More

    ಧ್ರುವನಾರಾಯಣ ಪತ್ನಿ ವೀಣಾ ವಿಧಿವಶ: ತಂದೆ ಬೆನ್ನಲ್ಲೇ ತಾಯಿಯನ್ನೂ ಕಳೆದುಕೊಂಡ ದರ್ಶನ್​

    ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​. ಧ್ರುವನಾರಾಯಣ ನಿಧನ ಬೆನ್ನಲ್ಲೇ ಅವರ ಪತ್ನಿ ವೀಣಾ ಧ್ರುವನಾರಾಯಣ ಕೂಡ ವಿಧಿವಶರಾಗಿದ್ದಾರೆ. ಮಾರ್ಚ್​ 11ರಂದು ಹೃದಯಾಘಾತದಿಂದ ತಂದೆಯನ್ನು ಕಳೆದುಕೊಂಡಿದ್ದ ದರ್ಶನ್​​ ಧ್ರುವನಾರಾಯಣಗೆ ಇದೀಗ ಮಾತೃ ವಿಯೋಗವಾಗಿದ್ದು, ಆಘಾತಕ್ಕೆ ಒಳಗಾಗಿದ್ದಾರೆ.

    ವೀಣಾ ಅವರು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವೀಣಾ ಕೊನೆಯುಸಿರೆಳೆದಿದ್ದಾರೆ.

    ಪತಿಯ ಅಕಾಲಿಕ ಸಾವಿನಿಂದ ವೀಣಾ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಅದೇ ನೋವಿನಲ್ಲಿದ್ದ ವೀಣಾ ಅವರು ಇದೀಗ ಕೊನೆಯುಸಿರೆಳೆದಿದ್ದಾರೆ. ಕೇವಲ 28 ದಿನಗಳ ಅಂತರದಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳಾದ ದರ್ಶನ್​ ಮತ್ತು ಧೀರನ್​ಗೆ ಬರಸಿಡಿಲು ಬಂಡಿದಂತಾಗಿದೆ.

    ತಂದೆ ಧ್ರುವನಾರಾಯಣ ಮೃತಪಟ್ಟ ಹಿನ್ನೆಲೆಯಲ್ಲಿ ದರ್ಶನ್​ ಅವರಿಗೆ ನಂಜನಗೂಡು ಕ್ಷೇತ್ರದಿಂದ ಕಾಂಗ್ರೆಸ್​ ಟಿಕೆಟ್​ ನೀಡಲಾಗಿದೆ. ತಂದೆಯ ಸಾವಿನ ನೋವಲ್ಲೂ ಚುನಾವಣಾ ಚಟುವಟಿಕೆಯಲ್ಲಿ ಬಿಜಿಯಾಗಿದ್ದ ದರ್ಶನ್​ಗೆ ಇದೀಗ ತಾಯಿಯೂ ಮೃತಪಟ್ಟ ಸುದ್ದಿ ತೀವ್ರ ಆಘಾತ ನೀಡಿದೆ. ತಮ್ಮೆಲ್ಲ ಚುನಾವಣಾ ಚಟುವಟಿಕೆಯನ್ನು ಮುಗಿಸಿ, ದರ್ಶನ್​ ಮನೆಗೆ ಧಾವಿಸಿದ್ದಾರೆ.

    ಕಾಂಗ್ರೆಸ್​ ಕಟ್ಟಾಳು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್​. ಧ್ರುವನಾರಾಯಣ (61) ಅವರು ತೀವ್ರ ಹೃದಯಾಘಾತದಿಂದ ಮೈಸೂರಿನ ಡಿಆರ್​ಎಂ ಆಸ್ಪತ್ರೆಯಲ್ಲಿ (ಮಾ.11) ವಿಧಿವಶರಾದರು. ಅವರು ಕಾಂಗ್ರೆಸ್​ ಪಕ್ಷದ ನಿಷ್ಠಾವಂತ ನಾಯಕರಾಗಿದ್ದರು. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಒಂದು ಮತದ ಅಂತರದಲ್ಲಿ ಗೆಲುವು ಸಾಧಿಸಿದ್ದರು.

    2008ರ ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2009 ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. 2014ರಲ್ಲೂ ಕೂಡ ಗೆಲುವು ಪಡೆದಿದ್ದರು. ಆದರೆ, 2018ರಲ್ಲಿ ಶ್ರೀನಿವಾಸ್ ಪ್ರಸಾದ್ ವಿರುದ್ಧ ಸೋಲು ಕಂಡಿದ್ದರು. ಸೋಲಿನ ಬಳಿಕವೂ ತುಂಬಾ ಆ್ಯಕ್ಟೀವ್ ಆಗಿದ್ದ ಧ್ರುವನಾರಾಯಣ್, ವಿಧಾನಸಭಾ ಚುನಾವಣೆಗೆ ನಂಜನಗೂಡು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು.

    ಸಂಸದರಾಗಿದ್ದ ವೇಳೆ ಅನುದಾನ ಬಳಕೆ ವಿಚಾರದಲ್ಲೂ ಉತ್ತಮ ಹೆಸರು ಪಡೆದಿದ್ದರು. ಅಲ್ಲದೆ, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿಗಳ ವಿಚಾರದಲ್ಲೂ ಉತ್ತಮ ಹೆಸರು ಪಡೆದಿದ್ದರು. (ದಿಗ್ವಿಜಯ ನ್ಯೂಸ್​)

    ತೀವ್ರ ಹೃದಯಾಘಾತದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​. ಧ್ರುವನಾರಾಯಣ ವಿಧಿವಶ

    ಎದೆ ಉರಿಯಿಂದ ಹೃದಯದಲ್ಲಿ ರಕ್ತಸ್ರಾವ: ಧ್ರುವನಾರಾಯಣ ನಿಧನಕ್ಕೆ ಗಣ್ಯರ ಕಂಬನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts