More

    ಹಕ್ಕುಪತ್ರ ಇದ್ದರೂ ಅರಣ್ಯ ಇಲಾಖೆಯಿಂದ ಗೊಂದಲ

    ಶೃಂಗೇರಿ: ರೈತರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಮನಸ್ಥಿತಿ ತಾಲೂಕಿನ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಇಲ್ಲ. ಹಲವರಿಗೆ ಬಹಳ ವರ್ಷಗಳ ಹಿಂದೆಯೇ ಹಕ್ಕುಪತ್ರ ದೊರಕಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಜಮೀನು ಸೆಕ್ಷನ್ 41 ವ್ಯಾಪ್ತಿಯಲ್ಲಿದೆ, ಸೊಪ್ಪಿನಬೆಟ್ಟ ಎಂಬ ಸಬೂಬು ಹೇಳಿ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ರೈತ ಯಡದಾಳ್ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.

    ಮರ್ಕಲ್ ಗ್ರಾಪಂ ಅಧ್ಯಕ್ಷ ಮಹೇಶ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆ ಅಧಿಕಾರಿಗಳು ವಿನಾಕಾರಣ ರೈತರನ್ನು ಆತಂಕಕ್ಕೆ ತಳುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸಿಬ್ಬಂದಿ ಫಾರೂಕ್ ಎಂಬುವರನ್ನು ಆಗ್ರಹಿಸಿದರು.
    ಇದಕ್ಕೆ ಪ್ರತಿಕ್ರಿಯೆ ನೀಡಿದ ಗ್ರಾಪಂ ಅಧ್ಯಕ್ಷ ಮಹೇಶ್, ಸಭೆಯಲ್ಲಿ ಚರ್ಚಿಸಲು ಬಹಳಷ್ಟು ವಿಷಯಗಳು ಇರುವ ಕಾರಣ ಆದಷ್ಟು ಬೇಗ ಈ ವಿಷಯವನ್ನು ಮುಕ್ತಾಯಗೊಳಿಸಬೇಕು ಎಂದರು. ಇದಕ್ಕೆ ಅಸಮಾಧಾನಗೊಂಡ ರೈತರು ನಿಮಗೆ ಕೃಷಿಕರ ಕುರಿತು ಕಾಳಜಿ ಇಲ್ಲವೇ? ಇದು ನಮ್ಮ ಬದುಕಿನ ಪ್ರಶ್ನೆ. ಅದನ್ನು ಕೇಳಲು ನಮಗೆ ಹಕ್ಕು ಇಲ್ಲವೇ? ಎಂದು ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮವನ್ನು ಬೋಧಿಸಲಾಗುತ್ತಿದೆ. ಇದು ನಿಮ್ಮ ಗಮನಕ್ಕೆ ಬರಲಿಲ್ಲವೇ ಎಂದು ಕೆಲವು ಗ್ರಾಮಸ್ಥರು ಬಿಆರ್‌ಸಿ ನೋಡೆಲ್ ಅಧಿಕಾರಿ ವಿಜಯ್‌ಕುಮಾರ್ ಅವರನ್ನು ಪ್ರಶ್ನಿಸಿದರು. ಈ ಕುರಿತು ನಮಗೆ ಯಾವ ಮಾಹಿತಿಯೂ ಬಂದಿಲ್ಲ ಎಂದಾಗ ವಿಷಯದ ಕುರಿತು ಗ್ರಾಮಸ್ಥರೇ ಪರ-ವಿರೋಧವಾಗಿ ವಾಗ್ದಾಳಿ ನಡೆಸಿದರು.
    ಗ್ರಾಮಾಂತರ ಪ್ರದೇಶದ ರಸ್ತೆಗಳ ಸ್ಥಿತಿ ಹದಗೆಟ್ಟಿದ್ದು ಕೂಡಲೇ ತಾತ್ಕಾಲಿಕ ದುರಸ್ತಿ ಮಾಡಿಸಬೇಕು ಎಂದು ಗ್ರಾಮಸ್ಥ ಪ್ರವೀಣ್ ನಾಯ್ಕ ಒತ್ತಾಯಿಸಿದರು. ಗ್ರಾಮಸ್ಥ ಕೃಷ್ಣಮೂರ್ತಿ ಮಾತನಾಡಿ, ಗ್ರಾಮದ ಹಲವೆಡೆ ವಿದ್ಯುತ್ ತಂತಿಯನ್ನು ಬದಲಾಯಿಸಿ ಗುಣಮಟ್ಟದ ತಂತಿ ಅಳವಡಿಸಬೇಕು. ಇಲ್ಲವಾದಲ್ಲಿ ಅಡಕೆ ತೋಟ ಹಾಯ್ದುಹೋಗುವ ತಂತಿಗಳು ತುಂಡಾಗಿ ಬಿದ್ದು ರೈತರ ಪ್ರಾಣಕ್ಕೆ ಅಪಾಯವಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.
    ಗ್ರಾಪಂ ಉಪಾಧ್ಯಕ್ಷೆ ಸುಮಾ, ಸದಸ್ಯರಾದ ವಾಣಿ, ಪ್ರಶಾಂತ್, ನೇಹಾ, ನೋಡೆಲ್ ಅಧಿಕಾರಿ ಭುವನೇಂದ್ರ, ಪಿಡಿಒ ರಘುವೀರ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts