More

    ಕಂಪ್ಯೂಟರ್ ಖರೀದಿಯಲ್ಲಿ ಗೋಲ್‌ಮಾಲ್?

    ಬೆಳಗಾವಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯ (ಡಿಎಚ್‌ಒ) ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿಗಳ ಕಚೇರಿಯಲ್ಲಿ ಅಳವಡಿಸಲು ಮಾಡಲಾಗಿರುವ ಕಂಪ್ಯೂಟರ್ ಖರೀದಿಯಲ್ಲಿ ಲಕ್ಷಾಂತರ ರೂ.ಅವ್ಯವಹಾರ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ.

    ಸರ್ಕಾರ ಟೆಂಡರ್ ಸಂದರ್ಭದಲ್ಲಿ ವಿಧಿಸಲಾಗಿದ್ದ ನಿಯಮ ಉಲ್ಲಂಘಿಸಿ, ಕಳಪೆ ಮಟ್ಟದ ಯುಪಿಎಸ್‌ಗಳನ್ನು ಪೂರೈಕೆ ಮಾಡಿರುವುದು ನ್ಯಾಯವಾದಿ ಮಹೇಂದ್ರ ಕಲ್ಲಪ್ಪ ಕಾಂಬಳೆ ಎಂಬುವರು ಮಾಹಿತಿ ಹಕ್ಕು ನಿಯಮದಡಿ ಅರ್ಜಿ ಸಲ್ಲಿಸಿ ಪಡೆದಿರುವ ಮಾಹಿತಿಯಿಂದ ಬಹಿರಂಗಗೊಂಡಿದೆ. ಅದರಲ್ಲಿ ಎನ್‌ಐಸಿ ಅಧಿಕಾರಿಗಳು ಕೂಡ ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಡಿಎಚ್‌ಒ ಕಚೇರಿ ಮೂಲಗಳು ತಿಳಿಸಿವೆ.

    ಕಳಪೆ ಕಂಪ್ಯೂಟರ್ ಮತ್ತು ಯುಪಿಎಸ್ ಖರೀದಿಸಿರುವುದು ಪ್ರಾದೇಶಿಕ ಆಯುಕ್ತರಾದ ಆದಿತ್ಯ ಆಮ್ಲಾ ಬಿಸ್ವಾಸ್ ಅವರ ಗಮನಕ್ಕೂ ಬಂದಿದೆ. ಕೂಡಲೇ ಈ ಕಂಪ್ಯೂಟರ್ ಹಗರಣದ ತನಿಖೆಗೆ ಆದೇಶ ನೀಡಿದ್ದರು. ಆದರೆ, ಅವರ ಕಚೇರಿಯ ಸಿಬ್ಬಂದಿಯೊಬ್ಬರು ಖುದ್ದಾಗಿ ಪರಿಶೀಲನೆ ನಡೆಸಿದಾಗ ಕಳಪೆ ಕಂಪ್ಯೂಟರ್ ಮತ್ತು ಯುಪಿಎಸ್ ಪೂರೈಕೆ ಮಾಡಿರುವುದನ್ನು ದೃಢಪಡಿಸಿದ್ದಾರೆ ಎಂದು ಪ್ರಾದೇಶಿಕ ಆಯುಕ್ತರ ಕಚೇರಿಯ ಮೂಲಗಳು ಖಚಿತ ಪಡಿಸಿವೆ.

    ಏನಿದು ಹಗರಣ?: ಆಯುಷ್ಮಾನ್ ಭಾರತ ಕರ್ನಾಟಕ ಯೋಜನೆಯಡಿ ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ 4 ನೋಂದಣಿ ಕೌಂಟರ್, ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ ಒಂದು ಕೌಂಟರ್ ತೆರೆದು, ಫಲಾನುಭವಿಗಳು ಚಿಕಿತ್ಸೆಗೆ ಮೊದಲನೇ ಬಾರಿಗೆ ಆಸ್ಪತ್ರೆಗೆ ಬಂದಾಗ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಪೋರ್ಟ್‌ಲ್‌ನಲ್ಲಿ ನೋಂದಣಿ ಮಾಡಿ, ಎ4 ಗಾತ್ರದ ಹಾಳೆ ಮೇಲೆ ಮುದ್ರಿತ ನೊಂದಣಿ ಮಾಹಿತಿ ನೀಡುವುದಕ್ಕಾಗಿ ಅಗತ್ಯ ಮೂಲ ಸೌಕರ್ಯಗಳ ಅಗತ್ಯವಿತ್ತು.

    ಅದಕ್ಕಾಗಿ 29-ಡೆಸ್ಕ್‌ಟಾಪ್, 29 ಯುಪಿಎಸ್-1ಕೆವಿಎ, 29-ಬಯೋಮೆಟ್ರಿಕ್ ಡಿವೈಸ್, 29-ವೆಬ್ ಕ್ಯಾಮರಾ, 29-ಮಲ್ಟಿ ಫಂಕ್ಷನಲ್ ಪ್ರಿಂಟರ್ ಪೂರೈಸಲು 29.91 ಲಕ್ಷ ರೂ.ಅಂದಾಜು ಮೊತ್ತ ನಿಗದಿಪಡಿಸಿ, ಅರ್ಹ ಟೆಂಡರ್‌ದಾರರಿಂದ ಅರ್ಜಿ ಕರೆಯಲಾಗಿತ್ತು. ಈ ಟೆಂಡರ್ ಪ್ರಕ್ರಿಯೆಲ್ಲಿ ರಾಜಕುಮಾರ ಸಿ.ಚೌಗಲೆ ಅವರಿಗೆ (ರಾಜೇಶ ಎಂಟರ್‌ಪ್ರೈಸಿಸ್) ಟೆಂಡರ್ ನೀಡಲಾಗಿತ್ತು. ಆದರೆ, ರಾಜೇಶ್ ಎಂಟರ್‌ಪ್ರೈಸಿಸ್‌ನವರು ಪೂರೈಕೆ ಮಾಡಿದ ಯುಪಿಎಸ್ ಗುಣಮಟ್ಟ ಸರಿಯಾಗಿಲ್ಲ ಎಂಬುದು ಬೆಳಕಿಗೆ ಬಂದಿದೆ.

    ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿಗಳ ಕಚೇರಿಯಲ್ಲಿ ಅಳವಡಿಸುವುದಕ್ಕಾಗಿ ಮಾಡಲಾದ ಕಂಪ್ಯೂಟರ್ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಕುರಿತು ಕೆಲವರು ದೂರು ನೀಡಿದ್ದು, ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
    | ಆದಿತ್ಯಆಮ್ಲಾ ಬಿಸ್ವಾಸ್, ಪ್ರಾದೇಶಿಕ ಆಯುಕ್ತ, ಬೆಳಗಾವಿ

    |ರವಿ ಗೋಸಾವಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts