಚಸ್ಸಿನೊಂದಿಗೆ ವಿಧಾನಸಭೆಗೆ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರ ಪುತ್ರ ನಾರಾ ಭರತ್ ರೆಡ್ಡಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಮತ್ತೊಂದೆಡೆ ಎರಡು ಬಾರಿ ಶಾಸಕರಾಗಿ ರಾಜಕೀಯ ಅನುಭವ ಹೊಂದಿರುವ ಗಾಲಿ ಸೋಮಶೇಖರ ರೆಡ್ಡಿ ಮತ್ತೊಂದು ಗೆಲುವಿಗಾಗಿ ಪಣತೊಟ್ಟಿದ್ದಾರೆ.

    ಇನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಜನಾರ್ದನ ರೆಡ್ಡಿ ಪ್ರತಿಷ್ಠೆಯಾಗಿ ತಗೆದುಕೊಂಡಿದ್ದು, ಗೆಲ್ಲಲೇಬೇಕು ಎನ್ನುವ ಹಠದಿಂದ ಪತ್ನಿಯನ್ನು ನಿಲ್ಲಿಸಿದ್ದಾರೆ. ಆ ಮೂಲಕ ತವರು ಜಿಲ್ಲೆಯಿಂದಲೇ ಮತ್ತೆ ರಾಜಕೀಯ ಪುರ್ನಜನ್ಮ ಪಡೆಯಲು ಹಪಹಪಿಸುತ್ತಿದ್ದಾರೆ.

    ನಾಗರಾಜ್‌ಗೆ ಒಲಿದ ಟಿಕೆಟ್

    ವಿಧಾನಸಭೆ ಚುನಾವಣೆಯಲ್ಲಿ ಸೋಲು-ಗೆಲುವು ಕಂಡಿರುವ ಬಿ.ಎಂ.ನಾಗರಾಜ್‌ಗೆ ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ನೀಡಿದೆ. 2018ರ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಬಿ.ಮುರುಳೀಕೃಷ್ಣ ಹಾಗೂ ನಾಗರಾಜ್ ನಡುವೆ ಟಿಕೆಟ್‌ಗಾಗಿ ಭಾರಿ ಪೈಪೋಟಿ ಎದುರಾಗಿತ್ತು.

    ಆದರೆ ಹೈಕಮಾಂಡ್ ಈ ಬಾರಿಗೆ ಗೆಲ್ಲುವ ಕುದುರೆಗಳಿಗೆ ಹೆಚ್ಚಿನ ಮನ್ನಣೆ ನೀಡಿದ್ದು, ನಾಗರಾಜ್‌ಗೆ ಟಿಕೆಟ್ ಒಲಿದಿದೆ. 2008ರ ಎಲೆಕ್ಷನ್‌ನಲ್ಲಿ ಬಿಜೆಪಿಯ ಸೋಮಲಿಂಗಪ್ಪ ವಿರುದ್ಧ ನಾಗರಾಜ್ ಸೋಲು ಕಂಡಿದ್ದರು. 2013ರಲ್ಲಿ ಸೋಲಿನ ದವಡೆಯಿಂದ ತಪ್ಪಿಸಿಕೊಂಡ ನಾಗರಾಜ್ 65,490 ಮತ ಗಳಿಸುವ ಮೂಲಕ ಸೋಮಲಿಂಗಪ್ಪ ಅವರನ್ನು ಸೋಲಿಸಿದ್ದರು. ಪ್ರಸ್ತುತ ಚುನಾವಣೆಯಲ್ಲಿ ಸೋಮಲಿಂಗಪ್ಪ ಹಾಗೂ ಬಿ.ಎಂ.ನಾಗರಾಜ್ ವಿರುದ್ಧ ಪೈಪೋಟಿ ಎದುರಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts