More

    ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡನೆ;16ರಂದು ಜಿಲ್ಲಾದ್ಯಂತ ಮುಷ್ಕರ

    ಬಳ್ಳಾರಿ : ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾದ ವತಿಯಿಂದ ಫೆ.16ರಂದು ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಸತ್ಯಬಾಬು ಹೇಳಿದರು.

    ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ಕಾರ್ಮಿಕ, ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದ್ದು, ಅದನ್ನು ಖಂಡಿದಿ ದೇಶವ್ಯಾಪಿ ಮುಷ್ಕರ ಕೈಗೊಳ್ಳಲಾಗಿದ್ದು, ಬಳ್ಳಾರಿಯಲ್ಲಿ ಗಾಂಧಿಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದರು.

    ಅಗತ್ಯ ವಸ್ತುಗಳ, ಪೆಟ್ರೋಲಿಯಂ ಉತ್ಪನ್ನಗಳ, ಔಷಧಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ರೈಲ್ವೆ, ಮಿಲಿಟರಿ, ವಿದ್ಯುತ್, ಕಲ್ಲಿದ್ದಲು, ತೈಲ, ಉಕ್ಕು, ಸಾರಿಗೆ, ಬ್ಯಾಂಕ್, ವಿಮೆ, ಅಂಚೆ, ವಿಮಾನ ನಿಲ್ದಾಣ ಮುಂತಾದ ಸಾರ್ವಜನಿಕ ಕ್ಷೇತ್ರಗಳ ಖಾಸಗೀಕರಣ, ಗುತ್ತಿಗೆ ವ್ಯವಸ್ಥೆ ನಿಲ್ಲಿಸಬೇಕು.
    ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಪಡಿಸಬೇಕು ಹಾಗೂ ಸರ್ಕಾರವೇ ರೈತರಿಂದ ಬೆಳೆಗಳನ್ನು ಖರೀದಿಸಬೇಕು. ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

    ರಾಜ್ಯದ ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ಸಾಲ ಮನ್ನಾ, ವೈಜ್ಞಾನಿಕ ಬೆಳೆ ನಷ್ಟ ಪರಿಹಾರ, ಆಹಾರ,ಉದ್ಯೋಗ, ಭೂಮಿ ಹಕ್ಕು ನೀಡಬೇಕು. ಖಾಲಿಯಿರುವ ಹುದ್ದೆಗಳನ್ನು ತುಂಬಬೇಕು, ಉದ್ಯೋಗ ಸೃಷ್ಟಿಸಲು ಕ್ರಮಕೈಗೊಳ್ಳಬೇಕು. ಹೊಸ ನೇಮಕಾತಿಗಳ ಮೇಲೆ ಹೇರಲಾದ ನಿಷೇಧವನ್ನು ಹಿಂಪಡೆಯಬೇಕು. ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಖಾತ್ರಿಪಡಿಸಬೇಕು. ಲೇ-ಆಫ್, ಕೆಲಸದಿಂದ ವಜಾಗೊಳಿಸುವಿಕೆ ಹಾಗೂ ಕೈಗಾರಿಕೆಗಳನ್ನು ಮುಚ್ಚುವುದನ್ನು ನಿಲ್ಲಿಸಬೇಕು. ರಾಜ್ಯ, ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಹಾಗೂ ಶಿಕ್ಷಕರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು, ಹಳೆಯ ಪಿಂಚಣಿ ಯೊಜನೆಯನ್ನು ಜಾರಿಗೆ ತರಬೇಕು. ಇತರ ಎಲ್ಲ ಕಾರ್ಮಿಕರಿಗೆ ಕನಿಷ್ಟ ಪಿಂಚಣಿ 12 ಸಾವಿರ ರೂ. ನೀಡಬೇಕು ಎಂದು ತಿಳಿಸಿದರು.

    ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ವಿ.ಎಸ್ ಶಿವಶಂಕರ್ ಮಾತನಾಡಿ, ಸಂಘಟಿತ, ಅಸಂಘಟಿತ ಹಾಗೂ ಸ್ಕೀಂ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಕೆಲಸದ ಸ್ಥಳದಲ್ಲಿ ಆರೋಗ್ಯಕರ ವಾತಾವರಣ ಹಾಗೂ ಸುರಕ್ಷತೆಯನ್ನು ಖಾತ್ರಿಪಡಿಸಬೇಕು. ಮಾಸಿಕ ಕನಿಷ್ಟ ವೇತನ 26 ಸಾವಿರ ರೂ.ನೀಡಬೇಕು. ಈಗಿರುವ ಕಾರ್ಮಿಕರ ಕಲ್ಯಾಣ ಮಂಡಳಿಗಳನ್ನು ಸಂರಕ್ಷಿಸಬೇಕು. ಇತರ ಅಸಂಘಟಿತ ಕಾರ್ಮಿಕರ ಹೊಸ ಕಲ್ಯಾಣ ಮಂಡಳಿಗಳನ್ನು ಸ್ಥಾಪಿಸಬೇಕು. ದೀರ್ಘಕಾಲಿಕ ಕೆಲಸಗಳಲ್ಲಿ ಗುತ್ತಿಗೆ ಪದ್ಧತಿಯನ್ನು ಕೈಬಿಡಬೇಕು. ಸ್ಕೀಂ ಕಾರ್ಮಿಕರಿಗೆ ಸರ್ಕಾರಿ ನೌಕರರ ಸ್ಥಾನ ಮಾನ ನೀಡಿ, ಸರ್ಕಾರಿ ನೌಕರರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಸಣ್ಣ ಹಾಗೂ ಮಧ್ಯಮ ರೈತರ ಸಾಲಗಳನ್ನು ಮನ್ನಾ ಮಾಡಬೇಕು. ಜನರ ಪ್ರಜಾತಾಂತ್ರಿಕ ಹಕ್ಕುಗಳ ದಮನವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

    ಮುಖಂಡರಾದ ಕೆ.ತಾಯಪ್ಪ , ಡಾ.ಪ್ರಮೋದ್.ಎನ್, ಕೆ. ಬಸಣ್ಣ, ಶಾಂತಾ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts