More

    ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್, ಎಸ್‌ಡಿಪಿಐ ಮೈತ್ರಿ

    ಬಂಟ್ವಾಳ: ತೀವ್ರ ಕುತೂಹಲ ಸೃಷ್ಟಿಸಿದ್ದ ಬಂಟ್ವಾಳ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶನಿವಾರ ನಡೆದಿದ್ದು, ಅಧ್ಯಕ್ಷರಾಗಿ ಕಾಂಗ್ರೆಸ್‌ನ ಮಹಮ್ಮದ್ ಶರೀಫ್ ಹಾಗೂ ಉಪಾಧ್ಯಕ್ಷರಾಗಿ ಅದೇ ಪಕ್ಷದ ಜೆಸಿಂತಾ ಡಿಸೋಜ ಆಯ್ಕೆಯಾದರು.
    ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಮಹಿಳೆ ಮೀಸಲಾತಿಯನ್ನು ಸರ್ಕಾರ ಪ್ರಕಟಿಸಿತ್ತು. ಅದರಂತೆ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಗೋವಿಂದ ಪ್ರಭು, ಕಾಂಗ್ರೆಸ್‌ನಿಂದ ಮಹಮ್ಮದ್ ಶರೀಫ್ ಹಾಗೂ ಎಸ್‌ಡಿಪಿಐನಿಂದ ಮೊನೀಶ್ ಅಲಿ ನಾಮಪತ್ರ ಸಲ್ಲಿಸಿದ್ದರು.

    ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಮೀನಾಕ್ಷಿ ಗೌಡ, ಕಾಂಗ್ರೆಸ್‌ನಿಂದ ಜೆಸಿಂತಾ ಡಿಸೋಜ ನಾಮಪತ್ರ ಸಲ್ಲಿಸಿದ್ದರು. ಆದರೆ ಈ ಹುದ್ದೆಗೆ ಎಸ್‌ಡಿಪಿಐಯಲ್ಲಿ ಈ ಮೀಸಲಾತಿಯ ಅಭ್ಯರ್ಥಿಗಳಿರಲಿಲ್ಲ. ಅಂತಿಮ ಹಂತದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್‌ಡಿಪಿಐಯ ಮೊನೀಶ್ ಅಲಿ ನಾಮಪತ್ರ ಹಿಂಪಡೆದುಕೊಂಡರು.

    ಬಂಟ್ವಾಳ ಪುರಸಭೆ 27 ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್ 12, ಬಿಜೆಪಿ 11 ಹಾಗೂ ಎಸ್‌ಡಿಪಿಐನ 4 ಮಂದಿ ಸದಸ್ಯರಿದ್ದಾರೆ. ಸ್ಪಷ್ಟ ಬಹುಮತ ಇಲ್ಲದ ಕಾರಣ ಅಧಿಕಾರದ ಗದ್ದುಗೆ ಏರುವುದು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸವಾಲಾಗಿದ್ದರಿಂದ ಎಸ್‌ಡಿಪಿಐಯ ಮತ ನಿರ್ಣಾಯಕವಾಗಿತ್ತು. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಪ್ರಭು, ಸಂಸದ ಹಾಗೂ ಶಾಸಕರ ಮತ ಸೇರಿ ಒಟ್ಟು 13 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಶರೀಫ್ ಕಾಂಗ್ರೆಸ್‌ನ 12 ಸಹಿತ ಎಸ್‌ಡಿಪಿಐನ 4 ಸದಸ್ಯರ ಬೆಂಬಲದೊಂದಿಗೆ 16 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. 16 ಮತ ಪಡೆದ ಜಸಿಂತಾ ಡಿಸೋಜ ಉಪಾಧ್ಯಕ್ಷರಾದರು. ಮಹಮ್ಮದ್ ಶರೀಫ್ ಮೂರನೇ ಅವಧಿಗೆ ಸದಸ್ಯರಾಗಿ ಆಯ್ಕೆಯಾದ್ದಾರೆ. ಇದೇ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಿದ್ದಾರೆ. ಪುರಸಭೆಗೆ ಈವರೆಗೆ ಯಾವೊಬ್ಬ ಮುಸ್ಲಿಂ ಪುರುಷ ಸದಸ್ಯ ಅಧ್ಯಕ್ಷರಾಗಿರಲಿಲ್ಲ.

    ಪರಸ್ಪರ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ಎಸ್‌ಡಿಪಿಐ ಹಾಗೂ ಕಾಂಗ್ರೆಸ್ ಹೇಳಿಕೊಂಡಿತ್ತು. ಇಂದು ಎರಡೂ ಪಕ್ಷಗಳ ನಿಜ ಬಣ್ಣ ಬಯಲಾಗಿದೆ. ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಒಂದೇ ನಾಣ್ಯದ ಎರಡು ಮುಖಗಳು ಎನ್ನುವುದು ಸ್ಪಷ್ಟವಾಗಿದೆ. ಜನರಿಗೆ ಕೊಟ್ಟಿರುವ ಮಾತನ್ನು ಎರಡೂ ಪಕ್ಷಗಳು ತಪ್ಪಿದೆ. ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಒಳ್ಳೆಯ ಆಡಳಿತ ನೀಡಿದ್ದಲ್ಲಿ ನಾನು ಮತ್ತು ಶಾಸಕರು ಪೂರ್ಣ ಸಹಕಾರ ನೀಡುತ್ತೇವೆ.
    ನಳಿನ್ ಕುಮಾರ್ ಕಟೀಲ್, ಸಂಸದ

    ನೀರಿನ ಸಮಸ್ಯೆ ಬಗೆಹರಿಸುವುದು, ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಹಾಗೂ ದುಪ್ಪಟ್ಟು ತೆರಿಗೆಯ ಹೊರೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.
    ಮಹಮ್ಮದ್ ಶರೀಫ್, ನೂತನ ಅಧ್ಯಕ್ಷ

    ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಬಿಜೆಪಿ ಮಡಿಲಿಗೆ
    ಬೆಳ್ತಂಗಡಿ: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ರಜನಿ ಕುಡ್ವ, ಉಪಾಧ್ಯಕ್ಷರಾಗಿ ಜಯಾನಂದ ಗೌಡ ಅವಿರೋಧವಾಗಿ ಆಯ್ಕೆಯಾದರು.
    ಚುನಾವಣೆಯಲ್ಲಿ 11 ಸ್ಥಾನಗಳ ಪೈಕಿ ಬಿಜೆಪಿ 7, ಕಾಂಗ್ರೆಸ್ 4 ಸ್ಥಾನಗಳನ್ನು ಪಡೆದಿತ್ತು. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲು ಘೋಷಿಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ರಜನಿ ಕುಡ್ವ, ತುಳಸಿ, ಗೌರಿಗೆ ಅವಕಾಶವಿದ್ದರೂ ಪಕ್ಷದ ತೀರ್ಮಾನದಂತೆ ರಜನಿ ಕುಡ್ವ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಜಯಾನಂದ ಗೌಡ ಹಾಗೂ ಶರತ್‌ಗೆ ಅವಕಾಶವಿದ್ದರೂ ಜಯಾನಂದ ಗೌಡ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.

    ತಹಸೀಲ್ದಾರ್ ಮಹೇಶ್ ಜಿ. ಚುನಾವಣೆ ಪ್ರಕ್ರಿಯೆ ನಡೆಸಿದರು. ಉಪತಹಸೀಲ್ದಾರ್ ನಾರಾಯಣ್ ಗೌಡ, ಮುಖ್ಯಾಧಿಕಾರಿ ಸುಧಾಕರ್, ಇಂಜಿನಿಯರ್ ಮಹಾವೀರ ಅರಿಗ, ಸಮುದಾಯ ಅಭಿವೃದ್ಧಿ ವಿಭಾಗದ ವೆಂಕಟರಮಣ ಶರ್ಮ ಸಹಕರಿಸಿದರು.
    ರಜನಿ ಕುಡ್ವ: ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ ಅವರು 20 ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿದ್ದು, ನಗರ ಪಂಚಾಯಿತಿಯಲ್ಲಿ ನಾಮನಿರ್ದೇಶಿತ ಸದಸ್ಯರಾಗಿದ್ದರು. ಪ್ರಸ್ತುತ ಬಿಜೆಪಿ ಮಂಡಲ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
    ಜಯಾನಂದ ಗೌಡ: ಉಪಾಧ್ಯಕ್ಷ ಜಯಾನಂದ ಗೌಡ ಈಗಾಗಲೇ ಸಂಘ ಪರಿವಾರದ ಸಂಘಟನೆಗಳಲ್ಲಿ ಕಾರ್ಯಕರ್ತರಾಗಿದ್ದಾರೆ. ವಾಣಿ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾಗಿ, ತಾಲೂಕು ಒಕ್ಕಲಿಗ ಯಾನೆ ಗೌಡರ ಸೇವಾ ಸಂಘದ ನಿರ್ದೇಶಕರಾಗಿ, ವಾಣಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಅಭಿವೃದ್ಧಿ ಕಾರ್ಯದಿಂದ ಗೆಲುವು: ಶಾಸಕ ಹರೀಶ್ ಪೂಂಜ ಶಾಸಕರಾಗಿ ಆಯ್ಕೆಯಾದ ಒಂದು ವರ್ಷದಲ್ಲೇ ಪ.ಪಂ ಅಧಿಕಾರಕ್ಕೆ ಬಂದಿದ್ದು, ಅವರು ಸವಾಲಾಗಿ ಸ್ವೀಕರಿಸಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿದ್ದಲ್ಲದೆ ಅವರ ಒಂದು ವರ್ಷದಲ್ಲಿ ಆದಂತಹ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಪ.ಪಂ.ನಲ್ಲಿ ಗೆಲುವು ಸಾಧಿಸಲು ಮತದಾರರು ಆಶೀರ್ವದಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

    ಬಡವರ ಸಮಸ್ಯೆಗೆ ಸ್ಪಂದನೆ: ಹಿಂದೆಯೂ ಬಡವರ ಸಮಸ್ಯೆಗೆ ಸ್ಪಂದಿಸಿದ್ದೇನೆ, ಮುಂದೆಯೂ ಬಡವರ ಸಮಸ್ಯೆಗೆ ಸ್ಪಂದಿಸುವುದೇ ನನ್ನ ಗುರಿ. ಅಧಿಕಾರವೆಂಬುದು ಜನರ ಸೇವೆಗಾಗಿ ಎಂಬುದು ನನ್ನ ಭಾವನೆ. ಮೂಲಸೌಕರ್ಯವಾದ ವಿದ್ಯುತ್, ರಸ್ತೆ, ನೀರು, ಮುಂತಾದವುಗಳಿಗೆ ಪ್ರಥಮ ಆದ್ಯತೆ ನೀಡುತ್ತೇನೆ. ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ರಜನಿ ಕುಡ್ವ ತಿಳಿಸಿದರು.

    ಇತಿಹಾಸದಲ್ಲೇ ಮೊದಲ ಬಾರಿಗೆ ಬೆಳ್ತಂಗಡಿ ಪ.ಪಂ.ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಇದು ಕಾರ್ಯಕರ್ತರ ಗೆಲುವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಅಧಿಕಾರ ಇಲ್ಲದಿದ್ದರೂ ಇಲ್ಲಿನ ಸದಸ್ಯರು ಅಧಿಕಾರಿಗಳೊಂದಿಗೆ ನಗರದ ಸಮಸ್ಯೆಗೆ ಸ್ಪಂದಿಸುತ್ತಾ ಬಂದಿದ್ದಾರೆ. ಇನ್ನು ಮುಂದೆ ನಗರದ ಅಭಿವೃದ್ಧಿಗೆ, ಜನರ ಸಮಸ್ಯೆಗೆ ಸ್ಪಂದಿಸಲು ಇಲ್ಲಿನ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ನಾನು ಜತೆಯಾಗಿದ್ದೇನೆ.
    ಹರೀಶ್ ಪೂಂಜ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts