More

    ಗುಣಮಟ್ಟ ನೆಪವೊಡ್ಡಿ ಹಾಲು ತಿರಸ್ಕಾರ

    ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ.
    ರೈತರಿಗೆ ಸರ್ಕಾರದ ಸಹಾಯಧನ ತಪ್ಪಿಸುವ ಸಲುವಾಗಿ ಗುಣಮಟ್ಟದ ನೆಪ ಹೇಳಿ ರೈತರಿಂದ ಹಾಲು ತಿರಸ್ಕಾರ ಮಾಡುತ್ತಿರುವ ಪ್ರಕರಣಗಳು ಕಂಡು ಬಂದ ಹಿನ್ನೆಲೆ ರೈತ ಸಂಘ, ಡೇರಿ ಕಾರ್ಯದರ್ಶಿಗಳ ಸಂಘದ ಪದಾಧಿಕಾರಿಗಳು ನಗರದ ಬಮೂಲ್ ಶೀತಲೀಕರಣ ಘಟಕಕ್ಕೆ ತೆರಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
    ಹಾಲು ಉತ್ಪಾದಕ ಸಹಕಾರ ಸಂಘಗಳ ನೌಕರರ ಸಂಘದ ಅಧ್ಯಕ್ಷ ರವಿ ಕುಮಾರ್ ಮಾತನಾಡಿ, ರೈತರು ಕಟ್ಟಿ ಬೆಳೆಸಿದ ಬಮೂಲ್, ಅಧಿಕಾರಿಗಳ ಸ್ವಾರ್ಥದಿಂದ ನಷ್ಟಕ್ಕೆ ಒಳಗಾಗುವ ಆತಂಕ ಎದುರಾಗಿದೆ. ಭೀಕರ ಬರಗಾಲ, ತೀವ್ರವಾದ ಬೇಸಿಗೆ, ಹಸಿ ಮೇವಿನ ಕೊರತೆಯಿಂದಾಗಿ ಹಾಲಿನ ಗುಣಮಟ್ಟ ಸ್ವಾಭಾವಿಕವಾಗಿ ಕಡಿಮೆಯಾಗುತ್ತಿದೆ. ಅಲ್ಲದೆ ಇತ್ತೀಚೆಗೆ ಕಾಲು ಬಾಯಿ ರೋಗಕ್ಕೆ ನಿರೋಧಕವಾಗಿ ಇಂಜೆಕ್ಷನ್ ಮಾಡಿಸಲಾಗಿರುವುದು ಕೂಡ ಹಾಲಿನ ಗುಣಮಟ್ಟ ಕಡಿಮೆಯಾಗಲು ಕಾರಣವಾಗಿದೆ ಎಂದರು.
    ರೈತರು ಎದುರಿಸುತ್ತಿರುವ ಈ ಸಮಸ್ಯೆಯನ್ನು ಅರಿಯದ ಅಧಿಕಾರಿಗಳು 8.4 ಎಸ್‌ಎನ್‌ಎಫ್ ಬಂದರೆ ಹಾಲು ತಿರಸ್ಕರಿಸುತ್ತಿದ್ದಾರೆ. ಇದರಿಂದ ರೈತರಿಗೆ ಸರ್ಕಾರದಿಂದ ದೊರೆಯುವ ರೂ.5 ಸಹಾಯ ಧನ ದೊರೆಯುತ್ತಿಲ್ಲ. ಅಲ್ಲದೆ ಗುಣಮಟ್ಟದ ನೆಪವೊಡ್ಡಿ ಪ್ರತಿ ದಿನ ತಾಲೂಕಿನ ಮೂರ‌್ನಾಲ್ಕು ಡೇರಿಗಳಿಗೆ ನೋ ಪೇಮೆಂಟ್ ಮಾಡುತ್ತಿದ್ದು, ಹಾಲು ಉತ್ಪಾದಕ ಸಹಕಾರ ಸಂಘಗಳು, ರೈತರು ನಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.
    ಈ ಕುರಿತು ಪ್ರಶ್ನಿಸಿದರೆ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಿದ್ದು, ಇಂತಹ ಬೇಜವಾಬ್ದಾರಿಯುತ ಅಧಿಕಾರಿಗಳಿಂದಾಗಿ ಸರ್ಕಾರಿ ಸಂಸ್ಥೆಗಳು ನಷ್ಟಕ್ಕೆ ಒಳಗಾಗಿ, ಖಾಸಗಿ ಸಂಸ್ಥೆಗಳು ಲಾಭ ಪಡೆಯಲು ಪರೋಕ್ಷವಾಗಿ ಕಾರಣವಾಗುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts