More

    ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿ ; ತಿಪಟೂರು ನಗರಾಯುಕ್ತರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಮನವಿ

    ತಿಪಟೂರು: ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಭಾಗವಹಿಸುವ ಮೂಲಕ ಕರ್ತವ್ಯಲೋಪ ಎಸಗಿರುವ ನಗರಸಭೆ ಆಯುಕ್ತ ಉಮಾಕಾಂತ್ ವಿರುದ್ಧ ಕ್ರಮ ಜರುಗಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ನಗರದ ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

    ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ 2 ಲಕ್ಷ ರೂಪಾಯಿ ದೇಣಿಗೆ ನೀಡಿರುವ ನಗರಾಯುಕ್ತ ಉಮಕಾಂತ್ ನಮಗೆ ಬೇಕಿಲ್ಲ ಎಂದು ಕಾರ್ಯಕರ್ತರು ದಿಕ್ಕಾರ ಕೂಗಿದರು. ಆಯುಕ್ತ ಉಮಾಕಾಂತ್ ಆರ್‌ಎಸ್‌ಎಸ್ ಜತೆ ಗುರುತಿಸಿಕೊಂಡಿರುವುದು ಇಡೀ ನಗರದ ಜನತೆಗೆ ಮಾಡಿದ ಅವಮಾನ ಎಂದು ಆರೋಪಿಸಿ, ಶಿಸ್ತು ಕ್ರಮ ಜರುಗಿಸುವಂತೆ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

    ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಂ.ಎನ್. ಕಾಂತರಾಜು ಮಾತನಾಡಿ, ಆಯುಕ್ತ ಉಮಾಕಾಂತ್ ಗಣವೇಶಧಾರಿಯಾಗಿ ಆರ್.ಎಸ್.ಎಸ್.ಪಥಸಂಚಲನದಲ್ಲಿ ಭಾಗಿಯಾಗಿರುವುದು ನಾಚಿಕೆಯ ವಿಷಯ. ಗೆಜೆಟೆಡ್ ಅಧಿಕಾರಿಯ ಈ ರೀತಿಯ ವರ್ತನೆ ನಗರದ ಗೌರವಕ್ಕೆ ದಕ್ಕೆ ತಂದಿದೆ. ಶನಿವಾರ ನಡೆದ ಕಾರ್ಯಕ್ರಮವನ್ನು ಭಾನುವಾರ ನಡೆದಿತ್ತು ಎಂದು ಸುಳ್ಳು ಹೇಳಿರುವ ಆಯುಕ್ತರು ಇಲ್ಲಿನ ಶಾಸಕರು, ಮಂತ್ರಿಗಳನ್ನು ಓಲೈಸುವ ಉದ್ದೇಶದಿಂದ ನಗರಸಭೆ ಕಚೇರಿಯಲ್ಲಿ ಹೋಮ ಏರ್ಪಡಿಸುವುದು. ಉರುಳು ಸೇವೆ ಮಾಡುವುದು, ಗಣಪತಿ ವಿಸರ್ಜನೆಯಲ್ಲಿ ಭಾಗವಹಿಸುವುದರಲ್ಲಿ ತೊಡಗಿದ್ದಾರೆ. ಈ ಮೂಲಕ ಇಡೀ ನಗರವನ್ನು ಕೇಸರೀಕರಣ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ತಾಪಂ ಸದಸ್ಯರಾರ ಜಿ.ಎಸ್.ಶಿವಸ್ವಾಮಿ. ಎಂ.ಡಿ.ರವಿಕುಮಾರ್. ಮುಖಂಡರಾದ ಕಾಂತರಾಜು ಇದ್ದರು.

    ಆಯುಕ್ತರು ನಮಗೆ ಬೇಕಿಲ್ಲ: ಇಡೀ ನಗರದಲ್ಲಿ ರಾಜಕಾಲುವೆ ಒತ್ತುವರಿ ಆಗಿ, 32 ಅಡಿ ವಿಸ್ತಾರವಿದ್ದ ಚರಂಡಿ 6-7 ಅಡಿಗೆ ಬಂದಿದೆ. ನಗರದ ಬೀದಿ ದೀಪಗಳು ಕಾರ‌್ಯ ನಿರ್ವಹಿಸುತ್ತಿಲ್ಲ. ಯತೇಚ್ಚ ಹೇಮಾವತಿ ನೀರಿದ್ದರೂ 3 ತಿಂಗಳಿಂದ ನಗರದ ಅಮಾನಿಕೆರೆಗೆ ನೀರು ಹರಿಸಲಾಗಿಲ್ಲ. ನಗರದಾದ್ಯಂತ ನಡೆದಿರುವ ಯು.ಜಿ.ಡಿ. ಮತ್ತು 24/7 ಕುಡಿಯುವ ನೀರಿನ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಎಲ್ಲೆಂದರಲ್ಲಿ ಯು.ಜಿ.ಡಿ. ಛೇಂಬರ್ ಕಿತ್ತು ಬಂದು ಕಲುಷಿತ ನೀರು ಕುಡಿಯುವ ನೀರಿನ ಜತೆ ಬೆರೆಯುತ್ತಿದೆ. ಗಾಂಧೀನಗರದ ಕೆಲ ಭಾಗಗಳಲ್ಲಿ ರಸ್ತೆ ಅಧ್ವಾನದಿಂದ ಜನ ಸಾಮಾನ್ಯರು ಓಡಾಡಲಾಗುತ್ತಿಲ್ಲ. ಮಿಗಿಲಾಗಿ ಸಮಸ್ಯೆ ಹೇಳಿಕೊಳ್ಳಲು ಸದಸ್ಯರೂ ಸೇರಿ ಜನ ಸಾಮಾನ್ಯರ ೆನ್ ಕರೆ ಸ್ವೀಕರಿಸದೇ ಉದ್ಘಟತನ ಪ್ರದರ್ಶಿಸುತ್ತಿದ್ದಾರೆ. ಇಷ್ಟೆಲ್ಲಾ ಜ್ವಲಂತ ಸಮಸ್ಯೆಗಳ ನಿವಾರಣೆ ಮಾಡುವ ಬದಲು ಹೋಮ-ಹವನ, ಉರುಳುಸೇವೆ. ಆರ್.ಎಸ್.ಎಸ್ ಬೈಟಕ್‌ಗಳಲ್ಲಿ ಭಾಗವಹಿಸುವ ಆಯುಕ್ತರು ನಮಗೆ ಬೇಕಿಲ್ಲ. ಕೂಡಲೇ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಕೆಪಿಸಿಸಿ ಸದಸ್ಯ ವಿ.ಯೋಗೀಶ್ ಆಗ್ರಹಿಸಿದರು.

    ಆಯುಕ್ತರ ವರ್ತನೆ ಬಿಜೆಪಿ ಸದಸ್ಯರ ವಾರ್ಡ್ ಮತ್ತು ಅನ್ಯ ಪಕ್ಷದ ಸದಸ್ಯರ ವಾರ್ಡಿಗೆ ಭಿನ್ನವಾಗಿದೆ. ಸಾರ್ವಜನಿಕರ ತೆರಿಗೆ ಹಣದ ಸಂಬಳ ಪಡೆದು ಸಂಘಟನೆಯೊಂದರ ಜತೆ ಗುರುತಿಸಿಕೊಳ್ಳಲು ಇವರಿಗೆ ಹಕ್ಕಿಲ್ಲ. ಬೆಳಗ್ಗೆ 7 ರಿಂದ ರಾತ್ರಿ 9ರ ವರೆಗೆ ಇವರು ಏನೆಲ್ಲಾ ಕೆಲಸಗಳನ್ನು ಮಾಡುತ್ತಾರೆ ಎಂಬುದನ್ನು ಸದ್ಯದಲ್ಲಿ ಬಹಿರಂಗಪಡಿಸಲಾಗುವುದು.
    ಹೂರ್ ಭಾನು. ನಗರಸಭಾ ಸದಸ್ಯರು.

    ಸಂಘಟನೆ ಜತೆ ಗುರುತಿಸಿಕೊಳ್ಳಲು ನಮ್ಮ ಅಡ್ಡಿ ಇಲ್ಲ. ಕೆಲಸಕ್ಕೆ ರಾಜಿನಾಮೆ ನೀಡಿ ಅಲ್ಲಿ ಪೂರ್ಣಾವಧಿ ತೊಡಗಿಸಿಕೊಳ್ಳಲಿ.
    ಎಂ.ಎನ್. ಕಾಂತರಾಜು. ತಾಲೂಕು ಕಾಂಗ್ರೆಸ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts