More

    ಕಾಂಗ್ರೆಸ್ ಭವನ ಬೆಳಗಾವಿ ಜಿಲ್ಲೆಗೆ ಕೊಡುಗೆ

    ಬೆಳಗಾವಿ: ಬೆಳಗಾವಿ ಜಿಲ್ಲೆಗೆ ಕಾಂಗ್ರೆಸ್ ಭವನ ಕೊಡುಗೆಯಾಗಿದೆ. ಯಾವುದೇ ಜಿಲ್ಲೆಯಲ್ಲೂ ಇಷ್ಟು ದೊಡ್ಡ ಭವನವಿಲ್ಲ. ಪಕ್ಷದ ಎಲ್ಲ ಮುಂಚೂಣಿಯ ಘಟಕಗಳು ಈ ಭವನದ ಸದುಪಯೋಗಪಡೆಯಬೇಕು ಎಂದು ಕಾರ್ಯಕರ್ತರು ಹಾಗೂ ಮುಖಂಡರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

    ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂಗ್ರೆಸ್ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರಾಗುವ ಪೂರ್ವದಲ್ಲೂ ಬೆಳಗಾವಿ ಜಿಲ್ಲೆಯ ಬಗ್ಗೆ ಡಿ.ಕೆ.ಶಿವಕುಮಾರ ವಿಶೇಷ ಕಾಳಜಿ ವಹಿಸಿದ್ದರು. ಈ ಭವನದ ನೀಲಿನಕ್ಷೆಯನ್ನು ಅವರೇ ಮಾಡಿಕೊಟ್ಟಿದ್ದಾರೆ ಎಂದರು.

    ವಿಭಜನೆಗೆ ಯತ್ನಿಸಿದ್ದೆ: ನಾಲ್ಕು ಜಿಲ್ಲೆಗಳಾಗಿ ಮಾಡುವಷ್ಟು ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು ವಿಭಜನೆ ಮಾಡಬೇಕು ಎಂದು ಡಿಸಿಎಂ ಆಗಿದ್ದ ವೇಳೆ ಪ್ರಯತ್ನಿಸಿದ್ದೆ. ಆದರೆ, ಮಹಾರಾಷ್ಟ್ರ ಏಕೀಕರಣ ವಿಚಾರದ ಕಾರಣ ವಿಭಜನೆ ಮಾಡಲು ಹೋಗಲಿಲ್ಲ. ಬೆಳಗಾವಿಯಲ್ಲೂ ಕಾಂಗ್ರೆಸ್ ದೀರ್ಘಕಾಲ ಅಧಿಕಾರ ನಡೆಸಿದೆ. ಕಾಂಗ್ರೆಸ್‌ನಿಂದ ಶಾಸಕರು, ಸಂಸದರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗುತ್ತಿದ್ದರು. ಈಗ ಸ್ವಲ್ಪ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆಲ್ಲಲ್ಲೇಬೇಕು ಎಂದು ತಿಳಿಸಿದರು.

    ಉತ್ತಮವಾದ ಭವನ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, ಶಾಸಕ ಸತೀಶ ಜಾರಕಿಹೊಳಿ ಕಾರ್ಯಾಧ್ಯಕ್ಷರಾದ ಬಳಿಕ ಬಹಳಷ್ಟು ಕೆಲಸ ಮಾಡಿದ್ದಾರೆ. ಅವರಂತೆ ರಾಜ್ಯದ ಯಾವುದೇ ಜಿಲ್ಲಾ ಕಾಂಗ್ರೆಸ್ ಘಟಕಗಳು ಕೆಲಸ ಮಾಡಲು ಸಾಧ್ಯವಾಗಿಲ್ಲ. ನಮ್ಮ ಬೆಂಗಳೂರಿನ ಕಚೇರಿ ಕೂಡ ಈ ರೀತಿ ಮಾಡಲು ಸಾಧ್ಯವೇ ಎಂದು ಸಿದ್ದರಾಮಯ್ಯ ನಾನು ಮಾತನಾಡಿಕೊಂಡಿದ್ದೆವು. ಪ್ರತಿ ತಾಲೂಕಿಗೆ ಹೋಗಿ ಮುಖಂಡರು, ಕಾರ್ಯಕರ್ತರಿಗೆ ಭವನ ನಿರ್ಮಾಣಕ್ಕೆ ಪ್ರೇರೇಪಣೆ ಮಾಡಬೇಕೆಂದರು.

    ಸಮರ್ಥವಾಗಿ ನಿಭಾಯಿಸುವೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, ದೇಶ ಮತ್ತು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಶಿಸ್ತಿನ ಸಿಪಾಯಿಯಾಗಬೇಕು. ಈ ನಿಟ್ಟಿನಲ್ಲಿ ಸಂಘಟನೆಯ ಅಗತ್ಯವಿದೆ. ಪಕ್ಷ ಸಂಘಟನೆಗೆ ತರಬೇತಿ ನೀಡಲು ನನ್ನನ್ನು ತರಬೇತಿ ಉಸ್ತುವಾರಿಯಾಗಿ ನೇಮಿಸಿದ್ದು, ಸಮರ್ಥವಾಗಿ ಜವಾಬ್ದಾರಿ ನಿಭಾಯಿಸುತ್ತೇನೆ. ಸೇವಾದಳದ ಮೂಲಕ ಕಾರ್ಯಕರ್ತರಿಗೆ ತರಬೇತಿ ನೀಡಲಾಗುವುದು. ಕಾಂಗ್ರೆಸ್ ಕಟ್ಟಡ, ಸೇವಾದಳ ತರಬೇತಿ ಕಟ್ಟಡಕ್ಕೆ ನಾವು ಎಷ್ಟು ಹಣ ಹಾಕಿದ್ದೇವೆ ಎನ್ನುವುದು ಮುಖ್ಯವಲ್ಲ, ಅದರ ಕೇಂದ್ರದ ಸದುಪಯೋಗವಾಗಬೇಕು ಎಂದರು.

    ಬಿಜೆಪಿಗೆ ಬೆದರಲ್ಲ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಗಾಂಧೀಜಿ ಪಾದ ಸ್ಪರ್ಶಿಸಿದ್ದ ಈ ಪುಣ್ಯ ಭೂಮಿಯಲ್ಲಿ ಸುಸಜ್ಜಿತ ಕಾಂಗ್ರೆಸ್ ಭವನ ನಿರ್ಮಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ಸೇವೆ ಅಪಾರವಿದೆ.ನಾವು ಗಾಂಧಿ ಕುಲದವರು. ಬ್ರಿಟಿಷ್ ಗುಂಡಿಗೆ ಎದೆ ಒಡ್ಡಿದವರು. ಬಿಜೆಪಿಯವರ ಬೆದರಿಕೆಗಳಿಗೆ ಹೆದರುವುದಿಲ್ಲ. ಕೆಟ್ಟ ರೀತಿಯಲ್ಲಿ ಬಿಜೆಪಿ ಸರ್ಕಾರ ನಡೆಯುತ್ತಿದೆ. ಮಹಿಳೆ, ವೃದ್ಧರು, ಯುವತಿಯರು ಭಯದಲ್ಲಿ ಓಡಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ,ಎಂಎಲ್ಸಿ ಬಿ.ಕೆ.ಹರಿಪ್ರಸಾದ್, ಶಾಸಕ ಮಹಾಂತೇಶ ಕೌಜಲಗಿ, ಶಾಸಕಿ ಡಾ.ಅಂಜಲಿ ನಿಂಬಾಳ್ಕರ್, ಮಾಜಿ ಶಾಸಕ ಫೀರೋಜ್ ಸೇಠ್, ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಘಟಕ ಅಧ್ಯಕ್ಷ ರಾಜು ಸೇಠ್ ಇನ್ನಿತರರು ಇದ್ದರು.

    ಬೆಳಗಾವಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಿರ್ಮಾಣಗೊಂಡಿರುವ ಕಾಂಗ್ರೆಸ್ ಭವನವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಉದ್ಘಾಟಿಸಿದರು. ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಶಾಸಕಿಯರಾದ ಲಕ್ಷ್ಮೀ ಹೆಬ್ಬಾಳ್ಕರ್, ಡಾ.ಅಂಜಲಿ ನಿಂಬಾಳ್ಕರ್, ಎಸ್.ಆರ್. ಪಾಟೀಲ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಮತ್ತಿತರರು ಇದ್ದರು.

    ಹೌದು ಹುಲಿಯಾ ಸವಕಲಾಯ್ತು…

    ಬೆಳಗಾವಿ ನಗರದಲ್ಲಿ ಕಾಂಗ್ರೆಸ್ ಭವನ ಉದ್ಘಾಟನೆ ಸಮಾರಂಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿರುವಾಗ ಅಭಿಮಾನಿಯೊಬ್ಬರು ‘ಹೌದು ಹುಲಿಯಾ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಹೌದು ಹುಲಿಯಾ ಅನ್ನೋದು ಸವಕಲಾಗೋಯ್ತು. ಈಗ ರಾಜಾಹುಲಿ ಬಂದಿದೆ. ಜನರೆಲ್ಲಾ ನಂಗೆ ಹುಲಿಯಾ ಅಂತ ಕರೆದರು. ಆದರೆ, ಬಿಜೆಪಿ ನಾಯಕರೇ ಬಿ.ಎಸ್. ಯಡಿಯೂರಪ್ಪ ಅವರನ್ನು ರಾಜಾಹುಲಿ ಅಂತ ಕರೆಯುತ್ತಿದ್ದಾರೆ’ ಎಂದಾಗ, ಕೈ ಕಾರ್ಯಕರ್ತರು ಚಪ್ಪಾಳೆ ತಟ್ಟುತ್ತ ಸಿದ್ದರಾಮಯ್ಯಪರ ೋಷಣೆ ಕೂಗಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts