More

    ಅಭಿವೃದ್ಧಿ ಮರೆತ ಕಾಂಗ್ರೆಸ್ ಸರ್ಕಾರ: ಶಾಸಕ ಚನ್ನಬಸಪ್ಪ

    ಶಿವಮೊಗ್ಗ: ಐದು ಗ್ಯಾರಂಟಿ ಯೋಜನೆಗಾಗಿ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಗ್ಯಾರಂಟಿ ನೀಡಿರುವುದಾಗಿ ಹೇಳುವ ಕಾಂಗ್ರೆಸ್ ಜನರ ಮರಣ ಶಾಸನ ಬರೆದಿದೆ. ಬರ ಪರಿಹಾರ, ಬೆಳೆವಿಮೆ, ಎಸ್‌ಟಿ, ಎಸ್‌ಸಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಚಿಪ್ಪು ನೀಡಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆಯುತ್ತಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಯೋಚನೆ ಮತ್ತು ಯೋಜನೆಯನ್ನೇ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ತುಘಲಕ್ ರೀತಿ ದರ್ಬಾರ್ ನಡೆಸುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
    ಎಸ್‌ಸಿ, ಎಸ್‌ಟಿಗೆ ಸೇರಿದ ಅನುದಾನ 25,396 ಕೋಟಿ ರೂ.ಅನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದೆ. ಈ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲು ಅವಕಾಶ ಇಲ್ಲ. ಆದರೂ ಅದನ್ನು ಐದು ಗ್ಯಾರಂಟಿಗೆ ಬಳಕೆ ಮಾಡಿಕೊಂಡಿರುವುದು ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು.
    ಹಿಂದು ರಾಷ್ಟ್ರದಲ್ಲಿ ಜಾತಿ ವಿಷಬೀಜ ಬಿತ್ತಿ ಮನಸ್ಸುಗಳನ್ನು ಒಡೆದು ದೇಶದ ಅಸ್ಮಿತೆಯನ್ನು ಗಾಳಿಗೆ ತೂರುತ್ತಿದೆ. ದೇಶದ ಸುರಕ್ಷತೆ ಹಾಳು ಮಾಡಿದೆ. ಸುಳ್ಳು ಭರವಸೆ ಮತ್ತು ಭ್ರಷ್ಟಾಚಾರ ಮೂಲಕ ಆಡಳಿತ ವ್ಯವಸ್ಥೆ ಅದೋಗತಿಗೆ ತಲುಪಿದೆ. ಹೈನುಗಾರರಿಗೆ ಪ್ರತಿ ಲೀಟರ್ ಹಾಲಿಗೆ ನೀಡುತ್ತಿದ್ದ 7 ರೂ. ಸಬ್ಸಿಡಿ ನಿಲ್ಲಿಸಿದೆ. ಜತೆಗೆ ಸತ್ತ ನಂತರವೂ ಆಸ್ತಿ ತೆರಿಗೆ ಹಾಕಲು ಮುಂದಾಗಿದೆ. ಪಿತ್ರಾರ್ಜಿತ ಆಸ್ತಿಯ ಶೇ. 55ರಷ್ಟನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಹೊರಟಿದೆ ಎಂದರು.
    ರಾಜ್ಯ ಪ್ರಕೋಷ್ಠಗಳ ಸಂಚಾಲಕ ಎಸ್.ದತ್ತಾತ್ರಿ, ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಪ್ರಮುಖರಾದ ಎಸ್.ಜ್ಞಾನೇಶ್ವರ, ಎನ್.ಜೆ.ನಾಗರಾಜ್, ನವುಲೆ ಮಂಜುನಾಥ, ಏಳುಮಲೈ ಬಾಬು, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

    ಬಿವೈಆರ್ ಗೆಲುವು ನಿಶ್ಚಿತ
    ಶಿವಮೊಗ್ಗ ಲೋಕಸಭೆಯಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತವಾಗಿದೆ. ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸಿ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಮತದಾರರು ಬಿಜೆಪಿ ಕಡೆ ಇದ್ದಾರೆ. ಮತದಾರರ ಮನಸ್ಸು ನಮ್ಮ ಕಡೆ, ಮೋದಿ ಕಡೆ ಇದೆ. ಹಾಗಾಗಿ ಈ ಬಾರಿ ಹೆಚ್ಚಿನ ಬಹುಮತದಿಂದ ಗೆಲ್ಲಿಸುತ್ತಾರೆ. ರಾಜ್ಯ ಸರ್ಕಾರದ ದುರಾಳಿತದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಸೋಲಾಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts