ಕೊಡಗು : ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಗಾಳಿಯೊಂದಿಗೆ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಸುಂಟಿಕೊಪ್ಪ, ಕೊಡಗರಹಳ್ಳಿ, ಹೊಸಕೋಟೆ, ನಾಕೂರು ಶಿರಂಗಾಲ, ಕೆದಕಲ್ ಸುತ್ತಮುತ್ತಲ ಭಾಗಗಳಲ್ಲಿ ವರುಣ ಕೃಪೆ ತೋರಿದ್ದಾನೆ.
ಇದರಿಂದ ರೈತರ ಮೊಗದಲ್ಲಿ ಕೊಂಚ ಮಂದಹಾಸ ಮೂಡಿಸಿದೆ. ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನರು ಹಾಗೂ ಕಾಫಿ, ಕರಿಮೆಣಸು ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆಗೆ ಈ ಮಳೆ ಪೂರಕವಾಗಿದೆ. ಮಳೆ ಬಾರದ ಹಿನ್ನೆಲೆಯಲ್ಲಿ ಕಾಫಿ, ಕರಿಮೆಣಸು ಬಳ್ಳಿಗಳು ಒಣಗಲು ಆರಂಭಿಸಿದ್ದವು. ಅಲ್ಲದೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿತ್ತು. ಶುಕ್ರವಾರ ಸುರಿದ ಮಳೆಯಿಂದ ಸ್ವಲ್ಪ ನಿಟ್ಟುಸಿರು ಬಿಡುವಂತಾಯಿತು.