More

    ರಾಜ್ಯ ನಾಯಕರ ಬಗ್ಗೆ ವಿಶ್ವಾಸವಿಲ್ಲವೇ?: ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಪ್ರಶ್ನೆ

    ಮಂಡ್ಯ: ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಹೆಸರನ್ನು ಮುನ್ನಲೆಗೆ ತರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ತಮ್ಮ ಪಕ್ಷದ ರಾಜ್ಯ ನಾಯಕರ ಬಗ್ಗೆ ವಿಶ್ವಾಸವಿಲ್ಲ ಎನ್ನಿಸುತ್ತಿದೆ ಎಂದು ಮಾಜಿ ಸಚಿವರೂ ಆದ ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
    ಜ.27ರಂದು ನಡೆಯಲಿರುವ ಪ್ರಜಾಧ್ವನಿ ಸಮಾವೇಶ ಹಿನ್ನೆಲೆಯಲ್ಲಿ ನಗರದ ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಸಿದ್ಧತೆ ಪರಿಶೀಲಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಜನಪರ ಆಡಳಿತ, ಜನಪ್ರಿಯ ಯೋಜನೆಗಳ ಮೂಲಕ ಜನರನ್ನು ಆಕರ್ಷಿಸಿ ಮತ ಪಡೆಯುವ ಬದಲು ಪ್ರತಿ ಬಾರಿಯೂ ರಾಷ್ಟ್ರೀಯ ನಾಯಕರಾದ ನರೇಂದ್ರಮೋದಿ ಹಾಗೂ ಅಮಿತ್‌ಶಾ ಅವರ ವರ್ಚಸ್ಸನ್ನು ಸಿ.ಟಿ.ರವಿ ಮುನ್ನಲೆಗೆ ತರುತ್ತಾರೆ. ಆ ಮೂಲಕ ರಾಜ್ಯದ ಬಿಜೆಪಿ ನಾಯಕರ ನಮಗೆ ವಿಶ್ವಾಸವಿಲ್ಲ ಎಂಬುದನ್ನು ತಾವೇ ರುಜುವಾತುಪಡಿಸಿದ್ದಾರೆ ಎಂದು ಛೇಡಿಸಿದರು.
    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ದೂರು ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಬಿಜೆಪಿ ನಾಯಕರು ಗೊಂದಲದಲ್ಲಿದ್ದಾರೆ. ಹಿಂದಿನ ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಕ್ರಮಗಳು ಹಾಗೂ ಸಿದ್ದರಾಮಯ್ಯ ಅವರ ಆರ್ಥಿಕ ನೀತಿ ಮತ್ತು ಮುಂಬರುವ ವಿಧಾನಸಭಾ ಚುನಾವಣೆ ಸಂಬಂಧ ಕಾಂಗ್ರೆಸ್ ಘೋಷಿಸಿರುವ ಪ್ರಣಾಳಿಕೆ ಅಂಶಗಳಿಂದ ಕಂಗೆಟ್ಟಿರುವ ಬಿಜೆಪಿ ನಾಯಕರು ಸುಳ್ಳು ದೂರು ನೀಡಲು ಮುಂದಾಗಿರುವುದು ಅವರ ವೈಫಲ್ಯವನ್ನು ತೋರಿಸುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಜನಾಭಿಪ್ರಾಯ ವ್ಯಕ್ತವಾಗಿದೆ. ಆಳುವ ಸರ್ಕಾರ ಜನಪರ ಕಾರ್ಯಕ್ರಮ ನೀಡದೆ, ಅಕ್ಕಿ ಪ್ರಮಾಣ ಕಡಿತಗೊಳಿಸಿ ರಾಜ್ಯದ ಜನರಿಗೆ ದ್ರೋಹವೆಸಗಿದೆ. ಇದು ಕಾಂಗ್ರೆಸ್‌ಗೆ ವರದಾನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಗೋಪಾಲಯ್ಯ ಅವರ ಬದಲಿಗೆ ಕಂದಾಯ ಸಚಿವ ಆರ್.ಅಶೋಶ್ ಹೆಗಲಿಗೆ ವಹಿಸಲಾಗಿದೆ. ಅಶೋಕ್ ಈ ಹಿಂದೆ ಎರಡ್ಮೂರು ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದರಲ್ಲಿ ಹೊಸದೇನಿದೆ. ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ನಾರಾಯಣಗೌಡರೇ ಸಚಿವರಾಗಿದ್ದಾಗ ಅನ್ಯ ಜಿಲ್ಲೆಯ ಶಾಸಕರಿಗೆ ಉಸ್ತುವಾರಿ ಪಟ್ಟ ನೀಡಿದರೆ ಯಾವ ಮಟ್ಟದ ಅಭಿವೃದ್ಧಿಯಾಗುತ್ತದೆ ಎಂಬುದನ್ನು ಮತದಾರರು ಅರ್ಥೈಸಿಕೊಳ್ಳಬೇಕು. ಕೆ.ಗೋಪಾಲಯ್ಯ ಮತ್ತು ಕೆ.ಸಿ. ನಾರಾಯಣಗೌಡ ಅವರು ಒಕ್ಕಲಿಗ ಮುಖಂಡರಲ್ಲವೇ?. ಅವರಿಂದ ಸಾಧ್ಯವಾಗದ ಸಮುದಾಯದ ಮತ ಸೆಳೆಯುವ ಪ್ರಕ್ರಿಯೆ ಅಶೋಕ್ ಅವರಿಂದ ಸಾಧ್ಯವೇ ಎಂದು ಪ್ರಶ್ನಿಸಿದರು.
    ಇನ್ನು ಜನವರಿ ಅಂತ್ಯದಲ್ಲಿ ಪಕ್ಷದ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆಯಾಗಲಿದೆ. ಪ್ರಜಾಧ್ವನಿ ಸಮಾವೇಶ ಯಶಸ್ಸಿಗೆ ಜಿಲ್ಲೆಯ ಎಲ್ಲ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 75 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಅದಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
    ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಮನ್‌ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ಮುಖಂಡರಾದ ರವಿಕುಮಾರ್ ಗಣಿಗ, ಎಂ.ಎಸ್.ಚಿದಂಬರ್, ಕೆ.ಕೆ.ರಾಧಾಕೃಷ್ಣ ಕೀಲಾರ, ಸಿದ್ಧಾರೂಢ ಸತೀಶ್‌ಗೌಡ, ವಿಜಯಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts