ಜೆಸಿ ರಸ್ತೆಯ ಎಡಿಎ ರಂಗಮಂದಿರದಲ್ಲಿ ಶನಿವಾರ ಕಾರ್ಯಕ್ರಮ
ಬೆಂಗಳೂರು: ನೃತ್ಯಗಂಗಾ ಪ್ರದರ್ಶನ ಕಲಾ ಕೇಂದ್ರದ ಹಿರಿಯ ವಿದುಷಿ ರೂಪಶ್ರೀ ಮಧುಸೂದನ ಅವರ ಶಿಷ್ಯೆ, ಇಂಜಿನಿಯರ್ ಎಚ್.ಎಸ್. ಸುರೇಶ್ – ಸಂಸ್ಕೃತ ಶಿಕ್ಷಕಿ ಕೆ. ಸಿ. ನಾಗಶ್ರೀ ಅವರ ಪುತ್ರಿ ವಿದ್ಯಾಶ್ರೀ ಎಚ್.ಎಸ್. ಶನಿವಾರ (ಮೇ 4) ಬೆಳಗ್ಗೆ 9.30ಕ್ಕೆ ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ.
ರಾಜಧಾನಿಯ ಜೆ.ಸಿ. ರಸ್ತೆಯಲ್ಲಿರುವ ಎಡಿಎ ರಂಗಮಂದಿರದಲ್ಲಿ ಹಿರಿಯ ಕಲಾವಿದರು, ಖ್ಯಾತ ವಿದ್ವಾಂಸರ ಉಪಸ್ಥಿತಿಯಲ್ಲಿ ರಂಗಾರೋಹಣ ಸಂಪನ್ನಗೊಳ್ಳಲಿದೆ.
ಬಹುಮುಖ ಪ್ರತಿಭೆ: ವೃತ್ತಿಯಲ್ಲಿ ಐಟಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿರುವ ವಿದ್ಯಾಶ್ರೀಗೆ ಸಂಸ್ಕೃತ, ಸಂಗೀತ ಮತ್ತು ನೃತ್ಯದ ವಿಶೇಷ ಹವ್ಯಾಸವಿದೆ. ಬಿಇ ವ್ಯಾಸಂಗದೊಂದಿಗೆ ಭರತನಾಟ್ಯ ವಿದ್ವತ್ ಪರೀಕ್ಷೆಯನ್ನೂ (ಕೆಎಸ್‌ಇಇಬಿ) ಅತ್ಯುನ್ನತ ಶ್ರೇಣಿಯೊಂದಿಗೆ ಪೂರ್ಣಗೊಳಿಸಿಕೊಂಡಿರುವ ಇವರು, ಕ್ರೈಸ್ಟ್ ವಿವಿಯಿಂದಲೂ ಭರತನಾಟ್ಯ ಎಂಎ ಸ್ನಾತಕೋತ್ತರ ಪದವೀಧರರು. ಸಂಸ್ಕೃತ ಭಾಷೆಯಲ್ಲೂ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. 15 ವರ್ಷಗಳಿಂದ ವಿದ್ವಾನ್ ಸುಬ್ರಮಣ್ಯಯನ್‌ಮಾರ್ಗದರ್ಶನದಲ್ಲಿ ಸಂಸ್ಕೃತ ಭಾಷಾ ಉನ್ನತ ಅಧ್ಯಯನ ಸಾಗಿದೆ. ವಿದುಷಿ ಅನಂತಲಕ್ಷ್ಮೀ ನಟರಾಜನ್ ಸ್ಥಾಪಿಸಿದ ಗೀತ ಗೋವಿಂದ ಸಂಸ್ಕೃತ ಸಂಘದಲ್ಲಿ, ವ್ಯೋಮಾ ಲಿಂಗ್ವಿಸ್ಟಿಕ್ ಲ್ಯಾಬ್ಸ್, ಸಂಸ್ಕೃತ ಇ – ಲರ್ನಿಂಗ್ ಸಂಸ್ಥೆಯಲ್ಲಿ ಸ್ವಯಂ ಸೇವಕಿಯಾಗಿ ಸೇವೆ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುವ ‘ಆಪ್ತ ಸಹಾಯ ಫೌಂಡೇಷನ್’ ನಲ್ಲೂ ವಿದ್ಯಾಶ್ರೀ ಕ್ರಿಯಾಶೀಲೆ.
ಅತಿಥಿಗಳು: ಮುಖ್ಯ ಅತಿಥಿಗಳಾಗಿ ಖ್ಯಾತ ನೃತ್ಯ ಪ್ರವೀಣೆ ಡಾ. ಪದ್ಮಜಾ ಸುರೇಶ, ಭರತನಾಟ್ಯ ವಿದ್ವಾಂಸ ಪ್ರವೀಣ ಕುಮಾರ್ ಆಗಮಿಸಲಿದ್ದಾರೆ. ಗುರು ವಿದುಷಿ ರೂಪಶ್ರೀ ಮಧುಸೂದನ್ ನಟುವಾಂಗ, ವಿದುಷಿ ದೀಪ್ತಿ ಶ್ರೀನಾಥ್ ಗಾಯನವಿದೆ. ಪಕ್ಕವಾದ್ಯ: ಮೃದಂಗದಲ್ಲಿ ವಿದ್ವಾನ್ ಶ್ರೀಹರಿ ರಂಗಸ್ವಾಮಿ, ಕೊಳಲು- ವಿದ್ವಾನ್ ವಿವೇಕ ಕೃಷ್ಣ, ರಿದಂ ಪ್ಯಾಡ್‌ನಲ್ಲಿ ವಿದ್ವಾನ್ ಕಾರ್ತಿಕ್ ದಾತಾರ್ ಸಹಕಾರ ನೀಡಲಿದ್ದಾರೆ.