More

    ಕಾಂಗ್ರೆಸ್ ಅಭ್ಯರ್ಥಿ ಅಧಿಕಾರಕ್ಕಾಗಿ ಪಕ್ಷ ಬದಲಿಸುವವರು

    ಚಿಕ್ಕಮಗಳೂರು: ನಮ್ಮ ಅಭ್ಯರ್ಥಿ ಸರಳ, ಸಜ್ಜನರು. ಅದೇ ಕಾಂಗ್ರೆಸ್ ಅಭ್ಯರ್ಥಿ ಅಧಿಕಾರಕ್ಕಾಗಿ ಪಕ್ಷ ಬದಲಿಸುವವರು. ನಮ್ಮ ಮುಂದಿನ ಪ್ರಧಾನಿ ಯಾರು ಎಂಬುದನ್ನು ಈಗಾಗಲೇ ಘೋಷಿಸಿಕೊಂಡಿದ್ದೇವೆ. ಆದರೆ ಕಾಂಗ್ರೆಸ್ ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬ ಅನಿಶ್ಚಿತತೆ ಕಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ವ್ಯಂಗ್ಯವಾಡಿದರು.

    ನಗರದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ನಡೆದ ಜಿಲ್ಲಾ ಯುವ ಮೋರ್ಚ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಾಧನೆಗಳ ಆಧಾರದ ಮೇಲೆಯೇ ನಾವು ಚುನಾವಣೆ ನಡೆಸುತ್ತಿದ್ದೇವೆ. ಹೀಗಾಗಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರತಿಯೊಬ್ಬ ಮತದಾರರಿಗೂ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಿದೆ ಎಂದು ಕರೆ ನೀಡಿದರು.
    2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಭಾರತಕ್ಕೆ ಆಶಾಕಿರಣ ಸಿಕ್ಕಿದಂತಾಗಿತ್ತು. ಕಳೆದ ಹತ್ತು ವರ್ಷಗಳಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಸಮರ್ಥವಾಗಿ ಆಡಳಿತ ನಿರ್ವಹಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು.
    ಬಿಜೆಪಿಯ ಭವಿಷ್ಯ ಯುವ ಮೋರ್ಚಾ ಮೇಲಿದೆ. ಮುಂದೆ ಬಿಜೆಪಿ ಪಕ್ಷದ ಚುಕ್ಕಾಣಿ ಹಿಡಿಯಬೇಕಾದವರು ಯುವ ಮೋರ್ಚಾ ಕಾರ್ಯಕರ್ತರೇ. ಇಂದು ಪಕ್ಷದ ಪ್ರಮುಖ ಹುದ್ದೆಯಲ್ಲಿರುವ ಪ್ರತಿಯೊಬ್ಬರು ಯುವ ಮೋರ್ಚಾದಲ್ಲಿ ಕೆಲಸ ಮಾಡಿದವರು ಎಂಬುದನ್ನು ಮನಗಾಣಬೇಕು. ಈ ಮೂಲಕ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಪ್ರತಿಯೊಬ್ಬ ಕಾರ್ಯಕರ್ತರು ಶ್ರಮ ವಹಿಸಬೇಕು ಎಂದು ತಿಳಿಸಿದರು.
    ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಕನಸು 2047ಕ್ಕೆ ಭಾರತ ವಿಕಸಿತವಾಗಬೇಕು ಎಂಬುದಾಗಿದೆ. ಆದರೆ ಕಾಂಗ್ರೆಸ್ ನಾಯಕರ ಹಿಂಬಾಲಕರು ಕ್ಷಣಕ್ಕು ಭಾರತವನ್ನು ದುರ್ಬಲಗೊಳಿಸಲು ಯತ್ನಿಸುತ್ತಿರುವ ದರಿದ್ರ ದೇಶಕ್ಕೆ ವಿಧಾನಸೌಧದಲ್ಲಿಯೇ ಜೈಕಾರ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಕಾಂಗ್ರೆಸ್ ನಾಯಕರು ಶ್ರೀರಾಮನನ್ನೇ ಕಾಲ್ಪನಿಕ ಎಂದು ಅವಮಾನಿಸುತ್ತಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ನಡೆದರೆ ಸೈನಿಕರನ್ನೇ ಅನುಮಾನದಿಂದ ನೋಡುವ ಮೂಲಕ ಅಪಮಾನಿಸುತ್ತಿದ್ದಾರೆ. ಚುನಾವಣೆ ಬಂದರೆ ಇವಿಎಂ ಗಳನ್ನೇ ಅನುಮಾನಿಸುತ್ತಾರೆ. ಇದು ಕಾಂಗ್ರೆಸ್ನ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
    ಜಗತ್ತಿನಲ್ಲಿ ಯಾವುದಾದರೂ ದೇಶಕ್ಕೆ ಭವಿಷ್ಯವಿದೆ ಎಂದರೆ ಅದು ಭಾರತಕ್ಕೆ ಮಾತ್ರ. ಕಾರಣ ಭಾರತದಲ್ಲಿ ಯುವಜನರ ಸಂಖ್ಯೆ ಅತಿ ಹೆಚ್ಚಾಗಿದೆ. ಯುವ ಜನತೆಯ ಭವಿಷ್ಯ ರೂಪಿಸುವ ಚುನಾವಣೆಯ ಹೊಸ್ತಿಲಲ್ಲಿ ನಾವಿದ್ದೇವೆ. ಇದು ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿಸುವ ಚುನಾವಣೆ ಎಂಬುದನ್ನು ಪ್ರತಿಯೊಬ್ಬ ಕಾರ್ಯಕರ್ತರು ಅರಿಯಬೇಕು ಎಂದು ತಿಳಿಸಿದರು.
    ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಯುವ ಮೋರ್ಚ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ವಹಿಸಿದ್ದರು. ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಹರ್ಷಿತ್, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಪ್ರಮುಖರಾದ ಸಚಿನ್, ಶರತ್ ಉಪಸ್ಥಿತರಿದ್ದರು.

    ಕೇಸು ಬಿದ್ದರೆ ಹೆದರಬೇಡಿ
    ರಾಜ್ಯದಲ್ಲಿ ಬಿಜೆಪಿ ಸರ್ಕಾರವಿಲ್ಲ. ಹಾಗೆಯೇ ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿಲ್ಲ. ಹೀಗಿರುವಾಗ ನಾವು ಹಿಂದುತ್ವದ ಪರವಾಗಿ ಹೋರಾಟ ಮಾಡಿದರೆ ಕೇಸು ಬೀಳುವುದು ಮಾಮೂಲಿ. ಕೇಸು ಬಿದ್ದಾಗ ಕಾರ್ಯಕರ್ತರು ಹೆದರಬಾರದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ ಕರೆ ನೀಡಿದರು.
    ಈಗಾಗಲೇ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸುಗಳು ದಾಖಲಾಗಲಾರಂಭಿಸಿವೆ. ಮಾಡಬಾರದ ಕೆಲಸ ಮಾಡಿ ಕೇಸು ಬಿದ್ದರೆ ಆಗ ಅವಮಾನವಾಗುತ್ತದೆ. ಅದೇ ಹಿಂದುತ್ವದ ಕೆಲಸ ಮಾಡಿ ಕೇಸು ಬಿದ್ದು ಜೈಲಿಗೆ ಹೋಗಿ ಬಂದಾಗ ನಮ್ಮ ಗೌರವ ಹೆಚ್ಚಾಗುತ್ತದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts