More

    ಕಾರ್ಮಿಕರ ನಿರ್ಲಕ್ಷೃ ಕೈ ಆಕ್ರೋಶ, ಅಧಿಕಾರಿಗಳನ್ನು ಕರೆಸಿದ ಕಾಂಗ್ರೆಸ್ ನಾಯಕರಿಂದ ತರಾಟೆ

    ಮಂಗಳೂರು: ಜಿಲ್ಲಾಡಳಿತ ಸೂಚನೆ ಮೇರೆಗೆ ನಗರದ ಹೊರವಲಯದ ಬಂಗ್ರ ಕೂಳೂರು ಗೋಲ್ಡ್ ಫಿಂಚ್ ಖಾಸಗಿ ಮೈದಾನಕ್ಕೆ ಆಗಮಿಸಿದ ವಲಸೆ ಕಾರ್ಮಿಕರಿಗೆ ಅಲ್ಲಿನ ವಾಚ್‌ಮೆನ್ ಮೈದಾನ ಪ್ರವೇಶಕ್ಕೆ ಅವಕಾಶ ನಿರಾಕರಿಸಿದ ಪರಿಣಾಮ ಗೊಂದಲ ಏರ್ಪಟ್ಟು, ಶಾಸಕ ಯು.ಟಿ.ಖಾದರ್ ಸಹಿತ ಕಾಂಗ್ರೆಸ್ ನಾಯಕರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಇತ್ಯರ್ಥ ಪಡಿಸಿದರು.

    ಸಾವಿರಕ್ಕೂ ಅಧಿಕ ಮಂದಿ ವಲಸೆ ಕಾರ್ಮಿಕರು ಮಂಗಳವಾರ ಮಧ್ಯಾಹ್ನ ವೇಳೆಗೆ ಬಂಗ್ರ ಕೂಳೂರು ಮೈದಾನ ಬಳಿಗೆ ಬಂದಿದ್ದರು. ಅಲ್ಲಿನ ವಾಚ್‌ಮೆನ್ ಮೈದಾನದ ಒಳಗಡೆ ಹೋಗದಂತೆ ತಡೆದಿದ್ದಾನೆ. ಕಾರ್ಮಿಕರಿಗೆ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಶಾಮಿಯಾನ, ಕುಡಿಯುವ ನೀರು, ಆಹಾರದ ವ್ಯವಸ್ಥೆ ಮಾಡಿರಲಿಲ್ಲ. ಅಧಿಕಾರಿಗಳೂ ಸ್ಥಳದಲ್ಲಿರಲಿಲ್ಲ. ಗೊಂದಲಕ್ಕೆ ಸಿಲುಕಿದ ಕಾರ್ಮಿಕರು ರಸ್ತೆಯಲ್ಲೇ ಗಲಾಟೆ ಮಾಡಲಾರಂಭಿಸಿದರು.

    ವಿಷಯ ತಿಳಿದು ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕ ಮೊದೀನ್ ಬಾವ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದರು. ಸಹಾಯಕ ಆಯುಕ್ತ ಮದನ್ ಮೋಹನ್, ತಹಸೀಲ್ದಾರ್ ಗುರುಪ್ರಸಾದ್ ಅವರನ್ನು ಸ್ಥಳಕ್ಕೆ ಕರೆಸಿ ಕಾರ್ಮಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದೆ ಇರುವುದನ್ನು ಪ್ರಶ್ನಿಸಿ ಖಾದರ್ ತರಾಟೆಗೆ ತೆಗೆದುಕೊಂಡರು. ಕೆಲಸದ ಒತ್ತಡದಲ್ಲಿ ಕೆಎಸ್ಸಾರ್ಟಿಸಿ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆಗಳ ನಡುವಿನ ಹೊಂದಾಣಿಕೆ ಕೊರತೆ ಗೊಂದಲಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ಧ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.

    ಗಲಾಟೆ ಹೆಚ್ಚಾಗುತ್ತಿದ್ದಂತೆ ಕೆಎಸ್ಸಾರ್ಟಿಸಿ, ಆರೋಗ್ಯ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಕೂಳೂರಿಗೆ ಆಗಮಿಸಿದರು. ಬಳಿಕ ಬಸ್ ವ್ಯವಸ್ಥೆ ಮಾಡಿ ಸಾವಿರಕ್ಕೂ ಅಧಿಕ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಿಕೊಟ್ಟರು. ಕಾಂಗ್ರೆಸ್ ನಾಯಕರು ಕಾರ್ಮಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts